Lionel Messi: ಭಾರತದ ಎದುರು ಮಿಸ್ಸಾಯ್ತು ಮೆಸ್ಸಿ ಆಟ; ಅರ್ಜಿಂಟೀನಾ ಎದುರು ಫ್ರೆಂಡ್ಲಿ ಮ್ಯಾಚ್ ತಿರಸ್ಕರಿಸಿದ ಇಂಡಿಯಾ ಫುಟ್ಬಾಲ್ ಫೆಡರೇಷನ್
Jun 21, 2023 05:04 PM IST
ಅರ್ಜಿಂಟೀನಾ ವಿರುದ್ಧ ಫ್ರೆಂಡ್ಲಿ ಮ್ಯಾಚ್ ತಿರಸ್ಕರಿಸದ ಇಂಡಿಯಾ ಫುಟ್ಬಾಲ್ ಫೆಡರೇಷನ್
- Lionel Messi: ಲಿಯೋನೆಲ್ ಮೆಸ್ಸಿ ಅವರ ಅರ್ಜೆಂಟೀನಾ ತಂಡವನ್ನು ಸೌಹಾರ್ದಯುತವಾಗಿ ಸ್ವಾಗತಿಸುವ ಅವಕಾಶವನ್ನು ಭಾರತ ತಿರಸ್ಕರಿಸಿದೆ. ಭಾರಿ ಹಣದ ಅವಶ್ಯಕತೆ ಇರುವ ಕಾರಣ, ಈ ಮನವಿಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿದೆ.
ವಿಶ್ವ ಶ್ರೇಷ್ಠ ಪುಟ್ಬಾಲ್ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ (Argentina Captain Lionel Messi) ವಿರುದ್ಧದ ಆಟದಿಂದ ಭಾರತ ಫುಟ್ಬಾಲ್ ತಂಡವು (India Football Team), ವಂಚಿತವಾಗಿದೆ. ಭಾರತ ಫುಟ್ಬಾಲ್ ತಂಡದ ಎದುರು, ಭಾರತದಲ್ಲಿ ಅರ್ಜೆಂಟೀನಾ ತಂಡವು, ಸ್ನೇಹ ಪೂರ್ವಕ ಪಂದ್ಯವನ್ನು ಆಡಲು ಬಯಸಿತ್ತು. ಆದರೆ ಈ ಪ್ರಸ್ತಾಪವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (All India Football Federation) ತಿರಸ್ಕರಿಸಿದೆ. ಭಾರಿ ಹಣದ ಅವಶ್ಯಕತೆ ಇರುವ ಕಾರಣ ಈ ಮನವಿಯನ್ನು ತಿರಸ್ಕರಿಸಿದೆ.
ಫ್ರೆಂಡ್ಲಿ ಮ್ಯಾಚ್ ತಿರಸ್ಕಾರ
ಲಿಯೊನೆಲ್ ಮೆಸ್ಸಿ ನೇತೃತ್ವದ ತಂಡವು, ಸುನಿಲ್ ಛೆಟ್ರಿ (Sunil Chhetri) ನೇತೃತ್ವದ ಭಾರತ ತಂಡದೊಂದಿಗೆ ಸ್ನೇಹಪೂರ್ವಕ ಪಂದ್ಯವನ್ನಾಡಲು ಮನವಿ ಮಾಡಿತ್ತು. ಆದರೆ, ಉಭಯ ತಂಡಗಳ ಪಂದ್ಯದ ಆಯೋಜನೆಗೆ, ಭಾರಿ ಹಣದ ಅವಶ್ಯಕತೆ ಎದುರಾಗುತ್ತದೆ. ಇದೇ ಕಾರಣಕ್ಕೆ ಈ ಪಂದ್ಯವನ್ನು ತಿರಸ್ಕರಿಸಿರುವುದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ವ್ಯವಸ್ಥಾಪಕ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ಬೃಹತ್ ಮೊತ್ತ ಬೇಕು
ಅರ್ಜೆಂಟೀನಾ ತಂಡದ ಪ್ರಸ್ತಾಪ ಒಪ್ಪಿಕೊಂಡರೆ, ಭಾರತಕ್ಕೆ ದೊಡ್ಡ ಮೊತ್ತದ ಪ್ರಾಯೋಜಕತ್ವದ ಅವಶ್ಯಕತೆ ಇದೆ. ದುರಾದೃಷ್ಟವಶಾತ್ ನಮಗೆ ಈ ಸ್ನೇಹಪೂರ್ವಕ ಪಂದ್ಯವನ್ನಾಡಿಸಲು ಸಾಧ್ಯವಾಗುತ್ತಿಲ್ಲ. ಅರ್ಜೆಂಟೀನಾ ಫುಟ್ಬಾಲ್ ಒಕ್ಕೂಟವು ಭಾರತದಲ್ಲಿ ಒಂದು ಸ್ನೇಹಾರ್ಥ ಪಂದ್ಯ ಆಡಿಸಲು ಭಾರತ ಫುಟ್ಬಾಲ್ ಫೆಡರೇಷನ್ಗೆ ಕೇಳಿದೆ. ಆದರೆ, ಈ ಪಂದ್ಯಕ್ಕೆ ಖರ್ಚಾಗುವ ಬೃಹತ್ ಮೊತ್ತವನ್ನು ಹೊಂದಿಸುವುದು ಭಾರಿ ಕಷ್ಟ. ಇದಕ್ಕೆ ಈ ಬಾರಿ ಸಾಧ್ಯವಾಗುತ್ತಿಲ್ಲ ಎಂದು ಪ್ರಭಾಕರನ್ ವಿವರಿಸಿದ್ದಾರೆ.
40 ಕೋಟಿ ಬೇಕಾಗಬಹುದು
ಉಭಯ ತಂಡಗಳ ನಡುವಿನ ದೊಡ್ಡ ಪಂದ್ಯ ಆಯೋಜಿಸಬೇಕೆಂದರೆ, ಕನಿಷ್ಠ ಎಂದರೂ 40 ಕೋಟಿ ಅಗತ್ಯ ಇದೆ. ಅದಕ್ಕೆ ತಕ್ಕಂತೆ ಪ್ರಾಯೋಜಕತ್ವ ಸಿಗಲ್ಲ. ಅರ್ಜೆಂಟೀನಾ ತಂಡವು ನಿರೀಕ್ಷಿಸಿದಷ್ಟು ಹಣವನ್ನು ಕಾಲಕ್ಕೆ ತಕ್ಕಂತೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ಫುಟ್ಬಾಲ್ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಪ್ರಭಾಕರನ್ ಹೇಳಿದ್ದಾರೆ. ಅರ್ಜೆಂಟೀನಾ ತಂಡವು $ 4-5 ಮಿಲಿಯನ್ (32 ರಿಂದ 40 ಕೋಟಿ) ನಿರೀಕ್ಷಿಸಿದೆ.
ಬಾಂಗ್ಲಾದೇಶವೂ ತಿರಸ್ಕಾರ
ಮೂಲಗಳ ಪ್ರಕಾರ ಅರ್ಜೆಂಟೀನಾ ಈ ತಿಂಗಳು ಜೂನ್ 12 ಮತ್ತು ಜೂನ್ 20ರ ನಡುವೆ ಎರಡು ಸೌಹಾರ್ದ ಪಂದ್ಯಗಳಿಗೆ ಸ್ಲಾಟ್‌ಗಳನ್ನು ಹೊಂದಿತ್ತು. ಭಾರತ ಮತ್ತು ಬಾಂಗ್ಲಾದೇಶದ ತಂಡದ ಎದುರು ಫ್ರೆಂಡ್ಲಿ ಮ್ಯಾಚ್ ಆಡಲು ಬಯಿಸಿತ್ತು. ಭಾರತದ ಜೊತೆಗೆ ಬಾಂಗ್ಲಾದೇಶ ತಂಡವು ನಿರಾಕರಿಸಿದೆ. ಹಾಗಾಗಿ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ ಎದುರು ಸ್ನೇಹಾರ್ಥ ಪಂದ್ಯವನ್ನು ಹಾಲಿ ಚಾಂಪಿಯನ್ ಅರ್ಜೆಂಟೀನಾ ಆಡಿದೆ.
ಅಭಿಮಾನಿಗಳಿಗೆ ಭಾರೀ ನಿರಾಸೆ
ಇದರೊಂದಿಗೆ ಭಾರತದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಭಾರತದಲ್ಲಿ ಭಾರತದ ವಿರುದ್ಧ ಲೆಜೆಂಡರಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕಾಲ್ಚೆಂಡಿನ ಆಟವನ್ನು ಕಣ್ತುಂಬಿಕೊಳ್ಳಬೇಕೆನ್ನುವ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ. ಉಭಯ ತಂಡಗಳ ಶ್ರೇಯಾಂಕ ಗಮಿಸಿದರೆ, ಅರ್ಜೆಂಟೀನಾ ವಿಶ್ವ ನಂ. 1 ಸ್ಥಾನದಲ್ಲಿದೆ. ಪ್ರಸ್ತುತ ಫಿಫಾ ಶ್ರೇಯಾಂಕದಲ್ಲಿ ಭಾರತ 98ನೇ ಸ್ಥಾನದಲ್ಲಿದೆ.
ಫಿಫಾ ವಿಶ್ವಕಪ್ ಚಾಂಪಿಯನ್
2022ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಮೂಲಕ ವಿಶ್ವಕಪ್ ಗೆಲ್ಲಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದರು.
2026ರ ವಿಶ್ವಕಪ್ ಆಡಲ್ಲ
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ, ಮುಂಬರುವ ಅಂದರೆ 2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್ನಲ್ಲಿ (2026 FIFA Football World Cup) ತಾನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೋಟ್ಯಂತರ ಅವರ ಅಭಿಮಾನಿಗಳಿಗೆ ಕಾಲ್ಚೆಂಡಿನ ಮಾಂತ್ರಿಕ ಮೆಸ್ಸಿ ಆಘಾತ ನೀಡಿದ್ದಾರೆ.