ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಜೊತೆಗಿನ ಸಂಬಂಧದ ಕುರಿತು ತುಟಿ ಬಿಚ್ಚಿದ ನೀರಜ್ ಚೋಪ್ರಾ
Published May 15, 2025 11:27 PM IST
ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಜೊತೆಗಿನ ಸಂಬಂಧದ ಕುರಿತು ತುಟಿ ಬಿಚ್ಚಿದ ನೀರಜ್ ಚೋಪ್ರಾ
- ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಜೊತೆಗಿನ ಸಂಬಂಧದ ಕುರಿತು ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ತುಟಿ ಬಿಚ್ಚಿದ್ದಾರೆ.

ಭಾರತ-ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯ ಮಧ್ಯೆ ದೋಹಾದಲ್ಲಿ ಡೈಮಂಡ್ ಲೀಗ್ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಎರಡು ಒಲಿಂಪಿಕ್ಸ್ ವಿಜೇತ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಶುಕ್ರವಾರ (ಮೇ 16) ಋತುವಿನ ಆರಂಭಿಕ ಪ್ರದರ್ಶನಕ್ಕೂ ಮುನ್ನ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಪಾಕಿಸ್ತಾನದ ಒಲಿಂಪಿಕ್ ಚಿನ್ನದ ಪದಕ ವಿಜೇತ ನದೀಮ್ ಜೊತೆಗಿನ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ಭಾರತದ ತಾರೆ ಉತ್ತರಿಸಿದ್ದಾರೆ.
‘ಮೊದಲನೆಯದಾಗಿ ಹೇಳುವುದೇನೆಂದರೆ ನಾನು (ನದೀಮ್ ಅವರೊಂದಿಗೆ) ತುಂಬಾ ಬಲವಾದ ಮತ್ತು ಆಳವಾದ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಲು ನಾನು ನಿಜವಾಗಿಯೂ ಬಯಸುತ್ತೇನೆ’ ಎಂದು ಚೋಪ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಕ್ರೀಡಾಪಟುಗಳಾಗಿ ನಾವು ಮಾತನಾಡಬೇಕು. ಅಥ್ಲೆಟಿಕ್ಸ್ ಸಮುದಾಯದಲ್ಲಿ ಮತ್ತು ಪ್ರಪಂಚದಾದ್ಯಂತದ ಕೆಲವು ಉತ್ತಮ ಸ್ನೇಹಿತರನ್ನು ಹೊಂದಿದ್ದೇನೆ. ಜಾವೆಲಿನ್ ಎಸೆತಗಾರರು ಮಾತ್ರವಲ್ಲ, ಇತರ ಸ್ಪರ್ಧೆಗಳಲ್ಲೂ ಸಹ. ಆದರೆ ಹೌದು, ಯಾರಾದರೂ ನನ್ನೊಂದಿಗೆ ಗೌರವದಿಂದ ಮಾತನಾಡಿದರೆ, ನಾನು ಅವರೊಂದಿಗೆ ಗೌರವದಿಂದ ಮಾತನಾಡುತ್ತೇನೆ ಎಂದು ನೀರಜ್ ಚೋಪ್ರಾ ಹೇಳಿಕೆ ನೀಡಿದ್ದಾರೆ.
ಟೊಕಿಯೊ ಒಲಿಂಪಿಕ್ಸ್ನಿಂದ ಕೇಂದ್ರಬಿಂದು
ಟೊಕಿಯೊ ಒಲಿಂಪಿಕ್ಸ್ನಿಂದ ಚೋಪ್ರಾ ಮತ್ತು ನದೀಮ್ ಇಬ್ಬರೂ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದಾರೆ. ಅಲ್ಲಿ ಚೋಪ್ರಾ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನದ ಪದಕ ವಿಜೇತರಾಗಿ ಇತಿಹಾಸ ನಿರ್ಮಿಸಿದರೆ, ನದೀಮ್ 5ನೇ ಸ್ಥಾನ ಪಡೆದಿದ್ದರು. ನಂತರದ ಪ್ಯಾರಿಸ್ ಕ್ರೀಡಾಕೂಟದಲ್ಲಿ ನದೀಮ್ 92.97 ಮೀಟರ್ ಎಸೆಯುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಟ್ಟರು. ಚೋಪ್ರಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಆಗ ಇಬ್ಬರು ಉತ್ತಮ ಸ್ನೇಹಿತರು ಎಂದು ಹೇಳಿದ್ದ ಹೇಳಿಕೆಗಳು ವೈರಲ್ ಆಗಿದ್ದವು. ಇತ್ತೀಚೆಗೆ ಭಾರತದಲ್ಲಿ ನಡೆಯುವ ಮೊದಲ ಜಾಗತಿಕ ಜಾವೆಲಿನ್ ಕ್ರೀಡಾಕೂಟಕ್ಕೆ ನದೀಮ್ಗೆ ನೀರಜ್ ಆಹ್ವಾನ ನೀಡಿದ್ದರು.
ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆಯ ಹೆಚ್ಚಳವು ಸ್ವಾಭಾವಿಕವಾಗಿ ಎರಡೂ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ. ಚೋಪ್ರಾ ಡೈಮಂಡ್ ಲೀಗ್ ಮತ್ತು ಪೋಲಿಷ್ ಮೀಟ್ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಶೀಘ್ರದಲ್ಲೇ ನದೀಮ್ ವಿರುದ್ಧ ಸ್ಪರ್ಧಿಸುವ ನಿರೀಕ್ಷೆಯಿಲ್ಲ. ಮೇ 24ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಈವೆಂಟ್ ಜರುಗಬೇಕಿತ್ತು. ಇಂಡೋ-ಪಾಕ್ ಯುದ್ಧದ ಕಾರಣ ಅದನ್ನು ಮುಂದೂಡಿಕೆ ಮಾಡಿರುವ ಹಿನ್ನೆಲೆ ಮೇ 23ರಂದು ನಡೆಯುವ 71ನೇ ಯಾನುಷ್ ಕುಸೋಸಿನ್ಸ್ಕಿ ಮೆಮೊರಿಯಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನನ್ನ ಕುಟುಂಟವನ್ನೂ ಎಳೆದು ತಂದರು ಎಂದ ನೀರಜ್
ನೀರಜ್ ಚೋಪ್ರಾ ಕ್ಲಾಸಿಕ್ನಲ್ಲಿ ಸ್ಪರ್ಧಿಸಲು ಅರ್ಷದ್ ನದೀಮ್ ಅವರನ್ನು ಆಹ್ವಾನಿಸುವ ನನ್ನ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮತ್ತು ಅದರಲ್ಲಿ ಹೆಚ್ಚಿನವು ದ್ವೇಷ ಮತ್ತು ನಿಂದನೆಯಾಗಿದೆ ಎಂದು ಚೋಪ್ರಾ ಆಗ ಹೇಳಿದ್ದರು. ಅವರು ನನ್ನ ಕುಟುಂಬವನ್ನೂ ಎಳೆದು ತಂದಿದ್ದರು. ಅರ್ಷದ್ಗೆ ನಾನು ನೀಡಿದ ಆಹ್ವಾನವು ಒಬ್ಬ ಕ್ರೀಡಾಪಟುವು ಎಂಬ ಕಾರಣಕ್ಕಷ್ಟೆ. ಹೆಚ್ಚೇನೂ ಇಲ್ಲ, ಕಡಿಮೆ ಏನೂ ಇಲ್ಲ. ಎನ್ಸಿ ಕ್ಲಾಸಿಕ್ ಗುರಿ ಅತ್ಯುತ್ತಮ ಕ್ರೀಡಾಪಟುಗಳನ್ನು ಭಾರತಕ್ಕೆ ಕರೆತರುವುದು ಮತ್ತು ನಮ್ಮ ದೇಶವು ವಿಶ್ವ ದರ್ಜೆಯ ಕ್ರೀಡಾಕೂಟಗಳ ಮನೆಯಾಗುವುದು ಎಂದು ಹೇಳಿದ್ದಾರೆ.