Praggnanandhaa: ವಿದೇಶಕ್ಕೂ ಅಕ್ಕಿ, ಸ್ಟವ್, ಕುಕ್ಕರ್ ಒಯ್ಯುತ್ತಾರೆ; ಅಮ್ಮನೇ ಕೈಯ್ಯಾರೆ ಅನ್ನ ರಸಂ ಮಾಡಿ ಬಡಿಸ್ತಾರೆ!
Aug 25, 2023 06:15 AM IST
ತಾಯಿ ನಾಗಲಕ್ಷ್ಮಿ ಜೊತೆ ಪ್ರಜ್ಞಾನಂದ.
- R Praggnanandhaa: ಚೆಸ್ ವಿಶ್ವಕಪ್ನಲ್ಲಿ ಆರ್ ಪ್ರಜ್ಞಾನಂದ ಸೋಲು ಕಂಡಿದ್ದಾರೆ. ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಫೈನಲ್ನಲ್ಲಿ ಪರಾಭವಗೊಂಡರು. ಆದರೀಗ ಆತನ ಕುರಿತು ಆಸಕ್ತಿಕರ ಸಂಗತಿಯೊಂದು ಹೊರ ಬಿದ್ದಿದೆ.
ಆಗಸ್ಟ್ 24ರಂದು ನಡೆದ ವಿಶ್ವಕಪ್ ಚೆಸ್ (Chess world cup 2023) ಫೈನಲ್ ಟೈ ಬ್ರೇಕರ್ ಪಂದ್ಯದಲ್ಲಿ ಭಾರತದ ಭರವಸೆಯ ಚೆಸ್ ಪಟು ಆರ್. ಪ್ರಜ್ಞಾನಂದ (R Praggnanandhaa) ವಿರೋಚಿತ ಸೋಲು ಕಂಡಿದ್ದಾರೆ. ಸೋತರೂ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ವಿಶ್ವದ ನಂಬರ್ 1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡರು. ಆದರೆ, ಆತನ ಸಾಧನೆಗೆ ಸಂಪೂರ್ಣ ಶ್ರೇಯ, ತಾಯಿ ನಾಗಲಕ್ಷ್ಮಿ ಅವರಿಗೆ ಸಲ್ಲಲೇಬೇಕು.
ಸೆಮಿಫೈನಲ್ ಮುಗಿಸಿದ ಸಂದರ್ಶನವೊಂದರಲ್ಲಿ ಭಾರತದ ಕಣ್ಮಣಿ ಪ್ರಜ್ಞಾನಂದ, ತನ್ನ ಬೆಂಬಲದ ಕುರಿತು ವರ್ಣಿಸಿದ್ದಾರೆ. ನಾನು ಈ ಹಂತಕ್ಕೆ ಬಂದಿದ್ದೇನೆ ಅಂದರೆ, ಅದು ನನ್ನ ತಾಯಿಯ ಬೆಂಬಲ, ಸಹಕಾರದಿಂದ. ನನ್ನ ತಾಯಿ ಯಾವಾಗಲೂ ಬೆಂಬಲ ನೀಡುತ್ತಾರೆ. ಎಷ್ಟೋ ಬಾರಿ ಸೋತ ನಂತರ ಅವರು, ಸಮಾಧಾನಪಡಿಸುತ್ತಾರೆ. ಶಾಂತಿಪಡಿಸುತ್ತಾರೆ. ಧೈರ್ಯ ಹೇಳುತ್ತಾರೆ. ಧೃತಿಗೆಡದಂತೆ ನೋಡಿಕೊಳ್ಳುತ್ತಾರೆ. ನನಗೆ, ನನ್ನ ತಾಯಿಯೇ ದೊಡ್ಡ ಬೆಂಬಲ, ಶಕ್ತಿ ಎಂದು ಹೇಳಿದ್ದ ಪ್ರಜ್ಞಾನಂದ.
ಅನ್ನ-ರಸಂ ಊಟ
ಪೋಷಕರು ಚೆಸ್ ಬೋರ್ಡ್ ತಂದುಕೊಟ್ಟರೂ, ಚೆಸ್ ಕಲಿಸಿದ್ದು ಮಾತ್ರ ಅವರ ಅಕ್ಕ ವೈಶಾಲಿ. ಆದರೆ, ಪ್ರಗ್ನಾನಂದ ಅವರ ಯಶಸ್ಸಿನ ಶ್ರೇಯಸ್ಸು ಅವರ ತಾಯಿ ನಾಗಲಕ್ಷ್ಮಿ ಅವರಿಗೆ ಸಲ್ಲುತ್ತದೆ. ಅವರೇ ಆತನನ್ನು ತರಗತಿಗಳಿಗೆ ಕರೆದೊಯ್ಯುತ್ತಿದ್ದರು. ಇಲ್ಲೊಂದು ವಿಶೇಷ ಗೊತ್ತಾ ವಿದೇಶಿ ಟೂರ್ನಿಗಳಿಗೆ ಪ್ರಯಾಣಿಸಿದಾಗ ಪ್ರಜ್ಞಾನಂದನ ಜೊತೆ ಅವರ ಅಮ್ಮ ಕಡ್ಡಾಯವಾಗಿ ಹೋಗುತ್ತಾರೆ. ಬರಿ ಹೋಗುವುದಷ್ಟೇ ಅಲ್ಲ, ಇಂಡಕ್ಷನ್ ಸ್ಟೌ ಮತ್ತು ರೈಸ್ ಕುಕ್ಕರ್, ಅಕ್ಕಿ, ರಸಂ ಪದಾರ್ಥಗಳನ್ನೂ ಸಹ ಒಯ್ಯುತ್ತಾರೆ.
ಯಾಕಂದರೆ ಪ್ರಜ್ಞಾನಂದ ಎಲ್ಲೇ ಹೋದರೂ, ಅವನಿಗೆ ಮನೆಯ ಊಟವೇ ಬೇಕು. ಇದೇ ಕಾರಣಕ್ಕಾಗಿ ಮಗನು ಭಾಗವಹಿಸುವ ಎಲ್ಲಾ ಟೂರ್ನಿಗಳಲ್ಲಿ ಆತನ ಆರೋಗ್ಯ ಕಾಪಾಡುವ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವುದರ ಜೊತೆಗೆ ಮನೆಯ ಊಟ ಸಿದ್ಧಪಡಿಸಿಕೊಡುತ್ತಾರೆ. ತಪ್ಪದೇ ಅನ್ನ ರಸಂ ಪ್ರಜ್ಞಾನಂದನಿಗೆ ಅಡುಗೆ ಮಾಡಿಕೊಡುತ್ತಾರೆ ನಾಗಲಕ್ಷ್ಮಿ. ಪ್ರಜ್ಞಾನಂದ ಅವರು ಮನೆಯಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುತ್ತಾರೆ ಅಂದರೆ ಅವರ ಅಮ್ಮನೇ ಕಾರಣ.
ತಾಯಿಯ ಪರಿಶ್ರಮಕ್ಕೆ ಭಾರಿ ಮೆಚ್ಚುಗೆ
ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಯಿಯ ಪರಿಶ್ರಮಕ್ಕೆ ಕೆಲ ದಿನಗಳ ಹಿಂದೆ ಅನೇಕ ಕ್ರೀಡಾ ದಿಗ್ಗಜರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ತಾಯಿ-ಮಗನ ಪ್ರೀತಿಯನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ ಎಂದು ಹಲವರು ಹೇಳಿದ್ದೂ ಇದೆ. ನೆಟ್ಟಿಗರಿಂದಲೂ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಪ್ರತಿಯೊಬ್ಬರು ಪ್ರಜ್ಞಾನಂದನ ತಾಯಿ ಅವರನ್ನು ಶ್ಲಾಘಿಸಿದ್ದಾರೆ.
ಅಪಾರ ದೈವ ಭಕ್ತ
ಪ್ರಜ್ಞಾನಂದ ಪರಮ ದೈವ ಭಕ್ತ ಎನ್ನಲು ಆತನ ಹಣೆಯ ಮೇಲಿರುವ ವಿಭೂತಿಯೇ ಸಾಕ್ಷಿ. ಟೂರ್ನಿಯಲ್ಲಿ ಭಾರತದಲ್ಲೇ ಇರಲಿ, ವಿದೇಶದಲ್ಲೇ ಇರಲಿ ವಿಭೂತಿ ಹಚ್ಚಿಯೇ ಇರುತ್ತಾರೆ. ವಿಭೂತಿ ನನ್ನ ಹಣೆಯಲ್ಲಿದ್ದರೆ ನನಗೇನೋ ಒಂದು ಶಕ್ತಿ ಎಂದು ಹಿಂದೊಮ್ಮೆ ಹೇಳಿದ್ದರು. ತಮಿಳು ನಾಡಿನ ಈತ ಒಬ್ಬ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು. ಕಷ್ಟದ ದಿನಗಳಿಂದ ಬೆಳೆದ ಈತ ಇಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ.