logo
ಕನ್ನಡ ಸುದ್ದಿ  /  ಕ್ರೀಡೆ  /  Sanjay Manjrekar: ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಹೊಸ ಬ್ಯಾಟರ್ ಹಾಗೂ ವೇಗಿಗಳು ಬೇಕು ಎಂದ ಮಂಜ್ರೇಕರ್

Sanjay Manjrekar: ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಹೊಸ ಬ್ಯಾಟರ್ ಹಾಗೂ ವೇಗಿಗಳು ಬೇಕು ಎಂದ ಮಂಜ್ರೇಕರ್

Jayaraj HT Kannada

Jan 09, 2024 08:09 PM IST

google News

ಚೆತೇಶ್ವರ ಪೂಜಾರ ಮತ್ತು ರೋಹಿತ್‌ ಶರ್ಮಾ

    • India vs West Indies Test series: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಕನಿಷ್ಟ ತಲಾ ಮೂವರು ಹೊಸ ಬ್ಯಾಟರ್‌ಗಳು ಮತ್ತು ಹೊಸ ವೇಗದ ಬೌಲರ್‌ಗಳು ಇರಬೇಕು ಎಂದು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಚೆತೇಶ್ವರ ಪೂಜಾರ ಮತ್ತು ರೋಹಿತ್‌ ಶರ್ಮಾ
ಚೆತೇಶ್ವರ ಪೂಜಾರ ಮತ್ತು ರೋಹಿತ್‌ ಶರ್ಮಾ (AFP)

ಭಾರತವು ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ಪ್ರವಾಸ (Test series in West Indies) ಕೈಗೊಳ್ಳಲಿದೆ. ಮೂರೂ ಮಾದರಿಯ ಕ್ರಿಕೆಟ್‌ ಸರಣಿಯಲ್ಲಿ ವಿಂಡೀಸ್‌ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಇದರಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂದಿನ ವಾರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಮೂರನೇ ಆವೃತ್ತಿಯನ್ನು ಈ ಸರಣಿಯ ಮೂಲಕ ಭಾರತ ಆರಂಭಿಸಲಿದ್ದು, ಗೆಲುವಿನ ಆರಂಭಕ್ಕೆ ತಂಡ ಎದುರು ನೋಡುತ್ತಿದೆ. ಇತ್ತೀಚೆಗೆ ಮುಗಿದ ಎರಡನೇ ಆವತ್ತಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಬಳಿಕ, ಭಾರತ ಟೆಸ್ಟ್ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಮಹತ್ವದ ಫೈನಲ್‌ ಪಂದ್ಯದಲ್ಲಿ ಭರವಸೆಯ ಆಟಗಾರರಾದ ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರೇ ವಿಫಲರಾದರು. ಅಜಿಂಕ್ಯ ರಹಾನೆ 14 ತಿಂಗಳ ನಂತರ ತಂಡಕ್ಕೆ ಪುನರಾಗಮನ ಮಾಡಿದರೂ, ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅತ್ತ ನಾಯಕ ರೋಹಿತ್ ಶರ್ಮಾ ಕೂಡಾ ವಿಫಲರಾಗುತ್ತಿದ್ದು, ಇದರಿಂದಾಗಿ ಅವರ ನಾಯಕತ್ವ ಕೂಡಾ ಅಡಕತ್ತರಿಯಲ್ಲಿ ಸಿಲುಕಿದೆ.

ಸದ್ಯ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ. ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಆಯ್ಕೆದಾರರು ಭಾರತ ಟೆಸ್ಟ್ ತಂಡಕ್ಕೆ ಹೊಸಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ರಜತ್ ಪಾಟಿದಾರ್ ಅವರಂತಹ ಆಟಗಾರರು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಹೀಗಾಗಿ ಮುಂಬರುವ ಕೆರಿಬಿಯನ್ ಪ್ರವಾಸದಲ್ಲಿ ಅವರಲ್ಲಿ ಕೆಲವೊಬ್ಬರಿಗಾದರೂ ಅವಕಾಶ ನೀಡಲು ಇದು ಸೂಕ್ತ ಸಮಯ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಅಂಕಿ ಅಂಶಗಳ ಮೇಲಲ್ಲ; ಟೆಸ್ಟ್ ಮಟ್ಟದಲ್ಲಿ ಯಶಸ್ವಿಯಾಗಬಲ್ಲ ಆಟಗಾರರನ್ನು ಹುಡುಕಿ

ವೆಸ್ಟ್ ಇಂಡೀಸ್ ಸರಣಿಗೆ ಭಾರತವು ಕನಿಷ್ಟ ಮೂವರು ಹೊಸ ಬ್ಯಾಟರ್‌ ಹಾಗೂ ಹೊಸ ವೇಗಿಗಳನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

“ಡಬ್ಲ್ಯುಟಿಸಿ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟವರು ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್. ಅವರು ಹೆಚ್ಚು ಟಿ20 ಕ್ರಿಕೆಟ್ ಆಡುವುದಿಲ್ಲ. ಆದ್ದರಿಂದ ನಾವು ಹೆಚ್ಚು ದಣಿದಿಲ್ಲದ ಅಥವಾ ಐಪಿಎಲ್‌ನಿಂದ ಟೆಸ್ಟ್‌ಗೆ ಸುಲಭವಾಗಿ ಹೊಂದಿಕೊಳ್ಳಬಲ್ಲ ಆಟಗಾರರನ್ನು ಹುಡುಕಬೇಕಾಗಿದೆ. ನಾವು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಅವಕಾಶ ನೀಡಬೇಕು. ಕೇವಲ ರನ್‌ಗಳನ್ನು ಗಮನಿಸಬಾರದು. ಆಯ್ಕೆದಾರರು ಭವಿಷ್ಯದ ಟೆಸ್ಟ್ ಆಟಗಾರರಾಗುವ ಸಾಧ್ಯತೆ ಇರುವ ಮತ್ತು ವಿದೇಶಿ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಬಲ್ಲ ಆಟಗಾರರನ್ನು ಹೊರತರಬೇಕು. ನಾನು ವೆಸ್ಟ್‌ ಇಂಡೀಸ್‌ ವಿರುದ್ಧ ಕನಿಷ್ಠ ಮೂವರು ಹೊಸ ಬ್ಯಾಟರ್‌ಗಳು ಮತ್ತು ಹೊಸ ವೇಗಿಗಳನ್ನು ನೋಡಲು ಬಯಸುತ್ತೇನೆ” ಎಂದು ಮಂಜ್ರೇಕರ್ ಇಎಸ್‌ಪಿಎನ್‌ ಕ್ರಿಕ್‌ ಇನ್ಫೋದಲ್ಲಿ ಹೇಳಿದ್ದಾರೆ.

“ಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಆಯ್ಕೆದಾರರು ಪ್ರಥಮ ದರ್ಜೆಯ ಕ್ರಿಕೆಟ್‌ ಆಡಿರುವ ಆಟಗಾರರನ್ನು ನೋಡಬೇಕು. ಬದಲಾಗಿ ಅವರು ಗಳಿಸಿರುವ ರನ್‌ಗಳನ್ನಲ್ಲ. ನಮ್ಮ ದೇಶೀಯ ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ 3, 4, 5ನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರರನ್ನು ಕಾಣಬಹುದು,” ಎಂದು ಅವರು ಹೇಳಿದ್ದಾರೆ.

ಬ್ಯಾಕಪ್ ವೇಗಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು

ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಇತರ ಕೆಲವು ಬೌಲರ್‌ಗಳು ಗಾಯಗೊಂಡ ಬಳಿಕ ಭಾರತದ ವೇಗದ ಬೌಲಿಂಗ್‌ ಬ್ಯಾಟರಿ ಖಾಲಿಯಾಗುತ್ತಾ ಬಂದಿದೆ. ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಮೇಲೆ ಹೆಚ್ಚಿನ ಒತ್ತಡವಿದೆ ಎಂದು ಮಂಜ್ರೇಕರ್‌ ಹೇಳಿದ್ದಾರೆ.

"ವೇಗದ ಬೌಲರ್‌ಗಳಲ್ಲಿಯೂ ನೀವು ನಿರ್ದಿಷ್ಟ ಟೆಸ್ಟ್ ಆಟಗಾರರನ್ನು ಹುಡುಕಬೇಕು. ಯಾರಾದರೂ ಗಾಯಗೊಂಡರೆ, ನಾವು ಬದಲಿ ವೇಗಿಗಳನ್ನು ಸಿದ್ಧಪಡಿಸಬೇಕು," ಎಂದು ಅವರು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ