logo
ಕನ್ನಡ ಸುದ್ದಿ  /  ಕ್ರೀಡೆ  /  India Vs West Indies: ವಿಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಮತ್ತು ಏಕದಿನ ತಂಡ ಪ್ರಕಟ; ಜೈಸ್ವಾಲ್, ಮುಖೇಶ್‌ಗೆ ಚೊಚ್ಚಲ ಕರೆ, ಪೂಜಾರ ಔಟ್

India vs West Indies: ವಿಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಮತ್ತು ಏಕದಿನ ತಂಡ ಪ್ರಕಟ; ಜೈಸ್ವಾಲ್, ಮುಖೇಶ್‌ಗೆ ಚೊಚ್ಚಲ ಕರೆ, ಪೂಜಾರ ಔಟ್

Jayaraj HT Kannada

Jun 23, 2023 03:47 PM IST

google News

ಭಾರತ ತಂಡ

    • India vs West Indies: ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಅಗ್ರ ಕ್ರಮಾಂಕದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ವೇಗಿ ಮುಖೇಶ್ ಕುಮಾರ್ ಚೊಚ್ಚಲ ಕರೆ ಪಡೆದಿದ್ದಾರೆ. ಇಬ್ಬರೂ ಟೀಮ್‌ ಇಂಡಿಯಾಗೆ ಕಾಲಿಡಲು ಸಜ್ಜಾಗಿದ್ದಾರೆ.
ಭಾರತ ತಂಡ
ಭಾರತ ತಂಡ (BCCI)

ಭಾರತದ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ (West Indies tour) ಬಿಸಿಸಿಐ ಇಂದು (ಶುಕ್ರವಾರ) ಭಾರತ ತಂಡವನ್ನು (India vs West Indies) ಪ್ರಕಟಿಸಿದೆ. ಟೆಸ್ಟ್ ಮತ್ತು ಏಕದಿನ ತಂಡವನ್ನು ಪ್ರಕಟಿಸಲಾಗಿದ್ದು, ಚೇತೇಶ್ವರ ಪೂಜಾರ ಮತ್ತು ಉಮೇಶ್ ಯಾದವ್ ಅವರನ್ನು ಕೈ ಬಿಡಲಾಗಿದೆ.

ಇತೀಚೆಗೆ ಮುಗಿದ ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪೂಜಾರ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅತ್ತ ಅಗ್ರ ಕ್ರಮಾಂಕದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ವೇಗಿ ಮುಕೇಶ್ ಕುಮಾರ್ ಚೊಚ್ಚಲ ಟೆಸ್ಟ್‌ ಕರೆ ಪಡೆದಿದ್ದಾರೆ. ಅತ್ತ ವೇಗಿ ನವದೀಪ್ ಸೈನಿ ಕೂಡಾ ದೀರ್ಘಾವಧಿಯ ಬಳಿಕ ತಂಡಕ್ಕೆ ಮರಳಿದ್ದಾರೆ.‌

ಟೆಸ್ಟ್ ಮತ್ತು ಏಕದಿನ ಸರಣಿಗಳಿಂದ ಪ್ರಮುಖ ವೇಗಿ ಮೊಹಮ್ಮದ್ ಶಮಿಗೆ ವಿರಾಮ ನೀಡಲಾಗಿದೆ. ಹೀಗಾಗಿ ಉಭಯ ಸರಣಿಗಳಲ್ಲಿ ಭಾರತ ವೇಗದ ಬಳಗವನ್ನು ಮೊಹಮ್ಮದ್‌ ಸಿರಾಜ್‌ ಮುನ್ನಡೆಸಲಿದ್ದಾರೆ. ಜಯದೇವ್ ಉನದ್ಕತ್, ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಇದೇ ವೇಳೆ ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಸುಮಾರು 15 ತಿಂಗಳ ಕಾಲ ತಂಡಕ್ಕೆ ಆಯ್ಕೆಯಾಗದೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಡಬ್ಲ್ಯುಟಿಸಿ ಫೈನಲ್‌ ಪಂದ್ಯಕ್ಕೆ ಆಯ್ಕೆಯಾದ ರಹಾನೆ, ಇದೀಗ ಟೆಸ್ಟ್ ತಂಡದ ಉಪನಾಯಕನಾಗಿ ಹೆಸರಿಸಲ್ಪಟ್ಟಿದ್ದಾರೆ.

ಮತ್ತೊಂದೆಡೆ ಏಕದಿನ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇಶಾನ್ ಕಿಶನ್ ಜೊತೆಗೆ ವಿಕೆಟ್ ಕೀಪರ್ ಆಯ್ಕೆಯಾಗಿ ಹೆಸರಿಸಲ್ಪಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ಆಯ್ಕೆದಾರರು ಮಧ್ಯಮ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದುವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಯಶಸ್ಸು ಕಾಣದ ಅವರಿಗೆ ಇದು ಮತ್ತೊಂದು ಅವಕಾಶವಾಗಲಿದೆ.

ಯಾವಾಗದಿಂದ ಪಂದ್ಯ

ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯವು, ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ಜುಲೈ 12ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯವು ಜುಲೈ 20ರಿಂದ ಜುಲೈ 24ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಇದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯವಾಗಿದ್ದು, ಸರಣಿ ನಿರ್ಣಾಯಕ ಪಂದ್ಯ ಉಭಯ ರಾಷ್ಟ್ರಗಳಿಗೂ ಮಹತ್ವದ್ದಾಗಲಿದೆ.

ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳನ್ನೊಳಗೊಂದ ಏಕದಿನ ಸರಣಿ ನಡೆಯಲಿದೆ. ಮೊದಲ ಪಂದ್ಯವು ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಕೂಡ ಬಾರ್ಬಡೋಸ್‌ನಲ್ಲಿ ಜುಲೈ 29ರಂದು ನಡೆಯಲಿದೆ. ಇದೇ ವೇಳೆ ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯು ಮೂರನೇ ಹಾಗೂ ಸರಣಿಯ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಭಾರತ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ