IND vs WI 3rd T20: ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್, ತಿಲಕ್ ಜವಾಬ್ದಾರಿಯುತ ಆಟಕ್ಕೆ ಒಲಿದ ಗೆಲುವು; ವಿಂಡೀಸ್ ವಿರುದ್ಧ ಟಿ20 ಸರಣಿ ಜೀವಂತ
Aug 09, 2023 09:44 AM IST
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ(AP)
ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್, ಯುವ ಪ್ರತಿಭೆ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ನಿರ್ಣಾಯಕದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ.
ಗಯಾನಾ (ವೆಸ್ಟ್ ಇಂಡೀಸ್): ಗೆಲ್ಲಲೇಬೇಕು ಗೆದ್ದರಷ್ಟೇ ಟೂರ್ನಿಯಲ್ಲಿ ಉಳಿಗಾಲ ಇಲ್ಲದಿದ್ರೆ ಟಿ20 ಸರಣಿಯನ್ನು ಕೈಚೆಲ್ಲಬೇಕಾಗುತ್ತದೆ ಎಂಬ ಒತ್ತಡದಲ್ಲಿದ್ದ ಟೀಂ ಇಂಡಿಯಾಗೆ ಕೊನೆಗೆ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಯುವ ಪ್ರತಿಭೆ ತಿಲಕ್ ವರ್ಮಾ (Tilak Verma) ಗೆಲುವು ತಂದುಕೊಟ್ಟಿದ್ದಾರೆ.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಹಾಗೂ ತಿಲಕ್ ವರ್ಮಾ ಅವರ ಮತ್ತೊಂದು ಜವಾಬ್ದಾರಿಯುತ ಆಟದ ಫಲವಾಗಿ ಭಾರತ ತಂಡ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡಿದೆ.
ವಿಂಡೀಸ್ ನೀಡಿದ 160 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಹಳಿಗೆ ಮರಳಿತು. 4.2 ಓವರ್‌ಗಳಾಗುಷ್ಟರಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ (1) ಮತ್ತು ಶುಭ್ಮನ್ ಗಿಲ್ (6) ವಿಕೆಟ್‌ಗಳನ್ನು ಬೇಗ ಕಳೆದುಕೊಳ್ಳಬೇಕಾಯಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಆರಂಭದಲ್ಲೇ ಅಬ್ಬರಿಸಿದರು. ತಾನು ಎದುರಿಸಿದ ಮೊದಲ ಎರಡು ಸೆತಗಳನ್ನು ಬೌಂಡರಿ ಮತ್ತು ಸಿಕ್ಸರ್ ಗೆರೆ ದಾಟಿಸುವ ಸ್ಫೋಟಕ ಆಟದ ಮುನ್ಸೂಚನೆ ನೀಡಿದ್ರು. ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಅಂತಿಮವಾಗಿ ಸೂರ್ಯಕುಮಾರ್ ಕೇವಲ 44 ಎಸೆತಗಳಲ್ಲಿ 83 ರನ್ ಗಳಿಸಿದರು. ಅವರ ಈ ಅದ್ಭುತ ಆಟದಲ್ಲಿ 10 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳಿದ್ದವು. ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಲ್ಕೇನೇ ಅರ್ಧ ಶತಕ ಪೂರೈಸಿದರು. 13ನೇ ಓವರ್‌ನಲ್ಲಿ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ಔಟಾದರು.
ಗಿಲ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಯುವ ಪ್ರತಿಭೆ ತಿಲಕ್ ವರ್ಮಾ ಮತ್ತೊಮ್ಮೆ ಜವಾಬ್ದಾರಿಯುತ ಆಟವಾಡಿದರು. 39 ಎಸೆತೆಗಳನ್ನು ಎದುರಿಸಿದ ವರ್ಮಾ 4 ಬೌಂಡರಿ, 1 ಸಿಕ್ಸರ್ ಸೇರಿ 49 ರನ್ ಗಳಿಸಿ ಅಜೇಯರಾಗಿ ಉಳಿದರಲ್ಲದೇ, ಕೇವಲ 1 ರನ್‌ನಿಂದ ಅರ್ಧ ಶತಕ ವಂಚಿತರಾದರು. ನಾಯಕ ಹಾರ್ದಿಕ್ ಪಾಂಡ್ಯ ಅವರು ತಿಲಕ್ ವರ್ಮಾಗೆ ಅರ್ಧ ಶತಕ ಸಿಡಿಸಲು ಅವಕಾಶ ನೀಡಲಿಲ್ಲ ಎಂಬ ಟೀಕೆಗಳು ಕೇಳಿಬಂದವು. ತಿಲಕ್ ಮೊದಲ ಪಂದ್ಯದಲ್ಲಿ 39 ರನ್ ಮತ್ತು ಎರಡನೇ ಪಂದ್ಯದಲ್ಲಿ 51 ರನ್ ಗಳಿಸಿದ್ದರು. ಹಾರ್ದಿಕ್ 15 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಬ್ರಾಂಡ್ ಕಿಂಗ್ 42 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸೇರಿ 42 ರನ್ ಗಳಿಸಿದರೆ, ನಾಯಕ ರೋವ್‌ಮನ್ ಪೊವೆಲ್ ಮಿಂಚಿನ ಆಟವಾಡಿ 19 ಎಸೆತಗಳಲ್ಲಿ 1 ಬೌಂಡರಿ ಮೂರು ಸಿಕ್ಸರ್ ಸೇರಿ 40 ರನ್ ಸಿಡಿಸಿದರು. ಟೀಂ ಇಂಡಿಯಾ ಪರ ರವಿ ಬಿಷ್ಣೋಯ್ ಬದಲಿಗೆ ಸ್ಥಾನ ಪಡೆದಿದ್ದ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ತಲಾ 2 ವಿಕೆಟ್ ಕಿತ್ತರು.
ಆಗಸ್ಟ್ 12 ಮತ್ತು 13 ರಂದು ಕ್ರಮವಾಗಿ ನಾಲ್ಕು ಮತ್ತು ಐದನೇ ಟಿ20 ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಉಳಿದ ಎರಡೂ ಪಂದ್ಯಗಳನ್ನು ಗೆದ್ದರಷ್ಟೇ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.