West Indies vs India: ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್; ಮುಖೇಶ್ ಕುಮಾರ್ ಪದಾರ್ಪಣೆ
Jul 27, 2023 09:15 PM IST
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ
- India vs West Indies 1st ODI: ಭಾರತ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯುತ್ತಿದೆ.
ಇಂದಿನಿಂದ ವೆಸ್ಟ್ ಇಂಡೀಸ್ (West Indies vs India) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದೆ. ಈಗಾಗಲೇ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾ, ಇದೀಗ ಏಕದಿನ ಸರಣಿಯನ್ನೂ ವಶಕ್ಕೆ ಪಡೆದು, ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ODI World Cup 2023) ತಯಾರಿ ಆರಂಭಿಸುವ ಉತ್ಸಾಹದಲ್ಲಿದೆ. ಬಾರ್ಬಡೋಸ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಮೊದಲ ಏಕದಿನ ಪಂದ್ಯ ನಡೆಯುತ್ತಿದೆ.
ಸರಣಿಯ ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಬೌಲಿಂಗ್ ಆಯ್ಕೆ ಮಾಡಿದ್ದಾರೆ. ತಂಡವು ಇಂದು ನಾಲ್ಕು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ.
ಮುಖೇಶ್ ಕುಮಾರ್ ಪದಾರ್ಪಣೆ
ಮೊದಲ ಏಕದಿನ ಪಂದ್ಯದ ಮೂಲಕ ಮುಖೇಶ್ ಕುಮಾರ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಒಂದು ವಾರದ ಹಿಂದಷ್ಟೇ ಪೋರ್ಟ್ ಆಫ್ ಸ್ಪೇನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಮುಖೇಶ್, ಇದೀಗ ಏಕದಿನ ಸ್ವರೂಪದಲ್ಲಿಯೂ ಮಿಂಚಲು ಮುಂದಾಗಿದ್ದಾರೆ.
ಮಳೆಯಿಂದಾಗಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ವಿಫಲವಾದ ಟೀಮ್ ಇಂಡಿಯಾ, ಇದೀಗ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಸಾಧಿಸುವ ವಿಶ್ವಾಸದಲ್ಲಿದೆ. ಒಂದು ವೇಳೆ ಈ ಸರಣಿಯನ್ನು ಭಾರತ ಗೆದ್ದರೆ, ವಿಂಡೀಸ್ ವಿರುದ್ಧ ಸತತ 5ನೇ ಏಕದಿನ ಸರಣಿ ಗೆದ್ದ ದಾಖಲೆ ನಿರ್ಮಿಸಲಿದೆ.
ಪಿಚ್ ವರದಿ
ಟೆಸ್ಟ್ ಸರಣಿಯ ಎರಡನೇ ಪಂದ್ಯ ಮಳೆಗಾಹುತಿಯಾಗಿದ್ದು, ಇಂದು ಕೂಡಾ ಮಳೆಯಾಗುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯಕ್ಕೂ ವರುಣ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಬ್ರಿಡ್ಜ್ಟೌನ್ನಲ್ಲಿ ಶೇಕಡಾ 7ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಖಾಮುಖಿ ದಾಖಲೆ
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಈವರೆಗೆ ಒಟ್ಟು 139 ಏಕದಿನ ಪಂದ್ಯಗಳನ್ನು ಆಡಿದ್ದು, ಭಾರತ 70ರಲ್ಲಿ ಜಯಿಸಿದೆ. ವೆಸ್ಟ್ ಇಂಡೀಸ್ 63 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಕಾಲದ ಬಲಿಷ್ಠ ತಂಡ ವಿಂಡೀಸ್, ಇತ್ತೀಚೆಗೆ ತನ್ನ ಗತವೈಭವವನ್ನು ಕಳೆದುಕೊಂಡಿದೆ. ಅಲ್ಲದೆ ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ವೆಸ್ಟ್ ಇಂಡೀಸ್ ಆಡುವ ಬಳಗ
ಶಾಯ್ ಹೋಪ್ (ನಾಯಕ/ ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಡೊಮಿನಿಕ್ ಡ್ರೇಕ್ಸ್, ಜೇಡನ್ ಸೀಲ್ಸ್, ಗುಡಾಕೇಶ್ ಮೋಟಿ.
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.