ISL 2023: ಉದ್ಘಾಟನಾ ಪಂದ್ಯದಲ್ಲೇ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮುಗ್ಗರಿಸಿದ ಬೆಂಗಳೂರು ಎಫ್‌ಸಿ
Sep 21, 2023 11:52 PM IST
ಕೇರಳ ಬ್ಲಾಸ್ಟರ್ಸ್ ವಿರುದ್ಧ ಮುಗ್ಗರಿಸಿದ ಬೆಂಗಳೂರು ಎಫ್‌ಸಿ.
- Bengaluru FC vs Kerala Blasters: ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎದುರು ಬೆಂಗಳೂರು ಎಫ್‌ಸಿ ಸೋಲಿಗೆ ಶರಣಾಗಿದೆ.
ಕೊಚ್ಚಿ: 10ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ನ (ISL 2023) ಉದ್ಘಾಟನಾ ಪಂದ್ಯದಲ್ಲಿ ಸುನಿಲ್ ಛೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಳೂರು ಎಫ್‌ಸಿ, ಕೇರಳ ಬ್ಲಾಸ್ಟರ್ಸ್ ಎಫ್‌ಸಿ (Bengaluru FC vs Kerala Blasters) ವಿರುದ್ಧ ಶರಣಾಗಿದೆ. ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ 1-2 ಗೋಲುಗಳ ಅಂತರದಿಂದ ಸೋಲಿನೊಂದಿಗೆ ಪ್ರಸಕ್ತ ಸಾಲಿನ ಅಭಿಯಾನ ಆರಂಭಿಸಿತು. ಕೊಚ್ಚಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಿತು.
ಕೇರಳ ಬ್ಲಾಸ್ಟರ್ಸ್, ದ್ವಿತಿಯಾರ್ಧದಲ್ಲಿ 2 ಗೋಲು ಸಿಡಿಸಿತು. 52 ಹಾಗೂ 70ನೇ ನಿಮಿಷದಲ್ಲಿ ಗೋಲು ರಕ್ಷಣೆಯಲ್ಲಿ ವಿಫಲಗೊಂಡ ಬೆಂಗಳೂರಿಗೆ ದ್ವಿತೀಯಾರ್ಧದ ಬದಲಿ ಆಟಗಾರನಾಗಿ ಕಣಕ್ಕಿಳಿದ ಕರ್ಟಿಸ್ ಮೈನ್ 90ನೇ ನಿಮಿಷದಲ್ಲಿ ತಡವಾಗಿ ಗೋಲು ಗಳಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಸಿಡಿಸಿದ ಈ ಗೋಲು ಬೆಂಗಳೂರು ಗೆಲುವಿಗೆ ಯಾವುದೇ ಪ್ರಯೋಜನವಾಗಲಿಲ್ಲ.
ಬೆಂಗಳೂರು ತಂಡದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅವಕಾಶ ಪಡೆದರು. ಸ್ಲಾವ್ಕೊ ಡ್ಯಾಮ್ಜಾನೋವಿಕ್, ಜೆಸ್ಸೆಲ್ ಕಾರ್ನೆರೊ, ಕೆಜಿಯಾ ವೀಂಡಾರ್ಪ್, ರಿಯಾನ್ ವಿಲಿಯಮ್ಸ್ ಪರ ಚೊಚ್ಚಲ ಕರೆ ಪಡೆದರು. ರಾಷ್ಟ್ರೀಯ ಕರ್ತವ್ಯಕ್ಕೆ ಏಷ್ಯನ್ ಗೇಮ್ಸ್ಗೆ ತೆರಳಿರುವ ಸುನಿಲ್ ಛೆಟ್ರಿ ಅಲಭ್ಯತೆಯಲ್ಲಿ ಗುರುಪ್ರೀತ್ ಸಿಂಗ್ ಸಂಧು ತಂಡ ಮುನ್ನಡೆಸಿದರು.
ಉಭಯ ತಂಡಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಮೊದಲಾರ್ಧ ಗೋಲು ಇಲ್ಲದೆ ಸಮಾಪ್ತಿಗೊಂಡಿತು. 35ನೇ ನಿಮಿಷಯದಲ್ಲಿ ಬೆಂಗಳೂರು ಪರ ನವೊರೆಮ್ ರೋಷನ್ ಸಿಂಗ್ ಗೋಲು ಗಳಿಸುವ ಅವಕಾಶ ಪಡೆದರು. ಆದರೆ ಅದು, ಸಾಧ್ಯವಾಗಿಲ್ಲ. ಕೇರಳದ ಗೋಲ್‌ಕೀಪರ್ ಅದನ್ನು ಕಾರ್ನರ್‌ಗೆ ತಿರುಗಿಸುವಲ್ಲಿ ಯಶಸ್ವಿಯಾದರು. ದ್ವಿತೀಯಾರ್ಧದ ಆರಂಭವು ಕೇರಳ ತಂಡಕ್ಕೆ ದೊಡ್ಡ ತಿರುವು ತಂದುಕೊಟ್ಟಿತು.
ಪೆಪ್ರಾಹ್ 52ನೇ ನಿಮಿಷದಲ್ಲಿ ಗೋಲಿನ ಸಮೀಪಕ್ಕೆ ಬಂದರು. ಆಗ ಗುರ್‌ಪ್ರೀತ್ ಚೆಂಡನ್ನು ಮುಷ್ಟಿಯಿಂದ ಹೊರ ಹಾಕುವಲ್ಲಿ ಯಶಸ್ವಿಯಾದರು. ಆದರೆ, ಅದೇ ನಿಮಿಷದಲ್ಲಿ ವೀಂಡಾರ್ಪ್ ಅವರ ತಲೆಯ ಮೂಲಕ ಕಿಕ್ ಮಾಡುವ ಮೂಲಕ ಬಲೆಗೆ ಗೋಲು ಕೆಡವಿದರು. ಅಲ್ಲದೆ, ಕೇರಳ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬೆಂಗಳೂರು ತನ್ನ ಹಿನ್ನಡೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದರೆ, ಅತ್ತ ಕೇರಳ 70ನೇ ನಿಮಿಷದಲ್ಲಿ ತನ್ನ ಚೆಂಡನ್ನು ಖಾಲಿ ನೆಟ್ಗೆ ಚೆಂಡನ್ನು ಉರುಳಿಸುವ ಮೂಲಕ 2-0 ಮುನ್ನಡೆ ತಂದುಕೊಟ್ಟರು.
ಪುನರಾಗಮನ ಮಾಡಲು ಕೊನೆಯರೆಗೂ ಹೋರಾಡಿದ ಬೆಂಗಳೂರು, ಪಂದ್ಯದ ಕೊನೆಯ 90ನೇ ನಿಮಿಷದಲ್ಲಿ ಗೋಲು ಗಳಿಸಿ ಯಶಸ್ಸು ತಂದುಕೊಟ್ಟಿತು. ಆದರೆ ಆ ಗೋಲಿನಿಂದ ಕೇರಳ ತಂಡವನ್ನು ಮಣಿಸಲು ಸಾಧ್ಯವಾಗಿಲ್ಲ. ಆದರೆ ಸೋಲಿಗೆ ರಕ್ಷಣಾತ್ಮಕ ಆಟದ ಕೊರತೆ ಕಂಡಿದ್ದು ಒಂದು ಕಾರಣ. ಅಲ್ಲದೆ, ನಾಯಕ ಸುನಿಲ್ ಛೆಟ್ರಿ ಅಲಭ್ಯತೆಯೂ ಒಂದು ಕಾರಣ ಇದೆ.