logo
ಕನ್ನಡ ಸುದ್ದಿ  /  ಕ್ರೀಡೆ  /  Football Championship: ಬೆಂಗಳೂರಿನಲ್ಲಿ ಭಾರತ ಪಾಕಿಸ್ತಾನ ಪಂದ್ಯ; ಭಾರತ ಪ್ರಯಾಣಕ್ಕೆ ಕೊನೆಗೂ ವೀಸಾ ಪಡೆದ ಪಾಕ್ ತಂಡ

Football Championship: ಬೆಂಗಳೂರಿನಲ್ಲಿ ಭಾರತ ಪಾಕಿಸ್ತಾನ ಪಂದ್ಯ; ಭಾರತ ಪ್ರಯಾಣಕ್ಕೆ ಕೊನೆಗೂ ವೀಸಾ ಪಡೆದ ಪಾಕ್ ತಂಡ

Jayaraj HT Kannada

Jan 09, 2024 08:10 PM IST

google News

ಪಾಕಿಸ್ತಾನ ಫುಟ್ಬಾಲ್‌ ತಂಡ

    • SAFF Football Championship: ಭಾರತವು ಈ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿದ್ದು, ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿದೆ. 2021ರಲ್ಲಿ ನಡೆದ ಆವೃತ್ತಿಯಲ್ಲಿ ನೇಪಾಳವನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಎಂಟನೇ ಟ್ರೋಫಿಯನ್ನು ಭಾರತ ಗೆದ್ದುಕೊಂಡಿತು.
ಪಾಕಿಸ್ತಾನ ಫುಟ್ಬಾಲ್‌ ತಂಡ
ಪಾಕಿಸ್ತಾನ ಫುಟ್ಬಾಲ್‌ ತಂಡ (footballpakistan.com)

ಅತ್ತ‌ ಕ್ರಿಕೆಟ್‌ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದೆ. ಹೀಗಾಗಿ ಪಂದ್ಯಗಳು ಹೈಬ್ರಿಡ್‌ ಮಾದರಿಯಲ್ಲಿ ಪಾಕ್‌ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿವೆ. ಪಾಕಿಸ್ತಾನಕ್ಕೆ ಭಾರತವು ಪ್ರಯಾಣಿಸಲು ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ, ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕ್‌ ಕ್ರಿಕೆಟ್‌ ತಂಡ ಕೂಡಾ ಹಿಂದೆ ಮುಂದೆ ನೋಡುತ್ತಿದೆ. ಈ ನಡುವೆ ಪಾಕಿಸ್ತಾನದ ಫುಟ್ಬಾಲ್‌ ತಂಡ ಭಾರತಕ್ಕೆ ಹಾರಿ ಬರಲು ವೀಸಾ ಗಿಟ್ಟಿಸಿಕೊಂಡಿದೆ.

ಸೋಮವಾರ (ಜೂನ್‌ 19)ದಂದು ಭಾರತದ ವೀಸಾ ಪಡೆದ ಪಾಕಿಸ್ತಾನ ಫುಟ್‌ಬಾಲ್ ತಂಡವು, ಇದೀಗ ಭಾರತ ಪ್ರವಾಸಕ್ಕೆ ಇದ್ದ ಆರಂಭಿಕ ಅಡ್ಡಿ ಆತಂಕಗಳನ್ನು ದೂರ ಮಾಡಿದೆ. ಭಾರತದಲ್ಲಿ ನಡೆಯಲಿರುವ ಪ್ರಯಾಣದ ನಂತರ ಎಸ್‌ಎಎಫ್‌ಎಫ್‌ (SAFF) ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪಾಕ್‌ ತಂಡ ಸಿದ್ಧವಾಗಿದೆ.

ಮೂಲಗಳ ಪ್ರಕಾರ, ಜೂನ್‌ 21ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮೊದಲ ಪಂದ್ಯ ನಡೆಯಲಿದೆ. ಹೀಗಾಗಿ ಪಾಕಿಸ್ತಾನ ತಂಡವು ಮಾರಿಷಸ್‌ನಿಂದ ಭಾರತಕ್ಕೆ ಬರಲು ವಿಮಾನದ ಹುಡುಕಾಟದಲ್ಲಿದೆ. ಪಂದ್ಯ ನಾಳೆ (ಬುಧವಾರ) ರಾತ್ರಿ 7.30ಕ್ಕೆ ಆರಂಭವಾಗಲಿದೆ. ಆದರೆ ಸದ್ಯ ಪಾಕ್‌ ತಂಡದ ಪ್ರಯಾಣದ ವಿವರ ಇನ್ನೂ ತಿಳಿದುಬಂದಿಲ್ಲ.

“ಪಾಕಿಸ್ತಾನ ತಂಡವು ವೀಸಾ ಕ್ಲಿಯರೆನ್ಸ್ ಮಾಡಿಕೊಂಡಿರುವ ಬೆಳವಣಿಗೆಯ ಬಗ್ಗೆ ನಮಗೆ ತಿಳಿದಿದೆ. ಬುಧವಾರ ಭಾರತ ವಿರುದ್ಧದ ಬಹು ನಿರೀಕ್ಷಿತ ಪಂದ್ಯಕ್ಕೆ ಮುಂಚಿತವಾಗಿ ಪಾಕ್‌ ತಂಡವು ಮಂಗಳವಾರ ಬೆಂಗಳೂರಿಗೆ ಬಂದಿಳಿಯುವ ಸಾಧ್ಯತೆ ಇದೆ. ಪಂದ್ಯಕ್ಕೆ ದಾಖಲೆಯ ಸಂಖ್ಯೆಯ ಪ್ರೇಕ್ಷಕರನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇಲ್ಲಿ ನಡೆಯಲಿರುವ ಪಂದ್ಯದ ಆತಿಥ್ಯಕ್ಕಾಗಿ ನಾವು ಸಿದ್ಧರಾಗಿದ್ದೇವೆ” ಎಂದು ಕೆಎಸ್‌ಎಫ್‌ಎ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಹಿಂದೆ, ಭಾರತದ ಪ್ರಯಾಣಕ್ಕೆ ಬೇಕಾದ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬವಾಗಿ ಪಂದ್ಯಾವಳಿಗೆ ಬರಲು ಪಾಕಿಸ್ತಾನ ಫುಟ್ಬಾಲ್ ತಂಡದ ಸಮಸ್ಯೆ ಅನುಭವಿಸಿತ್ತು. SAFF (South Asian Football Federation Championship) ಸ್ಪರ್ಧೆಯ ಮೊದಲು ನಾಲ್ಕು ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನವು ಮಾರಿಷಸ್‌ನಲ್ಲಿ ಸಿಲುಕಿಕೊಂಡಿತ್ತು.

ವಾರಾಂತ್ಯದ ಕಾರಣದಿಂದಾಗಿ ಮಾರಿಷಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬಾಗಿಲು ಮುಚ್ಚಿತ್ತು. ಹೀಗಾಗಿ ಪಾಕ್‌ ಆಟಗಾರರ ವೀಸಾ ವಿನಂತಿಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ.

2023ರಲ್ಲಿ ನಡೆಯುತ್ತಿರುವ SAFF ಚಾಂಪಿಯನ್‌ಶಿಪ್ ಪಂದ್ಯಾವಳಿಯು ಚಾಂಪಿಯನ್‌ಶಿಪ್‌ನ 14ನೇ ಆವೃತ್ತಿಯಾಗಿದೆ. ಇದು ದಕ್ಷಿಣ ಏಷ್ಯಾದ ದ್ವೈವಾರ್ಷಿಕ ಅಂತಾರಾಷ್ಟ್ರೀಯ ಪುರುಷರ ಫುಟ್‌ಬಾಲ್ ಚಾಂಪಿಯನ್‌ಶಿಪ್ ಆಗಿದ್ದು, ದಕ್ಷಿಣ ಏಷ್ಯಾದ ಫುಟ್‌ಬಾಲ್ ಫೆಡರೇಶನ್ (SAFF) ಆಯೋಜಿಸುತ್ತದೆ. ಈ ವರ್ಷ ಟೂರ್ನಿಯು ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಜೂನ್ 21ರಿಂದ ಜುಲೈ 4ರವರೆಗೆ ನಡೆಯುತ್ತಿದೆ.

ಭಾರತವು ಈ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿದ್ದು, ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿದೆ. 2021ರಲ್ಲಿ ನಡೆದ ಆವೃತ್ತಿಯಲ್ಲಿ ನೇಪಾಳವನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಎಂಟನೇ ಟ್ರೋಫಿಯನ್ನು ಭಾರತ ಗೆದ್ದುಕೊಂಡಿತು. ಅತ್ತ ಪಾಕಿಸ್ತಾನ ತಂಡವು ಇದುವರೆಗೂ ಒಂದು ಬಾರಿಯೂ ಚಾಂಪಿಯನ್‌ ಆಗಿಲ್ಲ. ಅಲ್ಲದೆ ಫೈನಲ್‌ ಕೂಡಾ ಪ್ರವೇಶಿಸಿಲ್ಲ.

ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು. ಈ ಮೊತ್ತದ 20 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಲು ಸಾಮೂಹಿಕ ನಿರ್ಧಾರಕ್ಕೆ ತಂಡ ಬಂದಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ