logo
ಕನ್ನಡ ಸುದ್ದಿ  /  ಕ್ರೀಡೆ  /  ಗುಕೇಶ್ ಜಯಿಸಿದ್ದು ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನ; ಆದರೂ ಇದು ಚೆಸ್ ದುರಂತ ಎಂದ ಮಾಜಿ ಚಾಂಪಿಯನ್

ಗುಕೇಶ್ ಜಯಿಸಿದ್ದು ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನ; ಆದರೂ ಇದು ಚೆಸ್ ದುರಂತ ಎಂದ ಮಾಜಿ ಚಾಂಪಿಯನ್

Prasanna Kumar P N HT Kannada

Dec 13, 2024 09:09 PM IST

google News

ಗುಕೇಶ್ ಜಯಿಸಿದ್ದು ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನ; ಅದು ಹೇಗೆಂದು ಮಧು ವೈಎನ್ ಬರಹದಲ್ಲಿದೆ ನೋಡಿ

    • Gukesh Dommaraju: ವಿಶ್ವ ಚೆಸ್ ಚಾಂಪಿಯನ್​ಶಿಪ್ 2024 ಅಂತಿಮ ಅಥವಾ 14ನೇ ಸುತ್ತಿನಲ್ಲಿ ಡಿಂಗ್ ಲಿರೆನ್ ವಿರುದ್ಧ ಗುಕೇಶ್ ದೊಮ್ಮರಾಜು ಜಯಿಸಿದ್ದು ಕೇವಲ ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನು; ಅದು ಹೇಗೆಂದು ಮಧು ವೈಎನ್ ಅವರು ವಿವರಿಸಿದ್ದಾರೆ ಓದಿ.
ಗುಕೇಶ್ ಜಯಿಸಿದ್ದು ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನ; ಅದು ಹೇಗೆಂದು ಮಧು ವೈಎನ್ ಬರಹದಲ್ಲಿದೆ ನೋಡಿ
ಗುಕೇಶ್ ಜಯಿಸಿದ್ದು ಪಂದ್ಯವನ್ನಲ್ಲ, ಸಮಯ-ಮಾನಸಿಕ ಒತ್ತಡವನ್ನ; ಅದು ಹೇಗೆಂದು ಮಧು ವೈಎನ್ ಬರಹದಲ್ಲಿದೆ ನೋಡಿ

ನೆನ್ನೆ ಗುಕೇಶ್ ಗೆಲ್ಲುತ್ತಿದ್ದಂಗೆ ಮಾಜಿ ವರ್ಲ್ಡ್​ ಚಾಂಪಿಯನ್ ವ್ಲಾದಿಮಿರ್ ಕ್ರಾಮಿನಿಕ್ 'ಇದು ದುರಂತ, ಚೆಸ್​​ನ ಅಂತ್ಯ' ಎಂಬರ್ಥದ ಟ್ವೀಟ್ ಮಾಡಿದ್ದರು. ಅದು ಯಾಕಂದರೆ ಗುಕೇಶನ ಎದುರಾಳಿ ಡಿಂಗ್ ಲಿರೆನ್ ಕಡೆಯಲ್ಲಿ ಒಂದು 'ಬ್ಲಂಡರ್' ಎಸಗಿ ಸೋತಿದ್ದ. ಆಕ್ಚುವಲಿ ವಿಶ್ವ ಚಾಂಪಿಯನ್ ಮಟ್ಟದ ಆಟಗಾರರು ಇಂತಹ ಬ್ಲಂಡರ್ ಎಸಗುವುದಿಲ್ಲ.

ಮೊದಲಿಗೆ ಬ್ಲಂಡರ್ ಏನು ಅಂತ ಹೇಳ್ತೀನಿ. ಆಮೇಲೆ ವಿಷಯಕ್ಕೆ ಬರುವ.

ಗುಕೇಶನದು ಕಪ್ಪು ಕಾಯಿಗಳು, ಡಿಂಗ್ ದು ಬಿಳಿ ಕಾಯಿಗಳು.

ಗುಕೇಶ್ ಎರಡು ಸೈನಿಕ, ಒಂದು ಒಂಟೆ, ಒಂದು ಆನೆ ಉಳಿಸಿಕೊಂಡಿದ್ದ.

ಡಿಂಗ್ ಒಂದು ಸೈನಿಕ, ಒಂದು ಆನೆ, ಒಂದು ಒಂಟೆ ಉಳಿಸಿಕೊಂಡಿದ್ದ.

ಇದು ಡ್ರಾನತ್ತ ಸಾಗುತ್ತಿತ್ತು. ಯಾಕಂದರೆ ಹೀಗೆ ಕಡಿಮೆ ಕಾಯಿಗಳಿದ್ದಾಗ ಒಂದು ದೊಡ್ಡ ಕುರುಕೇತ್ರದಲ್ಲಿ ಎರಡೂ ಕಡೆ ಕೇವಲ ಎರಡು ಮೂರು ಸೈನಿಕ, ಒಂದಾನೆ ಒಂದು ಒಂಟೆ ಥರ ಇಟ್ಕೊಂಡು ಮರಗಳ ಬಂಡೆಗಳ ಮರೆಯಲ್ಲಿ ನಿಂತು ಬಡಿದಾಡಿದಂಗೆ. ಯಾರು ಯಾರಿಗೂ ಸಿಗದೆ ಪರದಾಡಿಸುತ್ತ ಕೊನೆಗೆ ಇಬ್ಬರೂ ಸುಸ್ತಾಗಿ ಡ್ರಾ ಮಾಡಿಕೊಳ್ತಾರೆ. ಡಿಂಗ್ ಮ್ಯಾಚ್ ಉಳಿಸಿಕೊಳ್ಳಲು ತನ್ನಲ್ಲಿರುವ ಎಲ್ಲಾ ಕಾಯಿ ಉಳಿಸಿಕೊಳ್ಳಬೇಕಿತ್ತು. ಅಂಥದರಲ್ಲಿ ಅವನೇ ಆಕಸ್ಮಾತ್ತಾಗಿ ತನ್ನ ಬಿಳಿ ಆನೆಯನ್ನು ಗುಕೇಶನ ಕಪ್ಪು ಆನೆಯ ಎದಿರಿಟ್ಟು ಇಬ್ಬರೂ ಪರಸ್ಪರ ಆನೆಗಳನ್ನು ಕೊಂದುಕೊಳ್ಳುವಂತಾಯಿತು.

ಡಿಂಗ್​ನ ಬಿಳಿ ಒಂಟೆ ತನ್ನ ಬಿಳಿ ಆನೆ ಬದುಕಿದ್ದಾಗ ಒಂಥರಾ ಪವರ್ ಫುಲ್ ಪೊಜಿಶನಲ್ಲಿತ್ತು. ಇಡೀ ಬೋರ್ಡಿನ ಒಂದು ಡಯಾಗನಲ್ ಅನ್ನು ಆಳುತ್ತಿತ್ತು. ಡಿಂಗ್ ಅದನ್ನು ಆ ಡಯಾಗನಲ್ಲಿಂದ ಅತ್ತಿತ್ತ ತೆಗೆಯುತ್ತಿರಲಿಲ್ಲ. ಯಾವಾಗ ತನ್ನೊಂದಿಗಿದ್ದ ಬಿಳಿ ಆನೆ ಸತ್ತೋಯ್ತೋ ಅದರ ಪೊಜಿಶನ್ನೇ ವೀಕಾಗಿಬಿಟ್ಟಿತು. ಹೀಗಾದಾಗ ಗುಕೇಶನಿಗೆ ಇನ್ನಿರುವ ಬಿಳಿ ಒಂಟೆಯನ್ನು ಕ್ಯಾನ್ಸಲ್ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಕೊನೆಗೆ ಗುಕೇಶನತ್ರ 2 ಸೈನಿಕ ಡಿಂಗ್ ಹತ್ರ 1 ಸೈನಿಕ ಉಳಿದು ಸೋಲು ಖಚಿತವಾಗಿ ಡಿಂಗ್ ರಿಸೈನ್ ಮಾಡಿದ. ಆಯ್ತು ಅಂಥಾ ವಿಶ್ವ ಚಾಂಪಿಯನ್ ಅದು ಹೇಗೆ ಇಂಥಾ ಸಿಲ್ಲಿ ಬ್ಲಂಡರ್ ಮಾಡಿದ? ಕಾರಣ ಇದೆ.

ಅವರತ್ರ 9 ನಿಮಿಷ ಮಾತ್ರ ಉಳಿದಿತ್ತು. ಗುಕೇಶನತ್ರ ಭರ್ತಿ ಒಂದು ಗಂಟೆ ಉಳಿದಿತ್ತು! ಜೊತೆಗೆ ಒಬ್ಬ ಹೆಚ್ಚವರಿ ಸೈನಿಕ. ಡಿಂಗ್ ಫಾಸ್ಟಾಗಿ ಆಡಬೇಕಿತ್ತು. ಫಾಸ್ಟಾಗಿ ಆಡುವಾಗ ಅದರಲ್ಲಿಯೂ ಕಟ್ಟ ಕಡೆಯ ಆಟದಲ್ಲಿ ಬೋರ್ಡ್ ಖಾಲಿ ಇರೋದರಿಂದ ಇಬ್ರೂ ಒಬ್ರಿಂದೊಬ್ರು ತಪ್ಪಿಸಿಕೊಂಡು ಬೋರ್ಡ್ ತುಂಬ ಅಡ್ಡಾಡ್ತಿರತಾರೆ. ಹಾಗಾಗಿ ಡಿಂಗ್ ತನ್ನ ಬಿಳಿ ಆನೆಯನ್ನು ಗುಕೇಶನ ಕಪ್ಪು ಆನೆ ಎದುರು ಇಟ್ಟಾಗ ಅವನು ಗುಕೇಶ್ ತನ್ನ ಕಪ್ಪು ಆನೆಯನ್ನು ಹಿಂದೆ ಎತ್ತಿಕೊಳ್ತಾನೆ ಎಂದು ಭಾವಿಸಿದ್ದ.

ಚೆಸ್ ಆಡುವಾಗ ಒಂದೇ ಸಮಯದಲ್ಲಿ ಮೆದುಳು ಹಲವು ಪದರಗಳಲ್ಲಿ ಓಡ್ತಿರುತ್ತೆ. ಇಲ್ಲಿ ಡಿಂಗ್ ಸಮಯ ಒತ್ತಡದಿಂದ ಮೆದುಳಿನ ಒಂದು ಪದರ ಮಾತ್ರ ಆಕ್ಟಿವ್ ಇಟ್ಟು ಒಂದು ಕ್ಷಣ ಇನ್ನೊಂದು ಪದರ ನಿಷ್ಕ್ರಿಯವಾಗಿತ್ತು- ಏನಂದರೆ ಗುಕೇಶನಿಗೆ ಅವಕಾಶ ಸಿಕ್ಕರೆ ಕಾಯಿ ಕ್ಯಾನ್ಸಲ್ ಮಾಡಿಕೊಳ್ತಾನೆ ಅನ್ನೋದು.

ಹಾಗಾಗಿ ಇದು ನೇರಾನೇರ ಕೌಶಲ್ಯದ ಗೆಲುವು ಅಲ್ಲದಿದ್ದರೂ ಗುಕೇಶ್ ಗೆದ್ದಿದ್ದು ಮಾನಸಿಕ ಒತ್ತಡವನ್ನು ಗೆಲ್ಲುವುದರ ಮೂಲಕ. ಮತ್ತು ಇದು ಲಾಸ್ಟ್ ಮಿನಿಟ್ ಬ್ಲಂಡರ್ ಅನ್ನಿಸಿದರೂ ಎದುರಾಳಿಯ ಸಮಯವನ್ನು ಆರಂಭದಿಂದಲೇ ಸವೆಸುತ್ತಾ ತನ್ನದನ್ನು ಉಳಿಸಿಕೊಳ್ಳುತ್ತಾ ಬಂದಿದ್ದನಲ್ಲ ಅದು ಕೌಶಲ್ಯ ತಾನೇ.. ಅದೂ ಸಹ ಗೆಲ್ತು ಅಲ್ಲವೇ?

ಈ ಬ್ಲಂಡರ್ ಎಸಗಲಿಲ್ಲ ಅಂದ್ರೆ ಆಟ ಎತ್ತ ಸಾಗುತ್ತಿತ್ತು? ಡಿಂಗ್ ಬೇಗ ಬೇಗ ತಪ್ಪಿಸಿಕೊಳ್ಳುವ ಆಟ ಆಡ್ತಾ ತನ್ನ ಸಮಯವನ್ನು ಹೆಚ್ಚಿಸಿಕೊಳ್ತಾ ಹೋಗಬಹುದಿತ್ತು. ಚೆಸ್ ನಲ್ಲಿ 41ನೇ ಮೂವ್ ನಂತರ ಪ್ರತಿ ಕಾಯಿಯ ಮೂವ್ಮೆಂಟಿಗೆ ಇರುವ ಸಮಯಕ್ಕೆ 30 ಸೆಕೆಂಡು ಸೇರಿಕೊಳ್ಳುತ್ತದೆ. ಹಂಗಾಗಿ ಫಾಸ್ಟಾಗಿ ಆಡ್ತಾ ಆಕ್ಚುವಲಿ ಕೊನೆಗೆ ಡಿಂಗ್ ದು ಒಂದು ಗಂಟೆ ಉಳಿದು ಗುಕೇಶ್​ದೇ 9 ಮಿನಿಟ್ ಆಗಿಬಿಡಬಹುದು! ಆದ್ದರಿಂದ ಖಂಡಿತ ಇದನ್ನೊಂದು ಬ್ಲಂಡರ್ ಎನ್ನಬಹುದು.

ಆದರೆ ಎದುರಾಳಿ ಬ್ಲಂಡರ್​​ನಿಂದ ಮಾತ್ರವೇ ಗುಕೇಶ್ ಗೆದ್ದಿಲ್ಲ. ತನ್ನ ನೈಜ ಸಾಮರ್ಥ್ಯ, ಅವತ್ತಿನ ದಿನ ಎದುರಾಳಿಗಿಂತ ಹೆಚ್ಚಿನ ಕೌಶಲ್ಯ ಪ್ರದರ್ಶಿಸಿದ್ದರಿಂದ ಗೆದ್ದಿದಾನೆ. ಡಿಂಗ್ ಸಹ ಅದನ್ನು ಒಪ್ಪಿಕೊಂಡಿದ್ದಾನೆ. ತಾನು ಹಿಂದಿನ ಪಂದ್ಯದಲ್ಲಿಯೇ ಸೋಲಬೇಕಿತ್ತು. ಕಷ್ಟ ಪಟ್ಟು ಡ್ರಾ ಮಾಡಿಕೊಂಡಿದ್ದೆ. ಆದ್ದರಿಂದ ಈ ಸಲ ಮತ್ತೆ ನಾನು ಡ್ರಾಗಾಗಿ ಹವಣಿಸುತ್ತಿರುವಾಗ ಗುಕೇಶ್ ಪಂದ್ಯವನ್ನು ಗೆದ್ದುಕೊಂಡದ್ದು ಸಮಂಜಸವಾಗಿದೆ ಎಂದು.

ವ್ಲಾದಿಮಿರ್ ಹಿರಿಯನಾಗಿ 18 ವರ್ಷದ ಬಾಲಕ ಹೇಗೆ ತನಗಿಂತ ದೊಡ್ಡವನಾದ ಡಿಂಗ್ ಅನ್ನು ಆರಂಭದಿಂದಲೇ ಕಟ್ಟಿಹಾಕಿದ್ದ, ಹೇಗೆ ತನ್ನದೊಂದು ಸೈನಿಕ ಹೆಚ್ಚಿಗೆ ಉಳಿಸಿಕೊಂಡಿದ್ದ, ಹೇಗೆ ಎದುರಾಳಿಗೆ 9 ನಿಮಿಷ ಉಳಿಸಿ ತಾನು ಒಂದು ಗಂಟೆ ಇಟ್ಟುಕೊಂಡಿದ್ದ... ಎಲ್ಲಕ್ಕಿಂತ ಮುಖ್ಯವಾಗಿ ಹೇಗೆ ಡಿಂಗ್​ನಂತೆ ತಾನು ಯಾವ ಬ್ಲಂಡರ್ ಎಸಗದೇ ಕಟ್ಟುನಿಟ್ಟಾಗಿ ಆಟ ಆಡಿದ್ದ. ಇದೆಲ್ಲ ಸೇರಿಯೇ ಆತ ಒಬ್ಬ ವಿಶ್ವ ಚಾಂಪಿಯನ್ ಆಗಿರುವುದು ಎಂಬುದನ್ನು ಮನಗಾಣಬೇಕಿತ್ತು. ಹಳೆ ತಲೆಗಳ ಥರ ಗೋಳಾಡಿ ಮರ್ಯಾದೆ ಕಳ್ಕೊಬಾರದಿತ್ತು.

-ವೈಎನ್ ಮಧು ಅವರ ಬರಹ (ಫೇಸ್​ಬುಕ್​ ಪೋಸ್ಟ್ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ