logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final 2023: ಡಬ್ಲ್ಯುಟಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ಏಕೆ ನಡೆಯುತ್ತವೆ; ಇಲ್ಲಿದೆ ವಿವರಣೆ

WTC Final 2023: ಡಬ್ಲ್ಯುಟಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ಏಕೆ ನಡೆಯುತ್ತವೆ; ಇಲ್ಲಿದೆ ವಿವರಣೆ

Prasanna Kumar P N HT Kannada

Jun 08, 2023 02:52 PM IST

google News

ಇಂಗ್ಲೆಂಡ್​​ನ ಓವಲ್​ ಕ್ರಿಕೆಟ್ ಮೈದಾನ

    • ಐಸಿಸಿ ಟೂರ್ನಿಗಳ ಆತಿಥ್ಯ ಒಂದೊಂದು ದೇಶಕ್ಕೆ ಒಮೊಮ್ಮೆ ಸಿಗುತ್ತದೆ. ಆದರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯ 2 ಆವೃತ್ತಿಗಳನ್ನೂ ಇಂಗ್ಲೆಂಡ್​​ನಲ್ಲೇ ಆಯೋಜಿಸಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯೂ ಆಗುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಇಂಗ್ಲೆಂಡ್​​ನ ಓವಲ್​ ಕ್ರಿಕೆಟ್ ಮೈದಾನ
ಇಂಗ್ಲೆಂಡ್​​ನ ಓವಲ್​ ಕ್ರಿಕೆಟ್ ಮೈದಾನ

2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ಪಂದ್ಯವು (WTC Final 2023) ಇದೇ ಭಾನುವಾರ (ಜೂನ್​ 11ಕ್ಕೆ) ಮುಗಿಯಲಿದೆ. 2021ರ ಮೊದಲ ಆವೃತ್ತಿಯಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್ (IND vs NZ)​​ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು. ಆ ಮೂಲಕ ಕಿವೀಸ್​, ಮೊದಲ ಡಬ್ಲ್ಯುಟಿಸಿ ಪ್ರಶಸ್ತಿ ಗೆದ್ದು ಮುತ್ತಿಕ್ಕಿತು. ಪ್ರಸ್ತುತ ನಡೆಯುತ್ತಿರುವ 2ನೇ ಆವೃತ್ತಿಯ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಇಂಡೋ-ಆಸಿಸ್​ (Ind vs Aus) ಪೈಕಿ ಒಂದು ತಂಡಕ್ಕೆ ಚಾಂಪಿಯನ್‌ ಪಟ್ಟ ದೊರೆಯಲಿದೆ.

ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ (The Oval) ಫೈನಲ್​ ಪಂದ್ಯ ನಡೆಯುತ್ತಿದೆ. ವಿಶೇಷ ಅಂದರೆ ಮೊದಲ ಆವೃತ್ತಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕೂಡ ಇಂಗ್ಲೆಂಡ್​ನಲ್ಲಿ​ ನಡೆದಿತ್ತು. ಇದರಿಂದ ನಿಮಗೆ ಒಂದು ಅನುಮಾನ ಬರಬಹುದು. ಐಸಿಸಿ ಟೂರ್ನಿಗಳ ಆತಿಥ್ಯ ಒಂದೊಂದು ದೇಶಕ್ಕೆ ಒಮೊಮ್ಮೆ ಸಿಗುತ್ತದೆ. ಆದರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯ 2 ಆವೃತ್ತಿಗಳನ್ನೂ ಇಂಗ್ಲೆಂಡ್​​ನಲ್ಲೇ ಆಯೋಜಿಸಿದ್ದು ಯಾಕೆ ಎಂಬ ಪ್ರಶ್ನೆ ನಿಮಗೆ ಎದುರಾಗಿರಬಹುದು. ದೊಡ್ಡ ಮಟ್ಟದಲ್ಲಿ ಚರ್ಚೆಯೂ ಆಗುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಇಂಗ್ಲೆಂಡ್‌ನಲ್ಲೇ ಏಕೆ ಫೈನಲ್​ ಪಂದ್ಯಗಳ ಆಯೋಜನೆ?

ಡಬ್ಲ್ಯುಟಿಸಿ ಫೈನಲ್ ಇಂಗ್ಲೆಂಡ್‌ನಲ್ಲೇ ಜರುಗಲು ಕಾರಣ ಇದೆ. ಈ ಟೂರ್ನಿಯ ಆರಂಭಿಕ 3 ಆವೃತ್ತಿಗಳ ಫೈನಲ್‌ ಪಂದ್ಯಗಳನ್ನೂ ಇಂಗ್ಲೆಂಡ್‌ನಲ್ಲೇ ಆಯೋಜಿಸಲು ಐಸಿಸಿ ನಿರ್ಧಾರ ಕೈಗೊಂಡಿದೆ. ಸದ್ಯ 2ನೇ ಆವೃತ್ತಿ ಫೈನಲ್​ ಪಂದ್ಯ ಚಾಲ್ತಿಯಲ್ಲಿದೆ. ಇನ್ನು ಮುಂದಿನ ಫೈನಲ್ ಪಂದ್ಯವು 2025ರಲ್ಲಿ ಆಯೋಜನೆಯಾಗಲಿದೆ. ಇದು ಕೂಡ ಆಂಗ್ಲರ ನಾಡಲ್ಲೇ ಆಯೋಜನೆಯಾಗಲಿದೆ. ಮೊದಲ ಆವೃತ್ತಿಯ ಫೈನಲ್​ ಪಂದ್ಯ ಸೌತಾಂಪ್ಟನ್​ನ ರೋಲ್​ಬೌಲ್​​​ನಲ್ಲಿ ನಡೆದಿತ್ತು.

ಶ್ರೀಮಂತ ಪರಂಪರೆ

ಡಬ್ಲ್ಯುಟಿಸಿ ಫೈನಲ್‌ಗೆ ಇಂಗ್ಲೆಂಡ್​ ದೇಶಕ್ಕೆ ಆದ್ಯತೆ ನೀಡಲು ಪ್ರಮುಖ ಅಂಶವೆಂದರೆ ದೇಶದ ಶ್ರೀಮಂತ ಕ್ರಿಕೆಟ್ ಪರಂಪರೆ. ಇಂಗ್ಲೆಂಡ್ ಕ್ರಿಕೆಟ್‌ ಜನ್ಮಸ್ಥಳ. ಕ್ರೀಡೆಯಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯ ಹೊಂದಿದೆ. ಇಂಗ್ಲಿಷ್ ಕ್ರಿಕೆಟ್ ಮೂಲಸೌಕರ್ಯವು ಉತ್ತಮವಾಗಿ ನಿರ್ವಹಿಸಲ್ಪಟ್ಟ ಮೈದಾನಗಳು, ಅತ್ಯುತ್ತಮ ಸೌಲಭ್ಯಗಳಿಗೆ ಹೆಸರುವಾಸಿ. ಡಬ್ಲ್ಯುಟಿಸಿ ಫೈನಲ್‌ನಂತಹ ಉನ್ನತ ಮಟ್ಟದ ಪಂದ್ಯಕ್ಕೆ ಸೂಕ್ತವಾದ ಸ್ಥಳ. ಇದೇ ಕಾರಣಕ್ಕೆ ನಿರ್ಧರಿಸಲಾಗಿದೆ.

ಪರಿಪೂರ್ಣ ಹವಾಮಾನ

ಮತ್ತೊಂದು ನಿರ್ಣಾಯಕ ಅಂಶವೆಂದರೆ ಹವಾಮಾನ. ಇಂಗ್ಲೆಂಡ್‌ನ ಹವಾಮಾನ, ವಿಶೇಷವಾಗಿ ಬೇಸಿಗೆಯ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ತುಲನಾತ್ಮಕವಾಗಿ ಸ್ಥಿರ ಮತ್ತು ಅನುಕೂಲಕರ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಇಲ್ಲಿನ ಪಿಚ್‌ಗಳು ಬ್ಯಾಟ್ ಮತ್ತು ಬಾಲ್ ನಡುವೆ ನ್ಯಾಯೋಚಿತ ಸ್ಪರ್ಧೆಗೆ ಅವಕಾಶ ನೀಡುತ್ತವೆ. ಇದು ರೋಚಕತೆಗೂ ಸಾಕ್ಷಿ. ಇತರ ಕ್ರಿಕೆಟ್ ರಾಷ್ಟ್ರಗಳಿಗೆ ಹೋಲಿಸಿದರೆ ಇಂಗ್ಲೆಂಡ್‌ನಲ್ಲಿ ಹವಾಮಾನ ಪರಿಸ್ಥಿತಿಗಳಿಂದ ಪಂದ್ಯದ ಮೇಲೆ ಮಳೆ ಪರಿಣಾಮ ಬೀರುವ ಅಪಾಯ ಕಡಿಮೆ.

ಸಮಯದ ಹೊಂದಾಣಿಕೆ

ಇದಲ್ಲದೆ, ಇಂಗ್ಲೆಂಡ್ ದೇಶವನ್ನು ಆತಿಥೇಯರನ್ನಾಗಿ ಆಯ್ಕೆ ಮಾಡುವಲ್ಲಿ ಸಮಯದ ಹೊಂದಾಣಿಯೂ ಪ್ರಮುಖ ಪಾತ್ರವಹಿಸುತ್ತದೆ. ಪ್ರಸಾರದ ಹಕ್ಕುಗಳು ಮತ್ತು ವೀಕ್ಷಕರ ಸಂಖ್ಯೆಯು ಯಾವುದೇ ಪ್ರಮುಖ ಕ್ರಿಕೆಟ್ ಟೂರ್ನಿಯ ಪ್ರಮುಖ ಭಾಗ. ಇಂಗ್ಲೆಂಡ್ ಅನ್ನು ಸ್ಥಳವಾಗಿ ಆಯ್ಕೆ ಮಾಡುವ ಮೂಲಕ ಪಂದ್ಯದ ಸಮಯವು ಭಾರತ ಮತ್ತು ಇತರ ಉಪಖಂಡದ ರಾಷ್ಟ್ರಗಳು ಸೇರಿದಂತೆ ಹಲವು ಕ್ರಿಕೆಟ್ ಪ್ರೀತಿಯ ದೇಶಗಳಲ್ಲಿ ಪ್ರೈಮ್ ಟೈಮ್ ವೀಕ್ಷಣೆಯ ಸಮಯದೊಂದಿಗೆ ಅನುಕೂಲಕರವಾಗಿ ಹೊಂದಾಣಿಕೆಯಾಗುತ್ತದೆ. ಇದು ಡಬ್ಲ್ಯುಟಿಸಿ ಫೈನಲ್‌ಗೆ ಗರಿಷ್ಠ ಜಾಗತಿಕ ವೀಕ್ಷಕರನ್ನು ಮತ್ತು ವಾಣಿಜ್ಯ ಮೌಲ್ಯವನ್ನು ಖಾತ್ರಿಗೊಳಿಸುತ್ತದೆ.

ಮೂಲಸೌಕರ್ಯ

ಇಂಗ್ಲೆಂಡ್‌ನಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಸಂಪನ್ಮೂಲಗಳು ಡಬ್ಲ್ಯುಟಿಸಿ ಫೈನಲ್​ ಅನ್ನು ಸುಗಮವಾಗಿ ಕಾರ್ಯಗತಗೊಳ್ಳಲು ನೆರವಾಗುತ್ತದೆ. ಈ ಪ್ರಮಾಣದ ಉನ್ನತ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸಲು ಅಗತ್ಯವಾದ ಕ್ರೀಡಾಂಗಣಗಳು, ಹೋಟೆಲ್‌ಗಳು, ಸಾರಿಗೆ ಮತ್ತು ಬೆಂಬಲ ಸೇವೆಗಳ ಸಮಗ್ರ ಜಾಲವನ್ನು ದೇಶವು ಹೊಂದಿದೆ. ಆಂಗ್ಲ ಕ್ರಿಕೆಟ್ ಮಂಡಳಿಯ ಪರಿಣತಿ, ಅನುಭವದ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜೊತೆಗಿನ ಅವರ ಬಲವಾದ ಸಂಬಂಧವು ಪ್ರತಿಷ್ಠಿತ ಟೂರ್ನಿ ಆಯೋಜನೆಗೆ ಸಾಧ್ಯವಾಗಿದೆ.

ಪ್ರೇಕ್ಷಕರ ಕೊರತೆ ಇಲ್ಲ

ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚು ಬೆಂಬಲ ಸಿಗುವ ಜಾಗ ಎಂದರೆ ಅದು ಇಂಗ್ಲೆಂಡ್​ ಮಾತ್ರ. ಹಾಗಂತ ಬೇರೆ ದೇಶಗಳಲ್ಲಿ ಇಲ್ಲವೆಂದಲ್ಲ. ಅದು ಕೂಡ ಇಂಗ್ಲೆಂಡ್​​ ತಂಡವು ಫೈನಲ್​ ಪಂದ್ಯದಲ್ಲಿ ಆಡಲಿ, ಆಡದೇ ಇರಲಿ ಅಥವಾ ಬೇರೆ ದೇಶಗಳ ತಂಡಗಳು ಆಡಿದರೂ, ಬೆಂಬಲ ನೀಡುವುದರಲ್ಲಿ ಕೊಂಚವೂ ತಗ್ಗುವುದಿಲ್ಲ. ಇಂಗ್ಲೆಂಡ್​ನಲ್ಲಿ ಫೈನಲ್​ ಪಂದ್ಯ ನಡೆದರೆ ಬೇರೆ ದೇಶಗಳ ಪ್ರೇಕ್ಷಕರೂ ಅಲ್ಲಿಗೆ ಹೋಗುತ್ತಾರೆ. ಇದು ಬೇರೆ ದೇಶಗಳಲ್ಲಿ ಫೈನಲ್​ ನಡೆದರೆ, ಕಡಿಮೆ ಪ್ರೇಕ್ಷಕರ ಸಾಧ್ಯತೆ ಇದೆ. ಇದು ಐಸಿಸಿಗೆ ಆದಾಯಕ್ಕೆ ಪೆಟ್ಟು ಬೀಳಲಿದೆ. ಈ ಕಾರಣದಿಂದ ಐಸಿಸಿ ಈ ತೀರ್ಮಾನ ಕೈಗೊಂಡಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ