Yuvraj Singh: ಸರಿಯಾದ ಆಟಗಾರರಿಲ್ಲ, ಸರಿಯಾದ ಮ್ಯಾನೇಜ್ಮೆಂಟ್ ಇಲ್ಲ; ಇನ್ನು ಹೇಗೆ ವಿಶ್ವಕಪ್ ಗೆಲ್ತಾರೆ; ಯುವರಾಜ್ ಸಿಂಗ್ ಮತ್ತೊಮ್ಮೆ ಗರಂ
Aug 11, 2023 07:00 AM IST
ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್.
- Yuvraj Singh: 2023ರ ಏಕದಿನ ವಿಶ್ವಕಪ್ ಗೆಲ್ಲಲು ಬೇಕಾದ ಅರ್ಹತೆ ಭಾರತ ತಂಡದಲ್ಲಿ ಕಾಣುತ್ತಿಲ್ಲ. ತಂಡದಲ್ಲಿ ಸಾಕಷ್ಟು ನ್ಯೂನತೆಗಳು ತಂಡದಲ್ಲಿವೆ. ಅವುಗಳು ಸರಿಪಡಿಸಿಕೊಳ್ಳದಿದ್ದರೆ, ಗೆಲುವು ಹೇಗೆ ಸಾಧ್ಯ ಎಂದು ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಭಾರತ ತಂಡ (Team India) ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿಯುತ್ತಿದೆ. ತವರಿನಲ್ಲಿ ಗಟ್ಟಿ ದಾಖಲೆ ಹೊಂದಿರುವ ಟೀಮ್ ಇಂಡಿಯಾ, 2011ರ ಏಕದಿನ ವಿಶ್ವಕಪ್ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ಆದರೆ ಈ ಬಾರಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡವು ವಿಶ್ವಕಪ್ ಗೆಲ್ಲುವ ಅವಕಾಶ ಕಡಿಮೆ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಭವಿಷ್ಯ ನುಡಿದಿದ್ದಾರೆ.
ಯುವರಾಜ್ ಸಿಂಗ್ 2011 ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಆಕರ್ಷಕ ಆಲ್‌ರೌಂಡ್ ಪ್ರದರ್ಶನದಿಂದ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪಡೆದಿದ್ದರು. 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವಿ, 2023ರ ಏಕದಿನ ವಿಶ್ವಕಪ್ ಗೆಲ್ಲಲು ಬೇಕಾದ ಅರ್ಹತೆ ಭಾರತ ತಂಡದಲ್ಲಿ ಕಾಣುತ್ತಿಲ್ಲ ಎಂದಿದ್ದಾರೆ. ತಂಡದಲ್ಲಿ ಸಾಕಷ್ಟು ನ್ಯೂನತೆಗಳು ತಂಡದಲ್ಲಿವೆ. ಅವುಗಳು ಸರಿಪಡಿಸಿಕೊಳ್ಳದಿದ್ದರೆ, ಗೆಲುವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
‘ಪ್ರಮುಖ ಪಂದ್ಯಗಳಲ್ಲಿ ಪ್ರಯೋಗ ಬೇಡ’
ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಗಾಯಗೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸರಿಯಾದ ಅನುಭವಿ ಆಟಗಾರರ ಕೊರತೆ ಕಾಡುತ್ತಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ನಿರ್ಣಾಯಕ ಪಂದ್ಯಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಯುವಿ ಎಚ್ಚರಿಸಿದ್ದಾರೆ. ಆದರೆ ಪ್ರಮುಖ ಪಂದ್ಯಗಳಲ್ಲಿ ಯಾವುದೇ ಪ್ರಯೋಗ ನಡೆಸಬಾರದು ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಕೇಳಿದ್ದಾರೆ ಮಾಜಿ ಆಲ್ರೌಂಡರ್.
‘ಮ್ಯಾನೇಜ್ಮೆಂಟ್ ಬಳಿ ಉತ್ತರವೇ ಇಲ್ಲ’
ಆರಂಭಿಕರಾಗಿ ಕಣಕ್ಕಿಳಿದು ಬ್ಯಾಟ್ ಬೀಸುವುದು ಬೇರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದು ಬೇರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರಿಗೆ ಸಾಕಷ್ಟು ಕೌಶಲ್ಯಗಳು ಬೇಕಾಗುತ್ತವೆ. ಸರಿಯಾಗಿ ಕಾಳಜಿ ವಹಿಸಿದರೆ, ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಆದರೆ ಮಧ್ಯಮ ಕ್ರಮಾಂಕದ ಸಮಸ್ಯೆ ಬಗೆಹರಿಸಲು ತಂಡದ ಮ್ಯಾನೇಜ್‌ಮೆಂಟ್ ಗಮನಹರಿಸುತ್ತಿಲ್ಲ ಎಂದು ನನಗನಿಸುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಪ್ರಶ್ನೆಗೆ ಮ್ಯಾನೇಜ್ಮೆಂಟ್ ಬಳಿ ಉತ್ತರ ಇಲ್ಲ ಎಂದು ಯುವಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹೊಡಿಬಡಿ ಆಟ ಬೇಕಾಗಲ್ಲ’
ಮಿಡಲ್ ಆರ್ಡರ್ನಲ್ಲಿ ನ್ಯೂನತೆ ಇದ್ದರೂ, ಯಾವುದೇ ಸಮಸ್ಯೆ ಇಲ್ಲ. ವಿಶ್ವಕಪ್ಗೆ ಸಿದ್ಧರಿದ್ದೇವೆ ಎನ್ನುವುದು ಎಷ್ಟು ಸರಿ. ಆರಂಭಿಕರು ಬೇಗನೇ ಔಟಾದರೆ, ನಂತರ ಮುಖ್ಯ ಪಾತ್ರವಹಿಸಬೇಕಿರುವುದು ಮಧ್ಯಮ ಕ್ರಮಾಂಕದ ಆಟಗಾರರು ಎಂಬುದನ್ನು ಮರೆಯುವಂತಿಲ್ಲ. ಮಧ್ಯಮ ಕ್ರಮಾಂಕದವರೇ ತಂಡಕ್ಕೆ ಆಸರೆಯಾಗಬೇಕು. ಕ್ರೀಸ್ಗೆ ಬಂದ ತಕ್ಷಣವೇ ದೊಡ್ಡ ಹೊಡೆತಗಳಿಗೆ ಕೈ ಹಾಕುವವರು ಒತ್ತಡವನ್ನು ನಿಭಾಯಿಸುವ ಶಕ್ತಿ ಹೊಂದಿರಲ್ಲ ಎಂದು ಪರೋಕ್ಷವಾಗಿ ಸೂರ್ಯಕುಮಾರ್ ಆಯ್ಕೆಯನ್ನು ತಿರಸ್ಕರಿಸಿದ್ದಾರೆ.
‘ಹಾಗಾಗದಿರಲಿ ಎಂದು ಹಾರೈಸುವೆ’
ಒತ್ತಡವನ್ನು ನಿಭಾಯಿಸಿ ಪಾಲುದಾರಿಕೆ ನೀಡುವ ಆಟಗಾರ ಬೇಕು. ತಾಳ್ಮೆಯಿಂದ ಸ್ಕೋರ್ ಬೋರ್ಡ್ನಲ್ಲಿ ರನ್ ಗತಿ ಏರಿಸುತ್ತಿರಬೇಕು. ಅದಕ್ಕೆ ವಿಶೇಷ ಪ್ರತಿಭೆ ಬೇಕು. ಆದರೆ ಈ ಕೆಲಸ ಅಂದುಕೊಂಡಂತೆ ಸುಲಭವಲ್ಲ. ಅನುಭವ ಆಟಗಾರನೇ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರ. ಸರಿಯಾದ ಆಟಗಾರರಿಲ್ಲದೆ, ತಂಡವನ್ನು ಕಾಳಜಿ ವಹಿಸುವ ಸರಿಯಾದ ನಿರ್ವಹಣೆಯಿಲ್ಲದೆ ನಾವು ವಿಶ್ವಕಪ್ ಗೆಲ್ಲುವುದೇಗೆ? ಇದನ್ನು ನೋಡಿದರೆ ಮೊದಲೇ ಫಲಿತಾಂಶ ಏನಾಗುತ್ತದೆ ಎಂಬುದು ಗೊತ್ತಾಗುತ್ತಿದೆ. ಆದರೆ, ಹಾಗಾಗದಿರಲಿ ಎಂದು ಹಾರೈಸುತ್ತೇನೆ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.