logo
ಕನ್ನಡ ಸುದ್ದಿ  /  ಕ್ರೀಡೆ  /  Indian Football Team: ಒಡಿಶಾ ರೈಲು ದುರಂತದ ಸಂತ್ರಸ್ತ ಕುಟುಂಬಗಳಿಗೆ 20 ಲಕ್ಷ ರೂ ದೇಣಿಗೆ ನೀಡಿದ ಭಾರತ ಫುಟ್ಬಾಲ್ ತಂಡ

Indian football Team: ಒಡಿಶಾ ರೈಲು ದುರಂತದ ಸಂತ್ರಸ್ತ ಕುಟುಂಬಗಳಿಗೆ 20 ಲಕ್ಷ ರೂ ದೇಣಿಗೆ ನೀಡಿದ ಭಾರತ ಫುಟ್ಬಾಲ್ ತಂಡ

Jayaraj HT Kannada

Jan 09, 2024 08:11 PM IST

google News

ಸುನಿಲ್‌ ಛೆಟ್ರಿ

    • Odisha Train Accident : ಭಾರತ ಫುಟ್‌ಬಾಲ್ ತಂಡವು ಇಂಟರ್‌ಕಾಂಟಿನೆಂಟಲ್ ಕಪ್ ನಗದು ಬಹುಮಾನದ 20 ಲಕ್ಷ ರೂಪಾಯಿಗಳನ್ನು ಬಾಲಸೋರ್ ರೈಲು ದುರಂತದ ಸಂತ್ರಸ್ತರ ಕುಟುಂಬಗಳಿಗೆ ದೇಣಿಗೆ ನೀಡಲಿದೆ.
ಸುನಿಲ್‌ ಛೆಟ್ರಿ
ಸುನಿಲ್‌ ಛೆಟ್ರಿ (Twitter)

ಇಂಟರ್‌ಕಾಂಟಿನೆಂಟಲ್ ಕಪ್ (Intercontinental Cup) ಗೆದ್ದು ಭಾರತ ಫುಟ್ಬಾಲ್‌ ತಂಡ (The Indian football team) ಸಂಭ್ರಮಿಸಿದೆ. ಈ ನಡುವೆ, ಫುಟ್ವಾಲ್‌ ತಂಡ ಮತ್ತೊಂದು ಕಾರಣಕ್ಕೆ ಭಾರತೀಯರ ಮನಗೆದ್ದಿದೆ. ಚಾಂಪಿಯನ್‌ ಪಟ್ಟ ಪಡೆದು ಕೈಗೆ ಸಿಕ್ಕಿದ ನಗದು ಪ್ರಶಸ್ತಿಯ ಒಂದು ಭಾಗವನ್ನು ಒಡಿಶಾ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ಅಪಘಾತದಿಂದ (Odisha Train Accident) ಸಂತ್ರಸ್ತರಾದ ಕುಟುಂಬಗಳ "ಪರಿಹಾರ ಮತ್ತು ಪುನರ್ವಸತಿ" ಕಾರ್ಯಕ್ಕಾಗಿ ದಾನ ಮಾಡಲು ಭಾರತೀಯ ಫುಟ್‌ಬಾಲ್ ತಂಡ ನಿರ್ಧರಿಸಿದೆ. ಇದು ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.

ಭಾನುವಾರ ಒಡಿಶಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 2-0 ಗೋಲುಗಳಿಂದ ಲೆಬನಾನ್ ತಂಡವನ್ನು ಸೋಲಿಸಿತು. ಆ ಮೂಲಕ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಆ ಬಳಿಕ ಫುಟ್ಬಾಲ್‌ ತಂಡವು ಈ ಉದಾರ ನಿರ್ಧಾರ ಕೈಗೊಂಡಿದೆ.

ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು. ಈ ಮೊತ್ತದ 20 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಲು ಸಾಮೂಹಿಕ ನಿರ್ಧಾರಕ್ಕೆ ತಂಡ ಬಂದಿದೆ.

“ಗೆಲುವಿಗೆ ಬಹುಮಾನವಾಗಿ ನಗದು ಬೋನಸ್ ನೀಡುತ್ತಿರುವುದಕ್ಕೆ ಒಡಿಶಾ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವೆಲ್ಲರೂ ತ್ವರಿತ ಮತ್ತು ಸಾಮೂಹಿಕ ನಿರ್ಧಾರವೊಂದಕ್ಕೆ ಬಂದಿದ್ದೇವೆ. ಈ ಮೊತ್ತದಲ್ಲಿ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಈ ಹಣವನ್ನು ನೀಡಲಾಗುತ್ತದೆ,” ಎಂದು ಭಾರತೀಯ ಫುಟ್ಬಾಲ್ ತಂಡ ಟ್ವೀಟ್ ಮಾಡಿದೆ.

“ದುರಂತದಿಂದ ಜನರು ಎದುರಿಸಿದ ನಷ್ಟವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಆದರೆ ಇದು ಆ ಕುಟುಂಬಗಳಿಗೆ ಅತ್ಯಂತ ಕಠಿಣ ಸಮಯಗಳನ್ನು ನಿಭಾಯಿಸಲು ಸಹಾಯ ಮಾಡುವಲ್ಲಿ ಸಣ್ಣ ಪಾತ್ರವನ್ನು ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ,” ಎಂದು ತಂಡ ಟ್ವೀಟ್‌ ಮಾಡಿದೆ.

ಜೂನ್​ 2ರ ಶುಕ್ರವಾರ ಒಡಿಶಾದ ಬಾಲಾಸೋರ್​ನಲ್ಲಿ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಭೀಕರ ರೈಲು ಅಪಘಾತದಲ್ಲಿ 288 ಜನರು ಬಲಿಯಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತರ ಪ್ರತಿ ಕುಟುಂಬಕ್ಕೆ ಕೇಂದ್ರ ರೈಲ್ವೆ ಸಚಿವಾಲಯ 10 ಲಕ್ಷ ರೂಪಾಯಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 5 ಲಕ್ಷ ರೂಪಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಒಟ್ಟು 17 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಅಪಘಾತದಿಂದಾಗಿ ದುರಂತ ಅಂತ್ಯ ಕಂಡವರಿಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಲವರು ಸಂತ್ರಸ್ತ ಕುಟುಂಬದ ನೆರವಿಗೆ ನಿಂತಿದ್ದಾರೆ. ಅದೇ ರೀತಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಕೂಡಾ, ರೈಲು ದುರಂತದಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ. ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸೆಹ್ವಾಗ್‌ ವಹಿಸಿಕೊಂಡಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ