logo
ಕನ್ನಡ ಸುದ್ದಿ  /  ಕ್ರೀಡೆ  /  Rohit Sharma: ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು 2011ರ ವಿಶ್ವಕಪ್​ ನೋಡದಿರಲು ಪ್ರತಿಜ್ಞೆ ಮಾಡಿದ್ದೆ, ಆದರೆ..; ನೋವು ಹಂಚಿಕೊಂಡ ರೋಹಿತ್ ಶರ್ಮಾ

Rohit Sharma: ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು 2011ರ ವಿಶ್ವಕಪ್​ ನೋಡದಿರಲು ಪ್ರತಿಜ್ಞೆ ಮಾಡಿದ್ದೆ, ಆದರೆ..; ನೋವು ಹಂಚಿಕೊಂಡ ರೋಹಿತ್ ಶರ್ಮಾ

Prasanna Kumar P N HT Kannada

Aug 10, 2023 09:11 PM IST

google News

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

    • Rohit Sharma: 2011ರ ಏಕದಿನ ವಿಶ್ವಕಪ್ ತಂಡದ ಸದಸ್ಯ ಆಗಿರಲಿಲ್ಲವೆಂಬ ಕಾರಣಕ್ಕೆ ನೋವಿನಿಂದ ವಿಶ್ವಕಪ್​​ ಪಂದ್ಯಗಳನ್ನು ನೋಡುವುದನ್ನೇ ಬಿಟ್ಟಿದ್ದರಂತೆ ರೋಹಿತ್​ ಶರ್ಮಾ. ಹೀಗಂತ ಅವರೇ ತುಟಿ ಬಿಚ್ಚಿ ಹೇಳಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ವೆಸ್ಟ್​ ಇಂಡೀಸ್​ ಪ್ರವಾಸ ಮುಗಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್​​ ಶರ್ಮಾ (Rohit Sharma), ಬಹುನಿರೀಕ್ಷಿತ ಏಷ್ಯಾಕಪ್ (Asia Cup) ಮತ್ತು ವಿಶ್ವಕಪ್​ ಟೂರ್ನಿಗಳಿಗೂ (ODI World Cup 2023) ಮುನ್ನ ವಿಶ್ರಾಂತಿಯಲ್ಲಿದ್ದಾರೆ. ಪ್ರಸ್ತತ ಅಮೆರಿಕ ಪ್ರವಾಸದಲ್ಲಿರುವ ಹಿಟ್​ಮ್ಯಾನ್, ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದು, 2011ರ ಏಕದಿನ ವಿಶ್ವಕಪ್​​​​ (ODI World Cup 2011) ಗೆಲುವನ್ನು ನಾನು ನನಗಾದ ನೋವಿನಿಂದ ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್ ಅನ್ನು ಜಯಿಸಿತ್ತು. ಭಾರತದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಶ್ರೀಲಂಕಾ ಎದುರಿನ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ, 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಧೋನಿ ಗೆಲುವಿನ ಸಿಕ್ಸರ್​ ಬಾರಿಸಿ ದೇಶವನ್ನೇ ಸಂಭ್ರಮಿಸುವಂತೆ ಮಾಡಿದ್ದರು. ಬರೋಬ್ಬರಿ 28 ವರ್ಷಗಳ ನಂತರ ಟ್ರೋಫಿ ಸಂಭ್ರಮಿಸಿತ್ತು.

ಟ್ವೀಟ್​ ಮೂಲಕ ಬೇಸರ

ಆದರೆ ಆ ತಂಡದ ಸದಸ್ಯ ಆಗಿರಲಿಲ್ಲವೆಂಬ ಕಾರಣಕ್ಕೆ ನೋವಿನಿಂದ ವಿಶ್ವಕಪ್​​ ಪಂದ್ಯಗಳನ್ನು ನೋಡುವುದನ್ನೇ ಬಿಟ್ಟಿದ್ದರಂತೆ. ಹೀಗಂತ ಅವರೇ ತುಟಿ ಬಿಚ್ಚಿ ಹೇಳಿದ್ದಾರೆ. 2011ರ ಏಕದಿನ ವಿಶ್ವಕಪ್​ ಟೂರ್ನಿಗೆ ರೋಹಿತ್​ ಶರ್ಮಾ ಆಯ್ಕೆಯಾಗಿರಲಿಲ್ಲ. ಏಕೆಂದರೆ 2010ರಲ್ಲಿ ಒಡಿಐ ಕ್ರಿಕೆಟ್​​​ನಲ್ಲಿ ಹಿಟ್​ಮ್ಯಾನ್ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಆಯ್ಕೆಗೆ ಪರಿಗಣಿಸಿರಲಿಲ್ಲ. ಇದೇ ನೋವಿನಿಂದ 2011ರ ಜನವರಿ 31ರಂದು ರಾತ್ರಿ 8.29ಕ್ಕೆ ಸರಿಯಾಗಿ ಟ್ವೀಟ್​​​ ಮಾಡಿದ್ದರು.

ಏಕದಿನ ವಿಶ್ವಕಪ್ ತಂಡದ ಭಾಗವಾಗದಿರುವುದಕ್ಕೆ ನಿಜವಾಗಿಯೂ ನಿರಾಶೆಯಾಗಿದೆ. ನಾನು ಇಲ್ಲಿಂದ ಮುಂದುವರಿಯಬೇಕಾಗಿದೆ. ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಟ್ವೀಟ್​​​ ಮೂಲಕ ಆಕ್ರೋಶದ ಜೊತೆಗೆ ನೋವನ್ನೂ ಹೊರ ಹಾಕಿದ್ದರು. ತಂಡಕ್ಕೆ ಆಯ್ಕೆಯಾಗದ ಕಾರಣ, ನಾನು ವಿಶ್ವಕಪ್​ ಪಂದ್ಯಗಳನ್ನೇ ನೋಡಿರಲಿಲ್ಲ ಎಂದು ಈಗ ಬಹಿರಂಗಪಡಿಸಿದ್ದಾರೆ. ಅಂದು ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಇದೀಗ ಅವರೇ ತಂಡದ ನಾಯಕನಾಗಿರುವುದು ವಿಶೇಷ ಸಂಗತಿ.

ಮೊದಲ ಬಾರಿಗೆ ಹತ್ತಿರದಿಂದ ಟ್ರೋಫಿ ನೋಡಿದೆ!

ಪ್ರಸ್ತುತ ಯುಎಸ್​ಎ ಪ್ರವಾಸದಲ್ಲಿರುವ ರೋಹಿತ್ ಶರ್ಮಾ 2023ರ ಏಕದಿನ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. ನಾನು ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಇಷ್ಟು ಹತ್ತಿರದಿಂದ ನೋಡಿದ್ದು. ನಾವು 2011ರ ಏಕದಿನ ವಿಶ್ವಕಪ್ ಗೆದ್ದೆವು. ಆದರೆ ನಾನು ತಂಡದ ಸದಸ್ಯನಾಗಿರಲಿಲ್ಲ ಎಂದ ಅವರು, 2011ರ ವಿಶ್ವಕಪ್ ಹಿಂದೆ ಹಲವು ಭಾವನೆಗಳು, ಹಲವು ಕಥೆಗಳಿವೆ ಎಂದಿದ್ದಾರೆ.

‘ವಿಶ್ವಕಪ್ ನೋಡಬಾರದೆಂದು ಪ್ರತಿಜ್ಞೆ ಮಾಡಿದ್ದೆ’

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಸಿಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿತ್ತು. ಕೋಪದಲ್ಲಿ ವಿಶ್ವಕಪ್ ಪಂದ್ಯಗಳನ್ನು ನೋಡಬಾರದು ಎಂದು ಪ್ರತಿಜ್ಞೆ ಮಾಡಿದ್ದೆ. ಇಡೀ ತಂಡ ವಿಶ್ವಕಪ್ ಆಡುತ್ತಿದ್ದಾಗ ಮನೆಯಲ್ಲಿ ಇರಲು ನನಗೆ ತುಂಬಾ ಕಷ್ಟವಾಯಿತು. ಅದೊಂದು ದುಃಸ್ವಪ್ನದಂತೆ ಭಾಸವಾಗುತ್ತಿತ್ತು. ಪದೆಪದೇ ಕಾಡುತ್ತಿತ್ತು ಎಂದು ತಾನು ಅನುಭವಿಸಿದ ನೋವಿನ ದಿನಗಳನ್ನು ಹಂಚಿಕೊಂಡರು.

ನಾನೇ ಆಡುತ್ತಿದ್ದಂತೆ ಭಾಸವಾಗುತ್ತಿತ್ತು!

ಆದರೆ, ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಳಿಕ ನನ್ನ ಮನಸು ತಡೆಯಲಿಲ್ಲ. ಪಂದ್ಯಕ್ಕೆ ಬೆಂಬಲ ಸೂಚಿಸದೆ ಇರಲು ಆಗಲಿಲ್ಲ. ನಂತರ ಪ್ರತಿ ಪಂದ್ಯ, ಪ್ರತಿ ಎಸೆತ, ಪ್ರತಿ ಕ್ಷಣವನ್ನೂ ವೀಕ್ಷಿಸಿದೆ. ಅದೊಂದು ವಿಭಿನ್ನ ಅನುಭವ. ಮೈದಾನದಲ್ಲಿ ನಾನೇ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಈ ಬಾರಿ ಟ್ರೋಫಿ ಗೆಲ್ಲಬೇಕೆಂದು ಬಯಸುತ್ತೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಅದೊಂದು ಬೇಸರದ ಸಂಗತಿ

ನೆನಪಿನ ಹಾದಿಯಲ್ಲಿ ರೋಹಿತ್, ಐಸಿಸಿ ವಿಶ್ವಕಪ್‌ನಲ್ಲಿ ಭಾರತದ ಕೆಲವು ಕಹಿ-ಸಿಹಿ ಅಭಿಯಾನಗಳನ್ನು ನೆನಪಿಸಿಕೊಂಡರು. 2003ರಲ್ಲಿ, ಭಾರತವು ಫೈನಲ್‌ವರೆಗೆ ನಿಜವಾಗಿಯೂ ಉತ್ತಮವಾಗಿ ಆಡಿತು. ಸಚಿನ್ ತೆಂಡೂಲ್ಕರ್ ಅದ್ಭುತ ಬ್ಯಾಟಿಂಗ್, ತುಂಬಾ ರನ್ ಗಳಿಸಿದರು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿ. ನಂತರ 2007ರ ವಿಶ್ವಕಪ್​​​ನಲ್ಲಿ ಭಾರತ ಗೆಲ್ಲುತ್ತದೆ ಎಂದು ನಂಬಿದ್ದೆವು. ಆದರೆ ಲೀಗ್ ಹಂತದಿಂದ ಹೊರ ಬಿದ್ದಿದ್ದು, ದುರದೃಷ್ಟಕರವಾಗಿತ್ತು ಎಂದು ರೋಹಿತ್ ಐಸಿಸಿಗೆ ತಿಳಿಸಿದ್ದಾರೆ.

2019ರಲ್ಲಿ ರನ್​ ಶಿಖರ ನಿರ್ಮಿಸಿದ ರೋಹಿತ್

2019ರ ಐಸಿಸಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರಲ್ಲಿ ರೋಹಿತ್​ಗೆ ಅಗ್ರಸ್ಥಾನ. ಕೇವಲ ಒಂಬತ್ತು ವಿಶ್ವಕಪ್ ಪಂದ್ಯಗಳಿಂದ 81.00 ಸರಾಸರಿಯೊಂದಿಗೆ, ರೋಹಿತ್ ಟೀಮ್ ಇಂಡಿಯಾಕ್ಕಾಗಿ 648 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಹಿಟ್‌ಮ್ಯಾನ್ ಶತಕಗಳನ್ನು ಗಳಿಸಿದರು. ಇದೀಗ ಅವರದ್ದೇ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಕಪ್​ ಗೆಲ್ಲಲು ಸಜ್ಜಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ