logo
ಕನ್ನಡ ಸುದ್ದಿ  /  ಕ್ರೀಡೆ  /  India Vs West Indies: ಟೀಮ್ ಇಂಡಿಯಾ ಜೆರ್ಸಿಯಲ್ಲಿ ಡ್ರೀಮ್ ಇಲೆವೆನ್ ಲೋಗೋ; ನೋಡೋಕೆ ಅಸಹ್ಯಕರವಾಗಿದೆ ಎಂದ ಫ್ಯಾನ್ಸ್

India vs West Indies: ಟೀಮ್ ಇಂಡಿಯಾ ಜೆರ್ಸಿಯಲ್ಲಿ ಡ್ರೀಮ್ ಇಲೆವೆನ್ ಲೋಗೋ; ನೋಡೋಕೆ ಅಸಹ್ಯಕರವಾಗಿದೆ ಎಂದ ಫ್ಯಾನ್ಸ್

Jayaraj HT Kannada

Jul 14, 2023 11:26 AM IST

google News

ರೋಹಿತ್ ಶರ್ಮಾ ಹೊಸ ಜೆರ್ಸಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ

    • ಟೀಮ್‌ ಇಂಡಿಯಾ ಜೆರ್ಸಿಯಲ್ಲಿ ಕೆಂಪು ಬಣ್ಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಡ್ರೀಮ್‌ ಇಲೆವೆನ್‌ ಲೋಗೋ ಚೆನ್ನಾಗಿ ಕಾಣುತ್ತಿಲ್ಲ ಎನ್ನುವುದು ನೆಟ್ಟಿಗರ ಚರ್ಚೆ. ಇದು ನೋಡಲು ತುಂಬಾ ಕೆಟ್ಟದಾಗಿದೆ, ಅಸಹ್ಯಕರವಾಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.
ರೋಹಿತ್ ಶರ್ಮಾ ಹೊಸ ಜೆರ್ಸಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ
ರೋಹಿತ್ ಶರ್ಮಾ ಹೊಸ ಜೆರ್ಸಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ (Rohit Sharma Instagram)

ಡಬ್ಲ್ಯೂಟಿಸಿ ಫೈನಲ್‌ ಪಂದ್ಯ ಮುಗಿದ ಬಳಿಕ ಸುದೀರ್ಘ ಅವಧಿಯ ವಿಶ್ರಾಂತಿಯಲ್ಲಿದ್ದ ಟೀಮ್‌ ಇಂಡಿಯಾ, ಬುಧವಾರದಿಂದ ಡೊಮಿನಿಕಾದಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ (India tour of West Indies) ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಸೋತ ಬಳಿಕ, ಹೊಸತನದೊಂದಿಗೆ ಮತ್ತೊಂದು ಆವೃತ್ತಿಯ ಆರಂಭಕ್ಕೆ ಭಾರತದ ಆಟಗಾರರು ಎದುರು ನೋಡುತ್ತಿದ್ದಾರೆ.

ಬುಧವಾರದಿಂದ ವಿಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತದ ಆಟಗಾರರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಭಾರತವು ಡಬ್ಲ್ಯೂಟಿಸಿ ಫೈನಲ್ ಪಂದ್ಯವನ್ನು ಹೊಸ ಕಿಟ್ ಪ್ರಾಯೋಜಕರಾದ ಅಡಿಡಾಸ್‌ನೊಂದಿಗೆ ಆಡಿತ್ತು. ಇದೀಗ ಟೈಟಲ್‌ ಸ್ಪಾನ್ಸರ್‌ ಆಗಿ ಡ್ರೀಮ್‌ ಇಲೆವೆನ್‌ ಹೆಸರಿನೊಂದಿಗೆ ವಿಂಡೀಸ್‌ ವಿರುದ್ಧ ಕಣಕ್ಕಿಳಿಯಲಿದೆ.

ಐಸಿಸಿ ಆಯೋಜಿತ ಪಂದ್ಯವಾಗಿದ್ದ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತದ ಜೆರ್ಸಿ ಸರಳವಾಗಿತ್ತು. ಅದು ಅಭಿಮಾನಿಗಳಿಗೂ ಇಷ್ಟವಾಗಿತ್ತು. ಅದರಲ್ಲೂ ವಿಶೇಷವಾಗಿ ಜೆರ್ಸಿ ಮುಂಭಾಗದಲ್ಲಿ ಭಾರತ ತಂಡದ ಹೆಸರನ್ನು ಬರೆಯಲಾಗಿತ್ತು. ಹಿಂಭಾಗದಲ್ಲಿ ಶರ್ಟ್ ಪ್ರಾಯೋಜಕರ ಹೆಸರನ್ನು ಬರೆಯಲಾಗಿತ್ತು. ಆದರೆ ಈಗ, ಗೇಮಿಂಗ್‌ ಬ್ರಾಂಡ್‌ ಡ್ರೀಮ್‌ ಇಲೆವೆನ್‌ ಆ ಸ್ಥಾನವನ್ನು ಪಡೆದುಕೊಂಡಿದೆ. ಈ ತಿಂಗಳ ಆರಂಭದಲ್ಲಿ ತಂಡದ ಹೊಸ ಜರ್ಸಿ ಪ್ರಾಯೋಜಕತ್ವದ ಹಕ್ಕು ಪಡೆದುಕೊಂಡ ಡ್ರೀಮ್‌ ಇಲೆವೆನ್ ಹೆಸರು ಆಟಗಾರರ ಜೆರ್ಸಿಯ ಮುಂಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಹೊಸ ಜೆರ್ಸಿಯೊಂದಿಗೆ ಟೀಮ್‌ ಇಂಡಿಯಾ ಆಟಗಾರರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿದ್ದು, ಫ್ಯಾನ್ಸ್‌ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಇದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೂತನ ಜೆರ್ಸಿ ಧರಿಸಿ ತಮ್ಮ ತಮ್ಮ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಭಾರತ ತಂಡದ ಇತರ ಆಟಗಾರರ ಫೋಟೋಗಳು ಕೂಡಾ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಜೆರ್ಸಿ ಎದುರು ಭಾಗದಲ್ಲಿ ಕೆಂಪು ಬಣ್ಣದ ದೊಡ್ಡ ಅಕ್ಷರಗಳಲ್ಲಿ ಡ್ರೀಮ್‌ ಇಲೆವೆನ್‌ (Dream11) ಲೋಗೋ ಹಾಕಲಾಗಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಇದ್ದ ಜೆರ್ಸಿಯಲ್ಲಿ ತಂಡದ ಹೆಸರನ್ನು ಬರೆಯಲಾದ ಸ್ಥಳದಲ್ಲಿ ಈಗ ಡ್ರೀಮ್ 11 ಲೋಗೋ ಇರುವುದು ಅಭಿಮಾನಿಗಳನ್ನು ಕೆರಳಿಸಿದೆ.

ಗಾಢ ಕೆಂಪು ಬಣ್ಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಡ್ರೀಮ್‌ ಇಲೆವೆನ್‌ ಲೋಗೋ ಚೆನ್ನಾಗಿ ಕಾಣುತ್ತಿಲ್ಲ ಎನ್ನುವುದು ನೆಟ್ಟಿಗರ ಚರ್ಚೆ. ಇದು ನೋಡಲು ತುಂಬಾ ಕೆಟ್ಟದಾಗಿದೆ, ಅಸಹ್ಯಕರವಾಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ ಹಾಕಿದ ಸ್ಟೋರಿ

ಬುಧವಾರದಿಂದ ಪಂದ್ಯ ನಡೆಯಲಿದ್ದು, ಅಭಿಮಾನಿಗಳ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಹಿಂದೆ ಶಿಕ್ಷಣ ಪೋರ್ಟಲ್ ಬೈಜೂಸ್, ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಮುಂದಕ್ಕೆ ಬೈಜೂಸ್‌ ಬದಲು ಡ್ರೀಮ್11 ಲೀಡ್‌ ಸ್ಪಾನ್ಸರ್‌ ಆಗಿ ಇರಲಿದೆ. ಕಳೆದ ಹಣಕಾಸು ವರ್ಷದ ಅಂತ್ಯದ ಬಳಿಕ ಬೈಜುಸ್ ಪ್ರಾಯೋಜಕತ್ವ ತೊರೆದಿದ್ದು, ಬಿಸಿಸಿಐ ಹೊಸ ಪ್ರಾಯೋಜಕರಿಗೆ ಮುಚ್ಚಿದ ಬಿಡ್‌ಗಳನ್ನು ಆಹ್ವಾನಿಸಿತ್ತು.

ಹೊಸ ಪ್ರಯೋಜಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, "ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ. ಅವರನ್ನು ಮತ್ತೊಮ್ಮೆ ಮಂಡಳಿಗೆ ಸ್ವಾಗತಿಸುತ್ತೇನೆ. ಬಿಸಿಸಿಐನ ಅಧಿಕೃತ ಪ್ರಾಯೋಜಕತ್ವದಿಂದ ಇದೀಗ ಪ್ರಮುಖ ಪ್ರಾಯೋಜಕನಾಗಿ ಮರಳುವ ಮೂಲಕ ಬಿಸಿಸಿಐ ಮತ್ತು ಡ್ರೀಮ್‌ ಇಲೆವೆನ್ ಪಾಲುದಾರಿಕೆಯು ಮತ್ತಷ್ಟು ಬಲಗೊಂಡಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇದು ಭಾರತೀಯ ಕ್ರಿಕೆಟ್ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ವರ್ಷದ ಕೊನೆಯಲ್ಲಿ ಐಸಿಸಿ ವಿಶ್ವಕಪ್ ಆಯೋಜಿಸಲು ಭಾರತ ತಯಾರಿ ನಡೆಸುತ್ತಿದೆ. ಈ ವೇಳೆ ಅಭಿಮಾನಿಗಳ ಅನುಭವವನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆ. ಈ ಪಾಲುದಾರಿಕೆಯು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ