logo
ಕನ್ನಡ ಸುದ್ದಿ  /  ಕ್ರೀಡೆ  /  1983 World Cup: ಮೊದಲ ವಿಶ್ವಕಪ್ ಗೆದ್ದು ಇಂದಿಗೆ 40 ವರ್ಷ; ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ

1983 World Cup: ಮೊದಲ ವಿಶ್ವಕಪ್ ಗೆದ್ದು ಇಂದಿಗೆ 40 ವರ್ಷ; ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ

Prasanna Kumar P N HT Kannada

Jun 25, 2023 10:12 AM IST

google News

ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ

    • ಟೀಮ್​ ಇಂಡಿಯಾ ಮೊದಲ ಏಕದಿನ ವಿಶ್ವಕಪ್​ ಗೆದ್ದು ಮೊದಲ ವಿಶ್ವಕಪ್ ಗೆದ್ದು ಇಂದಿಗೆ 40 ವರ್ಷ ಪೂರ್ಣಗೊಂಡಿದೆ. 1983ರಲ್ಲಿ ಬಲಿಷ್ಠ ವೆಸ್ಟ್​ ಇಂಡೀಸ್​ ವಿರುದ್ಧ ಗೆದ್ದು ಚಾಂಪಿಯನ್​ ಆಗಿತ್ತು. 
ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ
ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ

ಜೂನ್ 25, 1983.. ಈ ದಿನವನ್ನು ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಯಾರು ಮರೆಯಲು ಸಾಧ್ಯ ಹೇಳಿ. ಕ್ರಿಕೆಟ್​​​ ಜನಕರ ನಾಡಲ್ಲೇ ಭಾರತ ತೊಡೆ ತಟ್ಟಿ ನಿಂತು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದ ದಿನ ಇಂದು. ಸ್ಮರಣೀಯ, ಅಮೋಘ, ಅದ್ವಿತೀಯ. ಭಾರತೀಯ ಕ್ರಿಕೆಟ್‌ನಲ್ಲಿ ಇಂದು ವಿಶೇಷ ದಿನ. ಭಾರತದಲ್ಲಿ ಕ್ರಿಕೆಟ್ ಇರುವವರೆಗೂ ಆ ದಿನವನ್ನ ಎಂದೂ ಮರೆಯುವುದಿಲ್ಲ. 40 ವರ್ಷಗಳ ಹಿಂದೆ ಇದೇ ದಿನ, ಭಾರತ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತ್ತು.

ಕಪಿಲ್‌ ದೇವ್ ನೇತೃತ್ವದಲ್ಲಿ ಟೀಮ್​ ಇಂಡಿಯಾ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡು ಇಂದಿಗೆ 40 ವರ್ಷಗಳು ಪೂರ್ಣಗೊಂಡಿವೆ. 1983ರಲ್ಲಿ ಇದೇ ಜೂನ್ 25ರಂದು ದಿನದಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಸತತ ಎರಡು ಬಾರಿ ವಿಶ್ವಕಪ್​ ಜಯಿಸಿದ್ದ ಬಲಿಷ್ಠ ವೆಸ್ಟ್‌ ಇಂಡೀಸ್‌ ವಿರುದ್ಧ ಫೈನಲ್​​​ನಲ್ಲಿ 43 ರನ್‌ಗಳಿಂದ ಗೆಲುವು ಪಡೆದಿದ್ದ ಭಾರತ, ಚರಿತ್ರೆ ಸೃಷ್ಟಿಸಿತ್ತು.

ಹ್ಯಾಟ್ರಿಕ್​ಗೆ ಗೆಲುವಿಗೆ ಆಘಾತ ಕೊಟ್ಟ ಭಾರತ

1983ರಲ್ಲಿ ಐಸಿಸಿ ವಿಶ್ವಕಪ್​ ಗೆಲ್ಲುತ್ತಿದ್ದಂತೆ ಭಾರತದ ಕ್ರಿಕೆಟ್​​ನಲ್ಲಿ ಹೊಸ ಶಕೆ ಆರಂಭವಾಯಿತು. ಈ ಏಕದಿನ ವಿಶ್ವಕಪ್​ ಜಯಿಸುವುದಕ್ಕೂ ಮುನ್ನ ಟೀಮ್​ ಇಂಡಿಯಾ 1975, 1979ರ ವರ್ಲ್ಡ್​​ಕಪ್​​​ನಲ್ಲಿ ಲೀಗ್​​ ಹಂತದಲ್ಲೇ ಹೊರ ಬಿದ್ದಿತ್ತು. ಈ ಟೂರ್ನಿಗಳಿಂದ ಸೇರಿ ಕೇವಲ 2 ಪಂದ್ಯಗಳಲ್ಲಿ ಜಯಿಸಿತ್ತು ಭಾರತ. ಕಳೆದ ಎರಡೂ ಟೂರ್ನಿಗಳಲ್ಲಿ ವೆಸ್ಟ್​ ಇಂಡೀಸ್​ ಚಾಂಪಿಯನ್​ ಆಗಿತ್ತು. ಆದರೆ, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದ್ದ ವಿಂಡೀಸ್​ಗೆ ಭಾರತ ಆಘಾತ ನೀಡಿತ್ತು.

ಲೆಕ್ಕಾಚಾರಗಳೇ ಉಲ್ಟಾ

ಆ ವರ್ಷ ಇಂಗ್ಲೆಂಡ್​ ಟೂರ್ನಿಯ ಆತಿಥ್ಯ ವಹಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್​ ಆಗುತ್ತೆ, ಚೊಚ್ಚಲ ಟ್ರೋಫಿ ಗೆಲ್ಲುತ್ತೆ ಎಂಬುದನ್ನು ಊಹಿಸಿರಲೇ ಇಲ್ಲ. ಟ್ರೋಫಿ ಹಂತದವರೆಗೂ ಇರಲಿ, ಲೀಗ್​​​ನಲ್ಲೇ ಮನೆಗೆ ಮರಳುತ್ತದೆ ಎನ್ನುವುದೇ ಎಲ್ಲರದ್ದು ಮಾತು. ಅದರಲ್ಲೂ ಫೈನಲ್​ಗೇರುತ್ತೆ, ವಿಂಡೀಸ್​ ವಿರುದ್ಧ ಫೈನಲ್​ ಗೆಲ್ಲುತ್ತೆ ಎಂಬುದು ಕನಸಿನ ಮಾತಾಗಿತ್ತು. ಇದೆಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿತು ಕಪಿಲ್​ ದೇವ್​ ನಾಯಕತ್ವದ ಭಾರತ ತಂಡ.

ಐತಿಹಾಸಿಕ ಕ್ರೀಡಾಂಗಣ ಲಾರ್ಡ್ಸ್ ಮೈದಾನದಲ್ಲಿ ಈ ವಿಶ್ವಕಪ್‌ ಫೈನಲ್‌ ಕಾದಾಟ ನಡೆದಿತ್ತು. ಭಾರತ ತಂಡವು ಮೊದಲು ಬ್ಯಾಟ್‌ ಮಾಡಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಮೊತ್ತ ಕಲೆ ಹಾಕಲಿಲ್ಲ. ತಂಡ 54.4 ಓವರ್‌ಗಳಿಗೆ ಕೇವಲ 183 ರನ್‌ ಕಲೆ ಹಾಕಿತ್ತು. ವೆಸ್ಟ್​ ಇಂಡೀಸ್​ಗೆ ಈ ಗುರಿ ದೊಡ್ಡದೇನು ಆಗಿರಲಿಲ್ಲ. ಘಟಾನುಘಟಿ ಬ್ಯಾಟರ್​ಗಳು ತಂಡದಲ್ಲಿ ಇದ್ದರು.

ಗುರಿ ಹಿಂಬಾಲಿಸಿದ ಕ್ಲೈವ್‌ ಲಾಯ್ಡ್‌ ನಾಯಕತ್ವದ ವೆಸ್ಟ್ ಇಂಡೀಸ್​​ಗೆ ಅಚ್ಚರಿ ಎಂಬಂತೆ ಭಾರತ ಆಘಾತ ನೀಡಿತು. ಬೌಲರ್​ಗಳಾದ ಮದನ್‌ ಲಾಲ್‌ ಹಾಗೂ ಮೊಹೀಂದರ್‌ ಅಮರ್‌ನಾಥ್‌ ಮಾರಕ ದಾಳಿಗೆ ನಲುಗಿದ ವಿಂಡೀಸ್​​ 140 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದರೊಂದಿಗೆ 43 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ, ಚೊಚ್ಚಲ ವಿಶ್ವಕಪ್‌ ಎತ್ತಿ ಹಿಡಿದು ಸಂಭ್ರಮಿಸಿತ್ತು. ಆ ದಿನದ ಬಳಿಕ ಭಾರತದ ಕ್ರಿಕೆಟ್​​ನಲ್ಲಿ ಹೊಸ ಪರ್ವ ಶುರುವಾಯಿತು.

ಭಾರತದಲ್ಲಿ ಯುವಕರ ಒಲವು ಕ್ರಿಕೆಟ್​​ನತ್ತ ತಿರುಗಿತು. ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್​ ಹುಟ್ಟಿಕೊಂಡಿತು. ಅಂದು ಏನೂ ಇಲ್ಲದಿದ್ದ ಬಿಸಿಸಿಐ, ವಿಶ್ವದ ಕ್ರಿಕೆಟ್​ ಮಂಡಳಿಗಳಿಗೆ ಅಧಿಪತಿಯಾಗಿದೆ. ದೊಡ್ಡ ದೊಡ್ಡ ಆಟಗಾರರು ಹುಟ್ಟಿಕೊಂಡರು. ಆದರೆ, 1983ರ ಬಳಿಕ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಭಾರತ 2ನೇ ಬಾರಿ 2011ರಲ್ಲಿ ಏಕದಿನ ವಿಶ್ವಕಪ್‌ ಜಯಿಸಿತ್ತು.

ಕಾರ್ಯಕ್ರಮ ಆಯೋಜಿಸಿ ಹಣ ಸಂಗ್ರಹಿಸಿದ್ದ ಬಿಸಿಸಿಐ

1983ರ ಸಂದರ್ಭದಲ್ಲಿ ಬಿಸಿಸಿಐ ಖಜಾನೆಯಲ್ಲಿ ಹಣ ಇರಲಿಲ್ಲ. ಆಟಗಾರರಿಗೆ ವೇತನ ಕೊಡಲೂ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಹುಮಾನ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ. ಅಂತಹ ಸಂದರ್ಭದಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಿಂದ ಬಂದಿದ್ದ ಹಣವನ್ನು ಭಾರತೀಯ ಕ್ರಿಕೆಟಿಗರಿಗೆ ನೀಡಲಾಗಿತ್ತು.

ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಕೇಂದ್ರ ಸಚಿವ ಎನ್‌ಕೆಪಿ ಸಾಳ್ವೆ ಮತ್ತು ಕ್ರಿಕೆಟ್ ನಿರ್ವಾಹಕರಾಗಿದ್ದ ರಾಜ್ ಸಿಂಗ್ ಡುಂಗರಪುರ್​​ ಅವರು ಲತಾ ಮಂಗೇಶ್ಕರ್​ ಅವರನ್ನು ಸಂಪರ್ಕಿಸಿ ಈ ಬಗ್ಗೆ ಹೇಳಿದ್ದರು. ರಾಜ್ ಸಿಂಗ್ ಅವರ ಆಪ್ತ ಸ್ನೇಹಿತೆ ಕೂಡ ಆಗಿದ್ದರು. ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದೇಶದ ಅತಿದೊಡ್ಡ ಕ್ರಿಕೆಟ್ ಅಭಿಮಾನಿಗಳಲ್ಲಿ ಒಬ್ಬರಾದ ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಿಂದ ಬಿಸಿಸಿಐ 20 ಲಕ್ಷ ಹಣ ಸಂಗ್ರಹಿಸಿತು. ತಂಡದ 11 ಸದಸ್ಯರಿಗೂ ತಲಾ 1 ಲಕ್ಷ ರೂಪಾಯಿ ನಗದು ಪ್ರಶಸ್ತಿ ನೀಡಿತು.

ಸ್ಕೋರ್ ವಿವರ ಹೀಗಿತ್ತು

ಭಾರತ ತಂಡ 54.4 ಓವರ್‌ಗಳಿಗೆ 183 ರನ್​ ಗಳಿಸಿ ಸರ್ವಪತನ ಕಂಡಿತ್ತು. ಕೃಷ್ಣಮಾಚಾರಿ ಶ್ರೀಕಾಂತ್‌ 38 ರನ್, ಮೊಹೀಂದರ್‌ ಅಮರನಾಥ್‌ 26 ರನ್, ಸಂದೀಪ್‌ ಪಾಟೀಲ್‌ 27 ರನ್, ಮದನ್ ಲಾಲ್‌ 17 ರನ್ ಗಳಿಸಿದ್ದರು. ಇನ್ನು ವೆಸ್ಟ್​ ಇಂಡೀಸ್​ ಪರ ಬೌಲಿಂಗ್​​ನಲ್ಲಿ ಆಂಡಿ ರಾಬರ್ಟ್ಸ್‌ 3 ವಿಕೆಟ್, ಎಂ.ಮಾರ್ಷಲ್‌, ಮೈಕಲ್‌ ಹೋಲ್ಡಿಂಗ್‌, ಲ್ಯಾರಿ ಗೋಮ್ಸ್ ತಲಾ 2 ವಿಕೆಟ್​ ಪಡೆದಿದ್ದರು.

ಇನ್ನು ವೆಸ್ಟ್​ ಇಂಡೀಸ್ ತಂಡವು, 52 ಓವರ್‌ಗಳಿಗೆ 140 ರನ್ ಗಳಿಸಿ ಆಲೌಟ್​ ಆಗಿತ್ತು. ವಿವಿಯನ್ ರಿಚರ್ಡ್ಸ್‌ 33 ರನ್, ಜೆಫ್‌ ಡಜೊನ್‌ 25 ರನ್, ಎಂ ಮಾರ್ಷಲ್‌ 18 ರನ್ ಕಲೆ ಹಾಕಿದ್ದರು. ಬೌಲಿಂಗ್​ನಲ್ಲಿ ಮದನ್‌ ಲಾಲ್‌, ಮೊಹೀಂದರ್‌ ಅಮರ್‌ನಾಥ್‌ ತಲಾ 3 ವಿಕೆಟ್​ ಪಡೆದರೆ, ಬಲ್ವಿಂದರ್‌ ಸಂಧು 2 ವಿಕೆಟ್​ ಪಡೆದು ಮಿಂಚಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ