logo
ಕನ್ನಡ ಸುದ್ದಿ  /  ಕ್ರಿಕೆಟ್  /  Prithvi Shaw: ಅನಿವಾಸಿ ಭಾರತೀಯನಿಂದ ಪೃಥ್ವಿ ಶಾಗೆ ಬಾಡಿ ಶೇಮಿಂಗ್; ಭಾರತದ ಆಹಾರಕ್ರಮ ಕುರಿತು ವ್ಯಂಗ್ಯವಾಡಿದ ಉದ್ಯಮಿ

Prithvi Shaw: ಅನಿವಾಸಿ ಭಾರತೀಯನಿಂದ ಪೃಥ್ವಿ ಶಾಗೆ ಬಾಡಿ ಶೇಮಿಂಗ್; ಭಾರತದ ಆಹಾರಕ್ರಮ ಕುರಿತು ವ್ಯಂಗ್ಯವಾಡಿದ ಉದ್ಯಮಿ

Jayaraj HT Kannada

Aug 11, 2023 05:24 PM IST

google News

ಪೃಥ್ವಿ ಶಾ

  • Prithvi Shaw Fitness: ಬಾಡಿ ಶೇಮಿಂಗ್‌ ಮಾಡಿದ ನಾಗ್ಪಾಲ್‌ಗೆ ಶಾ ಅಭಿಮಾನಿಗಳು ಪಾಠ ಕಲಿಸಿದ್ದಾರೆ. ನಾಗ್ಪಾಲ್ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಅಭಿಮಾನಿಗಳು, ಅಸಂಬದ್ದ ಹೇಳಿಕೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಪೃಥ್ವಿ ಶಾ
ಪೃಥ್ವಿ ಶಾ (Twitter)

ಫಿಟ್‌ನೆಸ್ ವಿಷಯವಾಗಿ ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಈ ಹಿಂದೆಯೂ ಹಲವು ಬಾರಿ ಚರ್ಚೆಯ ವಸ್ತುವಾಗಿದ್ದರು. ಭಾರತ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಅವರ ಅಸಮರ್ಪಕ ಫಿಟ್‌ನೆಸ್ ಕಾರಣವೂ ಒಂದು. ಸದ್ಯ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವ ಪೃಥ್ವಿ ಶಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಅಂಕುರ್ ನಾಗ್ಪಾಲ್ ಎಂಬ ಭಾರತ ಮೂಲದ ಅಮೆರಿಕದ ವಾಣಿಜ್ಯ ಉದ್ಯಮಿಯೊಬ್ಬರು, ಶಾ ಫಿಟ್‌ನೆಟ್‌ ಕುರಿತು ಕಟುವಾಗಿ ಟೀಕಿಸಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ ಪೃಥ್ವಿ ಶಾ ಫೋಟೋವನ್ನು ಶೇರ್‌ ಮಾಡಿದ ಅನಿವಾಸಿ ಭಾರತೀಯ, ಸಾಮಾಜಿಕ ಮಾಧ್ಯಮವಾದ ಎಕ್ಸ್‌ (ಟ್ವಿಟರ್)ನಲ್ಲಿ ಶಾಗೆ ಬಾಡಿ ಶೇಮಿಂಗ್‌ ಮಾಡಿದ್ದಾರೆ.

ಇಂಗ್ಲೆಂಡ್‌ನಲ್ಲಿ (England) ನಡೆದ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ಕಳೆದ ಬುಧವಾರ (9 ಆಗಸ್ಟ್) ನಡೆದ ಪಂದ್ಯದಲ್ಲಿ ಪೃಥ್ವಿ ಶಾ ನಾರ್ಥ್‌ಹ್ಯಾಂಪ್ಟನ್‌ಶೈರ್ ತಂಡದ‌ ಪರ ಅದ್ಭುತ ಪ್ರದರ್ಶನ ನೀಡಿ ದ್ವಿಶತಕ ಬಾರಿಸಿದರು. ಆ ಸಂಭ್ರಮಾಚರಣೆಯ ಫೋಟೋವನ್ನು ಅಂಕುರ್ ನಾಗ್ಪಾಲ್ ಎಂಬ ಅನಿವಾಸಿ ಭಾರತೀಯ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಶಾ ಅವರ ಬೋಳು ತಲೆ ಮತ್ತು ದೇಹವನ್ನು ಟೀಕಿಸಿದ ನಾಗ್ಪಾಲ್, “ಭಾರತೀಯರ ಆಹಾರ ಪದ್ಧತಿ ಮತ್ತು ಜೆನೆಟಿಕ್ಸ್‌ (ತಳಿಶಾಸ್ತ್ರ)ಗೆ ಸರಿಸಾಟಿಯಿಲ್ಲ. ಇದು 23 ವರ್ಷದ ಭಾರತೀಯ ಕ್ರೀಡಾಪಟುವಿನ ಫೋಟೋ. 23 ವರ್ಷ!” ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ನಗುವ ಎಮೋಜಿಯನ್ನೂ ಹಾಕಿ ವ್ಯಂಗ್ಯವಾಡಿದ್ದಾರೆ.

ಭಾರತೀಯ ಮೂಲದ ವ್ಯಕ್ತಿಯೇ ಭಾರತೀಯ ಕ್ರಿಕೆಟಿಗನ ದೇಹದ ಕುರಿತಾಗಿ ಟೀಕಿಸಿದರೆ ಅಭಿಮಾನಿಗಳು ಸುಮ್ಮನಿರುತ್ತಾರಾ? ಖಂಡಿತಾ ಇಲ್ಲ. ಬಾಡಿ ಶೇಮಿಂಗ್‌ ಮಾಡಿದ ನಾಗ್ಪಾಲ್‌ಗೆ ಶಾ ಅಭಿಮಾನಿಗಳು ಪಾಠ ಕಲಿಸಿದ್ದಾರೆ. ನಾಗ್ಪಾಲ್ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಅಭಿಮಾನಿಗಳು, ಅಸಂಬದ್ದ ಹೇಳಿಕೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

“ಕ್ರಿಕೆಟ್‌ನಲ್ಲಿ, ಅದರಲ್ಲಿಯೂ ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳಿಗೆ ಅಥ್ಲೀಟ್‌ಗಳಂತಹ ಫಿಟ್ ಆದ ದೇಹದ ಅಗತ್ಯವಿರುವುದಿಲ್ಲ. ಭಾರತೀಯ ತಂಡವು ಈ ಹಿಂದೆಂದಿಗಿಂತಲೂ ಹೆಚ್ಚು ಫಿಟ್‌ನೆಸ್‌ ಹೊಂದಿದೆ. 10 ವರ್ಷಗಳ ಹಿಂದಿದ್ದ ತಂಡಗಳನ್ನು ಒಮ್ಮೆ ನೋಡಿ. ಆಗ ತೆಂಡೂಲ್ಕರ್ ಕೂಡ ಸಿಕ್ಸ್ ಪ್ಯಾಕ್ ಹೊಂದಿರಲಿಲ್ಲ. ಶಾ ಅವರಿಗೆ ತಲೆ ಕೂದಲು ಇಲ್ಲದಿರುವಿದಕ್ಕೆ ಅವರು ಕಾರಣರಲ್ಲ. ಅದು ಆನುವಂಶಿಕ. ಅದರಲ್ಲಿ ಅವರ ತಪ್ಪು ಏನೂ ಇಲ್ಲ” ಎಂದು ಒಬ್ಬ ಬಳಕೆದಾರ ಪೋಸ್ಟ್ ಮಾಡಿದ್ದಾರೆ.‌

“ಈ ಅನಿವಾಸಿ ಭಾರತೀಯರು ತಮ್ಮನ್ನು ತಾವು ಸರ್ವೋತ್ತಮರು ಎಂದು ಭಾವಿಸಿದ್ದಾರೆ. ಬಾಡಿ ಶೇಮ್ ಮಾಡುವುದು ಮತ್ತು ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗುವುದು ಒಂದು ಅಭ್ಯಾಸವಾಗಿಬಿಟ್ಟಿದೆ. ಇದು ಸರಿಯಲ್ಲ” ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

“ಈ ರೀತಿ ಪೋಸ್ಟ್ ಮಾಡುವುದು ಸರಿಯಲ್ಲ. ಅವರೊಬ್ಬ ಅದ್ಭುತ ಕ್ರಿಕೆಟಿಗ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ದಯವಿಟ್ಟು ವ್ಯಕ್ತಿಗೆ ಏನಾಗಿದೆ ಎಂಬುದನ್ನು ಅರಿಯದೆ ಈ ರೀತಿ ಅವಮಾನಿಸುವುದನ್ನು ನಿಲ್ಲಿಸಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ಆಡುತ್ತಿರುವ ಶಾ, ಸೋಮರ್‌ಸೆಟ್ ತಂಡದ ವಿರುದ್ಧದ ಏಕದಿನ (ODI) ಪಂದ್ಯದಲ್ಲಿ 129 ಎಸೆತಗಳಲ್ಲಿ ಸಿಡಿಲಬ್ಬರದ ದ್ವಿಶತಕ ಪೂರೈಸಿದರು. ಒಟ್ಟಾರೆಯಗಿ 153 ಎಸೆತಗಳಿಂದ 244 ರನ್ ಗಳಿಸಿದರು. ಇದರಲ್ಲಿ 11 ಸಿಕ್ಸರ್‌ಗಳು ಹಾಗೂ 28 ಬೌಂಡರಿಗಳಿದ್ದವು. ಶಾ ಅವರ ಆಕರ್ಷಕ ಆಟದಿಂದಾಗಿ ನಾರ್ಥ್‌ಹ್ಯಾಂಪ್ಟನ್‌ಶೈರ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 415 ರನ್ ಗಳಿಸಿತು.

ಈ ಸಾಧನೆ ಮೂಲಕ ಚೇತೇಶ್ವರ ಪೂಜಾರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಮುಂಬೈ ಬ್ಯಾಟರ್ ಶಾ 150 ಪ್ಲಸ್ ರನ್ ದಾಖಲಿಸಿದ ಎರಡನೇ ಭಾರತೀಯ ಆಟಗಾರ ಎನಿಸಿದರು. 103 ಎಸೆತಗಳಲ್ಲಿ ಈ ಸಾಧನೆ ಮಾಡಿದ್ಧಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ