Wrestlers protest: ಕುಸ್ತಿಪಟುಗಳ ಬೇಡಿಕೆಗೆ ಒಪ್ಪಿದ ಸಚಿವ ಅನುರಾಗ್ ಠಾಕೂರ್; ಜೂನ್ 15ರವರೆಗೂ ಧರಣಿ ಸ್ಥಗಿತಗೊಳಿಸಿದ ಪ್ರತಿಭಟನಾನಿರತರು
Jun 08, 2023 07:03 AM IST
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೊತೆಗಿನ ಸಭೆಯ ಬಳಿಕ ಜೂನ್ 15ರವರೆಗೂ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು
- ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ಬಂಧನ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳೊಂದಿಗಿನ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Sports Minister Anurag Thakur) ಸಭೆ ಯಶಸ್ಸು ಕಂಡಿದೆ.
ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ಬಂಧನಕ್ಕೆ ಒತ್ತಾಯಿಸಿ ನಡೆಸುತ್ತಿದ್ದ ಖ್ಯಾತನಾಮ ಕುಸ್ತಿಪಟುಗಳ ಧರಣಿಗೆ (Wrestlers Protest) ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Central Sports Minister Anurag Thakur), ಮಹತ್ವದ ಭರವಸೆ ನೀಡಿರುವ ಪರಿಣಾಮ, ಒಂದು ವಾರಗಳ ಕಾಲ ಧರಣಿ ಹಿಂದಕ್ಕೆ ಪಡೆಯಲಾಗಿದೆ.
ಜೂನ್ 15ರವರೆಗೆ ಪ್ರತಿಭಟನೆ ರದ್ದು
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಜೂನ್ 15ರೊಳಗೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ತನಿಖೆ ಮುಕ್ತಾಯಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಈ ಭರವಸೆ ಮೇರೆಗೆ ಕುಸ್ತಿಪಟುಗಳು ಜೂನ್ 15ರವರೆಗೆ ಪ್ರತಿಭಟನೆ ನಡೆಸದಿರಲು ನಿರ್ಧರಿಸಿದ್ದಾರೆ. ಸಚಿವರ ಆಹ್ವಾನ ನೀಡಿದ್ದರ ಪರಿಣಾಮ ಮಾತುಕತೆಗೆ ಕುಸ್ತಿಪಟುಗಳು ತೆರಳಿದ್ದರು. ಈ ವೇಳೆ ಅಗ್ರಮಾನ್ಯ ಕ್ರೀಡಾಪಟುಗಳು ತಮ್ಮ ಹಲವು ಬೇಡಿಕೆಗಳ್ನು ಮುಂದಿಟ್ಟಿದ್ದಾರೆ.
ಬಂಧಿಸುವವರೆಗೂ ಹಿಂದೆ ಸರಿಯಲ್ಲ
ಸಚಿವರ ಮುಂದಿಟ್ಟ ಬೇಡಿಕೆಗಳ ಪೈಕಿ ಪ್ರಮುಖವಾದದ್ದು ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಜೈಲಿಗೆ ಹೋಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಎಂದು ಖಡಕ್ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸದ್ಯ ಜೂನ್ 15ರೊಳಗೆ ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಮುಗಿಯಲಿದೆ. ಚಾರ್ಜ್‌ಶೀಟ್ ಕೂಡ ಜೂನ್ 15ಕ್ಕೆ ಸಲ್ಲಿಕೆ ಆಗಲಿದೆ. ಕಾನೂನು ರೀತಿಯಲ್ಲಿ ಏನೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಅನುರಾಗ್ ಠಾಕೂರ್ ಭರವಸೆ ಕೊಟ್ಟಿದ್ದಾರೆ.
ಪ್ರಕರಣ ವಾಪಸ್ ಪಡೆಯಿರಿ
ಮೇ 28ರಂದು ಪ್ರತಿಭಟನಾಕಾರರು, ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಕುಸ್ತಿಪಟುಗಳನ್ನು ಬಂಧಿಸಿದ್ದರು. ಬಳಿಕ ಎಫ್ಐಆರ್ ದಾಖಲಿಸಲಾಗಿತ್ತು. ಈ ವೇಳೆ ದೆಹಲಿ ಪೊಲೀಸರು ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದರು. ಸದ್ಯ ನಮ್ಮ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕುಸ್ತಿಪಟುಗಳು, ಸಚಿವರ ಮುಂದಿಟ್ಟಿದ್ದಾರೆ.
ಇದಕ್ಕೆ ಕ್ರೀಡಾ ಸಚಿವರು ಸಹ ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಮಹಿಳಾ ಕುಸ್ತಿಪಟುಗಳ ಸುರಕ್ಷತೆಗೂ ಆದ್ಯತೆ ನೀಡುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಆ ಬಳಿಕ ಜೂನ್ 15 ರವರೆಗೆ ಕುಸ್ತಿಪಟುಗಳು ಧರಣಿ ತಾತ್ಕಾಲಿಕವಾಗಿ ಕೈಬಿಡಲು ಒಪ್ಪಿದ್ದು, ತಮ್ಮ ಮುಂದಿನ ನಿರ್ಧಾರವನ್ನು 15ರ ನಂತರ ಪ್ರಕಟಿಸುತ್ತೇವೆ ಎಂದು ಕ್ರೀಡಾಪಟುಗಳು ತಿಳಿಸಿದ್ದಾರೆ. ಇನ್ನು ಜೂನ್ 30ರ ಒಳಗೆ ಕುಸ್ತಿ ಫೆಡರೇಶನ್ ಚುನಾವಣೆ ನಡೆಸುವುದಾಗಿ ಠಾಕೂರ್ ಭರವಸೆ ನೀಡಿದ್ದಾರೆ.
ಗೃಹ ಸಚಿವರ ಭೇಟಿ ಬಳಿಕ ತನಿಖೆ ಚುರುಕು
ಲೈಂಗಿಕ ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀದರು ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಕುಸ್ತಿಪಟುಗಳು ಕಳೆದ ಶನಿವಾರ ಭೇಟಿ ಮಾಡಿ ಚರ್ಚಿಸಿದ್ದರು. ಆದರೆ ಅವರಿಂದ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ. ಈ ಭೇಟಿಯ ಕುರಿತು ಎಲ್ಲೂ ಮಾತನಾಡಬಾರದು ಎಂದು ಸಚಿವರು ಸೂಚಿಸಿದ್ದರು.
ಇದರ ಬೆನ್ನಲ್ಲೇ ಬ್ರಿಜ್ ಭೂಷಣ್ ಅವರ ನಿವಾಸಗಳಿಗೆ ದೆಹಲಿ ಪೊಲೀಸರು ಭೇಟಿ ನೀಡಿದ್ದರು. ದೆಹಲಿ, ಲಖನೌ ಹಾಗೂ ಗೊಂಡಗಳಲ್ಲಿ ಅವರ ನಿವಾಸಗಳಿವೆ. ಅವರ ಆಪ್ತರು, ಮನೆಯಲ್ಲಿ ಮಾಡುವ ಕೆಲಸದವರನ್ನು ವಿಚಾರಣೆ ನಡೆಸಿದ್ದರು. ಮನೆಯಲ್ಲಿದ್ದಾಗ ಬ್ರಿಜ್ ಭೂಷಣ್ ವರ್ತನೆ ಹೇಗಿರುತ್ತದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಯಿತು. ವಿಚಾರಣೆಗೆ ಒಳಗಾದವರ ಮಾಹಿತಿ, ವಿಳಾಸವನ್ನು ದೆಹಲಿ ಪೊಲೀಸರು ಸಂಗ್ರಹಿಸಿದ್ದಾರೆ. ಮತ್ತೆ ಕರೆದರೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.