Shikhar Dhawan: ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಆದರೆ ಪಾಕಿಸ್ತಾನ ವಿರುದ್ಧ ಸೋಲಬೇಡಿ, ದೇವರ ಅನುಗ್ರಹ ಇರಲಿದೆ; ಭಾರತ ಬೆಂಬಲಿಸಿದ ಧವನ್
Aug 10, 2023 10:17 PM IST
ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಆದರೆ ಪಾಕಿಸ್ತಾನ ವಿರುದ್ಧ ಸೋಲಬೇಡಿ ಎಂದ ಶಿಖರ್ ಧವನ್.
- Shikhar Dhawan: ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲುತ್ತಿರೋ ಬಿಡಿತ್ತೀರೋ ಆದರೆ ಪಾಕಿಸ್ತಾನ ವಿರುದ್ಧ ಸೋಲಬೇಡಿ ಎಂದು ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಲ್ಲಿ (Indian Cricket Team) ಅವಕಾಶ ಪಡೆಯಲು ಹರಸಾಹಸ ಪಡುತ್ತಿರುವ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan), ಏಕದಿನ ವಿಶ್ವಕಪ್ (ODI World Cup 2023) ಗೆಲ್ಲದಿದ್ದರೂ ಪರವಾಗಿಲ್ಲ. ಪಾಕಿಸ್ತಾನ (India vs Pakistan) ವಿರುದ್ಧ ಮಾತ್ರ ಸೋಲಬೇಡಿ ಎಂದು ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡಕ್ಕೆ ತಿಳಿಸಿದ್ದಾರೆ. 2022ರ ಬಳಿಕ ಭಾರತ ತಂಡದಲ್ಲಿ (Team India) ಕಾಣಿಸಿಕೊಳ್ಳದ ಗಬ್ಬರ್, ಇದೀಗ ಏಕದಿನ ವಿಶ್ವಕಪ್ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಶುಭ್ಮನ್ ಗಿಲ್ ಅವರ ಅದ್ಭುತ ಫಾರ್ಮ್ನಿಂದಾಗಿ ಧವನ್ ಆಯ್ಕೆ ಅನುಮಾನ ಮೂಡಿಸಿದೆ. ಅಲ್ಲದೆ, ಅವರ ಹೇಳಿಕೆ ಗಮನಿಸಿದರೆ, ತಾನು ಆಯ್ಕೆಯಾಗುವುದಿಲ್ಲ ಎಂಬ ದಾಟಿಯಲ್ಲಿಯೇ ಇದೆ.
ಐಸಿಸಿ ಟೂರ್ನಮೆಂಟ್ಗಳಲ್ಲಿ ಪಾಕಿಸ್ತಾನ ಎದುರು ಭಾರತವೇ ಹೆಚ್ಚು ದಿಗ್ವಿಜಯ ಸಾಧಿಸಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಸೋಲು ಕಂಡಿತ್ತು. ತದನಂತರ 2021ರ ಟಿ20 ವಿಶ್ವಕಪ್ನಲ್ಲೂ 10 ವಿಕೆಟ್ಗಳ ಪರಾಭವಗೊಂಡಿತ್ತು. ಆದರೆ, 2022ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟದ ಫಲವಾಗಿ ಭಾರತವು ದಿಗ್ವಿಜಯ ಸಾಧಿಸಿತ್ತು. ಹಾಗಾಗಿ, ಆ ಎರಡು ಸೋಲುಗಳ ಸೇಡು ತೀರಿಸಿಕೊಂಡಿತ್ತು. ವಿಶ್ವದಲ್ಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ.
‘ಪಾಕ್ ಎದುರು ಗೆಲ್ಲಲೇಬೇಕು’
ಟೀಮ್ ಇಂಡಿಯಾ ಐಸಿಸಿ ಟೂರ್ನಿ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ ಪಾಕ್ ಎದುರಿನ ಪಂದ್ಯವನ್ನು ಮಾತ್ರ ಗೆಲ್ಲಲೇಬೇಕು. ಸೋತರೆ, ಯಾರೂ ಕೂಡ ಸಹಿಸುವುದಿಲ್ಲ. ಅದರಂತೆ ಆರಂಭಿಕ ಆಟಗಾರ ಶಿಖರ್ ಧವನ್, ಭಾರತವನ್ನು ಬೆಂಬಲಿಸಿದ್ದಾರೆ. ಏಕದಿನ ವಿಶ್ವಕಪ್ ಗೆದ್ದರೂ, ಗೆಲ್ಲದಿದ್ದರೂ ಟೀಮ್ ಇಂಡಿಯಾದ ಅಭಿಮಾನಿಗಳು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲಬಾರದು ಎಂದು ಬಯಸುತ್ತಾರೆ. ಆ ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು ಧವನ್ ಹೇಳಿದ್ದಾರೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಯಾವಾಗಲೂ ಹೆಚ್ಚಿನ ತೀವ್ರತೆಯಿಂದ ಕೂಡಿರುತ್ತದೆ. ಯಾವಾಗಲೂ ಸಾಕಷ್ಟು ಒತ್ತಡದೊಂದಿಗೆ ರೋಮಾಂಚನಕಾರಿಯಾಗಿದೆ ಎಂದ ಧವನ್, 'ನೀವು ವಿಶ್ವಕಪ್ ಗೆಲ್ಲಲಿ ಅಥವಾ ಗೆಲ್ಲದಿರಲಿ, ಪಾಕಿಸ್ತಾನದ ಎದುರು ಮಾತ್ರ ಸೋಲಬೇಡಿ' (ನಗು) ಎಂದು ಧವನ್ ಸ್ಟಾರ್ ಸ್ಪೋರ್ಟ್ಸ್ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ. ಈ ಮಾತಿನ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ತನಗೆ ಅವಕಾಶ ಸಿಗಲ್ಲ ಎಂದು ಗೊತ್ತಿದ್ದರೂ, ಬಿಸಿಸಿಐ ಮತ್ತು ಸೆಲೆಕ್ಟರ್ಸ್ ವಿರುದ್ಧ ಅಸಮಾಧಾನ ಹೊರ ಹಾಕದೆ ಬೆಂಬಲ ನೀಡಿರುವುದು ನಿಜಕ್ಕೂ ಮೆಚ್ಚುವಂತದ್ದೇ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು.
‘ಭಗವಂತನ ಅನುಗ್ರಹದಿಂದ ವಿಶ್ವಕಪ್ ಗೆಲ್ಲಲ್ಲಿ’
ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದು ಕೂಡ ಬಹಳ ಮುಖ್ಯ. ಏಕೆಂದರೆ ಭಾರತ ತಂಡವು ಐಸಿಸಿ ಪ್ರಶಸ್ತಿ ಗೆದ್ದು ಹತ್ತು ವರ್ಷಗಳಾಗಿದೆ. ದೇವರ ಅನುಗ್ರಹದಿಂದ ಈ ಬಾರಿ ಮೆನ್ ಇನ್ ಬ್ಲೂ ವಿಶ್ವಕಪ್ ಗೆಲ್ಲಬೇಕೆಂದು ಎಂದು ಧವನ್ ರೋಹಿತ್ ಪಡೆಗೆ ಸೂಚಿಸಿದ್ದಾರೆ. ಅವರ ವಿರುದ್ಧ ಆಡುವಾಗ ತೃಪ್ತಿಯ ಭಾವನೆ ಖಂಡಿತವಾಗಿಯೂ ಇದೆ. ನಾನು ಪಾಕಿಸ್ತಾನದಲ್ಲಿ ಆಡಿದಾಗಲೆಲ್ಲಾ ನಾವು ಹೆಚ್ಚಾಗಿ ಗೆದ್ದಿದ್ದೇವೆ ಎಂದು ಹೇಳಿರುವ ಧವನ್, ತನಗೆ ಅವಕಾಶ ಸಿಗುವುದರ ಬಗ್ಗೆ ಎಲ್ಲೂ ಮಾತನಾಡಿಲ್ಲ.
2 ತಿಂಗಳಲ್ಲಿ ಹಲವು ಬಾರಿ ಇಂಡೋ-ಪಾಕ್ ಮುಖಾಮುಖಿ
ಏಷ್ಯಾ ಕಪ್ 2023 ಮತ್ತು ಏಕದಿನ ವಿಶ್ವಕಪ್ 2023 ಟೂರ್ನಿಗಳ ಜೊತೆಗೆ ಏಷ್ಯನ್ ಗೇಮ್ಸ್ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯಾಕಪ್ನಲ್ಲಿ ಲೀಗ್ ಹಂತದಲ್ಲಿ ಸೂಪರ್-4 ಹಂತದಲ್ಲಿ ಎರಡೂ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ನಿರೀಕ್ಷೆಯಂತೆ ಪ್ರದರ್ಶನ ನೀಡಿ ಏಷ್ಯಾ ಕಪ್ 2023ರ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯನ್ನು ಮತ್ತೆ ಕಣ್ತುಂಬಿಕೊಳ್ಳಬಹುದು. ನಂತರ ಏಕದಿನ ವಿಶ್ವಕಪ್ನಲ್ಲಿ ಅಕ್ಟೋಬರ್ 14ರಂದು ಮತ್ತೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೆ ಸೆಣಸಾಟ ನಡೆಸಲಿವೆ.
ಶಿಖರ್ ಧವನ್ಗಿಲ್ಲ ತಂಡದಲ್ಲಿ ಸ್ಥಾನ
ಯುವ ಆಟಗಾರರು ಆರ್ಭಟಿಸುತ್ತಿರುವ ಹಿನ್ನೆಲೆಯಿಂದ ಶಿಖರ್ ಧವನ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರೊಂದಿಗೆ, ಧವನ್ ಫಾರ್ಮ್ ಕೈ ಕೊಟ್ಟಿದ್ದು, ತಂಡದಿಂದ ದೂರ ಮಾಡುವಂತೆ ಮಾಡಿದೆ. ಕೊನೆಯದಾಗಿ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.