Virender Sehwag: ಬಿಸಿಸಿಐ ಚೀಫ್ ಸೆಲೆಕ್ಟರ್ ರೇಸ್ನಲ್ಲಿ ವೀರೇಂದ್ರ ಸೆಹ್ವಾಗ್; ಕೋಚ್ ಹುದ್ದೆಯನ್ನೇ ಬೇಡ ಎಂದಿದ್ದ ವೀರು ಇದಕ್ಕೆ ಒಪ್ತಾರಾ
Jun 23, 2023 06:00 AM IST
ವೀರೇಂದ್ರ ಸೆಹ್ವಾಗ್
- Virender Sehwag: ಕುಟುಕು ಕಾರ್ಯಾಚರಣೆಯಲ್ಲಿ ಸಿಲುಕಿ ವಿವಾದ ಸೃಷ್ಟಿಸಿದ್ದ ಚೇತನ್ ಶರ್ಮಾ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿ, ಆರು ತಿಂಗಳಾಗುತ್ತಿದ್ದರೂ ಬಿಸಿಸಿಐ ಮುಖ್ಯ ಆಯ್ಕೆಗಾರನ ಹುದ್ದೆ ಭರ್ತಿ ಮಾಡದಿರುವುದು ವಿಪರ್ಯಾಸ. ಇದೀಗ ಬಿಸಿಸಿಐ ಆ ಸ್ಥಾನಕ್ಕಾಗಿ ಹುಡುಕಾಟ ಆರಂಭಿಸಿದೆ.
ಖಾಸಗಿ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ (India Cricket) ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ಅವರ ಸ್ಥಾನಕ್ಕೆ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಹೆಸರು ಕೇಳಿ ಬರುತ್ತಿದೆ. ಬಿಸಿಸಿಐ ಚೀಫ್ ಸೆಲೆಕ್ಟರ್ (Chief Selector) ಆಗಿ ಡೆಲ್ಲಿ ಡ್ಯಾಶರ್ ಸೆಹ್ವಾಗ್ ಅವರನ್ನು ನೇಮಿಸಲು ಮುಂದಾಗಿದೆ. ಸದ್ಯ ಬಿಸಿಸಿಐ, ಈ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: Chetan Sharma: ಸ್ಟಿಂಗ್ ಆಪರೇಷನ್ನಲ್ಲಿ ವಿವಾದ ಸೃಷ್ಟಿಸಿದ್ದ ಚೇತನ್ ಶರ್ಮಾ ಬಿಸಿಸಿಐಗೆ ಮರು ಪ್ರವೇಶ; ಮತ್ತೆ ಚೀಪ್ ಸೆಲೆಕ್ಟರ್ ಆಗಿ ಆಯ್ಕೆ
ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ (WTC Final 2023) ಆಯ್ಕೆ ಮಂಡಳಿಯಲ್ಲಿ ಉಳಿದ ನಾಲ್ವರು ಸದಸ್ಯರೇ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದರು. ಆಯ್ಕೆ ಸಮಿತಿ ಮುಖ್ಯಸ್ಥರೇ ಇರಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಟೂರ್ನಿಗಳಿವೆ. ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ನಂತಹ (ODI World Cup 2023) ಟೂರ್ನಿಗಳಿಗೆ ತಂಡದ ಆಯ್ಕೆಗೆ ಆಯ್ಕೆ ಸಮಿತಿ ಅಧ್ಯಕ್ಷರ ಅಗತ್ಯವಿದೆ.
ಡೆಲ್ಲಿ ಡ್ಯಾಶರ್ನನ್ನು ಸಂಪರ್ಕಿಸಿದ ವೀರೂ
ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಚೇತನ್ ಶರ್ಮಾ ಅವರು ಉತ್ತರ ವಲಯದಿಂದ ಬಿಸಿಸಿಐ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದರೊಂದಿಗೆ ಅದೇ ವಲಯದಿಂದ ಮುಖ್ಯ ಆಯ್ಕೆಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ. ಹಾಗಾಗಿ ಉತ್ತರ ವಲಯದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನು ಬಿಸಿಸಿಐ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸಲು ಬಿಸಿಸಿಐ ಶತ ಪ್ರಯತ್ನ ನಡೆಸುತ್ತಿದೆ.
ವೀರೂ ಒಪ್ಪುವುದು ಅನುಮಾನ
ಆದರೆ, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ವೀರೇಂದ್ರ ಸೆಹ್ವಾಗ್, ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೇರಲು ನಿರಾಸಕ್ತಿ ತೋರಿದ್ದರು. ಆಟಗಾರನಾಗಿ ಗಳಿಸಿದ ಗೌರವವನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಮುಖ್ಯ ಕೋಚ್ ಸ್ಥಾನ ನನಗೆ ಬೇಡ ಎಂದು ವೀರು ಪ್ರತಿಕ್ರಿಯಿಸಿದ್ದರು. ಹಾಗಾಗಿ ಈಗ ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆಯನ್ನು ಅಲಂಕರಿಸಲು ಸೆಹ್ವಾಗ್ ಒಪ್ಪುತ್ತಾರೆಯೇ ಎಂಬುದು ಅನುಮಾನ.
ಸೆಹ್ವಾಗ್ ಓಕೆ ಅನ್ನದಿದ್ದರೆ ಮತ್ಯಾರು?
ಒಂದು ವೇಳೆ ಸೆಹ್ವಾಗ್ ಮುಖ್ಯ ಆಯ್ಕೆಗಾರನ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ತೋರದಿದ್ದರೆ, ಚೇತನ್ ಶರ್ಮಾ ಬದಲಿಗೆ ಭಾರತದ ಪರ 23 ಟೆಸ್ಟ್ ಪಂದ್ಯಗಳನ್ನಾಡಿರುವ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್, ಬಿಸಿಸಿಐ ಮುಖ್ಯ ಆಯ್ಕೆಗಾರನ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಹಿರಿಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾದವರಿಗೆ ಬಿಸಿಸಿಐ ವಾರ್ಷಿಕ 1 ಕೋಟಿ ರೂಪಾಯಿ, ಉಳಿದ ನಾಲ್ವರು ಸದಸ್ಯರಿಗೆ ಬಿಸಿಸಿಐ ವರ್ಷಕ್ಕೆ 90 ಲಕ್ಷ ರೂಪಾಯಿ ನೀಡುತ್ತಿದೆ.
ವೀರು ಕರಿಯರ್
ವೀರೇಂದ್ರ ಸೆಹ್ವಾಗ್ ಅವರು 104 ಟೆಸ್ಟ್ ಪಂದ್ಯಗಳನ್ನಾಡಿರುವ ವಿರೇಂದ್ರ ಸೆಹ್ವಾಗ್, 49.34ರ ಬ್ಯಾಟಿಂಗ್ ಸರಾಸರಿಯಲ್ಲಿ 8586 ರನ್ ಗಳಿಸಿದ್ದಾರೆ. 32 ಅರ್ಧಶತಕ, 23 ಶತಕಗಳು, 6 ದ್ವಿಶತಕಗಳು ಅವರ ಖಾತೆಯಲ್ಲಿವೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 251 ಪಂದ್ಯಗಳಲ್ಲಿ 35.06ರ ಬ್ಯಾಟಿಂಗ್ ಸರಾಸರಿಯಲ್ಲಿ 8273 ರನ್ ಕಲೆ ಹಾಕಿದ್ದಾರೆ. 38 ಅರ್ಧಶತಕ, 15 ಶತಕ, 1 ದ್ವಿಶತಕ ಸಿಡಿಸಿದ್ದಾರೆ. 19 ಟಿ20 ಪಂದ್ಯಗಳಲ್ಲಿ 394 ರನ್ ಗಳಿಸಿದ್ದು, 2 ಅರ್ಧಶತಕ ಬಾರಿಸಿದ್ದಾರೆ.