logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ಹೆಡ್, ಸ್ಮಿತ್ ದ್ವಿಶತಕದ ಅಜೇಯ ಜೊತೆಯಾಟ; ಮೊದಲ ದಿನದ ಅಂತ್ಯಕ್ಕೆ ಭರ್ಜರಿ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

WTC Final: ಹೆಡ್, ಸ್ಮಿತ್ ದ್ವಿಶತಕದ ಅಜೇಯ ಜೊತೆಯಾಟ; ಮೊದಲ ದಿನದ ಅಂತ್ಯಕ್ಕೆ ಭರ್ಜರಿ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

Jayaraj HT Kannada

Jun 07, 2023 11:08 PM IST

google News

ಟ್ರಾವಿಸ್‌ ಹೆಡ್‌ ಮತ್ತು ಸ್ಮಿತ್‌ ಜೊತೆಯಾಟ

    • World Test Championship Final: ಟ್ರಾವಿಸ್ ಹೆಡ್  ಮತ್ತು ಸ್ಟೀವ್‌ ಸ್ಮಿತ್‌ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರಿ ಮುನ್ನಡೆ ಕಾಯ್ದುಕೊಂಡಿದೆ.
ಟ್ರಾವಿಸ್‌ ಹೆಡ್‌  ಮತ್ತು ಸ್ಮಿತ್‌ ಜೊತೆಯಾಟ
ಟ್ರಾವಿಸ್‌ ಹೆಡ್‌ ಮತ್ತು ಸ್ಮಿತ್‌ ಜೊತೆಯಾಟ (AP)

ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship final) ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರಿ ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲನೆಯ ದಿನದಾಟ ಅಂತ್ಯವಾಗಿದ್ದು, ಆಸ್ಟ್ರೇಲಿಯಾ ತಂಡವು ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಟ್ರಾವಿಸ್ ಹೆಡ್ (Travis Head) ಮತ್ತು ಸ್ಟೀವ್‌ ಸ್ಮಿತ್‌ (Steve Smith) ಭರ್ಜರಿ ದ್ವಿಶತಕದ ಜೊತೆಯಾಟದ ನೆರವಿನಿಂದ ತಂಡವು ಮುನ್ನಡೆ ಕಾಯ್ದುಕೊಂಡಿದೆ.

ಟಾಸ್‌ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಪ್ರಮುಖ ಬ್ಯಾಟರ್‌ ಉಸ್ಮಾನ್‌ ಖವಾಜಾ ವಿಕೆಟ್‌ ಕಳೆದುಕೊಂಡಿತು. ಒಂದು ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗವು ಕೇವಲ 76 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಸ್ಮಿತ್‌ ಹಾಗೂ ಹೆಡ್ ದ್ವಿಶತಕದ ಜೊತೆಯಾಟದ ನೆರವಿನಿಂದ ಡದ ಮೊತ್ತ ಹೆಚ್ಚಿತು. ಅಂತಿಮವಾಗಿ ಮೊದಲ ದಿನದ ಸ್ಟಂಪ್ಸ್ ವೇಳೆಗೆ ಆಸ್ಟ್ರೇಲಿಯಾವು 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದೆ. ಅಲ್ಲದೆ ಭರ್ಜರಿ ಮೊತ್ತ ಕಲೆ ಹಾಕುವ ಸೂಚನೆ ನೀಡಿದೆ.

ಟ್ರಾವಿಸ್ ಹೆಡ್ ಕೇವಲ 106 ಎಸೆತಗಳ ನೆರವಿನಿಂದ ಶತಕ ಸಿಡಿಸಿದರೆ, ದಿನದಾಟದ ಅಂತ್ಯಕ್ಕೆ ಅಜೇಯ 146 ರನ್ ಸಿಡಿಸಿ ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಸ್ಟೀವ್ ಸ್ಮಿತ್ ಅಜೇಯ 95 ರನ್‌ ಗಳಿಸಿ ಶತಕದ ಸಮೀಪ ಬಂದಿದ್ದಾರೆ. ಇವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ಗೆ ಅಜೇಯ 251 ರನ್‌ ಒಟ್ಟುಗೂಡಿಸಿದ್ದಾರೆ. ಇಬ್ಬರೂ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದು, ಮತ್ತಷ್ಟು ರನ್‌ ಕಲೆ ಹಾಕುವ ವಿಶ್ವಾಸದಲ್ಲಿದ್ದಾರೆ.

ಭಾರತದ ವೇಗಿ ಮೊಹಮ್ಮದ್ ಸಿರಾಜ್, ಉಸ್ಮಾನ್ ಖವಾಜಾ ಅವರ ವಿಕೆಟ್‌ ಅನ್ನು ಬಲು ಬೇಗನೆ ಪಡೆದರು. ಆ ಬಳಿಕ ಒಂದಾದ ಓಪನರ್ ಡೇವಿಡ್ ವಾರ್ನರ್ ಮತ್ತು ಅಗ್ರ ಶ್ರೇಯಾಂಕದ ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಶೆನ್ ಉತ್ತಮ ಪ್ರತಿದಾಳಿ ನಡೆಸಿದರು. ವಾರ್ನರ್‌ 60 ಎಸೆತಗಳಿಂದ 43 ರನ್‌ ಗಳಿಸಿ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಅದಕ್ಕೂ ಮೊದಲು ಅವರು ಲ್ಯಾಬುಶೆನ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 69 ರನ್ ಒಟ್ಟುಗೂಡಿಸಿದರು.

ದಿನದ ಎರಡನೇ ಸೆಷನ್‌ನ ಆರಂಭದಲ್ಲಿಯೇ ವೇಗಿ ಮೊಹಮ್ಮದ್ ಶಮಿ, ನಂಬರ್‌ ವನ್‌ ಟೆಸ್ಟ್‌ ಬ್ಯಾಟರ್ ಲ್ಯಾಬುಶೆನ್ ವಿಕೆಟ್‌ ಪಡೆದರು. 26 ರನ್‌ ಗಳಿಸಿದ್ದ ಅವರು ಕ್ಲೀನ್‌ ಬೌಲ್ಡ್‌ ಆದರು.

ಟ್ರಾವಿಸ್‌ ಹೆಡ್‌ ಆಟಕ್ಕೆ ಭಾರತ ನಾಳೆ ಬ್ರೇಕ್‌ ಹಾಕಬೇಕಿದೆ. ಸದ್ಯ ಕೇವಲ 156 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 146 ರನ್‌ ಗಳಿಸಿರುವ ಅವರು, ನಾಳೆ ಭಾರತಕ್ಕೆ ಮತ್ತಷ್ಟು ಅಪಾಯಕಾರಿಯಾಗುವ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಸ್ಮಿತ್‌ ಕೂಡಾ ಶತಕದ ಅಂಚಿನಲ್ಲಿದ್ದಾರೆ. ಫೈನಲ್‌ ಪಂದ್ಯ ಗೆಲ್ಲಲು ಭಾರತ ನಾಳೆ ಹೊಸ ತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ.

ಭಾರತ ತಂಡದಲ್ಲಿ ನಾಲ್ವರು ವೇಗಿಗಳಿಗೆ ಮಣೆ ಹಾಕಲಾಗಿದ್ದು, ಜಡೇಜಾ ಒಬ್ಬರೇ ಸ್ಪಿನ್ನರ್‌ ಪಾತ್ರ ನಿಭಾಯಿಸಲಿದ್ದಾರೆ. ಅನುಭವಿ ಸ್ಪಿನ್ನರ್ ಅಶ್ವಿನ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಮೊಹಮ್ಮದ್‌ ಶಮಿ, ಸಿರಾಜ್‌, ಉಮೇಶ್ ಯಾದವ್‌ ಹಾಗೂ ಶಾರ್ದುಲ್‌ ಠಾಕೂರ್‌ ತಂಡದಲ್ಲಿದ್ದಾರೆ. ಇದೇ ವೇಳೆ ಶ್ರೀಕರ್‌ ಭರತ್‌ ವಿಕೆಟ್‌ ಕೀಪಿಂಗ್‌ ಮಾಡಲಿದ್ದಾರೆ. ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದಿರುವುದಕ್ಕೆ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತ ಆಡುವ ಬಳಗ

ರೋಹಿತ್ ಶರ್ಮಾ‌ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ಆಡುವ ಬಳಗ

ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೆನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ