logo
ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಧೋನಿಯನ್ನೂ ಮೀರಿಸಿದ ವಿರಾಟ್ ಕೊಹ್ಲಿ; ಸಚಿನ್ ತೆಂಡೂಲ್ಕರ್ ಗೆಲುವಿನ ದಾಖಲೆ ಮುರಿಯಲು ಕೆಲವೇ ಹೆಜ್ಜೆ

Virat Kohli: ಧೋನಿಯನ್ನೂ ಮೀರಿಸಿದ ವಿರಾಟ್ ಕೊಹ್ಲಿ; ಸಚಿನ್ ತೆಂಡೂಲ್ಕರ್ ಗೆಲುವಿನ ದಾಖಲೆ ಮುರಿಯಲು ಕೆಲವೇ ಹೆಜ್ಜೆ

Jayaraj HT Kannada

Jul 17, 2023 12:56 PM IST

google News

ಧೋನಿ, ವಿರಾಟ್ ಕೊಹ್ಲಿ

    • Virat Kohli Record: ದಶಕಗಳಿಂದ ಟೀಮ್‌ ಇಂಡಿಯಾದ ಭಾಗವಾಗಿರುವ ವಿರಾಟ್‌ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮೀರಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಧೋನಿ, ವಿರಾಟ್ ಕೊಹ್ಲಿ
ಧೋನಿ, ವಿರಾಟ್ ಕೊಹ್ಲಿ

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ಇನ್ನಿಂಗ್ಸ್‌ ಸಹಿತ ಭರ್ಜರಿ ಜಯ ಸಾಧಿಸಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ, ಅರ್ಹ ಜಯ ಗಳಿಸಿದೆ. ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಶಕ್ತಿಯಾಗಿರುವ ವಿರಾಟ್ ಕೊಹ್ಲಿ ಈ ಪಂದ್ಯದೊಂದಿಗೆ ಮತ್ತೊಂದು ದಾಖಲೆಯನ್ನೂ ಬರೆದಿದ್ದಾರೆ.

ದಶಕಗಳಿಂದ ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಕಾಯಂ ಆಗಿಸಿರುವ ವಿರಾಟ್‌, ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮೀರಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಪರ ಆಡಿದ ಪಂದ್ಯಗಳಲ್ಲಿ 296ನೇ ಬಾರಿ ಗೆಲುವು ಸಾಧಿಸಿದ ತಂಡದಲ್ಲಿ ಕೊಹ್ಲಿ ಭಾಗಿಯಾಗಿದ್ದಾರೆ. ಇದು ಮಾಜಿ ನಾಯಕ ಧೋನಿಗಿಂತ ಒಂದು ಪಂದ್ಯ ಹೆಚ್ಚು.

ಭಾರತದ ಅತಿ ಹೆಚ್ಚು ಗೆಲುವಿನಲ್ಲಿ ಪಾಲು ಪಡೆದ ಆಟಗಾರರ ಪೈಕಿ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅಂತಾರಾಷ್ಟೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ಕ್ರಿಕೆಟ್‌ ದೇವರು, ಭಾರತ ತಂಡದ 307 ಗೆಲುವಿನಲ್ಲಿ ಭಾಗಿಯಾಗಿದ್ದಾರೆ. ಈ ಗೆಲುವುಗಳಲ್ಲಿ ಲಿಟಲ್‌ ಮಾಸ್ಟರ್‌ ಕೊಡುಗೆಯ ಬಗ್ಗೆ ವಿವರಿಸಿ ಹೇಳಬೇಕಿಲ್ಲ.

ಮೂರೇ ದಿನದಲ್ಲಿ ಟೆಸ್ಟ್ ಪಂದ್ಯ ಮುಕ್ತಾಯ

ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯಗೊಂಡಿತು. ಎರಡೂ ಇನ್ನಿಂಗ್ಸ್‌​​ನಲ್ಲೂ ಅಬ್ಬರಿಸಿದ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಸ್ಪಿನ್​ ದಾಳಿಗೆ ಅತಿಥೇಯ ವಿಂಡೀಸ್​ ಇನ್ಸಿಂಗ್ಸ್​​ ಮತ್ತು 141 ರನ್‌​​ಗಳ ಸೋಲು ಅನುಭವಿಸಿತು. ಆ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​​​​ 3ನೇ ಆವೃತ್ತಿಯ ತಮ್ಮ ಆರಂಭಿಕ ಪಂದ್ಯದಲ್ಲೇ ದಾಖಲೆಯ ಗೆಲುವು ಸಾಧಿಸಿದೆ.

ಭಾರತವು ತನ್ನ ಮೊದಲ ಇನ್ನಿಂಗ್ಸ್‌​ನಲ್ಲಿ 271 ರನ್‌​​ಗಳ ಮುನ್ನಡೆ ಪಡೆದಿತ್ತು. 152.2 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 421 ರನ್‌ಗಳನ್ನು ಕಲೆ ಹಾಕಿ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಹಾಗಾಗಿ ಭಾರತ ಪಡೆದಿದ್ದ 271 ರನ್‌​ಗಳ ಮುನ್ನಡೆಯನ್ನು ಹಿಂಬಾಲಿಸಿದ ವೆಸ್ಟ್​ ಇಂಡೀಸ್​​, 3ನೇ ದಿನ ಮುಗಿಯುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಮತ್ತೆ ಅಲ್ಪ ಮೊತ್ತಕ್ಕೆ ಶರಣಾಯ್ತು. ಮೊದಲ ಇನ್ನಿಂಗ್ಸ್‌​ನಂತೆ, ದ್ವಿತಿಯ ಇನ್ನಿಂಗ್ಸ್‌​​ನಲ್ಲೂ ಆರ್​ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಸ್ಪಿನ್‌ ಮೋಡಿಗೆ ವಿಂಡೀಸ್​ ನಲುಗಿತು. 50.3 ಓವರ್‌​​ಗಳಲ್ಲಿ 130 ರನ್​ ಗಳಿಸುವಷ್ಟರಲ್ಲಿ ಸರ್ವಪತನವಾಯಿತು. ಇದರೊಂದಿಗೆ ಇನ್ನಿಂಗ್ಸ್​​ ಜೊತೆ 141 ರನ್‌​ಗಳಿಂದ ಸೋಲು ಕಂಡಿತು.

ನಂಬರ್‌ ವನ್‌ ಶ್ರೇಯಾಂಕ

ಪ್ರಸ್ತುತ, ಐಸಿಸಿ ಶ್ರೇಯಾಂಕದ ಪ್ರಕಾರ ಟೀಮ್ ಇಂಡಿಯಾ ವಿಶ್ವದ ನಂಬರ್ ವನ್ ಟೆಸ್ಟ್ ತಂಡವಾಗಿದೆ. ಇತ್ತೀಚೆಗಷ್ಟೆ ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ಸೋತರೂ ಭಾರತ ಅಗ್ರಸ್ಥಾನದಲ್ಲಿದೆ. ಆದರೆ ವೆಸ್ಟ್ ಇಂಡೀಸ್ ಅನ್ನು 2-0 ಅಂತರದಲ್ಲಿ ಸೋಲಿಸಿದರೂ, ಟೀಮ್‌ ಇಂಡಿಯಾ ಸ್ಥಾನ ಭದ್ರವಾಗಿಲ್ಲ.

ಪ್ರಸ್ತುತ ಟೀಮ್ ಇಂಡಿಯಾ 121 ರೇಟಿಂಗ್ ಹೊಂದಿದ್ದು, ಐಸಿಸಿ ಟೆಸ್ಟ್ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 116 ಅಂಕಗಳೊಂದಿಗೆ ಆಸ್ಟ್ರೇಲಿಯ ಎರಡನೇ ಸ್ಥಾನದಲ್ಲಿದೆ. ಅತ್ತ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕಾಂಗರೂಗಳು ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ 2-1ರಿಂದ ಮುನ್ನಡೆ ಸಾಧಿಸಿರುವ ಆಸೀಸ್‌, ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ