ಫಾರ್ಮುಲಾ ವನ್ ಡ್ರೈವರ್ ಕದ್ದಿದ್ದ ಫೆರಾರಿ ಕಾರು 28 ವರ್ಷಗಳ ಬಳಿಕ ಪತ್ತೆ; ಅತಿ ವೇಗದ ಫೆರಾರಿ ಇಷ್ಟು ದುಬಾರಿ!
Mar 06, 2024 06:26 PM IST
ಫಾರ್ಮುಲಾ ವನ್ ಡ್ರೈವರ್ ಕದ್ದಿದ್ದ ಫೆರಾರಿ ಕಾರು 28 ವರ್ಷಗಳ ಬಳಿಕ ಪತ್ತೆ
- 1995ರ ಏಪ್ರಿಲ್ ತಿಂಗಳಲ್ಲಿ ಇಟಲಿಯಲ್ಲಿ ಕಳ್ಳತನವಾಗಿದ್ದ ಕೆಂಪು ಬಣ್ಣದ ಫೆರಾರಿ ಎಫ್ 512 ಎಂ ಕಾರು ಬರೋಬ್ಬರಿ 28 ವರ್ಷಗಳ ಬಳಿಕ ಪತ್ತೆಯಾಗಿದೆ. ಇದನ್ನು ಕದ್ದವರು ಯಾರು? ಹಾಗೂ ಈ ಕಾರಿನ ಬೆಲೆ ಎಷ್ಟು ಎಂಬುದನ್ನು ನೋಡಿ.
ಕಳ್ಳರಿಗೆ ಘನತೆ, ಗೌರವ ಯಾವುದೂ ಇರುವುದಿಲ್ಲ. ಅಡಿಕೆ ಕದ್ದರೂ ಕಳ್ಳನೇ, ಆನೆ ಕದ್ದರೂ ಕಳ್ಳನೇ ಎನ್ನುವ ಮಾತಿದೆ. ಇನ್ನು ದುಬಾರಿ ಫೆರಾರಿ ಕಾರು ಕದ್ದಾತನನ್ನು ಖತರ್ನಾಕ್ ಕಳ್ಳ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಕಳ್ಳತನವನ್ನೇ ಬದುಕಾಗಿಸಿಕೊಂಡಾತ ಕದ್ದರೆ ಒಂದು ಲೆಕ್ಕ ಬೇರೆ. ಆದರೆ, ಈ ಫೆರಾರಿ ಕಾರು ಕದ್ದಾತ ಮಾಜಿ ಫಾರ್ಮ್ಯುಲಾ ವನ್ ಡ್ರೈವರ್ ಅನ್ನೋದೆ ಸದ್ಯದ ಅಚ್ಚರಿ. ಇಷ್ಟಕ್ಕೆ ಈ ಪ್ರಕರಣ ಮುಗಿದಿಲ್ಲ. ಈ ಕಳ್ಳತನವು ಬರೋಬ್ಬರಿ 28 ವರ್ಷಗಳ ಹಿಂದೆಯೇ ನಡೆದಿದೆ. ಆದರೆ ಅದು ಪತ್ತೆಯಾಗಿದ್ದು ಮಾತ್ರ ಇತ್ತೀಚೆಗೆ. ಹೀಗಾಗಿ ಈ ಫೆರಾರಿ ಕಾರು ಕಳ್ಳತನ ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.
ಫೆರಾರಿ ಕಂಪನಿಯ ಅತಿ ವೇಗದ ಕಾರು, ಬಹಳ ನಿಧಾನವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು ಮೂರು ದಶಕಗಳ ಹಿಂದೆ ಆಸ್ಟ್ರಿಯಾದ ಫಾರ್ಮುಲಾ ವನ್ ಚಾಲಕ ಗೆರ್ಹಾರ್ಡ್ ಬರ್ಗರ್, ಇಟಲಿಯಲ್ಲಿ ಕದ್ದ ಫೆರಾರಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಪೊಲೀಸರು ಮಾರ್ಚ್ 04ರ ಸೋಮವಾರ ತಿಳಿಸಿದ್ದಾರೆ.
1995ರ ಏಪ್ರಿಲ್‌ನಲ್ಲಿ ಇಟಲಿಯ ಇಮೋಲಾ ನಗರದಲ್ಲಿ ನಡೆದ ಸ್ಯಾನ್ ಮರಿನೊ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮ್ಯುಲಾ ವನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಎರಡು ಸ್ಪೋರ್ಟ್ಸ್ ಕಾರುಗಳಲ್ಲಿ ಕೆಂಪು ಬಣ್ಣದ ಫೆರಾರಿ ಎಫ್ 512 ಎಂ (Ferrari F512M) ಕೂಡಾ ಒಂದು. ಎರಡೂ ಕಾರುಗಳು ಕಳ್ಳತನವಾಗಿದೆ. ಇದರಲ್ಲಿ ಫೆರಾರಿ ಕಾರು ಪತ್ತೆಯಾಗಿದೆ.
ಇದನ್ನೂ ಓದಿ | ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್; ದೇಶಕ್ಕೆ ಅತ್ಯಂತ ಮುಜುಗರದ ಸಂಗತಿ ಎಂದ ಪಾಕ್
ಈ ಕಾರನ್ನು ಯುಕೆ ಬ್ರೋಕರ್ ಒಬ್ಬಾತ ಯುಎಸ್‌ನ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಮಾರಾಟ ಪ್ರಕ್ರಿಯೆಯಲ್ಲಿ ಫೆರಾರಿಯನ್ನು ಕದ್ದ ವಾಹನವೆಂದು ದಾಖಲು ಮಾಡಲಾಗಿದೆ. ಈ ಬಗ್ಗೆ ಕಳೆದ ಜನವರಿ ತಿಂಗಳಲ್ಲಿ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಪಡೆಗೆ ಕಾರು ತಯಾರಿಕಾ ಕಂಪನಿ ಸುಳಿವು ನೀಡಿದೆ. ಆವರೆಗೂ ಪೊಲೀಸರಿಗಾಗಲೀ, ಅಥವಾ ಕಂಪನಿಗಾಗಲಿ ಕಾರಿನ ಬಗ್ಗೆ ಸುಳಿವೇ ಸಿಕ್ಕಿರಲಿಲ್ಲ.
ಲಂಡನ್‌ನ್ ಸಂಘಟಿತ ವಾಹನ ಅಪರಾಧ ಘಟಕವು ಪ್ರಕರಣ ಸಂಬಂಧ ತನಿಖೆ ನಡೆಸಿ ಕಾರಿನ ಕುರಿತು ಮಾಹಿತಿ ಕಲೆ ಹಾಕಿದೆ. ಈ ಕಾರು 2023ರ ಕೊನೆಯಲ್ಲಿ ಜಪಾನ್‌ನಿಂದ ಬ್ರಿಟನ್‌ಗೆ ತರಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಅಧಿಕಾರಿಗಳು ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಈ ಕಾರಿನೊಂದಿಗೆ ಕಳ್ಳತನವಾದ ಎರಡನೇ ಕಾರು ಇನ್ನೂ ಪತ್ತೆಯಾಗಿಲ್ಲ.
3.68 ಕೋಟಿ ಬೆಲೆಯ ವೇಗದ ಕಾರು
ಕದ್ದ ಕಾರಿನ ಮೌಲ್ಯ ಸುಮಾರು 350,000 ಪೌಂಡ್ (444,000 ಡಾಲರ್) ಎಂದು ಲಂಡನ್‌ನ ಅಧಿಕಾರಿಗಳು ಹೇಳಿದ್ದಾರೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 3.68 ಕೋಟಿ ರೂಪಾಯಿ.
ಫೆರಾರಿ ಕಂಪನಿಯು 1994ರಿಂದ 1996ರವರೆಗೆ ಎಫ್ 512 ಎಂ ಮಾದರಿಯ 501 ಕಾರನ್ನು ತಯಾರಿಸಿತು. ಈ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 315 ಕಿಲೋಮೀಟರ್ ಆಗಿದೆ. ಹೀಗಾಗಿ ಇದರ ಬೆಲೆ ಕೂಡಾ ದುಬಾರಿಯಾಗಿದೆ.
ಇದನ್ನೂ ಓದಿ | ಫುಟ್ಬಾಲ್ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)