Ajinkya Rahane: ಈ ವಯಸ್ಸು ಅಂದ್ರೆ ಏನರ್ಥ, ನಾನಿನ್ನೂ ಯುವಕ, ಇನ್ನೂ ಕ್ರಿಕೆಟ್ ಆಡ್ತೀನಿ; ವಯಸ್ಸಿನ ಕುರಿತ ಪ್ರಶ್ನೆಗೆ ರಹಾನೆ ಸಿಡಿಮಿಡಿ
Jul 11, 2023 11:42 AM IST
ಅಜಿಂಕ್ಯಾ ರಹಾನೆ
- India vs West Indies: ನಾನು ಇನ್ನೂ ಯುವಕ, ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಆಟ ಉಳಿದಿದೆ ಎಂದು ವಯಸ್ಸಿನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಜಿಂಕ್ಯಾ ರಹಾನೆ ಉತ್ತರಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಅಜಿಂಕ್ಯ ರಹಾನೆ (Ajinkya Rahane) ಅವರನ್ನು ತಂಡದಿಂದ ರಿಲೀಸ್ ಮಾಡಿದ ನಂತರ, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2023ರ ಐಪಿಎಲ್ ಹರಾಜಿನಲ್ಲಿ ರಹಾನೆಯನ್ನು ಖರೀದಿಸಿತು. ಅದಕ್ಕೂ ಮುನ್ನವೇ ಭಾರತ ತಂಡದಿಂದ ಮರೆಯಾಗಿದ್ದ ರಹಾನೆ, ಸಹಜವಾಗಿಯೇ ಸಿಎಸ್‌ಕೆಯ ಮೊದಲ ಕೆಲವೊಂದು ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ತಂಡದಲ್ಲಿ ಮೊದಲ ಅವಕಾಶ ಸಿಗುತ್ತಿದ್ದಂತೆಯೇ ತಮ್ಮ ಉಗ್ರ ರೂಪವನ್ನು ರಹಾನೆ ತೋರಿಸಿದರು. 172.49 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಜಿಂಕ್ಸ್, ಆಯ್ಕೆದಾರರ ಮನಗೆದ್ದು ಮತ್ತೆ ಟೀಮ್ ಇಂಡಿಯಾಗೆ ಆಯ್ಕೆಯಾದರು.
ಕಳೆದ ತಿಂಗಳು 35ನೇ ವರ್ಷಕ್ಕೆ ಕಾಲಿಟ್ಟ ಅಜಿಂಕ್ಯ ರಹಾನೆಯ ಕ್ರಿಕೆಟ್ ಬದುಕು ಅಂತ್ಯವಾಯ್ತು ಎಂದು ಹಲವರು ಭಾವಿಸಿದ್ದರು. ಆದರೆ, ಯಶಸ್ವಿ ಐಪಿಎಲ್ ಪ್ರದರ್ಶನದ ಬಳಿಕ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಹಾನೆ ಆಯ್ಕೆಯಾದರು. ಅದಕ್ಕೂ ಮುನ್ನ ರಣಜಿ ಕ್ರಿಕೆಟ್‌ನಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ್ದ ರಹಾನೆ, ಭಾರತ ತಂಡಕ್ಕೆ ಮರಳುವ ಭರವಸೆ ನೀಡಿದ್ದರು. ಅಂತೆಯೇ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಯಾದರು.
ಮಹತ್ವದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದರೂ, ರಹಾನೆ ಪ್ರದರ್ಶನ ಭಾರತೀಯರ ಮನಗೆದ್ದಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ 89 ರನ್, ಭಾರತದ ತಂಡದಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ.
ನಾನಿನ್ನೂ ಯುವಕ
35ರ ಹರೆಯದಲ್ಲಿ ಹುರುಪಿನಿಂದ ಬ್ಯಾಟ್ ಬೀಸುವ ರಹಾನೆ, ವಯಸ್ಸಿನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೌಹಾರಿದ್ದಾರೆ. "ಈ ವಯಸ್ಸಿನಲ್ಲಿ ಅಂದರೆ ಏನರ್ಥ? ನಾನು ಇನ್ನೂ ಯುವಕ, ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಆಟ ಉಳಿದಿದೆ," ಎಂದು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಯಸ್ಸಿನ ಪ್ರಶ್ನೆ ಬಂದಾಗ ರಹಾನೆ ಉತ್ತರಿಸಿದ್ದಾರೆ.
"ನಾನು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ದೇಶೀಯ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ರನ್ ಗಳಿಸಿದ್ದೇನೆ. ಬ್ಯಾಟಿಂಗ್‌ನಲ್ಲಿ ನಾನು ಸಾಕಷ್ಟು ಆತ್ಮವಿಶ್ವಾಸ ಪಡೆದುಕೊಂಡಿದ್ದೇನೆ. ಕಳೆದ ಒಂದೂವರೆ ವರ್ಷಗಳಲ್ಲಿ ನನ್ನ ಫಿಟ್‌ನೆಸ್ ವಿಚಾರದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ. ಇದೀಗ ಆಟವನ್ನು ನಾನು ಆನಂದಿಸುತ್ತಿದ್ದೇನೆ. ವೈಯಕ್ತಿಕ ನೆಲೆಯಲ್ಲಿ ಮತ್ತು ತಂಡದ ದೃಷ್ಟಿಯಿಂದ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿದೆ" ಎಂದು ರಹಾನೆ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್‌ಗೆ ರಹಾನೆ ಸಲಹೆ
ಭಾರತ ಟೆಸ್ಟ್ ತಂಡದ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದ್ದು, ಸುದೀರ್ಘ ಸಮಯದ ನಂತರ ಭಾರತವು ಮೂರನೇ ಕ್ರಮಾಂಕದಲ್ಲಿ ಹೊಸ ಬ್ಯಾಟರ್ ಅನ್ನು ಕಣಕ್ಕಿಳಿಸಲಿದೆ. ಜುಲೈ 12ರಂದು ಡೊಮಿನಿಕಾದಲ್ಲಿ ನಡೆಯಲಿರುವ ಸರಣಿಯ ಮೊದಲ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಅಥವಾ ಯಶಸ್ವಿ ಜೈಸ್ವಾಲ್ ಈ ಸ್ಥಾನದಲ್ಲಿ ಆಡಬಹುದು. ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿದೆ.
"ಪೂಜಾರ ಬದಲಿಗೆ ಆಡುವವರಿಗೆ ಇದೊಂದು ಉತ್ತಮ ಅವಕಾಶ. ಯಾರು ಆಡುತ್ತಾರೆ ಎಂದು ನನಗೆ ಖಚಿತವಿಲ್ಲ. ಎಲ್ಲಾ ಆಟಗಾರರು ಅನುಭವಿಗಳಾಗಿದ್ದು, ಯಾರೇ ಆಡಿದರೂ ಇದು ಉತ್ತಮ ಅವಕಾಶ ಎಂಬುದು ನನಗಂತೂ ಸ್ಪಷ್ಟವಿದೆ. ಜೈಸ್ವಾಲ್ ಆಯ್ಕೆಯಾಗಿರುವುದಕ್ಕೆ ನಿಜಕ್ಕೂ ಸಂತೋಷವಾಗಿದೆ. ಅವರು ಮುಂಬೈ ಪರ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ದುಲೀಪ್ ಟ್ರೋಫಿಯಲ್ಲಿಯೂ ಸಾಕಷ್ಟು ರನ್ ಗಳಿಸಿದರು. ಅವರ ಸಂಖ್ಯೆಗಳು ನಿಜವಾಗಿಯೂ ಉತ್ತಮವಾಗಿವೆ. ಅವರು ಬ್ಯಾಟಿಂಗ್ ಮಾಡಿದ ರೀತಿಯಲ್ಲಿಯೇ ಬ್ಯಾಟ್ ಮಾಡಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್ ಎಂದು ಹೆಚ್ಚು ಚಿಂತಿಸಬಾರದು. ಮೈದಾನಕ್ಕಿಳಿದು ತಮ್ಮ ಪ್ರದರ್ಶನ ನೀಡಬೇಕು" ಎಂದು ರಹಾನೆ ಸಲಹೆ ನೀಡಿದ್ದಾರೆ.