logo
ಕನ್ನಡ ಸುದ್ದಿ  /  ಕ್ರೀಡೆ  /  Wasim Akram: ಒಂದು ವೇಳೆ ಧೋನಿ ಆರ್‌ಸಿಬಿ ನಾಯಕನಾಗಿದ್ದರೆ ಈಗಾಗಲೇ ಮೂರು ಕಪ್ ಗೆಲ್ಲುತ್ತಿದ್ದರು ಎಂದ ವಾಸಿಂ ಅಕ್ರಮ್

Wasim Akram: ಒಂದು ವೇಳೆ ಧೋನಿ ಆರ್‌ಸಿಬಿ ನಾಯಕನಾಗಿದ್ದರೆ ಈಗಾಗಲೇ ಮೂರು ಕಪ್ ಗೆಲ್ಲುತ್ತಿದ್ದರು ಎಂದ ವಾಸಿಂ ಅಕ್ರಮ್

Jayaraj HT Kannada

May 07, 2023 04:51 PM IST

google News

ವಾಸಿಂ ಅಕ್ರಮ್, ಎಂಎಸ್ ಧೋನಿ ಮತ್ತು ಕೊಹ್ಲಿ

    • IPL 2023: ಬೆಂಗಳೂರು ತಂಡವನ್ನೇನಾದರೂ ಎಂಎಸ್‌ ಧೋನಿ ಮುನ್ನಡೆಸುತ್ತಿದ್ದರೆ, ಆರ್‌ಸಿಬಿಯು ಈಗಾಗಲೇ ಮೂರು ಬಾರಿ ಟ್ರೋಫಿ ಎತ್ತಿಹಿಡಿಯುತ್ತಿತ್ತು ಎಂದು ವಾಸಿಂ ಅಕ್ರಂ ಹೇಳಿದ್ದಾರೆ.
ವಾಸಿಂ ಅಕ್ರಮ್, ಎಂಎಸ್ ಧೋನಿ ಮತ್ತು ಕೊಹ್ಲಿ
ವಾಸಿಂ ಅಕ್ರಮ್, ಎಂಎಸ್ ಧೋನಿ ಮತ್ತು ಕೊಹ್ಲಿ (PTI-Getty Images)

ಶನಿವಾರ ನಡೆದ ಐಪಿಎಲ್ ಪಂದ್ಯದಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಹೀನಾಯ ಸೋಲು ಕಂಡಿತು. ಈ ಪಂದ್ಯದ ಬಳಿಕ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಬಗ್ಗೆ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಂ (Wasim Akram) ಗಮನಾರ್ಹ ಹೇಳಿಕೆಯೊಂದನ್ನು ನೀಡಿದ್ದಾರೆ.

ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿಯು, ವಿಶ್ವದ ಅತಿ ದೊಡ್ಡ ಟಿ20 ಲೀಗ್‌ನ ಮೂರು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದೆ. ಸದ್ಯ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ರೆಡ್‌ ಅಂಡ್‌ ಗೋಲ್ಡ್‌ ಆರ್ಮಿಯು ಈ ಋತುವಿನಲ್ಲಿ ಇದುವರೆಗೆ ಆಡಿದ 10 ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ತಂಡವು, ಐಪಿಎಲ್ 2023ರ ಆವೃತ್ತಿಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಇದೇ ವೇಳೆ ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 16ನೇ ಋತುವಿನ ಪಂದ್ಯಾವಳಿಯ ನಡುವೆ, ಸ್ಪೋಟ್ಸ್‌ಕೀಡಾ (Sportskeeda) ಜತೆಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ, ಬೆಂಗಳೂರು ತಂಡವನ್ನೇನಾದರೂ ಎಂಎಸ್‌ ಧೋನಿ ಮುನ್ನಡೆಸುತ್ತಿದ್ದರೆ, ಆರ್‌ಸಿಬಿಯು ಈಗಾಗಲೇ ಮೂರು ಬಾರಿ ಟ್ರೋಫಿ ಎತ್ತಿಹಿಡಿಯುತ್ತಿತ್ತು ಎಂದು ಹೇಳಿದ್ದಾರೆ.

“ಎಂಎಸ್ ಧೋನಿ ಏನಾದರೂ ಆರ್‌ಸಿಬಿ ನಾಯಕನಾಗಿದ್ದರೆ, ತಂಡವು ಇದುವರೆಗೆ 3 ಐಪಿಎಲ್ ಟ್ರೋಫಿಗಳನ್ನು ಗೆದ್ದಿರುತ್ತಿತ್ತು. ಬೆಂಗಳೂರು ತಂಡವು ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಅವರಿಗೆ ವ್ಯಾಪಕ ಬೆಂಬಲವಿದೆ. ಅಲ್ಲದೆ, ತಂಡದಲ್ಲಿ ಆಧುನಿಕ ಯುಗದ ವಿಶ್ವದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಕೂಡಾ ತಂಡದಲ್ಲಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಇದುವರೆಗೆ ಕಪ್‌ ಗೆದ್ದಿಲ್ಲ. ಒಂದು ವೇಳೆ ಧೋನಿ ಏನಾದರೂ ಆರ್‌ಸಿಬಿಯಲ್ಲಿ ಇದ್ದಿದ್ದರೆ ಅವರು ತಂಡಕ್ಕೆ ಪ್ರಶಸ್ತಿ ಗೆಲ್ಲಲು ನೆರವಾಗುತ್ತಿದ್ದರು” ಎಂದು ಅಕ್ರಮ್ ಹೇಳಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಧೋನಿ, 2010, 2011, 2018 ಮತ್ತು 2021ರಲ್ಲಿ ನಾಲ್ಕು ಐಪಿಎಲ್‌ ಟ್ರೋಫಿ ಗೆಲ್ಲುವಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲೂ 2011ರ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಿಎಸ್‌ಕೆ ತಂಡವು 58 ರನ್‌ಗಳಿಂದ ಸೋಲಿಸಿ ಚಾಂಪಿಯನ್‌ ಆಗಿತ್ತು. 41ರ ಹರೆಯದ ಮಾಹಿ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

“ಧೋನಿಗೆ ತಂಡದ ನಾಯಕತ್ವ ವಹಿಸಿ ಅಭ್ಯಾಸವಿದೆ. ನಾಯಕತ್ವ ಅನ್ನುವುದು ಒಂದು ಹವ್ಯಾಸವೂ ಹೌದು. ಧೋನಿ ನಿಜವಾಗಿಯೂ ಒಳಗಿನಿಂದ ಶಾಂತರಾಗಿರುವುದಿಲ್ಲ. ಆದರೆ ಶಾಂತವಾಗಿರುವಂತೆ ತೋರಿಸಿಕೊಳ್ಳುತ್ತಾರೆ. ಆಟಗಾರರಿಗೆ ಹೆಗಲು ಕೊಟ್ಟು ಅವರ ಭುಜದ ಮೇಲೆ ಕೈ ಇಟ್ಟು ಧೋನಿ ಸ್ಫೂರ್ತಿ ತುಂಬುತ್ತಾರೆ. ನಾಯಕನು ತಣ್ಣಗಾಗಿದ್ದಾರೆ ಎಂದು ಭಾವಿಸಿ ಆಟಗಾರರು ಹೆಚ್ಚು ಆತ್ಮವಿಶ್ವಾಸದಿಂದ ಆಡುತ್ತಾರೆ. ಧೋನಿ ತಮ್ಮ ಆಟಗಾರರಲ್ಲಿ ಆತ್ಮವಿಶ್ವಾಸವನ್ನು ತುಂಬಲು ತಿಳಿದಿರುವ ವ್ಯಕ್ತಿ,” ಎಂದು ಅಕ್ರಂ ಮಾಹಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಇದುವರೆಗೂ ಒಂದೇ ಒಂದು ಕಪ್‌ ಗೆಲ್ಲುವಲ್ಲಿ ಯಶಸ್ವಿಯಾಗದ ಆರ್‌ಸಿಬಿ, ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮೇ 9ರಂದು ಎದುರಿಸಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ