Bengaluru FC vs Kerala Blasters: ಇಂದಿನಿಂದ ISL ಫುಟ್ಬಾಲ್ ಹಬ್ಬ; ಬೆಂಗಳೂರು FCಗೆ ಕೇರಳ ಬ್ಲಾಸ್ಟರ್ಸ್ ಸವಾಲ್, ತಂಡಗಳ ಬಲಾಬಲ ಹೀಗಿದೆ
Sep 21, 2023 01:22 PM IST
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ SAFF ಚಾಂಪಿಯನ್‌ಶಿಪ್‌ನ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಗೋಲುಗಾಗಿ ಚೆಂಡನ್ನು ಕಿಕ್ ಮಾಡಿದ ಪರಿ
ಇಂದಿನಿಂದ 10ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್-ಐಎಸ್ಎಲ್ ಫುಟ್ಬಾಲ್ ಸಮರ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವೆ ಫೈಪೋಟಿ ನಡೆಯಲಿದೆ. ತಂಡಗಳ ಬಲಾಬಲ ಹೇಳಿದೆ ನೋಡಿ.
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್-ISLನಲ್ಲಿ (Indian Super League Football 2023) ಹೆಚ್ಚು ವಿವಾದಗಳು, ರೋಚಕತೆ ಸೇರಿದಂತೆ ಬರಪೂರ ಮನೆರಂಜನೆ ನೀಡುವ ಪಂದ್ಯಗಳಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿರುವುದು ಬೆಂಗಳೂರು ಎಫ್ (Bengaluru FC vs Kerala Blasters) ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯಗಳು ಮಾತ್ರ.
2023-24ನೇ ಸಾಲಿನ ಐಎಸ್‌ಎಲ್ ಲೀಗ್ ಇಂದಿನಿಂದ (ಸೆಪ್ಟೆಂಬರ್ 21, ಗುರುವಾರ) ಆರಂಭವಾಗುತ್ತಿದ್ದು, ಈ 10ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ ಮುಖಾಮುಖಿಯಾಗುತ್ತಿದ್ದು, ಕೊಚ್ಚಿಯ ಜವಾಹರಲಾಲ್ ನೆಹರೂ ಸ್ಟೇಡಿಯಂ ವೇದಿಕೆ ಕಲ್ಪಿಸಿದೆ. ಫುಟ್ಬಾಲ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಐಎಸ್‌ಎಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವೇ ಬಲಿಷ್ಠ
ಐಎಸ್‌ಎಲ್‌ನಲ್ಲಿ ಬೆಂಗಳೂರು ಸೂಪರ್ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. 2022-23ನೇ ಸಾಲಿನಲ್ಲಿ ಡುರಾಂಡ್ ಕಪ್ ಗೆದ್ದಿದ್ದರೆ, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಫ್ಲೇಆಫ್ ಮತ್ತು ಸೂಪರ್ ಕಪ್‌ನಲ್ಲಿ ಫೈನಲ್ ವರೆಗೆ ಬಂದಿತ್ತು. ಇದೀಗ ಕಳೆದ ವರ್ಷಕ್ಕಿಂತ ಈ ಬಾರಿಯ ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಆರಂಭದಿಂದಲೂ ಬೆಂಗಳೂರು ತಂಡ ಘರ್ಜಿಸಲು ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದೆ. ಚೀನಾದಲ್ಲಿ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಕಾರಣ ನಾಯಕ ಸುನಿಲ್ ಛೆಟ್ರಿ ಮತ್ತು ರೋಹಿತ್ ದಾನು ಅವರು ಸದ್ಯ ಬಿಎಫ್‌ಸಿ ತಂಡಕ್ಕೆ ಅಲಭ್ಯರಾಗಿರುವುದು ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
ಹೇಗಿದೆ ಕೇರಳ ಬ್ಲಾಸ್ಟರ್ಸ್ ಇತಿಹಾಸ
ಕೇರಳ ಬ್ಲಾಸ್ಟರ್ಸ್ ಇದುವರೆಗೆ ಇಂಡಿಯನ್ ಸೂಪರ್ ಲೀಗ್ ಗೆದ್ದಿಲ್ಲ. ದೇಶದಲ್ಲಿ ಅತ್ಯಂತ ಭಾವೋದ್ರಿಕ್ತ ಅಭಿಮಾನಿ ಬಳಗವನ್ನು ಹೊಂದಿದ್ದರೂ ಅವರಿಗೆ ಐಎಸ್‌ಎಲ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಶತಾಗತಾಯ ಕಪ್ ಗೆಲ್ಲಲೇಬೇಕೆಂಬ ದೃಢ ನಿರ್ಧಾರದೊಂದಿಗೆ ಕಣಕ್ಕಿಳಿಯುತ್ತಿದೆ. ಗೆಲುವುನೊಂದಿಗೆ ಅಭಿಯಾನವನ್ನು ಪ್ರಾರಂಭಿಸಬೇಕೆಂಬುದು ಇವರ ಗುರಿಯಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್ ಕೆಪಿ ಮತ್ತು ಬ್ರೈಸ್ ಮಿರಾಂಡಾ ಅವರನ್ನು ಕೇರಳ ಬ್ಲಾಸ್ಟರ್ಸ್ ಮಿಸ್ ಮಾಡಿಕೊಳ್ಳುತ್ತಿದೆ.
ಎರಡೂ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಿವೆ?
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇಳರ ಬ್ಲಾಸ್ಟರ್ಸ್ ಈವರೆಗೆ 13 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಬೆಂಗಳೂರು ತಂಡವೇ ಗೆಲುವು ಸಾಧಿಸಿದೆ. ಕೇರಳ ತಂಡ 3 ರಲ್ಲಿ ಗೆಲುವು ಪಡೆದಿದೆ. ಒಂದು ಪಂದ್ಯ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
2022ರ ನಾಕೌಟ್ ಹಂತದ ಪಂದ್ಯದಲ್ಲಿ ಭಾರಿ ವಿವಾದ
ಇಂಡಿಯನ್ ಸೂಪರ್ ಲೀಗ್‌ನ ಇತಿಹಾಸದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಕಳೆದ ವರ್ಷದ ಲೀಗ್‌ನಲ್ಲಿ ಎರಡೂ ತಂಡಗಳ ನಡುವಿನ ನಾಕೌಟ್ ಪಂದ್ಯ ಅತ್ಯಂತ ವಿವಾದದಿಂದ ಕೂಡಿತ್ತು.
ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ಗಳಿಸಿದ ಹೆಚ್ಚುವರಿ ಸಮಯದ ಗೋಲ್ ಬಗ್ಗೆ ಕೇರಳ ತಂಡದ ಕೋಚ್ ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ ಅವರು, ಪಿಚ್‌ನಿಂದ ಹೊರ ನಡೆದು ಆಕ್ರೋಶವನ್ನು ಹೊರನಡೆದಿದ್ದರು. ಕೋಚ್ ವುಕೊಮಾನೋವಿಕ್ ಅವರ ಈ ನಡೆಯಿಂದಾಗಿ ಆ ತಂಡ ಟೈ ಅವಕಾಶವನ್ನು ಕಳೆದುಕೊಂಡಿತ್ತು. ಇಂದಿನ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಬೆಂಗಳೂರು ಎಫ್‌ಸಿ ತಂಡ
ಗುರುಪ್ರೀತ್ ಸಿಂಗ್ ಸಂಧು (ಗೋಲ್ ಕೀಪರ್), ನಮ್‌ಗ್ಯಾಲ್ ಭುಟಿಯಾ, ಅಲೆಕ್ಸಾಂಡರ್ ಜೊವಾನೋವಿಕ್, ಪರಾಗ್ ಶ್ರೀನಿವಾಸ್, ನವೋರೆಮ್ ರೋಷನ್ ಸಿಂಗ್, ರೋಹಿತ್ ಕುಮಾರ್, ಸುರೇಶ್ ಸಿಂಗ್ ವಾಂಗ್ಜಮ್, ಜೇವಿಯರ್ ಹೆರ್‌ನಾಂಡೆಜ್, ರಯಾನ್ ವಿಲಿಯಮ್ಸ್, ಕರ್ಟಿಸ್ ಮೈನ್ ಹಾಲಿಚರಣ್ ನರ್ಜಾರಿ
ಕೇರಳ ಬ್ಲಾಸ್ಟರ್ಸ ತಂಡ
ಲಾರಾ ಶರ್ಮಾ (ಗೋಲ್ ಕೀಪರ್), ಪ್ರೀತಮ್ ಕೋಟಾಲ್, ಹಾರ್ಮಿಪಾಮ್ ರೂವಾಹ್, ಮಾರ್ಕೊ ಲೆಸ್ಕೋವಿಕ್, ಐಬಾನ್ ಡೊಹ್ಲಿಂಗ್, ಡ್ಯಾನಿಶ್ ಫಾರೂಕ್, ಜೀಕ್ಸನ್ ಸಿಂಗ್, ಆಡ್ರಿಯನ್ ಲೂನಾ, ಡೈಸುಕೆ ಸಕೈ, ಇಶಾನ್ ಪಂಡಿತಾ, ಕ್ವಾಮೆಹ್ ಪೆಪ್ರಾಹ್