Aakash Chopra: ಸೂರ್ಯಕುಮಾರ್ ಟಿ20 ರಾಕ್‌ಸ್ಟಾರ್ ಹೌದು; ಆದರೆ ಏಕದಿನದಲ್ಲಿ...; ಆಕಾಶ್ ಚೋಪ್ರಾ ಖಡಕ್ ಮಾತು
Jul 27, 2023 03:08 PM IST
ಸೂರ್ಯಕುಮಾರ್ ಯಾದವ್ ಮತ್ತು ಶುಬ್ಮನ್ ಗಿಲ್
- India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಸೂರ್ಯಕುಮಾರ್ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.
ತವರಿನಲ್ಲಿ ನಡೆಯುತ್ತಿರುವ ಮಹತ್ವದ ಏಕದಿನ ವಿಶ್ವಕಪ್‌ಗೆ (ODI World Cup) ಮುಂದಿಟ್ಟುಕೊಂಡು, ಇಂದಿನಿಂದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ನೆಲದಲ್ಲಿ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಒಂದು ರೀತಿಯಲ್ಲಿ ಇದು ಭಾರತಕ್ಕೆ ಅಭ್ಯಾಸ ಪಂದ್ಯ. ವಿಶ್ವಕಪ್‌ಗೆ ಅಂತಿಮ ತಂಡವನ್ನು ರೂಪಿಸಲು ಆಯ್ಕೆ ಸಮಿತಿಗೂ ಈ ಸರಣಿ ಮಹತ್ವದ್ದಾಗಿದೆ.
ವಿಶ್ವದ ಅಗ್ರ ಶ್ರೇಯಾಂಕದ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಈ ಸ್ವರೂಪದಲ್ಲಿ ನೆಲೆಯೂರುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಏಕದಿನ ಪದಾರ್ಪಣೆ ಮಾಡಿರುವ ಸೂರ್ಯ, ಐವತ್ತು ಓವರ್ ಸ್ವರೂಪದ ಪಂದ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಈ ಸರಣಿ ಅವರ ಪಾಲಿಗೆ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಇದರೊಂದಿಗೆ ವಿಕೆಟ್ ಕೀಪರ್ ಪಾತ್ರದಲ್ಲಿ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಿಗೂ ಇದು ಮಹತ್ವದ ಸರಣಿ. ಈ ಸರಣಿಯಲ್ಲಿ ಆಡುವ ಅವಕಾಶ ಗಿಟ್ಟಿಸುವುದರಿಂದ ಹಿಡಿದು, ಉತ್ತಮ ಪ್ರದರ್ಶನ ನೀಡುವವರೆಗೆ ಎಲ್ಲವೂ ಆಟಗಾರರ ಪಾಲಿಗೆ ಮಹತ್ವದ್ದು.
ಚುಟುಕು ಸ್ವರೂಪದಲ್ಲಿ ಸ್ಫೋಟಕ ಬ್ಯಾಟರ್ ಆಗಿರುವ ಸೂರ್ಯ, ಏಕದಿನ ಪಂದ್ಯಗಳಲ್ಲಿ ಫಾರ್ಮ್ ಕಂಡುಕೊಂಡಿಲ್ಲ. ಈಗಾಗಲೇ ಶ್ರೇಯಸ್ ಅಯ್ಯರ್ ಗಾಯಾಳುವಾಗಿ ಆಡುವ ಬಳಗಕ್ಕೆ ಲಭ್ಯರಿಲ್ಲ. ಹೀಗಾಗಿ ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಸತತ ಮೂರೂ ಪಂದ್ಯಗಳಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದ ಸೂರ್ಯ, ಇದೀಗ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಸೂಪರ್ ಸ್ಟಾರ್ ಸೂರ್ಯಕುಮಾರ್ ಬಗ್ಗೆ ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಕುರಿತು ಚರ್ಚಿಸಿದ ಚೋಪ್ರಾ, ವೈಟ್ ಬಾಲ್ ತಂಡಕ್ಕೆ ಮರಳಿದ ನಂತರ ಶ್ರೇಯಸ್ ಅಯ್ಯರ್ ತಮ್ಮ ಫಾರ್ಮ್ ಮರಳಿ ಪಡೆಯಲು ಹೆಣಗಾಡಿದರೆ ಮಾತ್ರ ಸೂರ್ಯಕುಮಾರ್ ಅವರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟರ್ ಆಗಿ ಪ್ರಯತ್ನಿಸಬಹುದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಈ ವರ್ಷದ ಆರಂಭದಲ್ಲಿ ಅಯ್ಯರ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬೆನ್ನುನೋವು ಪುನರಾವರ್ತನೆಯಾಗುತ್ತಿದ್ದ ಕಾರಣದಿಂದ ಅವರು ಐಪಿಎಲ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಸದ್ಯ ಅಯ್ಯರ್ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಏಷ್ಯಾಕಪ್‌ನಲ್ಲಿ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದಾರೆ.
“ಒಂದು ವೇಳೆ ಶ್ರೇಯಸ್ ಅಯ್ಯರ್ ಆಯ್ಕೆಗೆ ಲಭ್ಯವಿಲ್ಲದಿದ್ದರೆ, ಅಥವಾ ಅವರು ಫಾರ್ಮ್ ಪಡೆಯದಿದ್ದರೆ ಬದಲಿಗೆ ಒಂದು ಆಯ್ಕೆ ಬೇಕು. ಇಂತಹ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ನಂಬರ್ 4ನೇ ಕ್ರಮಾಂಕದಲ್ಲಿ ಆಡಿಸಬಹುದು. ಸೂರ್ಯಕುಮಾರ್ ಯಾದವ್ ಟಿ20 ರಾಕ್‌ಸ್ಟಾರ್. ಆದರೆ ಅವರು ಮೊದಲನೆಯದಾಗಿ ಏಕದಿನದಲ್ಲಿ ಹೆಚ್ಚು ಆಡಿಲ್ಲ. ಆಡಿರುವ ಪಂದ್ಯಗಳಲ್ಲಿ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ಚೋಪ್ರಾ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್/ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್/ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕತ್/ಮುಖೇಶ್ ಕುಮಾರ್.
ಕ್ರೀಡೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ