logo
ಕನ್ನಡ ಸುದ್ದಿ  /  ಕ್ರೀಡೆ  /  Ravichandran Ashwin: ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಭಾರತವಲ್ಲ; ರವಿಚಂದ್ರನ್ ಅಶ್ವಿನ್​ ಅಚ್ಚರಿ ಆಯ್ಕೆ

Ravichandran Ashwin: ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಭಾರತವಲ್ಲ; ರವಿಚಂದ್ರನ್ ಅಶ್ವಿನ್​ ಅಚ್ಚರಿ ಆಯ್ಕೆ

Prasanna Kumar P N HT Kannada

Aug 10, 2023 04:34 PM IST

google News

ರವಿಚಂದ್ರನ್ ಅಶ್ವಿನ್.

    • Ravichandran Ashwin: ಮುಂಬರುವ ಏಕದಿನ ವಿಶ್ವಕಪ್ (ODI World Cup) ಟೂರ್ನಿಯಲ್ಲಿ ಟೀಮ್​ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಅಲ್ಲವೆಂದು ಭಾರತದ ಆಫ್​ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್.
ರವಿಚಂದ್ರನ್ ಅಶ್ವಿನ್.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಗೂ (ODI World Cup 2023) ಮುನ್ನ ಸೆಮಿಫೈನಲ್​ ಪ್ರವೇಶಿಸುವ ಅಥವಾ ಪ್ರಶಸ್ತಿ ಗೆಲ್ಲುವ ತಂಡಗಳ ಆಯ್ಕೆಯ ಲೆಕ್ಕಾಚಾರ ಜೋರಾಗಿದೆ. ಇದೀಗ ಭಾರತ ತಂಡದ ಆಫ್​ ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್ (Ravichandran Ashwin), ಚಾಂಪಿಯನ್​ ಪಟ್ಟಕ್ಕೇರುವ ತಮ್ಮ ನೆಚ್ಚಿನ ತಂಡವನ್ನು ಬಹಿರಂಗಪಡಿಸಿದ್ದಾರೆ. ಅಚ್ಚರಿ ಸಂಗತಿ ಏನೆಂದರೆ, ಅವರ ಫೇವರಿಟ್ ತಂಡ ಟೀಮ್ ಇಂಡಿಯಾ (Team India) ಅಲ್ಲ.

ಭಾರತ ಈ ಬಾರಿ ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ. ಆದರೆ, ಆರ್​ ಅಶ್ವಿನ್​ ಅವರ ಪ್ರಕಾರ, ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡವೇ ಅಲ್ಲವಂತೆ. ಬದಲಿಗೆ ಐದು ಸಲ ಚಾಂಪಿಯನ್​ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ತಂಡವೇ (Australia Cricket Team) ಮತ್ತೊಮ್ಮೆ ಚಾಂಪಿಯನ್​ ಆಗುತ್ತದೆ ಎಂದು ಹೇಳಿದ್ದಾರೆ. ಕಾರಣ ಏನೆಂಬುದನ್ನೂ ವಿವರಿಸಿದ್ದಾರೆ ಅಶ್ವಿನ್.

ಅಕ್ಟೋಬರ್​ 5ರಿಂದ ಏಕದಿನ ವಿಶ್ವಕಪ್​ ಪ್ರಾರಂಭವಾಗಲಿದೆ. ಅ.​8ರಂದು ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ. ಆ ನಂತರ ಅ. 11ರಂದು ಅಫ್ಘಾನಿಸ್ತಾನ, ಅ.14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ರೋಹಿತ್ ಪಡೆ ಎದುರಿಸಲಿದೆ. ಅಲ್ಲದೆ, 10 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲಲು ಭಾರತ ಪಣ ತೊಟ್ಟಿದೆ.

ಆಸಿಸ್ ನೆಚ್ಚಿನ ತಂಡ.. ಕಾರಣ?

ಈ ಎಲ್ಲದರ ನಡುವೆ ಮಾಜಿ-ಹಾಲಿ ಕ್ರಿಕೆಟಿರು ಫೈನಲ್ ಪ್ರವೇಶಿಸುವ ಮತ್ತು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಹೆಸರನ್ನು ಸೂಚಿಸುತ್ತಿದ್ದಾರೆ. ಅದರಂತೆ, ಅಶ್ವಿನ್ ಕೂಡ ತಮ್ಮ ನೆಚ್ಚಿನ ತಂಡ ಆಸ್ಟ್ರೇಲಿಯಾ ಎಂದು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಹೀಗೆ ಹೇಳಲು ಕಾರಣ ಇದೆ. ಪ್ರತಿಯೊಬ್ಬರೂ ಭಾರತವೇ ನೆಚ್ಚಿನ ತಂಡ ಎನ್ನುತ್ತಿದ್ದಾರೆ. ಸಹಜವಾಗಿ ನಮ್ಮ ತಂಡದ ಮೇಲೆ ಒತ್ತಡ ಬೀಳಲಿದೆ. ಇದನ್ನು ತಗ್ಗಿಸುವ ಸಲುವಾಗಿ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

‘ಭಾರತದ ಮೇಲೆ ಒತ್ತಡ ಹೇರುವ ತಂತ್ರ’

ಏಕದಿನ ವಿಶ್ವಕಪ್​​ನಲ್ಲಿ ನೆಚ್ಚಿನ ತಂಡಗಳಲ್ಲಿ ಆಸ್ಟ್ರೇಲಿಯಾವು ಒಂದು. ಆದರೆ, ವಿಶ್ವದಾದ್ಯಂತ ಬಹುತೇಕರು ಭಾರತ ವಿಶ್ವಕಪ್​ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಪ್ರತಿಯೊಂದು ಐಸಿಸಿ ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾವೇ ಪ್ರಶಸ್ತಿ ಗೆಲ್ಲುವ ತಂಡ ಎಂದು ಆಯಾ ದೇಶಗಳ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಹೇಳುತ್ತಾರೆ. ಆದರೆ ಇದು ತಮ್ಮ ತಮ್ಮ ದೇಶಗಳ ಮೇಲಿರುವ ಒತ್ತಡ ತಗ್ಗಿಸಿ, ಭಾರತಕ್ಕೆ ಹೆಚ್ಚಿನ ಒತ್ತಡ ಹೇರುವ ತಂತ್ರ ಎಂದು ಅಶ್ವಿನ್ ಹೇಳಿದ್ದಾರೆ.

‘ಅತ್ಯಂತ ಅಪಾಯಕಾರಿ ತಂಡ’

ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡ ಎಂಬುದು ನನಗೂ ಗೊತ್ತಿದೆ. ಆದರೆ, ನಮ್ಮ ತಂಡದ ಮೇಲಿರುವ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡ ಆರಿಸಿಕೊಂಡಿದ್ದೇನೆ. ಸದ್ಯ ಕ್ರಿಕೆಟ್​ನಲ್ಲಿ ಪರಿಸ್ಥಿತಿಗಳು ಬದಲಾಗುತ್ತಲೇ ಬರುತ್ತಿವೆ. ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ಸತತ ವಿಶ್ವಕಪ್ ಗೆದ್ದಿತ್ತು. ಅದಕ್ಕೆ ನಾವು 1983ರಲ್ಲಿ ಬ್ರೇಕ್ ಹಾಕಿದ್ದೆವು. 1987ರ ನಂತರ ಆಸ್ಟ್ರೇಲಿಯಾ ಶಕ್ತಿ ಕೇಂದ್ರವಾಯಿತು. ವಿಶ್ವ ಕ್ರಿಕೆಟ್​​ನಲ್ಲಿ ಬಲಿಷ್ಠ ಶಕ್ತಿ ಕೇಂದ್ರವಾಗಿ ಮುಂದುವರೆಯಿತು. ಹಾಗಾಗಿ ಮುಂಬರುವ ವಿಶ್ವಕಪ್​​ನಲ್ಲಿ ಅಪಾಯಕಾರಿ ತಂಡಗಳಲ್ಲಿ ಒಂದು ಎಂದು ಅಶ್ವಿನ್ ಹೇಳಿದ್ದಾರೆ.

5 ಬಾರಿ ಚಾಂಪಿಯನ್​ ಆಸ್ಟ್ರೇಲಿಯಾ

1987ರಲ್ಲಿ ಅಲನ್ ಬಾರ್ಡರ್​ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ, ತಮ್ಮ ಮೊಟ್ಟ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿತು. ನಂತರ 12 ವರ್ಷಗಳ ನಂತರ ಸ್ಟೀವ್​​ ವಾ ನಾಯಕತ್ವದಲ್ಲಿ 1999ರಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ನಂತರ ರಿಕಿ ಪಾಂಟಿಂಗ್ ಅವರ ಸಾರಥ್ಯದಲ್ಲಿ 2003, 2007ರಲ್ಲಿ ಆಸ್ಟ್ರೇಲಿಯಾ ಮತ್ತೆ ಟ್ರೋಫಿಗೆ ಮುತ್ತಿಕ್ಕಿತು. ಇನ್ನು 2015ರಲ್ಲಿ ಮೈಕಲ್​ ಕ್ಲಾರ್ಕ್​ ನೇತೃತ್ವದಲ್ಲಿ ಆಸಿಸ್ 5ನೇ ಸಲ ಚಾಂಪಿಯನ್​ ಪಟ್ಟಕ್ಕೇರಿತು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ