logo
ಕನ್ನಡ ಸುದ್ದಿ  /  ಕ್ರೀಡೆ  /  Ajinkya Rahane: ಸಿಎಸ್‌ಕೆ ನನ್ನ ಆಟಕ್ಕೆ ಲೈಸನ್ಸ್ ನೀಡಿತು; ಭಾರತ ಟೆಸ್ಟ್ ಉಪನಾಯಕತ್ವ ಪಡೆಯುವಲ್ಲಿ ಚೆನ್ನೈ ತಂಡದ ಪಾತ್ರ ವಿವರಿಸಿದ ರಹಾನೆ

Ajinkya Rahane: ಸಿಎಸ್‌ಕೆ ನನ್ನ ಆಟಕ್ಕೆ ಲೈಸನ್ಸ್ ನೀಡಿತು; ಭಾರತ ಟೆಸ್ಟ್ ಉಪನಾಯಕತ್ವ ಪಡೆಯುವಲ್ಲಿ ಚೆನ್ನೈ ತಂಡದ ಪಾತ್ರ ವಿವರಿಸಿದ ರಹಾನೆ

Jayaraj HT Kannada

Jul 12, 2023 07:54 PM IST

google News

ಅಜಿಂಕ್ಯಾ ರಹಾನೆ

    • Ajinkya Rahane CSK: ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ, ಐಪಿಎಲ್‌ನಲ್ಲಿಯೂ ಮಿಂಚಿದರು. ಅದರ ಬೆನ್ನಲ್ಲೇ ಭಾರತ ತಂಡಕ್ಕೆ ಕಂಬ್ಯಾಕ್‌ ಮಾಡಿದರು. ಇದರಲ್ಲಿ ಸಿಎಸ್‌ಕೆ ತಂಡದ ಪಾತ್ರದ ಬಗ್ಗೆ ರಹಾನೆ ವಿವರಿಸಿದ್ದಾರೆ.
ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ (Action Images via Reuters)

ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ಅಜಿಂಕ್ಯ ರಹಾನೆ (Ajinkya Rahane) ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಒಂದು ವರ್ಷ ಭಾರತ ತಂಡದಿಂದ ಹೊರಬಿದ್ದಿದ್ದ ಬ್ಯಾಟರ್‌, ಮುಂಬೈ ಪರ ರಣಜಿ ಕ್ರಿಕೆಟ್‌ನಲ್ಲಿ ಪ್ರಬಲ ಪ್ರದರ್ಶನ ನೀಡದರು. ಅದೇ ಆತ್ಮವಿಶ್ವಾಸದಿಂದ ಸಿಎಸ್‌ಕೆ ಪರ ಐಪಿಎಲ್‌ನಲ್ಲಿಯೂ ಅಬ್ಬರಿಸಿದ ರಹಾನೆ, ತಾನೊಬ್ಬ ಆಕ್ರಮಣಕಾರಿ ಬ್ಯಾಟರ್‌ ಕೂಡಾ ಹೌದು ಎಂಬುದನ್ನು ಸಾಬೀತುಪಡಿಸಿದರು. ಇದು ಟೀಮ್‌ ಇಂಡಿಯಾಗೆ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಹಾನೆ, ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಅದಾದ ಬೆನ್ನಲ್ಲೇ ವಿಂಡೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದ ಉಪನಾಯಕನ ಪಟ್ಟವನ್ನು ಮತ್ತೆ ಪಡೆದರು. ಆ ಮೂಲಕ ಹಲವಾರು ವರ್ಷಗಳ ಕಾಲ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪಡೆದಿದ್ದ ಉಪನಾಯಕನ ಪಟ್ಟವನ್ನು ಮತ್ತೆ ಗಿಟ್ಟಿಸಿಕೊಂಡರು.

ತಮ್ಮ ಆತ್ಮವಿಶ್ವಾಸದ ಆಟಕ್ಕೆ ಐಪಿಎಲ್‌ ಪ್ರದರ್ಶನವನ್ನು ನೆನಪಿಸಿಕೊಂಡಿರುವ ರಹಾನೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸ್ಮರಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಬೇರೆ ಯಾವುದೇ ತಂಡವು ಕೊಡಲಾಗದಂತಹ ಸ್ವಾತಂತ್ರ್ಯವನ್ನು ಸಿಎಸ್‌ಕೆ ತಂಡವು ತಮಗೆ ನೀಡಿದೆ ಎಂದು ರಹಾನೆ ಹೇಳಿಕೊಂಡಿದ್ದಾರೆ.

ಸಿಎಸ್‌ಕೆ ನನಗೆ ಲೈಸನ್ಸ್‌ ನೀಡಿತು

ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಹಾನೆ, “ಸಿಎಸ್‌ಕೆ ನನಗೆ ಸ್ವಾತಂತ್ರ್ಯ ನೀಡಿತು. ಇನ್ನಿಂಗ್ಸ್ ಅನ್ನು ಮುನ್ನಡೆಸಲು ನನಗೆ ಹೇಳಿದ್ದರು. ಆ ಮೂಲಕ ಸಿಎಸ್‌ಕೆ ತಂಡವು ನನಗೆ ಮೈದಾನಲ್ಲಿಳಿದು ಆಕ್ರಮಣಕಾರಿ ಆಟಕ್ಕೆ ಪರವಾನಗಿ(ಲೈಸನ್ಸ್) ನೀಡಿತು"‌ ಎಂದು ರಹಾನೆ ಹೇಳಿದ್ದಾರೆ.

2023ರ ಐಪಿಎಲ್‌ ಆವೃತ್ತಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಸಿಎಸ್‌ಕೆ, ಅಂತಿಮವಾಗಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ತಂಡದ ಯಶಸ್ಸಿನಲ್ಲಿ ರಹಾನೆ ಕೂಡಾ ಪ್ರಮುಖ ಪಾತ್ರ ವಹಿಸಿದರು. 172ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿಂಕ್ಸ್‌, 326 ರನ್ ಗಳಿಸುವ ಮೂಲಕ ಅಚ್ಚರಿಗೊಳಿಸಿದರು.

“ಸಿಎಸ್‌ಕೆ ತಂಡದಲ್ಲಿ ನನಗೆ ನೀಡಲಾದ ಪಾತ್ರದಲ್ಲಿ ಬದಲಾಗಿದೆ. ಅದರ ಹೊರತು ಬೇರೇನೂ ಇಲ್ಲ. ನನಗೆ ನೀಡಿದ ಜವಾಬ್ದಾರಿಯನ್ನು ಪೂರೈಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ” ಎಂದು ರಹಾನೆ ಹೇಳಿಕೊಂಡಿದ್ದಾರೆ.

ಐಪಿಎಲ್‌ನ ಹೊರತಾಗಿ ರಹಾನೆ ನಾಯಕನಾಗಿ ಮುಂಬೈ ರಣಜಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. 11 ರಣಜಿ ಇನ್ನಿಂಗ್ಸ್‌ಗಳಲ್ಲಿ ಅವರು 634 ರನ್ ಗಳಿಸಿ ಮಿಂಚಿದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯೂಟಿಸಿ ಫೈನಲ್‌ ಪಂದ್ಯಕ್ಕೆ ಆಯ್ಕೆಯಾದರು. ಆಸೀಸ್‌ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 89 ರನ್‌ ಗಳಿಸಿ ಭಾರತದ ಪರ ಅಗ್ರ ಸ್ಕೋರರ್ ಆಗಿ ಮಿಂಚಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಗಾಯದ ನಡುವೆಯೂ 46 ರನ್ ಸಿಡಿಸಿದರು.

ನಾನು ರೋಹಿತ್ ನಾಯಕತ್ವದಲ್ಲಿ ಆಡುವುದನ್ನು ಆನಂದಿಸುತ್ತೇನೆ

ರೋಹಿತ್ ಶರ್ಮಾ ನಾಯಕತ್ವದ ಕುರಿತು ಮಾತನಾಡಿದ ರಹಾನೆ, “ನಾನು ರೋಹಿತ್ ನಾಯಕತ್ವದಲ್ಲಿ ಆಡುವುದನ್ನು ಆನಂದಿಸುತ್ತೇನೆ. ಡಬ್ಲ್ಯೂಟಿಸಿ ಫೈನಲ್ ಪಂದ್ಯವು ರೋಹಿತ್ ನೇತೃತ್ವದಲ್ಲಿ ನನ್ನ ಮೊದಲ ಪಂದ್ಯವಾಗಿತ್ತು. ಅವರು ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುತ್ತಾರೆ. ಎಲ್ಲರನ್ನೂ ಬೆಂಬಲಿಸುತ್ತಾರೆ. ಇದು ಉತ್ತಮ ನಾಯಕನ ಸಂಕೇತ" ಎಂದು ಹೇಳಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ