World Cup 2023: ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ; ಮೋದಿ ಕ್ರೀಡಾಂಗಣದಲ್ಲಿಯೇ ಇಂಡೋ ಪಾಕ್ ಪಂದ್ಯ
Jun 27, 2023 01:34 PM IST
ಭಾರತ ತಂಡ
- India's full schedule for ODI World Cup 2023: ಭಾರತವು ಆಸ್ಟ್ರೇಲಿಯಾ ವಿರುದ್ಧ ಅಭಿಯಾನವನ್ನು ಆರಂಭಿಸಲಿದೆ. ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ.
ಕ್ರಿಕೆಟ್‌ನ ಅದ್ಧೂರಿ ಹಬ್ಬಕ್ಕೆ ಭಾರತ ಸಜ್ಜಾಗುತ್ತಿದೆ. 2011ರ ಬಳಿಕ ಇದೇ ಮೊದಲ ಬಾರಿಗೆ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದ್ದು, ಭರ್ಜರಿ ಸಂಭ್ರಮಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ನೂರು ದಿನಗಳಲ್ಲಿ ವಿಶ್ವಕಪ್ ಆರಂಭವಾಗುತ್ತಿದ್ದು, ಸುಮಾರು ಒಂದು ದಶಕದ ಐಸಿಸಿ ಟ್ರೋಫಿಯ ಬರವನ್ನು ನೀಗಿಸಲು ಭಾರತ ಸಜ್ಜಾಗಿದೆ.
2011ರ ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ, ಆ ಬಳಿಕ 2015 ಹಾಗೂ 2019ರಲ್ಲಿ ಆತಿಥ್ಯ ವಹಿಸಿದ ದೇಶಗಳೇ ವಿಶ್ವಕಪ್ ಗೆದ್ದಿದೆ. ಹೀಗಾಗಿ ಈ ವರ್ಷ ಮತ್ತೆ ಭಾರತವೇ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ಕಾಯಂ ನಾಯಕನಾಗಿ ನೇಮಕ ಮಾಡಲಾಗಿದೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಬಳಿಕ, ಭಾರತ 2011ರಲ್ಲಿ ಎರಡನೇ ವಿಶ್ವಕಪ್ ಜಯಿಸಿತು. ಇದೀಗ ಮೂರನೇ ಟ್ರೋಫಿ ಗೆಲ್ಲಲು ಭಾರತ ಸಜ್ಜಾಗಿದೆ.
2023ರ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ
ಈ ವರ್ಷದ ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಆತಿಥೇಯ ಭಾರತವು 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದೆ. ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯಲಿದೆ. ಚೆನ್ನೈ ಮತ್ತು ಅಹಮದಾಬಾದ್ ಬಳಿಕ, ಭಾರತದ ಗುಂಪು ಹಂತದ ಪಂದ್ಯಗಳು ದೆಹಲಿ, ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರು ನಗರದಲ್ಲಿ ನಡೆಯಲಿದೆ.
ಭಾರತದ ಸಂಪೂರ್ಣ ವೇಳಾಪಟ್ಟಿ, ದಿನಾಂಕ ಹಾಗೂ ಪಂದ್ಯದ ಸಮಯ ಹೀಗಿದೆ
ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಎಂಟು ತಂಡಗಳು ಈಗಾಗಲೇ ಅದ್ಧೂರಿ ಸಂಭ್ರಮಕ್ಕೆ ಅರ್ಹತೆ ಪಡೆದಿವೆ. ಉಳಿದ ಎರಡು ತಂಡಗಳನ್ನು ವಿಶ್ವಕಪ್ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಈ ಅರ್ಹತ ಪಂದ್ಯಗಳು ಪ್ರಸ್ತುತ ನಡೆಯುತ್ತಿರುವುದರಿಂದ ತಂಡಗಳು ಅಂತಿಮವಾಗಿಲ್ಲ.
ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ. ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಿವೆ.