International Tiger Day: ರಾಜಸ್ಥಾನದ ಹೆಣ್ಣು ಹುಲಿ ಮರಿಯೊಂದಕ್ಕೆ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಅವನಿ ಲೆಖರಾ ಹೆಸರು
Jul 30, 2023 03:53 PM IST
ರಾಜಸ್ಥಾನದ ಹೆಣ್ಣು ಹುಲಿ ಮರಿಯೊಂದಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಅವನಿ ಲೆಖರಾ ಹೆಸರು.
- International Tiger Day: ಅಂತರಾಷ್ಟ್ರೀಯ ಹುಲಿ ದಿನದ ಸಂದರ್ಭದಲ್ಲಿ ರಣಥಂಬೋರ್‌ನ ಹುಲಿ T-111ಗೆ ಮೂರು ಮರಿಗಳು ಜನಿಸಿದವು. ಈ ಪೈಕಿ ಎರಡು ಗಂಡು ಮರಿಗಳಿಗೆ ಚಿರಂಜೀವಿ ಮತ್ತು ಚಿರಾಯು ಎಂದು ಹೆಸರು ಇಡಲಾಗಿದೆ.
ಜೈಪುರ: ಜುಲೈ 29ರಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (CM Ashok Gehlot) ಘೋಷಿಸಿದಂತೆ ರಾಜಸ್ಥಾನದ ಹುಲಿ (Tiger) ಮರಿಯೊಂದಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ, ರೈಫಲ್ ಶೂಟರ್ ಪ್ರತಿಭಾನ್ವಿತ ಆಟಗಾರ್ತಿ ಅವನಿ ಲೆಖರಾ (Avani Lekhara) ಅವರ ಹೆಸರನ್ನು ಇಡಲಾಗಿದೆ. ಇತರ ಎರಡು ಮರಿಗಳಿಗೆ 'ಚಿರಂಜೀವಿ' ಮತ್ತು 'ಚಿರಾಯು' ಎಂದು ಹೆಸರು ಇಡಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಹುಲಿ ದಿನದ (International Tiger Day) ಸಂದರ್ಭದಲ್ಲಿ ರಣಥಂಬೋರ್‌ನ ಹುಲಿ T-111ಗೆ ಮೂರು ಮರಿಗಳು ಜನಿಸಿದವು. ಈ ಪೈಕಿ ಎರಡು ಗಂಡು ಮರಿಗಳಿಗೆ ಚಿರಂಜೀವಿ ಮತ್ತು ಚಿರಾಯು ಎಂದು ಹೆಸರು ಇಡಲಾಗಿದೆ. ಮತ್ತೊಂದು ಹೆಣ್ಣು ಹುಲಿ ಮರಿಗೆ ವಿಶೇಷವಾಗಿ ಅವನಿ ಲೇಖರ ಹೆಸರು ಇಡಲಾಗಿದೆ. ಹುಲಿ ದಿನವನ್ನು ವಿಶೇಷವಾಗಿ ಆಚರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಜೈಪುರದಿಂದ ಬಂದ ಅವನಿ ಲೆಖರಾ ಅವರ ಹೆಸರನ್ನು ಅವನಿ ಎಂದು ಹೆಸರಿಸಲಾಗಿದೆ. ಪ್ಯಾರಾಲಿಂಪಿಕ್ ಅಥ್ಲೀಟ್‌ನ ಹೆಸರನ್ನು ಹುಲಿ ಮರಿಗೆ ಇಟ್ಟಿರುವುದು ಆಕೆಯ ಅಸಾಧಾರಣ ಸಾಧನೆಗಳಿಗೆ ಸೂಕ್ತ ಗೌರವ ಮತ್ತು ಕ್ರೀಡೆಗೆ ನೀಡಿದ ಕೊಡುಗೆಗಾಗಿ ಮನ್ನಣೆಯ ಸಂಕೇತವಾಗಿದೆ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ನಿರ್ಧಾರಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕೃಷ್ಣಾ ಪೂನಿಯಾ ಅವರ ಹೆಸರನ್ನು ಟೈಗ್ರೆಸ್ ಟಿ-17ಗೆ ಕೃಷ್ಣ ಎಂದು ಹೆಸರಿಸಲಾಗಿತ್ತು.
ಚಿನ್ನ, ಕಂಚು ಗೆದ್ದಿದ್ದ ಲೆಖರಾ
ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 10-ಮೀಟರ್ ಏರ್ ರೈಫಲ್ನಲ್ಲಿ ಅವನಿ ಲೆಖರಾ ಚಿನ್ನದ ಪದಕ ಮುತ್ತಿಕ್ಕಿದ್ದರು. 50-ಮೀಟರ್ ರೈಫಲ್ನಲ್ಲಿ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಲೇಖರಾ, ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.
ದೇಶದಲ್ಲಿ ಹುಲಿಗಳ ಸಂತತಿ ವಿನಾಶದ ಅಂಚಿನಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು, ಏಪ್ರಿಲ್ 1973ರಲ್ಲಿ 'ಪ್ರಾಜೆಕ್ಟ್ ಟೈಗರ್' ಅನ್ನು ಪ್ರಾರಂಭಿಸಿದ್ದರು. ಇದು ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳಕ್ಕೆ ಕಾರಣವಾಯಿತು. ಒಂದು ತಿಂಗಳಲ್ಲಿ ರಾಜಸ್ಥಾನದ ರಣಥಂಬೋರ್ ನಲ್ಲಿ 6 ಮರಿಗಳು ಜನಿಸಿದ್ದು, ರಾಜಸ್ಥಾನ ಸರ್ಕಾರ ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಹೇಳಿದರು.
ಅತಿ ಹೆಚ್ಚು ಹುಲಿ: ಬಂಡೀಪುರಕ್ಕೆ ಎರಡನೇ ಸ್ಥಾನ
ದೇಶದ ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಅತಿ ಹಳೆಯ ಹುಲಿ ಯೋಜಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಧಾಮಕ್ಕೆ (Bandipur Tiger Reserve) ಕರ್ನಾಟಕದಲ್ಲಿ ನಂಬರ್ ಒನ್ ಹಾಗೂ ದೇಶದಲ್ಲೇ ಎರಡನೇ ಸ್ಥಾನ ಲಭಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ( National Tiger Conservation Authority) ಬಿಡುಗಡೆ ಮಾಡಿರುವ ವರದಿ ಪ್ರಕಾರ ಉತ್ತರಾಖಂಡದ ಜಿಮ್ ಕಾರ್ಬೆಟ್ ಹುಲಿ ಉದ್ಯಾನದಲ್ಲಿ ದೇಶದಲ್ಲೇ ಅತ್ಯಧಿಕ 312 ಹುಲಿಗಳಿದ್ದರೆ ನಂತರ ಬಂಡೀಪುರದಲ್ಲಿ 191 ಹುಲಿಗಳಿವೆ. ಮೂರನೇ ಸ್ಥಾನದಲ್ಲಿ ಕರ್ನಾಟಕದ ಮತ್ತೊಂದು ಹುಲಿ ಧಾಮ ನಾಗರಹೊಳೆ 185 ಹುಲಿಗಳನ್ನು ಹೊಂದಿದೆ.