Asian Games: ಭಾರತ ತಂಡದ ಆಯ್ಕೆಯಲ್ಲಿ ಲೋಪ ಹುಡುಕಿದ ಆಕಾಶ್ ಚೋಪ್ರಾ; ಆ ಒಬ್ಬ ಬೌಲರ್ ಇರಬೇಕಿತ್ತು ಎಂದ ಮಾಜಿ ಕ್ರಿಕೆಟಿಗ
Jan 09, 2024 07:50 PM IST
ಆಕಾಶ್ ಚೋಪ್ರಾ
- Aakash Chopra: ಏಷ್ಯನ್ ಗೇಮ್ಸ್‌ಗೆ ಟೀಮ್ ಇಂಡಿಯಾ ಆಟಗಾರರ ತಂಡವನ್ನು ಈ ವಾರದ ಆರಂಭದಲ್ಲಿ ಪ್ರಕಟಿಸಲಾಗಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವ ವಹಿಸಲಿದ್ದಾರೆ. ತಂಡದಲ್ಲಿ ಪ್ರಮುಖ ಬೌಲರ್ ಸ್ಥಾನ ಪಡೆಯದಿರುವುದು ಮಾಜಿ ಆಟಗಾರ ಆಕಾಶ್ ಚೋಪ್ರಾ ಬೇಸರಕ್ಕೆ ಕಾರಣವಾಗಿದೆ.
ಏಷ್ಯನ್ ಗೇಮ್ಸ್‌ಗೆ (Asian Games) ಎರಡನೇ ಶ್ರೇಣಿಯ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಯುವ ಕ್ರಿಕೆಟಿಗರ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದೆ. ಮೊದಲ ಪ್ರಾಶಸ್ತ್ಯದ ತಂಡವು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲೇ ನಡೆಯಲಿರುವ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವುದರಿಂದ, ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಏಷ್ಯನ್ ಗೇಮ್ಸ್‌ಗೆ ಎರಡನೇ ದರ್ಜೆಯ ತಂಡವನ್ನು ಆಯ್ಕೆ ಮಾಡಲಾಗಿದೆ. ಟಿ20 ಸ್ವರೂಪದಲ್ಲಿ ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ತಂಡವನ್ನು ಆಯ್ಕೆಮಾಡುವಲ್ಲಿ ಮಂಡಳಿಯು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರದರ್ಶನಕ್ಕೆ ಆದ್ಯತೆ ನೀಡಿದೆ.
ರಿಂಕು ಸಿಂಗ್, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ತಿಲಕ್ ವರ್ಮಾರಂತಹವರು ಯುವ ಆಟಗಾರರು ಐಪಿಎಲ್‌ನಲ್ಲಿ ಅಬ್ಬರಿಸಿದ್ದರು. ನಿಸ್ಸಂದೇಹವಾಗಿ ಅವರನ್ನು ತಂಡಕ್ಕೆ ಆಹ್ವಾನಿಸಲಾಗಿದೆ. ಬೌಲರ್‌ಗಳ ಪೈಕಿ ಈ ಹಿಂದೆಯೇ ಭಾರತ ತಂಡವನ್ನು ಪ್ರತಿನಿಧಿಸಿರುವ ರವಿ ಬಿಷ್ಣೋಯ್, ಅವೇಶ್ ಖಾನ್ ಮತ್ತು ಶಿವಂ ಮಾವಿ ಆಯ್ಕೆಯಾಗಿದ್ದಾರೆ. ಈ ನಡುವೆ ಐಪಿಎಲ್‌ನಲ್ಲಿ ಮಿಂಚಿದ್ದ ಮತ್ತೋರ್ವ ಬೌಲರ್ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಹಲವರು ಧ್ವನಿಯೆತ್ತಿದ್ದಾರೆ. ಅವರೇ ವರುಣ್ ಚಕ್ರವರ್ತಿ.
ಈ ವರ್ಷದ ಐಪಿಎಲ್‌ನಲ್ಲಿ ಬರೋಬ್ಬರಿ 20 ವಿಕೆಟ್‌ಗಳನ್ನು ಕಬಳಿಸಿದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ, ಕೋಲ್ಕತ್ತಾ ನೈಟ್ ರೈಡರ್ಸ್ ಪರ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಆದರೆ, ಯುವ ತಂಡದಲ್ಲಿ ಅವರು ಸ್ಥಾನ ಪಡೆದಿಲ್ಲ. ಈ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ ಅವರು, 2021ರ ಟಿ20 ವಿಶ್ವಕಪ್ ನಂತರ ವರುಣ್ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ವರುಣ್ ಚಕ್ರವರ್ತಿ ಹೆಸರು ನಾಪತ್ತೆ
“ಈ ತಂಡವನ್ನು ಮೊದಲ ನೋಟದಲ್ಲಿ ನೋಡಿದರೆ, ಉತ್ತಮ ತಂಡವನ್ನೇ ಆಯ್ಕೆ ಮಾಡಿದ್ದಾರೆ ಎಂದು ನೀವು ಭಾವಿಸುತ್ತೀರಿ. ಅಂತಹ ಹೆಸರುಗಳೇ ಈ ತಂಡದಲ್ಲಿವೆ. ಆದರೆ, ಒಂದು ಹೆಸರು ತಂಡದಲ್ಲಿ ಕಾಣೆಯಾಗಿದೆ. ಅದು ಖಂಡಿತವಾಗಿಯೂ ವರುಣ್ ಚಕ್ರವರ್ತಿ" ಎಂದು ಚೋಪ್ರಾ ಹೇಳಿದ್ದಾರೆ.
“ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅವರನ್ನು ಆಡಿಸಿದ್ದೀರಿ. ಆ ನಂತರ ಅವರು ತಂಡದಿಂದ ಹೊರಬಿದ್ದರು. ಆದರೆ ಕಳೆದ ಐಪಿಎಲ್ ನೋಡಿದರೆ, ಅವರು ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂಬುದು ತಿಳಿಯುತ್ತದೆ. ನಾನು ಈ ತಂಡದ ಭಾಗವಾಗಬೇಕೆಂದು ನಿರೀಕ್ಷಿಸಿದ ಆಟಗಾರ ಚಕ್ರವರ್ತಿ. ಆದರೆ ಅವರು ತಂಡದಲ್ಲಿಲ್ಲ," ಎಂದು ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಉತ್ತಮರು, ವರುಣ್ ಅತ್ಯುತ್ತಮ ಆಯ್ಕೆ
ಇತರ ಸ್ಪಿನ್ನರ್‌ಗಳ ಆಯ್ಕೆಯನ್ನು ಚೋಪ್ರಾ ವಿರೋಧಿಸಿಲ್ಲ. ಆದರೆ, ಬಿಷ್ಣೋಯ್, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗಿಂತ ಚಕ್ರವರ್ತಿ ಉತ್ತಮ ಆಯ್ಕೆ ಎಂದಿದ್ದಾರೆ. ಈ ಋತುವಿನಲ್ಲಿ 21.45 ಸರಾಸರಿ ಮತ್ತು 8.14ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಚಕ್ರವರ್ತಿಗೆ ಸ್ಥಾನ ಸಿಗಬಹುದೆಂದು ಕೆಕೆಆರ್ ಮಾಜಿ ಆರಂಭಿಕ ಆಟಗಾರ ತಿಳಿಸಿದ್ದಾರೆ.
"ವಾಷಿಂಗ್ಟನ್ ಸುಂದರ್ ತಮ್ಮ ಫ್ರಾಂಚೈಸಿ ಪರ ಕೆಲವೇ ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ಅವರು ಆಗಾಗ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಅತ್ತ ಶಹಬಾಜ್ ಅಹಮದ್ ಈ ನಡುವೆ ಭಾರತದ ಪರ ಆಡಿದ್ದರು. ಈ ಎಲ್ಲಾ ದೃಷ್ಟಿಕೋನದಿಂದ ನೋಡಿದರೆ ವರುಣ್ ಚಕ್ರವರ್ತಿಗೆ ಒಂದು ಸ್ಥಾನ ಕೊಡಬಹುದಿತ್ತು ಎಂದು ನನಗೆ ತೋರುತ್ತದೆ,” ಎಂದು ಚೋಪ್ರಾ ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಭಾರತ ತಂಡ ಹೀಗಿದೆ
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).