logo
ಕನ್ನಡ ಸುದ್ದಿ  /  ಕ್ರೀಡೆ  /  World Cup 2023: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ, ಬಾಬರ್ ಜನ್ಮದಿನದಂದು ಭಾರತ ಪಾಕಿಸ್ತಾನ ಪಂದ್ಯ

World Cup 2023: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ, ಬಾಬರ್ ಜನ್ಮದಿನದಂದು ಭಾರತ ಪಾಕಿಸ್ತಾನ ಪಂದ್ಯ

Jayaraj HT Kannada

Jan 09, 2024 08:05 PM IST

google News

ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ಸೆಣಸಲಿದೆ.

    • Cricket World Cup 2023 schedule: ಅಕ್ಟೋಬರ್‌ನಿಂದ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ವೇಳಾಪಟ್ಟಿಯನ್ನು ಐಸಿಸಿ ಅಂತಿಮವಾಗಿ ಪ್ರಕಟಿಸಿದೆ.
ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ಸೆಣಸಲಿದೆ.
ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ಸೆಣಸಲಿದೆ. (Getty)

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ 2023ರ ಕ್ರಿಕೆಟ್ ವಿಶ್ವಕಪ್‌ ವೇಳಾಪಟ್ಟಿಯು ಪ್ರಕಟಗೊಂಡಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಆವೃತ್ತಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಮುಂಬೈನಲ್ಲಿ ಇಂದು (ಮಂಗಳವಾರ) ನಡೆದ ಕಾರ್ಯಕ್ರಮದಲ್ಲಿ ಐಸಿಸಿ ವೇಳಾಪಟ್ಟಿಯನ್ನು ಘೋಷಿಸಿತು. ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯ ನಡೆಯಲಿದೆ. ಬಾಬರ್ ಆಜಮ್ ಅವರ ಜನ್ಮದಿನದಂದೇ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಜಿದ್ದಾಜಿದ್ದಿನ ಕದನ ಏರ್ಪಡಲಿದೆ.

ನಿರೀಕ್ಷೆಯಂತೆಯೇ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೇ ನವೆಂಬರ್ 19ರಂದು ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ. ಅದಕ್ಕೂ ಮುನ್ನ ನವೆಂಬರ್ 15 ಮತ್ತು 16 ರಂದು ಎರಡು ಸೆಮಿಫೈನಲ್‌ ಪಂದ್ಯಗಳು ಕ್ರಮವಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನಗಳಲ್ಲಿ ನಡೆಯಲಿದೆ.

ವಿಶ್ವಕಪ್‌ನ ಒಟ್ಟು 48 ಪಂದ್ಯಗಳು 10 ಮೈದಾನಗಳಲ್ಲಿ ನಡೆಯಲಿವೆ. ಏಕದಿನ ಕ್ರಿಕೆಟ್‌ನ ಪ್ರಮುಖ ಪಂದ್ಯಾವಳಿಗೆ ನಾಲ್ಕನೇ ಬಾರಿ ಭಾರತ ಆತಿಥ್ಯ ವಹಿಸುತ್ತಿದೆ. ಈ ಹಿಂದೆ ಕೊನೆಯದಾಗಿ ಟೀಮ್ ಇಂಡಿಯಾ ತವರಿನಲ್ಲಿ 2011ರ ವಿಶ್ವಕಪ್ ನಡೆದಿತ್ತು. ಅಲ್ಲದೆ ಭಾರತವು ಚಾಂಪಿಯನ್‌ ಪಟ್ಟವನ್ನೂ ಗಳಿಸಿತ್ತು.

ಭಾರತದ ಪಂದ್ಯಗಳು ಎಲ್ಲಿಲ್ಲಿ ನಡೆಯಲಿವೆ?

ಭಾರತ ತನ್ನ ಪಂದ್ಯಗಳನ್ನು ಚೆನ್ನೈ, ದೆಹಲಿ, ಅಹಮದಾಬಾದ್, ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್ ಮೈದಾನಗಳಲ್ಲಿ ಆಡಲಿದೆ. ಅಚ್ಚರಿ ಎಂಬಂತೆ 55,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಹೈದರಾಬಾದ್‌ನ ಪ್ರಸಿದ್ಧ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತವು ಲೀಗ್ ಹಂತದ ಒಂದೂ ಪಂದ್ಯವನ್ನು ಆಡುತ್ತಿಲ್ಲ.

ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಬಳಗವು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡವು ಒಂಬತ್ತು ತಂಡಗಳ ವಿರುದ್ಧ ಕಣಕ್ಕಿಳಿಯುತ್ತದೆ. ಅಲ್ಲಿ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತ ಮತ್ತು ಸೆಮಿಫೈನಲ್‌ಗಳಿಗೆ ಅರ್ಹತೆ ಪಡೆಯುತ್ತವೆ. ಎರಡೂ ಸೆಮಿ ಕದನಗಳಿಗೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಎಂಟು ತಂಡಗಳು ಈಗಾಗಲೇ ಅದ್ಧೂರಿ ಸಂಭ್ರಮಕ್ಕೆ ಅರ್ಹತೆ ಪಡೆದಿವೆ. ಉಳಿದ ಎರಡು ತಂಡಗಳನ್ನು ವಿಶ್ವಕಪ್ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಈ ಅರ್ಹತ ಪಂದ್ಯಗಳು ಪ್ರಸ್ತುತ ನಡೆಯುತ್ತಿರುವುದರಿಂದ ತಂಡಗಳು ಅಂತಿಮವಾಗಿಲ್ಲ.

ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ. ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಿವೆ.

ಈ ಹಿಂದೆ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡುವುದಿಲ್ಲ ಎಂದು ಹೇಳಿತ್ತು. ಆ ಬಳಿಕ ಭಾರತಕ್ಕೆ ಬರಲು ಒಪ್ಪಿದ ಪಾಕಿಸ್ತಾನವು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡುವುದಿಲ್ಲ ಎಂದು ಹೇಳಿತ್ತು. ಇದೀಗ ಎಲ್ಲಾ ಗೊಂದಲಗಳು ಬಗೆಹರಿದಿದ್ದು, ಬಾಬರ್‌ ಅಜಾಮ್ ಬಳಗವು ಅಹಮದಾಬಾದ್‌ ಮೈದಾನದಲ್ಲೇ ಆಡುತ್ತಿದೆ.‌

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ