Kylian Mbappe: ರಿಯಲ್ ಮ್ಯಾಡ್ರಿಡ್ ಸೇರಲಿದ್ದಾರೆ ಕೈಲಿಯನ್ ಎಂಬಪ್ಪೆ; ಒಲ್ಲದ ಮನಸಿಂದ ವಿಶ್ವ ದಾಖಲೆಯ ಒಪ್ಪಂದಕ್ಕೆ ಮುಂದಾದ ಪಿಎಸ್‌ಜಿ
Jan 09, 2024 08:07 PM IST
ಕೈಲಿಯನ್ ಎಂಬಪ್ಪೆ
- Kylian Mbappe Football: ಕೈಲಿಯನ್ ಎಂಬಪ್ಪೆ ವಿಶ್ವ ದಾಖಲೆಯ ವರ್ಗಾವಣೆಯಲ್ಲಿ ಪಿಎಸ್‌ಜಿಯಿಂದ ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರಿಕೊಳ್ಳಲಿದ್ದಾರೆ.
ಫ್ರಾನ್ಸ್ ತಂಡದ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ (Kylian Mbappe), ಖ್ಯಾತ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ (Real Madrid) ಸೇರುವ ಸೂಚನೆ ನೀಡಿದ್ದಾರೆ. ಫುಟ್ಬಾಲ್ ಕ್ಲಬ್ ಆಗಿರುವ ಪಿಎಸ್‌ಜಿಯೊಂದಿಗಿನ (Paris Saint-Germain FC) ಒಪ್ಪಂದವನ್ನು ಹೆಚ್ಚುವರಿ 12 ತಿಂಗಳ ಅವಧಿಗೆ ವಿಸ್ತರಿಸಲು ಎಂಬಪ್ಪೆ ಉತ್ಸುಕರಾಗಿಲ್ಲ. ಹೀಗಾಗಿ 2023-24ರ ಋತುವಿನ ನಂತರ ಉಚಿತ ಏಜೆಂಟ್ ಆಗಿ ಕ್ಲಬ್ ಬಿಡುವುದಾಗಿ ಪಿಎಸ್‌ಜಿ ಕ್ಲಬ್‌ಗೆ ಎಂಬಪ್ಪೆ ತಿಳಿಸಿದ್ದಾರೆ.
ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ 2024ರವರೆಗೆ ಪಿಎಸ್‌ಜಿಯೊಂದಿಗೆ (ಪ್ಯಾರಿಸ್ ಸೇಂಟ್ ಜರ್ಮನ್) ಒಪ್ಪಂದವನ್ನು ಹೊಂದಿದ್ದಾರೆ. ಆದರೆ ಈ ವರ್ಷದ ಬಳಿಕ ಮುಂದಿನ ಒಂದು ವರ್ಷದವರೆಗೆ ಒಪ್ಪಂದವನ್ನು ವಿಸ್ತರಿಸಲು ಅವರು ಜುಲೈ 31ರೊಳಗೆ ಸಹಿ ಮಾಡಬೇಕಾದ ಇನ್ನೊಂದು ವರ್ಷದ ಆಯ್ಕೆ ಹೊಂದಿದ್ದಾರೆ. ಈ ಆಯ್ಕೆಯನ್ನು ಎಂಬಪ್ಪೆ ನಿರಾಕರಿಸಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಪಿಎಸ್‌ಜಿ ಆಟಗಾರ ಲಿಯೋನೆಲ್ ಮೆಸ್ಸಿ ಎಂಬಾಪ್ಪೆಯನ್ನು ಪ್ಯಾರಿಸ್ ಕ್ಲಬ್ ತೊರೆದು ಬಾರ್ಸಿಲೋನಾ ಅಥವಾ ರಿಯಲ್ ಮ್ಯಾಡ್ರಿಡ್‌ಗೆ ಸೇರುವಂತೆ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಪಿಎಸ್‌ಜಿಯು ತನ್ನ ಕ್ಲಬ್‌ನ ಅನರ್ಘ್ಯ ರತ್ನವನ್ನು ಉಚಿತ ಏಜೆಂಟ್ ಆಗಿ ಬಿಟ್ಟು ಕೊಡಲು ಬಯಸುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಎಂಬಪ್ಪೆ ಕ್ಲಬ್‌ನೊಂದಿಗೆ ಉಳಿಯಲು ಮತ್ತು ಮುಂದಿನ ಒಂದು ವರ್ಷಕ್ಕೆ ಒಪ್ಪಂದ ಮುಂದುವರೆಸಲು ಆಸಕ್ತಿ ಹೊಂದಿಲ್ಲ. ಹೀಗಾಗಿ ಒಲ್ಲದ ಮನಸ್ಸಿಂದ ಪಿಎಸ್‌ಜಿಯು ತನ್ನ ಆಟಗಾರನ್ನನು ವರ್ಗಾವಣೆಯ ಮೂಲಕ ಬಿಟ್ಟುಕೊಡಬೇಕಾಗಿದೆ.
ಅವರು ಈ ಹಿಂದೆ ರಿಯಲ್ ಮ್ಯಾಡ್ರಿಡ್ ಕ್ಲಬ್ ಜೊತೆಗೆ ಸಂಪರ್ಕ ಹೊಂದಿದ್ದರು. 2021ರಲ್ಲಿ 180 ಮಿಲಿಯನ್ ಯುರೋಗಳ ಒಪ್ಪಂದಕ್ಕೆ ಎಂಬಪ್ಪೆ ಸಹಿ ಹಾಕಿದ್ದರು ಎಂದು ವರದಿಯಾಗಿದೆ. ಆದರೆ ಪಿಎಸ್‌ಜಿ ಮತ್ತೊಂದು ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಎಂಬಪ್ಪೆಯನ್ನು ತನ್ನ ತೆಕ್ಕೆ ಸೇರಿಸಿಕೊಂಡಿತು. ಈಗ ಇತ್ತೀಚಿನ ಬೆಳವಣಿಗೆಯು ಪ್ರಕಾರ ಮತ್ತೊಂದು ಹೈಡ್ರಾಮ ನಡೆದು ಮತ್ತೆ ಎಂಬಪ್ಪೆ ಕ್ಲಬ್ ತೊರೆಯುವ ಸೂಚನೆ ನೀಡಿದ್ದಾರೆ.
ವರದಿಗಳ ಪ್ರಕಾರ, ಪಿಎಸ್‌ಜಿ ಮತ್ತು ರಿಯಲ್ ಮ್ಯಾಡ್ರಿಡ್ ಕ್ಲಬ್‌ಗಳು ಎಂಬಪ್ಪೆಗಾಗಿ ಬರೋಬ್ಬರಿ 250 ಮಿಲಿಯನ್ ಯುರೋ ಮೌಲ್ಯದ ಒಪ್ಪಂದವನ್ನು ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ. ಇದು ಮತ್ತೋರ್ವ ಫುಟ್ಬಾಲ್ ಸ್ಟಾರ್ ನೇಮರ್ ಅವರ ವರ್ಗಾವಣೆ ದಾಖಲೆಯನ್ನು ಬ್ರೇಕ್ ಮಾಡಲಿದೆ. (ವರ್ಗಾವಣೆ ಎಂದರೆ ಒಂದು ಕ್ಲಬ್ ಮತ್ತೊಂದು ಕ್ಲಬ್‌ಗೆ ಆಟಗಾರನನ್ನು ವರ್ಗಾಯಿಸುವುದು. ಈ ಒಪ್ಪಂದ ಕ್ಲಬ್‌ಗಳ ನಡುವೆ ನಡೆಯುತ್ತದೆ.) ನೇಮರ್ ಅವರು 2017ರ ಆಗಸ್ಟ್ ತಿಂಗಳಲ್ಲಿ 222 ಮಿಲಿಯನ್ ಯುರೋಗಳಿಗೆ ಬಾರ್ಸಿಲೋನಾದಿಂದ ಪಿಎಸ್‌ಜಿಗೆ ಸೇರಿದ್ದರು.
ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್ ಮಾಲೀಕರು ಮತ್ತು ರಿಯಲ್ ಮ್ಯಾಡ್ರಿಡ್‌ನ ಪ್ರತಿನಿಧಿಗಳು ಈ ಸಂಬಂಧ ಬುಧವಾರ ಭೇಟಿಯಾಗಿದ್ದರು. ಸದ್ಯ ವರ್ಗಾವಣೆ ಕುರಿತ ಮಾತುಕತೆಗಳನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಕತಾರ್‌ನ ಎಮಿರ್ ತಮೀಮ್ ಬಿನ್ ಹಮದ್ ಅಲ್ ಥಾನ್ (PSG ಮಾಲೀಕರು) ರಿಯಲ್ ಮ್ಯಾಡ್ರಿಡ್ ಅಧ್ಯಕ್ಷ ಫ್ಲೋರೆಂಟಿನೋ ಪೆರೆಜ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.