IPL 2023: ಸಾಯಿ ಸುದರ್ಶನ್ ಆಟಕ್ಕೆ ಶಹಬ್ಬಾಸ್ ಎಂದ ಗವಾಸ್ಕರ್, ಅನಿಲ್ ಕುಂಬ್ಳೆ
Apr 05, 2023 04:09 PM IST
ಸಾಯಿ ಸುದರ್ಶನ್
- IPL 2023: ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು, ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಅನುಭವಿ ಆಟಗಾರನಂತೆ ಸುದರ್ಶನ್ ಬ್ಯಾಟಿಂಗ್ ನಡೆಸಿದರು ಎಂದು ಗವಾಸ್ಕರ್ ಗುಣಗಾನ ಮಾಡಿದ್ದಾರೆ.
ಐಪಿಎಲ್ 16ನೇ (IPL 2023) ಆವೃತ್ತಿಯಲ್ಲಿ ಯುವ ಆಟಗಾರರ ಅಬ್ಬರ ಜೋರಾಗಿದೆ. ಋತುರಾಜ್ ಗಾಯಕ್ವಾಡ್ (Ruturaj Gaikwad), ಶುಭ್ಮನ್ ಗಿಲ್ (Shubman Gill), ತಿಲಕ್ ವರ್ಮಾ (Tilak Varma).. ಹೀಗೆ ಯಂಗ್ ಸ್ಟರ್ಗಳು ಐಪಿಎಲ್ ಅಖಾಡದಲ್ಲಿ ದೂಳೆಬ್ಬಿಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಗುಜರಾತ್ ಟೈಟಾನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್ (Sai Sudharsan) ಸೇರಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ದಿಗ್ಗಜ ಕ್ರಿಕೆಟಿಗರ ನಾಲಗೆಯಲ್ಲಿ ಹರಿದಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೊಗಸಾದ ಅರ್ಧಶತಕ ಸಿಡಿಸಿದ್ದೇ ಸುದರ್ಶನ್ಗೆ ಪ್ರಶಂಸೆಯ ಸುರಿಮಳೆ ಬರಲು ಕಾರಣ. ಸಾಯಿ ಸುದರ್ಶನ್ ಅವರ ನೋಡಿದ ಆಟಗಾರರು, ಮಾಜಿ ಕ್ರಿಕೆಟರ್ಸ್ ಹೇಳುತ್ತಿರುವುದು ಒಂದೇ ಪದ, ಈತ ಭವಿಷ್ಯದ ತಾರೆ ಎಂಬುದು. ಸ್ಟಾರ್ ಆಟಗಾರರೇ, ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ತಾಳ್ಮೆಯುತ ಮತ್ತು ಕೆಚ್ಚೆದೆಯ ಹೋರಾಟ ನಡೆಸಿದ ಸುದರ್ಶನ್, ದಿಗ್ಗಜರ ಮನ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಬೌಲರ್ಗಳಿಗೂ ನಿರಾಯಾಸವಾಗಿ ಬೆಂಡೆತ್ತಿದ ತಮಿಳುನಾಡು ಆಟಗಾರ, ಮೊದಲ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದರು.
2ನೇ ಪಂದ್ಯದಲ್ಲಿ ನೇರವಾಗಿ ತಂಡದಲ್ಲಿ ಅವಕಾಶ ಪಡೆದ 21 ವರ್ಷದ ಎಡಗೈ ಬ್ಯಾಟರ್, ಮನಮೋಹಕ ಹಾಫ್ ಸೆಂಚುರಿ ಸಿಡಿಸಿ, ಪಂದ್ಯದ ಗೆಲುವಿನ ರೂವಾರಿ ಎನಿಸಿದರು. ಆ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ ನಂಬಿಕೆ ಉಳಿಸಿಕೊಂಡರು. ಮೊದಲ ಪಂದ್ಯದಲ್ಲಿ ಸಾಯಿ, ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಕೇನ್ ವಿಲಿಯಮ್ಸನ್ ಅವರ ಸ್ಥಾನಕ್ಕೆ 3ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು 22 ರನ್ ಗಳಿಸಿದ್ದರು.
2ನೇ ಪಂದ್ಯದಲ್ಲಿ ಅಜೇಯ 62 ರನ್
ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 22 ರನ್ ಗಳಿಸಿದ್ದ ಸುದರ್ಶನ್, ಸಿಕ್ಕ ಎರಡನೇ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಡೆಲ್ಲಿ ನೀಡಿದ್ದ 163 ರನ್ಗಳ ಸವಾಲಿನ ಗುರಿಯನ್ನು ಬೆನ್ನುತ್ತುವಾಗ ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್ ಒಬ್ಬರ ಹಿಂದೊಬ್ಬರು ಪೆವಿಲಿಯನ್ ದಾರಿ ಹಿಡಿದರು. ಆದರೆ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಸುದರ್ಶನ್, ಅಜೇಯ ಅರ್ಧಶತಕ ಸಿಡಿಸಿ ಗಮನ ಸೆಳೆದರು. 92 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ ಸುದರ್ಶನ್, 48 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 62 ರನ್ ಚಚ್ಚಿದರು.
ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು, ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಅನುಭವಿ ಆಟಗಾರನಂತೆ ಸುದರ್ಶನ್ ಬ್ಯಾಟಿಂಗ್ ನಡೆಸಿದರು ಎಂದು ಗವಾಸ್ಕರ್ ಗುಣಗಾನ ಮಾಡಿದ್ದಾರೆ. ಇದೇ ಪ್ರದರ್ಶನ ಮುಂದುವರೆದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶ ನೀಡುವ ದಿನಗಳು ದೂರ ಇರುವುದಿಲ್ಲ ಎಂದು ಹೇಳಿದ್ದಾರೆ.
ಗವಾಸ್ಕರ್ ಜೊತೆಗೆ ಅನಿಲ್ ಕುಂಬ್ಳೆ ಸಹ ತಮಿಳುನಾಡು ಕ್ರಿಕೆಟಿಗನ ಬ್ಯಾಟಿಂಗ್ ನೋಡಿ ಮಂತ್ರಮುಗ್ಧರಾಗಿದ್ದಾರೆ. ಸಾಯಿ ಸುದರ್ಶನ್ ತುಂಬಾ ಸಂಘಟಿತ ಆಟಗಾರನಂತೆ ಕಾಣುತ್ತಿದ್ದರು. ವೇಗದ ಬೌಲಿಂಗ್ ಮತ್ತು ಸ್ವಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಅವರು ಮೊದಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೂ, 2ನೇ ಪಂದ್ಯದಲ್ಲಿ ಖಂಡಿತವಾಗಿಯೂ ಪ್ರಭಾವ ಬೀರಿದರು ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ. ಕಳೆದ ವರ್ಷ ದೇಶೀಯ ಪಂದ್ಯಗಳಲ್ಲಿ ಅಮೋಘ ಆಟವಾಡಿದ್ದ ಸಾಯಿ ಸುದರ್ಶನ್ ಅವರು, 20 ಲಕ್ಷ ಮೂಲ ಬೆಲೆಗೆ ಖರೀದಿ ಆಗಿದ್ದರು.