logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uddhav Thackeray: ಪ್ರಜಾಪ್ರಭುತ್ವದ ಕಗ್ಗೊಲೆ: ಶಿವಸೇನೆ ಹೆಸರು, ಚಿಹ್ನೆ ಕಳೆದುಕೊಂಡ ಉದ್ಧವ್‌ ಠಾಕ್ರೆ ಹೇಳಿದ್ದೇನು?

Uddhav Thackeray: ಪ್ರಜಾಪ್ರಭುತ್ವದ ಕಗ್ಗೊಲೆ: ಶಿವಸೇನೆ ಹೆಸರು, ಚಿಹ್ನೆ ಕಳೆದುಕೊಂಡ ಉದ್ಧವ್‌ ಠಾಕ್ರೆ ಹೇಳಿದ್ದೇನು?

HT Kannada Desk HT Kannada

Feb 18, 2023 08:00 AM IST

google News

ಉದ್ಧವ್‌ ಠಾಕ್ರೆ

    • ಶಿವಸೇನೆ ಪಕ್ಷದ ಮೂಲ ಹೆಸರು ಮತ್ತು ಚಿಹ್ನೆಯನ್ನು ಕಳೆದುಕೊಂಡು ಕೆಂಡಾಮಂಡಲರಾಗಿರುವ ಉದ್ಧವ್‌ ಠಾಕ್ರೆ, ಚುನಾವಣಾ ಆಯೋಗದ ನಿರ್ಧಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ. ಮುಂಬೈನಲ್ಲಿ ಮಾತನಾಡಿದ ಅವರು. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು "ಎಂದಿಗೂ ಬದಲಾಗದ ದ್ರೋಹಿ" ಎಂದು ಕರೆದಿದ್ದಾರೆ.
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ (PTI)

ಮುಂಬೈ: ಶಿವಸೇನೆ ಪಕ್ಷದ ಮೂಲ ಹೆಸರು ಮತ್ತು ಚಿಹ್ನೆಯನ್ನು ಕಳೆದುಕೊಂಡು ಕೆಂಡಾಮಂಡಲರಾಗಿರುವ ಉದ್ಧವ್‌ ಠಾಕ್ರೆ, ಚುನಾವಣಾ ಆಯೋಗದ ನಿರ್ಧಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ. ಮುಂಬೈನಲ್ಲಿ ಮಾತನಾಡಿದ ಅವರು. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು "ಎಂದಿಗೂ ಬದಲಾಗದ ದ್ರೋಹಿ" ಎಂದು ಕರೆದಿದ್ದಾರೆ.

ಶಿವಸೇನೆ ಪಕ್ಷದ ಮೂಲ ಹೆಸರು ಮತ್ತು ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತನ್ನು, ಏಕನಾಥ್‌ ಶಿಂಧೆ ಬಣಕ್ಕೆ ನೀಡಿ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ. ಈ ಮೂಲಕ ನೈಜ ಶಿವಸೇನೆ ಎಂಬ ಹಣೆಪಟ್ಟಿಗಾಗಿ ಸುದೀರ್ಘ ಹೋರಾಟ ನಡೆಸುತ್ತಿದ್ದ ಶಿಂಧೆ ಬಣಕ್ಕೆ ಜಯವಾಗಿದೆ. ಆದರೆ ಚುನಾವಣಾ ಆಯೋಗದ ಈ ನಿರ್ಧಾರವನ್ನು ಉದ್ಧವ್‌ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ.

"ಅವರು ಅಕ್ರಮ ಮಾರ್ಗದ ಮೂಲಕ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ಕದ್ದಿದ್ದಾರೆ. ಆದರೆ ನಾವು ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ನೈಜ ಶಿವಸೈನಿಕ ಯಾರು ಎಂಬುದು ಮಹಾರಾಷ್ಟ್ರದ ಜನತೆಗೆ ಗೊತ್ತಿದೆ. ಸದ್ಯಕ್ಕೆ ಏಕನಾಥ್ ಶಿಂಧೆ ಅವರು ತಮ್ಮ ಕಳ್ಳತನದಿಂದ ಸಂತೋಷವಾಗಿರಲಿ. ಆದರೆ ಒಮ್ಮೆ ದ್ರೋಹಿ ಎಂಬ ಹಣೆಪಟ್ಟಿ ಹೊತ್ತವನು ಯಾವಾಗಲೂ ದ್ರೋಹಿಯಾಗಿಯೇ ಇರುತ್ತಾನೆ.." ಎಂದು ಉದ್ಧವ್‌ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿರುವ ಉದ್ಧವ್‌ ಠಾಕ್ರೆ, ಇದು ಒತ್ತಡದಲ್ಲಿ ಕೈಗೊಂಡ ನಿರ್ಧಾರ ಎಂದು ಆರೋಪಿಸಿದ್ದಾರೆ. ಶಿವಸೇನೆಯ ನೈಜ ಬಣದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಳ್ಳುವ ಮೂಲಕ, ಚುನಾವಣಾ ಆಯೋಗವು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂಧು ಉದ್ಧವ್‌ ಠಾಕ್ರೆ ಗುಡುಗಿದ್ದಾರೆ.

"ಕೆಂಪು ಕೋಟೆಯಿಂದ ಪ್ರಜಾಪ್ರಭುತ್ವ ಸತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಬೇಕು.." ಎಂದು ಒತ್ತಾಯಿಸಿರುವ ಉದ್ಧವ್‌ ಠಾಕ್ರೆ, ಕೇವಲ ಅಧಿಕಾರಕ್ಕಾಗಿ ಭಾಳ್‌ ಸಾಹೇಬ್‌ ಠಾಕ್ರೆ ಅವರ ಸಿದ್ಧಾಂತಕ್ಕೆ ಮೋಸ ಮಾಡಿದ ಏಕನಾಥ್‌ ಶಿಂಧೆ ಅವರಿಗೆ ಮಹಾರಾಷ್ಟ್ರದ ಜನತೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷ ಬಂಡಾಯವೆದ್ದ 16 ಶಿವಸೇನಾ ಶಾಸಕರನ್ನು ಅನರ್ಹಗೊಳಿಸುವಂತೆ ನಾವು ಮಾಡಿರುವ ಮನವಿಯ ಬಗ್ಗೆ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಆದರೂ ಪಕ್ಷದ ಮೂಲ ಹೆಸರು ಮತ್ತು ಚಿಹ್ನೆಯನ್ನು ಏಕನಾಥ್‌ ಶಿಂಧೆ ಬಣಕ್ಕೆ ನೀಡುವ ಚುನಾವಣಾ ಆಯೋಗದ ನಿರ್ಧಾರ ಅನ್ಯಾಯದಿಂದ ಕೂಡಿದೆ ಎಂದು ಉದ್ಧವ್‌ ಠಾಕ್ರೆ ದೂರಿದರು.

"ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಈ ಕುರಿತು ಕಾಯುವಂತೆ ನಾನು ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡಿಕೊಂಡಿದ್ದೆ. ಅದರೆ ಚುನಾವಣಾ ಆಯೋಗದ ಈ ನಿರ್ಧಾರ ಅತ್ಯಂತ ದುರದೃಷ್ಟಕರ. ಭವಿಷ್ಯದಲ್ಲಿ, ಯಾರಾದರೂ ಶಾಸಕರು ಅಥವಾ ಸಂಸದರನ್ನು ಖರೀದಿಸಬಹುದು ಮತ್ತು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಬಹುದು.." ಎಂದು ಉದ್ಧವ್‌ ಠಾಕ್ರೆ ಹರಿಹಾಯ್ದರು.

ಈ ಮಧ್ಯೆ ತಮ್ಮ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರವನ್ನು, ಸತ್ಯ ಮತ್ತು ಜನರ ವಿಜಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕರೆದಿದ್ದಾರೆ. "ಇದು ಸತ್ಯ ಮತ್ತು ಜನರ ಗೆಲುವು ಮತ್ತು ಭಾಳ್‌ ಸಾಹೇಬ್ ಠಾಕ್ರೆ ಅವರ ಆಶೀರ್ವಾದ. ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ.." ಎಂದು ಶಿಂಧೆ ಹೇಳಿದ್ದಾರೆ.

ಏಕನಾಥ್ ಶಿಂಧೆ ತಂಡವು ಶಿವಸೇನೆ ಮತ್ತು ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ಇರಿಸಬಹುದು. ಹಾಗೆಯೇ ಉದ್ಧವ್ ಠಾಕ್ರೆ ಬಣವು "ಶಿವಸೇನೆ ಉದ್ಧವ್ ಭಾಳ್ ಸಾಹೇಬ್ ಠಾಕ್ರೆ" ಮತ್ತು "ಜ್ವಲಂತ ಜ್ಯೋತಿ" ಎಂಬ ಹೆಸರನ್ನು‌ ಇಟ್ಟುಕೊಳ್ಳಬಹುದು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ