logo
ಕನ್ನಡ ಸುದ್ದಿ  /  ಕ್ರೀಡೆ  /  Suryakumar Yadav: ನಿಜ, ಏಕದಿನದಲ್ಲಿ ನನ್ನ ಪ್ರದರ್ಶನ ತುಂಬಾ ಕೆಟ್ಟದಾಗಿದೆ; ಇದನ್ನು ಒಪ್ಪಿಕೊಳ್ಳಲು ಯಾವುದೇ ಅವಮಾನವಿಲ್ಲ; ಸೂರ್ಯಕುಮಾರ್​

Suryakumar Yadav: ನಿಜ, ಏಕದಿನದಲ್ಲಿ ನನ್ನ ಪ್ರದರ್ಶನ ತುಂಬಾ ಕೆಟ್ಟದಾಗಿದೆ; ಇದನ್ನು ಒಪ್ಪಿಕೊಳ್ಳಲು ಯಾವುದೇ ಅವಮಾನವಿಲ್ಲ; ಸೂರ್ಯಕುಮಾರ್​

Prasanna Kumar P N HT Kannada

Aug 11, 2023 08:15 AM IST

google News

ಸೂರ್ಯಕುಮಾರ್ ಯಾದವ್

    • ಏಕದಿನ ಕ್ರಿಕೆಟ್​​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್, 50 ಓವರ್​​ಗಳ ಕ್ರಿಕೆಟ್​​ನಲ್ಲಿ ನನ್ನ ಪ್ರದರ್ಶನ ಉತ್ತಮವಾಗಿಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದರಲ್ಲಿ ಯಾವುದೇ ನಾಚಿಕೆ, ಮುಜುಗರ ಇಲ್ಲ ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಟಿ20 ಕ್ರಿಕೆಟ್​​ನಲ್ಲಿ (T20 Cricket) ನಂಬರ್​​ 1 ಬ್ಯಾಟ್ಸ್​​ಮನ್ ಆಗಿರುವ ಭಾರತದ ಡೈನಮಿಕ್​ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav), ಏಕದಿನ ಕ್ರಿಕೆಟ್​​​ನಲ್ಲಿ (ODI Cricket) ಠುಸ್​ ಪಟಾಕಿ. ಚುಟುಕು ಕ್ರಿಕೆಟ್​ನಲ್ಲಿ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡನ್ನೂ ದಿಗ್ದರ್ಶನ ಮಾಡುವ ಸ್ಕೈ, 50 ಓವರ್​ಗಳ ಮಾದರಿಯಲ್ಲಿ ಅಟ್ಟರ್​ ಫ್ಲಾಪ್ ಸ್ಟಾರ್​​. ಶ್ರೇಯಸ್​ ಅಯ್ಯರ್ ಅವರಿಗೆ ಗಾಯದ ಕಾರಣ ಅವಕಾಶ ಪಡೆಯುತ್ತಿರುವ ಸೂರ್ಯ, ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿ ಸ್ಫೋಟಕ ಆಟಗಾರ ಬಾಯ್ಬಿಟ್ಟಿದ್ದಾರೆ.

ಏಕದಿನ ಮಾದರಿಯಲ್ಲಿ ಇದುವರೆಗೆ 26 ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ 24.33 ಸ್ಟ್ರೈಕ್ ರೇಟ್‌ನಲ್ಲಿ 511 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳಿವೆ. ಎಂದಿನಂತೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿಫಲರಾಗಿದ್ದ ಸೂರ್ಯ, ಟಿ20ಯಲ್ಲಿ ಮಾತ್ರ ತಮ್ಮ ಟ್ರೇಡ್ ಮಾರ್ಕ್ ಮುಂದುವರೆಸಿದ್ದಾರೆ. 3ನೇ ಟಿ20 ಪಂದ್ಯದಲ್ಲಿ 44 ಎಸೆತಗಳಲ್ಲಿ 83 ರನ್ ಗಳಿಸಿದ ಸೂರ್ಯ, 12ನೇ ಬಾರಿಗೆ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು.

‘ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ’

ಏಕದಿನ ಕ್ರಿಕೆಟ್​​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕುರಿತು ಮಾತನಾಡಿದ ಸೂರ್ಯ, 50 ಓವರ್​​ಗಳ ಕ್ರಿಕೆಟ್​​ನಲ್ಲಿ ನನ್ನ ಪ್ರದರ್ಶನ ಉತ್ತಮವಾಗಿಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳಲು ಯಾವುದೇ ನಾಚಿಕೆ, ಮುಜುಗರ, ಅವಮಾನ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಾನು ನೇರವಾಗಿ, ಸತ್ಯವಾದ ಮಾತನ್ನೇ ಹೇಳುತ್ತೇನೆ. ಕಾರ್ಯಕ್ಷಮತೆ ತುಂಬಾ ಅಗತ್ಯ. ಆದರೆ, ಅದನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಏಕದಿನ ಕ್ರಿಕೆಟ್ ಮೇಲೆ ಗಮನ ಹರಿಸಿದ್ದೇನೆ’

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಸರ್​ ನನಗೊಂದು ಮಾತು ಹೇಳಿದ್ದಾರೆ. ನಾನು ಹೆಚ್ಚಾಗಿ ಏಕದಿನ ಪಂದ್ಯಗಳನ್ನು ಆಡಿಲ್ಲ. ಕೊನೆಯ 10 ರಿಂದ 15 ಓವರ್​​ಗಳಲ್ಲಿ ಬ್ಯಾಟಿಂಗ್​ ಮಾಡಿದರೆ, ತಂಡದ ಅಗತ್ಯ ಏನಿದೆ ಎಂಬುದನ್ನು ಅರಿತು ಆಡಬೇಕಾಗುತ್ತದೆ. ಹಾಗಾಗಿ ಹೆಚ್ಚೆಚ್ಚು ಪಂದ್ಯಗಳನ್ನು ಆಡುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ಏಕದಿನ ಕ್ರಿಕೆಟ್​​ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ ಎಂದು ಸೂರ್ಯ ತಿಳಿಸಿದ್ದಾರೆ.

‘ನಂಬಿಕೆ ಉಳಿಸಿಕೊಳ್ಳಬೇಕಿದೆ’

45 ರಿಂದ 50 ಎಸೆತಗಳನ್ನು ಎದುರಿಸಿದರೂ, ನನ್ನ​ ಶೈಲಿಯಲ್ಲಿ ಬ್ಯಾಟಿಂಗ್ ನಡೆಸುತ್ತೇನೆ. ಆದರೆ ಮೊದಲ 15 ರಿಂದ 18 ಓವರ್​​ಗಳ ಕಾಲ ಬ್ಯಾಟಿಂಗ್ ನಡೆಸುವ ಅವಕಾಶ ಸಿಕ್ಕರೆ, ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಾ ಇನ್ನಿಂಗ್ಸ್​ ಕಟ್ಟಬೇಕೆಂದು ರಾಹುಲ್ ಸರ್​ ಹೇಳಿದ್ದಾರೆ. ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಟೀಮ್ ಮ್ಯಾನೇಜ್​ಮೆಂಟ್ ನಂಬಿಕೆ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಸೂರ್ಯ ಹೇಳಿದ್ದಾರೆ.

‘ಸೂಕ್ಷ್ಮತೆಯಿಂದ ಆಡಬೇಕು’

ಹಲವು ವರ್ಷಗಳಿಂದ ಟಿ20 ಕ್ರಿಕೆಟ್​ ಅನ್ನು ಹೆಚ್ಚು ಆಡಿದ್ದೇವೆ. ಅದೇ ಕಾರಣಕ್ಕೆ ಏಕದಿನ ಕ್ರಿಕೆಟ್​​​​​ನಿಂದ ಹಾದಿ ತಪ್ಪಿದ್ದೇನೆ. ಟಿ20 ಕ್ರಿಕೆಟ್​ ಹೆಚ್ಚು ಅಭ್ಯಾಸವಾಗಿದೆ. ಏಕದಿನ ಪಂದ್ಯಗಳಿಗೆ ನನ್ನ ಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ ಸವಾಲಿನದ್ದಾಗಿದೆ. ಏಕೆಂದರೆ, ಟಿ20ಗೆ ಹೋಲಿಸಿದರೆ ಏಕದಿನ ಮಾದರಿಯಲ್ಲಿ ಸಾಕಷ್ಟು ಸೂಕ್ಷ್ಮತೆಯಿಂದ ಆಡಬೇಕು. ಕೊಂಚ ಎಡವಿದರೂ ಭಾರಿ ಸಂಕಷ್ಟ ಎದುರಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಮ್ಯಾನೇಜ್​ಮೆಂಟ್ ಹೇಳಿದಂತೆ ಮಾಡುತ್ತೇನೆ!

ಪವರ್​ ಪ್ಲೇನಲ್ಲಿ ಒಂದು ರೀತಿ ಆಡಬೇಕು, ಮಧ್ಯಮ ಓವರ್​​ಗಳಲ್ಲಿ ರನ್​ ರೇಟ್​ ಕುಸಿಯದಂತೆ ನೋಡಿಕೊಳ್ಳಬೇಕು. ಪ್ರತಿ ಎಸೆತಕ್ಕೂ ರನ್​​ ಗಳಿಸುತ್ತಿರಬೇಕು. ಕೊನೆಯ ಓವರ್​​ಗಳಲ್ಲಿ ಟಿ20 ಫಾರ್ಮೆಟ್​​ನಲ್ಲಿ ಬ್ಯಾಟ್ ಬೀಸಬೇಕು. ಏಕದಿನ ಕ್ರಿಕೆಟ್​​ನಲ್ಲಿ ನನ್ನಿಂದ ಏನನ್ನು ಬಯಸುತ್ತಿದೆ ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ನನಗೆ ತಿಳಿಸಿದೆ. ನಾನು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಏಕದಿನ ವಿಶ್ವಕಪ್‌ಗೂ ಮುನ್ನ ನಾವು 7-8 ಏಕದಿನ ಪಂದ್ಯಗಳನ್ನು ಆಡಲಿದ್ದೇವೆ. ವಿಶ್ವಕಪ್‌ಗೆ ಸಜ್ಜಾಗಲು ಈ ಪಂದ್ಯಗಳು ಸಾಕು. ಜತೆಗೆ ಬಿಸಿಸಿಐ ಶಿಬಿರವೂ ಇರಲಿದೆ. ತಂಡವಾಗಿ ಸಮಯ ಕಳೆಯುವುದೂ ಬಹಳ ಮುಖ್ಯ. ಈ ಬಾರಿ ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ' ಎಂದು ಸೂರ್ಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಇಂಜುರಿಯಿಂದ ಚೇತರಿಸಿಕೊಳ್ಳದೇ ಇದ್ದರೆ, ಸೂರ್ಯನಿಗೆ ಅವಕಾಶ ಸಿಗುವುದು ಖಚಿತ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ