Neeraj Chopra: ದೇಶದ ಧ್ವಜವಿಲ್ಲದೆ ನಿಂತಿದ್ದ ಬೆಳ್ಳಿ ಗೆದ್ದ ಪಾಕ್ ಆಟಗಾರ; ತಿರಂಗಾ ಪಕ್ಕ ನಿಲ್ಲುವಂತೆ ಕೋರಿದ ನೀರಜ್ ಚೋಪ್ರಾ; ಆಗಿದ್ದೇನು?
Aug 28, 2023 02:55 PM IST
ತಿರಂಗಾ ಪಕ್ಕ ನಿಲ್ಲುವಂತೆ ಕೋರಿದ ನೀರಜ್ ಚೋಪ್ರಾ.
- Neeraj Chopra: ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಸ್ವರ್ಣ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships 2023) ಭಾರತವು (India) ಐತಿಹಾಸಿಕ ಸಾಧನೆ ಮಾಡಿದೆ. ಜಾವೆಲಿನ್ ಥ್ರೋ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಚಾರಿತ್ರಾತ್ಮಕ ಚಿನ್ನದ ಪದಕವನ್ನು ಜಯಿಸಿದೆ. ಈ ಕನಸು ನನಸಾಗಲು ಕಾರಣವಾಗಿದ್ದು ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ (Neeraj Chopra) ಅವರಿಂದ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚಿನ್ನ ಗೆದ್ದ ಬಳಿಕ ಬೆಳ್ಳಿ ಪದಕ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಅವರನ್ನು ಭಾರತದ ಧ್ವಜದ ಪಕ್ಕ ನಿಲ್ಲುವಂತೆ ಕೋರಿದ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಶನಿವಾರ (ಪಂದ್ಯ ನಡೆದಿದ್ದು ರಾತ್ರಿ) ನಡೆದ ಫೈನಲ್ನಲ್ಲಿ ಬರೋಬ್ಬರಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಈಗ ವಿಶ್ವ ಅಥ್ಲೀಟ್ ಚಾಂಪಿಯನ್ಶಿಪ್ನಲ್ಲೂ ಸ್ವರ್ಣ ಗೆಲ್ಲುವ ಮೂಲಕ ಪ್ರಮುಖ 4 ಟೂರ್ನಿಗಳಲ್ಲೂ ಚಿನ್ನದ ಸಾಧನೆ ಮಾಡಿರುವ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ, ಡೈಮಂಡ್ ಲೀಗ್ನಲ್ಲೂ ಎರಡು ಸಲ ಚಿನ್ನಕ್ಕೆ ಕೊರೊಳೊಡ್ಡಿದ್ದಾರೆ.
ತಿರಂಗಾ ಬಳಿ ನಿಲ್ಲುವಂತೆ ಕೋರಿದ ನೀರಜ್
ಫೈನಲ್ನಲ್ಲಿ ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ, ಸಂಭ್ರಮದಲ್ಲಿ ಮಿಂದೆದ್ದರು. ಕ್ಯಾಮೆರಾಗಳು ಅವರ ಹಿಂದೆಯೇ ಇದ್ದರು. ಭಾರತದ ಧ್ವಜ ಹಿಡಿದು ಕ್ಯಾಮೆರಾ ಎದುರು ಮಿಂಚುತ್ತಿದ್ದರು. ಮತ್ತೊಂದೆಡೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ಸಹ ತಮ್ಮ ದೇಶದ ಧ್ವಜ ಹಿಡಿದು ಕ್ಯಾಮೆರಾ ಮುಂದೆ ಮಿಂಚುತ್ತಿದ್ದರು. ಆದರೆ, ಬೆಳ್ಳಿ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರ ಬಳಿ ತಮ್ಮ ದೇಶದ ಧ್ವಜ ಇರಲಿಲ್ಲ.
ಆಗ ನೀರಜ್ ಚೋಪ್ರಾ, ಅರ್ಷದ್ ನದೀಮ್ ತಮ್ಮ ಪಕ್ಕಕ್ಕೆ ಕರೆದರು. ಭಾರತದ ತ್ರಿವರ್ಣ ಧ್ವಜದ ಜೊತೆಗೆಯೇ ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದರು. ವಿಶೇಷ ಅಂದರೆ, ಬದ್ಧವೈರಿ ದೇಶದ ಆಟಗಾರನಾದರೂ, ಚೋಪ್ರಾ ಕರೆದ ತಕ್ಷಣವೇ ಆಗಮಿಸಿದ ನದೀಮ್, ತಿರಂಗಾ ಬಳಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ವಿಶೇಷವಾಗಿತ್ತು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ತುಂಬಾ ಅದ್ಭುತ ಸ್ನೇಹಿತರೂ ಆಗಿರುವ ಅವರೀಗ 2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಅವರನ್ನು ಕರೆದ ನೀರಜ್ ಚೋಪ್ರಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದು 3ನೇ ಪದಕ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೂ 2 ಪದಕ ಮಾತ್ರ ಗೆದ್ದಿತ್ತು. ಇದೀಗ ಚೋಪ್ರಾ ಅವರು ಮತ್ತೊಂದು ಪದಕ ಗೆದ್ದು ಅದನ್ನು 3ಕ್ಕೆ ಏರಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಕಳೆದ ವರ್ಷ ಕೂಡ ಚೋಪ್ರಾ ಅವರೇ ಒಂದು ಪದಕ ತಂದುಕೊಟ್ಟಿದ್ದರು. ಅದರಲ್ಲಿ ಅವರೇ ಜಯಿಸಿದ್ದರೆ, ಮತ್ತೊಂದನ್ನು 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್ಜಂಪ್ನಲ್ಲಿ ಅಂಜು ಬಾಬಿ ಜಾರ್ಚ್ ಕಂಚಿನ ಪದಕ ಗೆಲ್ಲುವ ಮೂಲಕ ಮೊದಲ ಪದಕ ತಂದುಕೊಟ್ಟಿದ್ದರು.
ನರೇಂದ್ರ ಮೋದಿ ಅಭಿನಂದನೆ
ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.