IPL 2023: ನತದೃಷ್ಟ ಆಟಗಾರರಿವರು; IPLನಲ್ಲಿ ಅಬ್ಬರಿಸುತ್ತಿರುವ ಈ ಪ್ಲೇಯರ್ಸ್ಗೆ ಕರುಣಿಸುತ್ತಾ ಬಿಸಿಸಿಐ?
Apr 05, 2023 08:48 PM IST
ಸಂಜು ಸ್ಯಾಮ್ಸನ್, ಚಹಲ್
- ‘ಗಾಯಗೊಂಡ ಸಿಂಹದ ಉಸಿರು, ಅದರ ಘರ್ಜನೆಗಿಂತಲೂ ಭಯಂಕರವಾಗಿರುತ್ತದೆ’! ಇದು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ಯುವ ಆಟಗಾರರಿಗೆ ಸರಿಯಾಗಿ ಅನ್ವಯವಾಗುತ್ತದೆ. ಯಾಕಂದರೆ, ಭಾರತ ತಂಡದಲ್ಲಿ ಅವಕಾಶ ಸಿಗದಿದ್ದರೂ, ಐಪಿಎಲ್ ರನ್ ಮಳೆ ಹರಿಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆಯೇ ಇಲ್ಲ. ದೇಶೀಯ ಕ್ರಿಕೆಟ್ನಲ್ಲಿ ಬೊಂಬಾಟ್ ಪ್ರದರ್ಶನದ ಮೂಲಕ ಭಾರತದ ತಂಡಕ್ಕೂ ಕಾಲಿಡುತ್ತಿದ್ದಾರೆ. ಆದರೆ, ತಂಡಕ್ಕೆ ಪ್ರವೇಶ ನೀಡಿದ ಎರಡು ಮೂರು ಪಂದ್ಯಗಳಿಗೆ, ಅಂತಹ ಆಟಗಾರರ ಕ್ರಿಕೆಟ್ ಭವಿಷ್ಯ ಕೊನೆ ಆಗುತ್ತಿರುವುದು ಬೇಸರದ ಸಂಗತಿ.
ಒಮ್ಮೆ ತಂಡಕ್ಕೆ ಬಂದು ಹೋದ ಯುವ ಆಟಗಾರ ಮತ್ತೆ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ, ತಂಡದಲ್ಲಿ ಜಾಗ ಎಂಬುದು ಮರೀಚಿಕೆಯಾಗಿದೆ. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾದ ಆಟಗಾರರು, IPLನಲ್ಲಿ ಧೂಳೆಬ್ಬಿಸುತ್ತಿರುವುದು ವಿಶೇಷ.
ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್ ಮತ್ತು ಯಜುವೇಂದ್ರ ಚಹಲ್ ಸೇರಿ ಪ್ರಮುಖ ಆಟಗಾರರು ನತದೃಷ್ಟ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಸದ್ಯ ಈ ಆಟಗಾರರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಬಿಸಿಸಿಐಗೆ ಸಖತ್ ಪಂಚ್ ನೀಡುತ್ತಿದ್ದಾರೆ. ಅವರ ಪ್ರದರ್ಶನ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಗಾಯಕ್ವಾಡ್ ಮಿಂಚು
ಋತುರಾಜ್ ಗಾಯಕ್ವಾಡ್ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 6 ತಿಂಗಳಾಗಿದೆ. ಆದರೆ 1 ಪಂದ್ಯವನ್ನಷ್ಟೇ ಆಡಿದ್ದಾರೆ. ಎರಡು ವರ್ಷಗಳ ಹಿಂದೆ T20ಗೆ ಡೆಬ್ಯೂ ಮಾಡಿದ್ದು, 9 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಎರಡು ಪಂದ್ಯಗಳನ್ನು ಆಡಿರುವ ಗಾಯಕ್ವಾಡ್, ಎರಡರಲ್ಲೂ ಅರ್ಧಶತಕ ಸಿಡಿಸಿದ್ದಾರೆ. 149 ರನ್ ಗಳಿಸಿರುವ ಸಿಎಸ್ಕೆ ಆಟಗಾರ ಸದ್ಯ ಆರೆಂಜ್ ಕ್ಯಾಪನ್ನು ತನ್ನಲ್ಲಿಸಿರಿಕೊಂಡಿದ್ದಾರೆ.
ರವಿ ಬಿಷ್ಣೋಯ್ ಗೂಗ್ಲಿ
ಗಾಯಕ್ವಾಡ್ ಅವರಂತೆ ರವಿ ಬಿಷ್ಣೋಯ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ನಂತರ 6 ತಿಂಗಳಲ್ಲಿ ಕೇವಲ 1 ಏಕದಿನ ಪಂದ್ಯವನ್ನು ಆಡಿದ್ದಾರೆ. ಅಲ್ಲದೆ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಒಂದೇ ಒಂದು ಟಿ20 ಪಂದ್ಯವನ್ನೂ ಆಡಿಲ್ಲ. ಆದರೀಗ ಈ IPL ಸೀಸನ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ ರವಿ ಬಿಷ್ಣೋಯ್ ಇದುವರೆಗೆ 2 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.
ಚೆಂಡಿನಿಂದ ಚಹಲ್ ಮ್ಯಾಜಿಕ್
ಆದರೆ ರಾಷ್ಟ್ರೀಯ ತಂಡದಲ್ಲಿ ಯಜುವೇಂದ್ರ ಚಹಲ್ ಸ್ಥಿತಿ ಅಧೋಗತಿಗೆ ಸಿಲುಕಿದೆ. ಕಳೆದ ಆಸ್ಟ್ರೇಲಿಯಾ ಸರಣಿಯಲ್ಲೂ ಸ್ಥಾನ ಪಡೆಯುವಲ್ಲಿ ವಿಫಲರಾದರು. ಅದಕ್ಕೂ ಹಿಂದಿನ ಸರಣಿಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಋತುವಿನಲ್ಲಿ ಚಹಲ್ ತಮ್ಮ ಲೆಗ್ ಸ್ಪಿನ್ ಮೂಲಕ ಮ್ಯಾಜಿಕ್ ಸೃಷ್ಟಿಸುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ ಮೊದಲ ಪಂದ್ಯದಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಬ್ಯಾಟ್‌ನಿಂದ ದಾಳಿ ನಡೆಸಿದ ಸ್ಯಾಮ್ಸನ್
ರಾಷ್ಟ್ರೀಯ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದ ಸಂಜು ಸ್ಯಾಮ್ಸನ್‌ಗೆ ಅವಕಾಶ ಎಂಬುದು ಮರೀಚಿಕೆಯಾಗಿದೆ. IPLಗೂ ಮೊದಲು ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಯಾಮ್ಸನ್ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಸ್ಯಾಮ್ಸನ್ ಕಳೆದ ವರ್ಷ ನವೆಂಬರ್‌ನಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಇದೀಗ IPLನಲ್ಲಿ ಖಡಕ್ ಬ್ಯಾಟಿಂಗ್ ಮೂಲಕ ಬಿಸಿಸಿಐಗೆ ಸಖತ್ ಪಂಚ್ ಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ 171ರ ಸ್ಟ್ರೈಕ್ರೇಟ್ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದರು.
ಶಿಖರ್ ಧವನ್ ಮಿಂಚು
ಶಿಖರ್ ಧವನ್ ಕೂಡ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ 40 ರನ್ಗಳಿಸಿದ್ಧ ಧವನ್, 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆದರೆ ಆತನಿಗೆ ತಂಡದಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಈ ಎಲ್ಲಾ ಆಟಗಾರರಿಗೆ ಬಿಸಿಸಿಐ ಈ ಬಾರಿಯಾದರೂ ಕರುಣೆ ನೀಡುತ್ತಾ ಎಂಬುದು ಕಾದುನೋಡೋಣ.