logo
ಕನ್ನಡ ಸುದ್ದಿ  /  ಕ್ರೀಡೆ  /  West Indies Vs India: ಇಶಾನ್ ಕಿಶನ್ ಅರ್ಧಶತಕ; ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್ ಜಯ

West Indies vs India: ಇಶಾನ್ ಕಿಶನ್ ಅರ್ಧಶತಕ; ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್ ಜಯ

Jayaraj HT Kannada

Jan 09, 2024 07:42 PM IST

google News

ಅರ್ಧಶತಕ ಸಿಡಿಸಿದ ಇಶಾನ್‌ ಕಿಶನ್‌

    • West Indies vs India 1st ODI: ಕೇವಲ 23 ಓವರ್‌ಗಳಲ್ಲಿ 114 ರನ್‌ ಗಳಿಸಿ ವೆಸ್ಟ್ ಇಂಡೀಸ್‌ ಆಲೌಟ್ ಆಯ್ತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 118 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.
ಅರ್ಧಶತಕ ಸಿಡಿಸಿದ ಇಶಾನ್‌ ಕಿಶನ್‌
ಅರ್ಧಶತಕ ಸಿಡಿಸಿದ ಇಶಾನ್‌ ಕಿಶನ್‌ (AP)

ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ (West Indies vs India) ಶುಭಾರಂಭ ಮಾಡಿದೆ. ವಿಂಡೀಸ್‌ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತದ ಆಟಗಾರರು 5 ವಿಕೆಟ್‌ಗಳ ಜಯ ಸಾಧಿಸಿದ್ದಾರೆ. ಆ ಮೂಲಕ ಸರಣಿಯಲ್ಲಿ ಭಾರತವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಗೆದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌, ರವೀಂದ್ರ ಜಡೇಜಾ ಮತ್ತು ಕುಲ್ದೀಪ್‌ ಯಾದವ್‌ ಸ್ಪಿನ್‌ ದಾಳಿಗೆ ಕುಸಿಯಿತು. ಪರಿಣಾಮವಾಗಿ ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ವಿಂಡೀಸ್‌ ಆಲೌಟ್ ಆಯ್ತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 118 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಇಂದು ನಾಯಕ ರೋಹಿತ್‌ ಶರ್ಮಾ ಬದಲಿಗೆ ಇಶಾನ್‌ ಕಿಶನ್‌ ಇನ್ನಿಂಗ್ಸ್‌ ಆರಂಭಿಸಿದರು. ಕಿಶನ್‌ ಜೊತೆಗೆ ಬಂದ ಶುಬ್ಮನ್‌ ಗಿಲ್‌ 7 ರನ್‌ ಗಳಿಸಿ ಔಟಾದರು. ಟೆಸ್ಟ್ ಸರಣಿಯಲ್ಲೂ ಕ್ರೀಸ್‌ಕಚ್ಚಿ ಆಡಲು ವಿಫಲರಾಗಿದ್ದ ಗಿಲ್‌, ಏಕದಿನ ಸರಣಿಯಲ್ಲೂ ಮತ್ತೆ ವೈಫಲ್ಯ ಮುಂದುವರೆಸಿದರು. ಕೆಲಕಾಲ ಅಬ್ಬರಿಸಿದ ಸೂರ್ಯಕುಮಾರ್‌ ಯಾದವ್‌, 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 19 ರನ್‌ ಗಳಿಸಿ ಔಟಾದರು. ಈ ನಡುವೆ ಹಾರ್ದಿಕ್‌ ಪಾಂಡ್ಯ ದುರದೃಷ್ಟಕರ ರನೌಟ್‌ ಮೂಲಕ ಔಟಾದರು. ಶಾರ್ದುಲ್‌ ಠಾಕೂರ್‌ ಕೇವಲ 1 ರನ್‌ ಗಳಿಸಿ ಬಂದ ವೇಗದಲ್ಲೇ ಹಿಂತಿರುಗಿದರು. ಅಂತಿಮವಾಗಿ ನಾಯಕ ರೋಹಿತ್‌ ಶರ್ಮಾ ಮತ್ತು ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ನಾಯಕ ರೋಹಿತ್‌ ಶರ್ಮಾ ಗೆಲುವಿನ ಬೌಂಡರಿ ಸಿಡಿಸಿದರು.

ಕಿಶನ್‌ ಅರ್ಧಶತಕ

ಕ್ರೀಸ್‌ಕಚ್ಚಿ ವೇಗದ ಆಟವಾಡಿದ ಇಶಾನ್‌ ಕಿಶನ್‌ ಅರ್ಧಶತಕ ಸಿಡಿಸಿದರು. ಆದರೆ, 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 52 ರನ್‌ ಗಳಿಸಿದ್ದಾಗ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

ವೆಸ್ಟ್‌ ಇಂಡೀಸ್‌ ಎರಡನೇ ಅತಿ ಕಡಿಮೆ ಮೊತ್ತ

ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ವಿಂಡೀಸ್‌, ಭಾರತದ ಸ್ಪಿನ್‌ ದಾಳಿ ವಿರುದ್ಧ 20 ಓವರ್‌ಗಳಿಗಿಂತ ಹೆಚ್ಚು ಕಾಲ ಆಡಿದ್ದೇ ಹೆಚ್ಚು. ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ತಂಡವು, ನಂತರ ಸಣ್ಣ ಜೊತೆಯಾಟದ ಬಲ ಪಡೆಯಿತು. ಮೇಯರ್ಸ್‌ 2 ರನ್‌ ಗಳಿಸಿ ಔಟಾದ ಬಳಿಕ ಕಿಂಗ್ ಮತ್ತು ಅಥಾನಾಜೆ 38 ರನ್ ಜೊತೆಯಾಟವಾಡಿದರು. ಆ ಬಳಿಕ ಹೋಪ್ ಮತ್ತು ಹೆಟ್ಮೆಯರ್ ನಡುವೆ 43 ರನ್‌ಗಳ ಜೊತೆಯಾಟ ಬಂದಿತು. ಇದರ ಹೊರತಾಗಿ ತಂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಕೆರಿಬಿಯನ್‌ ನಾಯಕ ಶಾಯ್ ಹೋಪ್ 45 ಎಸೆತಗಳಲ್ಲಿ 43 ರನ್ ಗಳಿಸಿ ಆತಿಥೇಯರ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ನಾಯಕ ಮತ್ತು ಅಲಿಕ್ ಅಥಾನಾಜೆ ಹೊರತುಪಡಿಸಿ, ವೆಸ್ಟ್ ಇಂಡೀಸ್ ಪಾಳಯದ ಯಾವುದೇ ಬ್ಯಾಟರ್ 20 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಸ್ಪಿನ್ನರ್ ಕುಲದೀಪ್ ಕೇವಲ 6 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಜಡೇಜಾ ಮೂರು ವಿಕೆಟ್‌ ಕಬಳಿಸಿದರು.

ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಎರಡನೇ ಅತಿ ಕಡಿಮೆ ಮೊತ್ತವನ್ನು ದಾಖಲಿಸಿತು. ಭಾರತವು ಈ ಹಿಂದೆ 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 104 ರನ್‌ಗಳಿಗೆ ಆಲೌಟ್‌ ಮಾಡಿತ್ತು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ