Yash Dayal: ಅಂದು ಸತತ 5 ಸಿಕ್ಸರ್ ನೀಡಿದ್ದರೂ ಇಂದು ಯಶ್ ದಯಾಳ್ ಟೀಮ್ ಇಂಡಿಯಾಗೆ ಆಯ್ಕೆಯಾಗಲು ಇದುವೇ ಕಾರಣ
Sep 09, 2024 10:05 AM IST
ಯಶ್ ದಯಾಳ್ ಈಗ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಯಶ್ ದಯಾಳ್ ಮಾಡಿದ ಪುನರಾಗಮನವು ತುಂಬಾ ವಿಶೇಷವಾಗಿದೆ. ಅವರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಐಪಿಎಲ್‌ನ ಆ ಘಟನೆ ನಂತರ ಸುಮಾರು ಒಂದೂವರೆ ವರ್ಷಗಳ ಬಳಿಕ, ಯಶ್ ಈಗ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. (ಬರಹ: ವಿನಯ್ ಭಟ್)
ಐಪಿಎಲ್ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದರು. ತಮ್ಮ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿ ಎಲ್ಲರ ಗಮನ ಸೆಳೆದರು. ಅಲ್ಲಿಂದ ರಿಂಕು ಕ್ರಿಕೆಟ್ ಜೀವನ ಬದಲಾಯಿತು. ಆದರೆ, ಈ ಘಟನೆಯಿಂದ ಇನ್ನೊಂದು ತುದಿಯಲ್ಲಿ ಬೌಲಿಂಗ್ ಮಾಡಿದ ಎಡಗೈ ವೇಗದ ಬೌಲರ್ ಯಶ್ ದಯಾಲ್ ಅವರು ಟ್ರೋಲಿಂಗ್‌ಗೆ ಬಲಿಯಾದರು. ಆ ಒಂದು ಓವರ್‌ನ ನಂತರ ಪ್ಲೇಯಿಂಗ್ ಇಲೆವೆನ್ನಿಂದ ಅವರು ಸಂಪೂರ್ಣವಾಗಿ ಹೊರಗುಳಿದರು. ಬಳಿಕ ಟೀಮ್ನಿಂದ ಕೂಡ ಹೊರಬಿದ್ದರು.
ಇದನ್ನೆಲ್ಲ ಮೆಟ್ಟಿ ಯಶ್ ಮಾಡಿದ ಪುನರಾಗಮನವು ತುಂಬಾ ವಿಶೇಷವಾಗಿತ್ತು. ಅವರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಐಪಿಎಲ್‌ನ ಆ ಘಟನೆ ನಂತರ ಸುಮಾರು ಒಂದೂವರೆ ವರ್ಷಗಳ ಬಳಿಕ, ಯಶ್ ದಯಾಳ್ ಈಗ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಭಾನುವಾರ (ಸೆ. 8) ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಿತು. ಈ ತಂಡದಲ್ಲಿ 16 ಆಟಗಾರರು ಸ್ಥಾನ ಪಡೆದಿದ್ದು, ಅದರಲ್ಲಿ ರಿಷಬ್ ಪಂತ್ 21 ತಿಂಗಳ ನಂತರ ಪಂತ್ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದರೆ, ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ನಂತರ ಕಮ್ಬ್ಯಾಕ್ ಮಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ಕೂಡ ದೀರ್ಘ ವಿಶ್ರಾಂತಿ ನಂತರ ಮೊದಲ ಬಾರಿಗೆ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಕೆಎಲ್ ರಾಹುಲ್ ಕೂಡ ಆಯ್ಕೆಯಾಗಿದ್ದು, ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ಆಕಾಶ್ ದೀಪ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಇಡೀ ತಂಡದಲ್ಲಿ ಸರ್ಫರಾಜ್, ಆಕಾಶ್ ಮತ್ತು ಧ್ರುವ್ ಅವರಂತಹ ಹೊಸ ಆಟಗಾರರಿದ್ದರೂ, ಈ ಮೂವರೂ ಟೆಸ್ಟ್ ಕ್ರಿಕೆಟ್ ರುಚಿ ಕಂಡಿದ್ದಾರೆ. ಆದರೆ, ಯಶ್ ದಯಾಳ್ ಹೊಸ ಮುಖವಾಗಿ ಎಂಟ್ರಿ ಪಡೆದಿದ್ದಾರೆ. ಮೊದಲ ಬಾರಿಗೆ, ಈ ಎಡಗೈ ವೇಗಿ ಟೀಮ್ ಇಂಡಿಯಾದಿಂದ ಕರೆ ಸ್ವೀಕರಿಸಿದ್ದಾರೆ, ಇದು ಈ ಬೌಲರ್‌ಗೆ ತುಂಬಾ ವಿಶೇಷವಾಗಿದೆ. ಐಪಿಎಲ್ 2023 ರಲ್ಲಿ ನಡೆದ ಆ ಕೆಟ್ಟ ಘಟನೆ ಬಳಿಕ ಗುಜರಾತ್ ಟೈಟಾನ್ಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಇದಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಕೋಟಿ ರೂಪಾಯಿಗಳ ಭಾರಿ ಬಿಡ್‌ನೊಂದಿಗೆ ದಯಾಳ್ರನ್ನು ಖರೀದಿಸಿತು.
ಯಶ್ ದಯಾಳ್ ಅದೃಷ್ಟ ಹೇಗೆ ಬದಲಾಯಿತು?
ಯಶ್ ದಯಾಳ್ ಕಳೆದ ಐಪಿಎಲ್ ಋತುವಿನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು ಮತ್ತು ಬೆಂಗಳೂರಿನ ಅತ್ಯಂತ ಯಶಸ್ವಿ ಮತ್ತು ಪರಿಣಾಮಕಾರಿ ಬೌಲರ್ ಎಂದು ಸಾಬೀತುಪಡಿಸಿದರು. ಒಂದು ಸಮಯದಲ್ಲಿ ಸತತ 6 ಪಂದ್ಯಗಳಲ್ಲಿ ಸೋತು ಕೆಳಸ್ತರದಲ್ಲಿ ಕುಳಿತಿದ್ದ ಆರ್ಸಿಬಿ ನಂತರ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಲಗ್ಗೆ ಇಟ್ಟಿದ್ದರಲ್ಲಿ ಯಶ್ ಅವರ ಕೊಡುಗೆ ವಿಶೇಷವಾಗಿತ್ತು. ಅದರಲ್ಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಒಂದು ರೀತಿಯ ನಾಕ್ ಔಟ್ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಯಶ್ ದಯಾಳ್ ಆಯ್ಕೆಗೆ ಏನು ಕಾರಣ?
ಆ ಇಡೀ ಋತುವಿನಲ್ಲಿ ಆರ್ಸಿಬಿ ಪರ ಯಶ್ ದಯಾಳ್ ಗರಿಷ್ಠ 15 ವಿಕೆಟ್‌ಗಳನ್ನು ಪಡೆದಿದ್ದರು. ಅವರ ಈ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ನಂತರ ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಭಾರತ-ಎ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ-ಬಿ ಪರ ಅದ್ಭುತ ಬೌಲಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಯಶ್ ಅಗ್ರ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಅವರ ವಿಕೆಟ್ ಪಡೆದರು. ಯಶ್ ದಯಾಳ್ ಆಯ್ಕೆಗೆ ಪ್ರಮುಖ ಕಾರಣ ಎಡಗೈಯಲ್ಲಿ ಬೌಲಿಂಗ್ ಮಾಡಿ ಅದರಲ್ಲಿಯೂ ಚೆಂಡನ್ನು ಎರಡೂ ದಿಕ್ಕಿಗೆ ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾಗಿರುವುದು. ಅವರು ಹೇಗೆ ಬೇಕೊ ಹಾಗೆ ಬೌಲಿಂಗ್ ಮಾಡುತ್ತಾರೆ.
ಟೀಮ್ ಇಂಡಿಯಾ ದೀರ್ಘಕಾಲದಿಂದ ಉತ್ತಮ ಎಡಗೈ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ. ಯಶ್ ಅವರು ದೀರ್ಘ ಸ್ವರೂಪದಲ್ಲಿ ದೇಶೀಯ ಕ್ರಿಕೆಟ್‌ನ ಅನುಭವವನ್ನು ಹೊಂದಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್‌ನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದಕ್ಕೆ ಯಶ್ ದಾಖಲೆಯೇ ಸಾಕ್ಷಿ. 26 ವರ್ಷದ ಈ ಬೌಲರ್ 24 ಪ್ರಥಮ ದರ್ಜೆ ಪಂದ್ಯಗಳಲ್ಲಿ 29 ಸರಾಸರಿಯಲ್ಲಿ 76 ವಿಕೆಟ್ ಪಡೆದಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ಬಿಸಿಸಿಐ ಇದೀಗ ಆರ್ಸಿಬಿ ವೇಗಿಗೆ ಅವಕಾಶ ನೀಡಿದೆ.