IND vs WI 1st ODI: ಇಂದು ಭಾರತ-ವಿಂಡೀಸ್ ಮೊದಲ ಏಕದಿನ; ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ
Jul 27, 2023 10:22 AM IST
ಇಂದು ಭಾರತ-ವಿಂಡೀಸ್ ಮೊದಲ ಏಕದಿನ ಪಂದ್ಯ
- ODI World Cup 2023: ಇಂದಿನಿಂದ ಭಾರತ-ವೆಸ್ಟ್ ಇಂಡೀಸ್ (India vs West Indies 1st ODI) ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯವು ಬಾರ್ಬಡೋಸ್ನ ಬ್ರಿಜ್ಟೌನ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾ (West Indies vs India), ಈಗ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ತಯಾರಿ ಆರಂಭಿಸಿದೆ. ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದ್ದು, ಉಭಯ ತಂಡಗಳು ಟೆಸ್ಟ್ ಮೋಡ್ನಿಂದ ವೈಟ್ಬಾಲ್ ಕ್ರಿಕೆಟ್ಗೆ ಶಿಫ್ಟ್ ಆಗಲು ಸಜ್ಜಾಗಿವೆ. ಬಾರ್ಬಡೋಸ್ನ ಬ್ರಿಜ್ಟೌನ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ. ಅಲ್ಲದೆ, ಈ ಸರಣಿಯು ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.
ಮತ್ತೊಂದು ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ
ಮಳೆ ಅಡಚಣೆಯಿಂದ ಟೆಸ್ಟ್ ಸರಣಿ ವೈಟ್ವಾಶ್ ಮಾಡಿಕೊಳ್ಳಲು ಸಾಧ್ಯವಾಗದ ಟೀಮ್ ಇಂಡಿಯಾ, ವಿಂಡೀಸ್ ಎದುರು ಸತತ 5ನೇ ಏಕದಿನ ಸರಣಿ ಜಯಿಸುವ ವಿಶ್ವಾಸದಲ್ಲಿದೆ. ವಿಶ್ವಕಪ್ ಜೊತೆಗೆ ಏಷ್ಯಾಕಪ್, ಏಷ್ಯನ್ ಗೇಮ್ಸ್ಗೆ ಪೂರ್ವ ಸಿದ್ಧತೆ ನಡೆಸುವ ದೃಷ್ಟಿಯಿಂದ ಯುವ ಆಟಗಾರರಿಗೆ ಈ ಸರಣಿ ಸಾಕಷ್ಟು ಸಿದ್ಧತೆಯಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಉತ್ತಮ ಫಾರ್ಮ್ನಲ್ಲಿದ್ದಾರೆ.
ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ರಂಥ ಆಟಗಾರರಿಗೆ ಗಮನ ಸೆಳೆಯಲು ಇದೊಂದು ಉತ್ತಮ ಅವಕಾಶ. ಜೊತೆಗೆ ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಅಗ್ನಿಪರೀಕ್ಷೆಯೂ ಇದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಬೌಲಿಂಗ್ನಲ್ಲಿ ಅನಾನುಭವಿಗಳೂ ಇದ್ದಾರೆ.
ಟೀಮ್ ಕಾಂಬಿನೇಷನ್
ರೋಹಿತ್ ಶರ್ಮಾ ಜೊತೆಗೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆದರೆ ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಇದೆ. ಒಂದು ವೇಳೆ ಮೂರನೇ ಆಲ್ರೌಂಡರ್ ಮೊರೆ ಹೋದರೆ, ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಏರ್ಪಡಲಿದೆ. ಸ್ಪಿನ್ ವಿಭಾಗದಲ್ಲಿ ಚಹಲ್ ಅಥವಾ ಕುಲ್ದೀಪ್ ಆಡಬಹುದು.
ವೆಸ್ಟ್ ಇಂಡೀಸ್ ತಂಡ ಹೇಗಿದೆ?
ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಮೊದಲ ಬಾರಿಗೆ ವಿಫಲರಾದ ವೆಸ್ಟ್ ಇಂಡೀಸ್ ತಂಡವು ಶೋಚನೀಯ ಸ್ಥಿತಿಗೆ ತಲುಪಿದೆ. ವಿಶ್ವಕಪ್ ಅರ್ಹತಾ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡುತ್ತಿದ್ದು, ಹೊಸ ಆರಂಭಕ್ಕಾಗಿ ಕಾಯುತ್ತಿದೆ. ಶಿಮ್ರಾನ್ ಹೆಟ್ಮೆಯರ್ ಸೇರಿದಂತೆ ಹಲವು ಆಟಗಾರರು ತಂಡಕ್ಕೆ ಆಗಮಿಸಿದ್ದು, ತಂಡದ ಬಲ ಹೆಚ್ಚಿಸಿದೆ. ಇದೀಗ ಪುಟಿದೇಳುವ ವಿಶ್ವಾಸದಲ್ಲಿದೆ.
ವಿಂಡೀಸ್ ಪರ ಅಲಿಕ್ ಅಥನಾಜ್ ಟೆಸ್ಟ್ ಸರಣಿಯಲ್ಲಿ ಭರವಸೆ ಮೂಡಿಸಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ವೇಗಿ ಅಲ್ಜಾರಿ ಜೋಸೆಫ್ ತಂಡದ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದಾರೆ. ಬ್ರೆಂಡನ್ ಕಿಂಗ್, ಶಾಯ್ ಹೋಪ್ಸ್, ಕೈಲ್ ಮೇಯರ್ಸ್, ರೊಮಾರಿಯೋ ಶೆಫರ್ಡ್ ಸೇರಿದಂತೆ ಅನುಭವಿಗಳೇ ತಂಡದಲ್ಲಿದ್ದಾರೆ. ಹಾಗಾಗಿ ತವರಿನ ಮೈದಾನದಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿದೆ ವೆಸ್ಟ್ ಇಂಡೀಸ್ ತಂಡ.
ಹೊಸ ದಾಖಲೆ ನಿರ್ಮಿಸಲು ಕೊಹ್ಲಿ-ರೋಹಿತ್ ಸಜ್ಜು
ವಿಂಡೀಸ್ ಎದುರಿನ ಸರಣಿಯಲ್ಲಿ ನೂತನ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ. ಕೊಹ್ಲಿ (274 ಪಂದ್ಯ) ಇನ್ನೂ 102 ರನ್ ಸಿಡಿಸಿದರೆ, ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 13 ಸಾವಿರ ರನ್ ಸಿಡಿಸಿದ ದಾಖಲೆ ಬರೆಯಲಿದ್ದಾರೆ. ಸಚಿನ್ ತೆಂಡೂಲ್ಕರ್ 321 ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದರು. ಇನ್ನೂ ರೋಹಿತ್ ಶರ್ಮಾ 175 ರನ್ ಗಳಿಸಿದರೆ, ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿರುವ ಒಟ್ಟಾರೆ 15ನೇ ಭಾರತೀಯ ಎನಿಸಲಿದ್ದಾರೆ.
ಹಾರ್ದಿಕ್ಗೆ ಫಿಟ್ನೆಸ್ ಚಾಲೆಂಜ್
ಟೀಮ್ ಇಂಡಿಯಾ ಉಪನಾಯಕನಾಗಿ ಬಡ್ತಿ ಪಡೆದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 16ನೇ ಆವೃತ್ತಿಯ ಐಪಿಎಲ್ ಬಳಿಕ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ಬೆನ್ನು ನೋವಿನಿಂದ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ಪಾಂಡ್ಯ, ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಮಾಡುವ ಮೂಲಕ ಫಿಟ್ನೆಸ್ ಸಾಬೀತು ಮಾಡಿದ್ದರು. ವಿಶ್ವಕಪ್ಗೂ ಮುನ್ನ ಸಂಪೂರ್ಣವಾಗಿ ಫಿಟ್ ಆಗಿರುವುದನ್ನು ಸಾಬೀತು ಮಾಡಬೇಕಿದೆ. ಮುಂದಿನ 13 ದಿನಗಳಲ್ಲಿ 8 ಪಂದ್ಯಗಳನ್ನಾಡಲಿದ್ದಾರೆ.
ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ
ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಪಡಿಸುವ ಸಾಧ್ಯತೆ ಇದೆ. ಬ್ರಿಡ್ಜ್ಟೌನ್ನಲ್ಲಿ ಶೇಕಡಾ 7 ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟು 139 ಏಕದಿನ ಪಂದ್ಯಗಳಲ್ಲಿ ಭಾರತ 70ರಲ್ಲಿ ಜಯಿಸಿದೆ. ವೆಸ್ಟ್ ಇಂಡೀಸ್ 63 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ವೆಸ್ಟ್ ಇಂಡೀಸ್ ಸಂಭಾವ್ಯ ತಂಡ
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಸಿ ಕಾರ್ಟಿ, ಶಾಯ್ ಹೋಪ್ (ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಕೆವಿನ್ ಸಿಂಕ್ಲೇರ್, ಅಲ್ಜಾರಿ ಜೋಸೆಫ್, ಒಶಾನೆ ಥಾಮಸ್, ಜೇಡನ್ ಸೀಲ್ಸ್/ಯಾನಿಕ್ ಕ್ಯಾರಿಯಾ
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್/ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್/ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕತ್/ಮುಖೇಶ್ ಕುಮಾರ್.