Neeraj Chopra: ಡುಮ್ಮ ಅಂತ ಕರೆದರು, ಸಿನಿಮಾ ಹೀರೋ ಕೂಡ ಆಗಲಿಲ್ಲ ಈ ಯೋಧ; ಈಗ ಚಿನ್ನದ ಮೇಲೆ ಚಿನ್ನ ಗೆದ್ದ ರೈತನ ಮಗ, ರಿಯಲ್ ಹೀರೋ ಆಗಿದ್ದೇಗೆ
Jul 02, 2023 10:36 AM IST
ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜೀವನ ಕಥೆ
- Neeraj Chopra: ರೈತ ಕುಟುಂಬದ ಹುಡುಗ ಚಿನ್ನ ಗೆದ್ದಿದ್ದೇಗೆ? ಡುಮ್ಮ ಡುಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಈ ಹ್ಯಾಂಡ್ಸಮ್ ಹೀರೋ ಎಲ್ಲವನ್ನೂ ಮೆಟ್ಟಿ ನಿಂತಿದ್ದು ಹೇಗೆ? ಇಂದಿನ ‘ಸಖತ್ ಆಟ’ದ ಅಂಕಣದಲ್ಲಿ ನೀರಜ್ ಚೋಪ್ರಾರ ಕಲ್ಲು-ಮುಳ್ಳಿನ ಹಾದಿಯ ಕುರಿತು ಓದೋಣ ಬನ್ನಿ.
ನೀರಜ್ ಚೋಪ್ರಾ (Neeraj Chopra) ಇದೊಂದು ಹೆಸರು ಇವತ್ತು ಶತಕೋಟಿ ಭಾರತೀಯರಿಗೆ ಗೊತ್ತು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಬಂಗಾರದ ಬರ ನೀಗಿಸಿದ ವೀರ ಈತ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಶತಮಾನದಲ್ಲೇ ಯಾರೂ ಭಾರತೀಯರೇ ಮಾಡದಂತಹ ಸಾಧನೆಯನ್ನು ನೀರಜ್, ಮಾಡಿ ತೋರಿಸಿರುವುದು ನಮ್ಮ ಹೆಮ್ಮೆ. ಈಗ ಜೂನ್ 30ರಂದು ಡೈಮಂಡ್ ಲೀಗ್‌ನಲ್ಲಿ ಎಸೆದಿದ್ದು ಕೇವಲ ಈಟಿಯಲ್ಲ, ಚಿನ್ನದ ಈಟಿ. 140 ಕೋಟಿ ಭಾರತೀಯರ ಕನಸು ನನಸು ಮಾಡಿದ ಬಂಗಾರದ ಎಸೆತವದು.
ಆದರೆ, ಈ ಎಲ್ಲಾ ಬಂಗಾರದ ಪದಕದ ಬೇಟೆಯ ಹಿಂದಿನ ಪಯಣ, ಅಷ್ಟು ಸುಲಭವಾಗಿರಲಿಲ್ಲ. ಸಾಮಾನ್ಯ ರೈತ ಕುಟುಂಬದ ಹುಡುಗನೊಬ್ಬ ಭಾರತ ಮಾತೆಗೆ ಚಿನ್ನದ ಕಿರೀಟ ತೊಡಿಸಿದ್ದು ಹೇಗೆ? ಡುಮ್ಮ ಡುಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಈ ಹ್ಯಾಂಡ್ಸಮ್ ಹೀರೋ ಎಲ್ಲವನ್ನೂ ಮೆಟ್ಟಿ ನಿಂತಿದ್ದು ಹೇಗೆ? ಮೊಣಕೈ ಗಾಯದಿಂದ ಕಮರಿದ್ದ ಕನಸು ನನಸಾಗಿದ್ದು ಹೇಗೆ? ಚಿನ್ನದ ಹುಡುಗನ ಈ ಸ್ಟೋರಿ ನಿಮ್ಮ ಮೈಮನ ರೋಮಾಂಚನಗೊಳಿಸುತ್ತದೆ ಎಂಬುದು ಸುಳ್ಳಲ್ಲ.
ಒಂದೇ ವರ್ಷದಲ್ಲಿ ಎರಡು ಡೈಮಂಡ್ ಲೀಗ್
ಜೂನ್ 30ರಂದು ಶುಕ್ರವಾರ ಸ್ವಿಜರ್‌ಲೆಂಡ್‌ನಲ್ಲಿ ನಡೆದ ಪ್ರತಿಷ್ಠಿತ ಲಾಸೆನ್ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಮತ್ತೊಂದು ಚಿನ್ನ ಗೆದ್ದು ಭಾರತದ ಜಾವೆಲಿನ್ ಎಸೆತಗಾರ ಐತಿಹಾಸಿಕ ಸಾಧನೆಗೆ ಒಳಗಾಗಿದ್ದಾರೆ. ಆ ಮೂಲಕ ಒಂದೇ ವರ್ಷದಲ್ಲಿ ಎರಡು ಡೈಮಂಡ್ ಲೀಗ್ ಜಯಿಸಿದ ಕೀರ್ತಿಗೆ ಚಿನ್ನದ ಆಟಗಾರ ಭಾಜನರಾಗಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿ 3 ಸ್ಪರ್ಧೆಗಳಿಂದ ದೂರವಿದ್ದ 25ರ ವರ್ಷದ ನೀರಜ್ ಚೋಪ್ರಾ, ಸ್ವಿಜರ್‌ಲೆಂಡ್ ಲಾಸೆನ್ ಡೈಮಂಡ್ ಲೀಗ್‌ನಲ್ಲಿ ತಮ್ಮ 5ನೇ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲನ್ ಎಸೆದು ಸ್ವರ್ಣಕ್ಕೆ ಮುತ್ತಿಕ್ಕಿದರು. ಇದೇ ವರ್ಷ ಮೇ 5ರಂದು ನಡೆದಿದ್ದ ದೋಹಾ ಡೈಮಂಡ್ ಲೀಗ್‌ನಲ್ಲೂ 88.67 ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ಗೆದ್ದಿದ್ದರು. 2022ರ ಆಗಸ್ಟ್‌ನಲ್ಲಿ ನೀರಜ್ ತಮ್ಮ ಮೊದಲ ಡೈಮಂಡ್ ಲೀಗ್ ಪದಕ ಜಯಿಸಿದ್ದರು. ಆದರೆ, ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಯಾರಿಗೂ ತಿಳಿಯದ ಈತ, ಈಗ ವಿಶ್ವಖ್ಯಾತಿ ಪಡೆದಿದ್ದೇಗೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಶತಮಾನದ ದಾಖಲೆ
ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ, ಚಿನ್ನದ ಪದಕ ಮುಡಿಗೇರಿಸಿಕೊಂಡಿಸಿದ್ದಾರೆ. ಆ ಮೂಲಕ ಒಲಿಂಪಿಕ್ಸ್ನ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಸ್ವರ್ಣದ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಅಭಿನವ್ ಬಿಂದ್ರಾ 2008ರಲ್ಲಿ ಒಲಿಂಪಿಕ್ಸ್ನಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದೇ ಕೊನೆ. ಆ ನಂತರ ಇನ್ನೊಂದು ಚಿನ್ನ ಸಿಕ್ಕಿರಲಿಲ್ಲ. ಈಗ ಬರವನ್ನು ನೀರಜ್ ನೀಗಿಸಿದ್ದಾನೆ. ಈತನ ತೋಳ್ಬಲಕ್ಕೆ ಜಾವೆಲಿನ್ ಹಾರಿದ್ದು, 87.58 ಮೀಟರ್. ಸ್ವತಂತ್ರ ಬಂದ ಮೇಲೆ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನ ಅದಾಗಿತ್ತು. ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಭಾರತದಲ್ಲಿ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ಕೂಡ ಸಿಗುವುದು ಕಡಿಮೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ಭಾರತ ಪದಕ ಗೆದ್ದಿದ್ದು, ಶತಮಾನಗಳ ಹಿಂದೆ. ಅದು ಕೂಡ ಬ್ರಿಟೀಷರ ಕಾಲದಲ್ಲಿ.
ಕೇವಲ ಪೋಸ್ಟರ್ನಲ್ಲಿದ್ದ…
ಸ್ವತಂತ್ರ ಬಂದ ನಂತರ ಈ ವಿಭಾಗದಲ್ಲಿ ಯಾರೂ ಸಹ ಪದಕ ಗೆಲ್ಲುವ ಅಂಚಿಗೂ ಕೂಡ ಹೋಗಿರಲಿಲ್ಲ. ಆದರೆ ಹರಿಯಾಣದ ಹೀರೋ ನೀರಜ್ ಚೋಪ್ರಾ, ಅಸಾಧ್ಯವಾದನ್ನು ಸಾಧಿಸಿ ತೋರಿಸಿದ್ದಾರೆ. ಮುದ್ದು ಮುದ್ದಾಗಿರುವ ಹುಡುಗ ಹಾದಿ ಕಲ್ಲುಮುಳ್ಳಿನದ್ದೇ ಆಗಿದ್ದರೂ, ಗುರಿ ಇದ್ದದ್ದು ಮಾತ್ರ ಚಿನ್ನದ ಮೇಲೆ. ಭಾರತದಲ್ಲಿ ಕ್ರೀಡಾ ಕೂಟ ಪ್ರಸಾರ ಮಾಡುತ್ತಿದ್ದ ವಾಹಿನಿಯ ಪ್ರಮೋಷನ್ ಪೋಸ್ಟರ್ನಲ್ಲಿದ್ದ ಈತ ಯಾರಿಗೂ ಗೊತ್ತೇ ಇಲ್ಲ. ಇವತ್ತು ಈ ಹುಡುಗನನ್ನು ಜಗತ್ತೇ ಹಿಂತಿರುಗಿ ನೋಡುತ್ತಿದೆ.
ದಪ್ಪ ಇದ್ದಾನೆ, ಇವನ ಕೈಲಿ ಏನೂ ಆಗಲ್ಲ ಅಂದರು
ಇವನ ಕೈಯಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗಲ್ಲ ಎನ್ನುತ್ತಿದ್ದವರ ತಲೆ ತಿರುಗುವಂತೆ ಮಾಡಿದೆ. ಮೊದಲು ಡುಮ್ಮ ಡುಮ್ಮ ಎಂದು ಎನ್ನುತ್ತಿದ್ದವರು ಈಗ ಹ್ಯಾಡ್ಸಮ್ ಎನ್ನುತ್ತಿದ್ದಾರೆ. ಹೌದು.. ಇದರ ಹಿಂದೆ ಒಂದು ಕಾರಣವೂ ಅಡಗಿದೆ. ನೀರಜ್, ಬೊಜ್ಜಿನ ಕಾರಣಕ್ಕಾಗಿ ಭರ್ಜರಿ ಎಸೆದವನು. ಪಾಣಿಪತ್ನ ರಣಭೂಮಿಯಲ್ಲಿ ಹುಟ್ಟಿದ ಹುಡುಗ. ರೈತನ ಮನೆಯಲ್ಲಿ ಹುಟ್ಟಿದ ಈತ ತನ್ನ 11ನೇ ವಯಸ್ಸಿನಲ್ಲಿ 85 ಕೆಜಿ ತೂಕ ಇದ್ದ. 12ನೇ ವಯಸ್ಸಿಗೆ 90 ಕೆಜಿ. ಇದೀಗ ಅದೇ ಬೊಜ್ಜಿನ ಹುಡುಗನ ಸಮಕ್ಕೆ ಇಡೀ ಪ್ರಪಂಚದಲ್ಲೇ ಜಾವೆಲಿನ್ ಎಸೆಯುವ ಇನ್ನೊಬ್ಬ ಭೂಪ ಹುಟ್ಟಿಲ್ಲ.
ಹೌದು, ನೀರಜ್ ಚೋಪ್ರಾ, ಅಗತ್ಯಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರು. ನೆರೆಮನೆಯರು ಇರಲಿ, ಮನೆಯವರೇ ಹೀಯಾಳಿಸುತ್ತಿದ್ದರು. ಈ ಚುಚ್ಚು ಮಾತುಗಳಿಂದ ಬೇಸತ್ತಿದ್ದ ಚೋಪ್ರಾ, ತೂಕ ಕಳೆದುಕೊಳ್ಳುವ ಸಲುವಾಗಿ ಪಾಣಿಪತ್ನ ಮೈದಾನಕ್ಕೆ ಹೆಜ್ಜೆ ಇಡುತ್ತಾನೆ. ಕೇವಲ ತೂಕ ಇಳಿಸಿಕೊಂಡರೆ ಸಾಕು ಎಂದು ಸ್ಟೇಡಿಯಂನಲ್ಲಿ ಓಡುತ್ತಿದ್ದವ ಆಗ, ಜಾವೆಲಿನ್ ಥ್ರೋ ಪಟು ಜಯಚೌದರಿ ಕಣ್ಣಿಗೆ ಬೀಳುತ್ತಾನೆ. ಅಂದಿನಿಂದ ನೀರಜ್ ಜೀವನ ಬದಲಾಯ್ತು. ಭಾರತದ ಭವ್ಯ ಚರಿತ್ರೆಯ ಪುಟದಲ್ಲಿ ಹೆಸರು ದಾಖಲಾಗಿದೆ.
ಭಾರತೀಯ ಸೇನೆಯಲ್ಲೂ ಸೇವೆ
ಹಾಗಂತ ನೀರಜ್ಗೆ ಇದು ಮೊದಲ ಚಿನ್ನ ಅಲ್ಲ, 2016ರ ಐಎಎಎಫ್ ಅಂಡರ್-20 ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಾಗಿನಿಂದ ನೀರಜ್ ಹೆಸರು ಚಾಲ್ತಿಗೆ ಬಂದಿತ್ತು. ನಂತರ ಏಷ್ಯನ್ ಅಥ್ಲೆಟಕ್ಸ್ ಚಾಂಪಿಯನ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್.. ಹೀಗೆ ಎಲ್ಲಾ ಕಡೆಯಲ್ಲೂ ಬಂಗಾರದ ಬೇಟೆಯಾಡಿದ ನೀರಜ್ ಚೋಪ್ರಾ, ಈಗಲೂ ಅದನ್ನು ಮುಂದುವರೆಸುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಈತ ಕ್ರೀಡಾಪಟು ಮಾತ್ರ, ಭಾರತದ ಯೋಧ ಕೂಡ ಆಗಿದ್ದರು. ಎದುರಾಳಿ ವಿರುದ್ಧ ಹೋರಾಡುವಾಗ ಭಾರತ ಮಾತೆಯನ್ನು ಯಾವ ರೀತಿ ತಲೆ ತಗ್ಗಿಸದಂತೆ ನೋಡಿಕೊಳ್ಳುತ್ತೇವೆಯೇ, ಅದೇ ರೀತಿ ಟೋಕಿಯೋದಿಂದ ಭಾರತೀಯರು ತಲೆ ತಗ್ಗಿಸದಂತೆ ನೋಡಿಕೊಂಡ.
ಕನಸೊಂದು ಕಮರಿಸುವ ಆಘಾತ ಎದುರಾಗಿತ್ತು!
2016ರಲ್ಲಿ ಭಾರತೀಯ ಸೇನೆ ಸೇರಿದ್ದ ಈತ, ಇಂದು ಇಂಡಿಯನ್ ಆರ್ಮಿಯ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇನೆ ಸೇರಿದರೂ, ಛಲಬಿಡದ ತ್ರಿವಿಕ್ರಮನಂತೆ ಹೋರಾಡಿದ ಈ ಚೆಂದದ ಹುಡುಗ ಇಂದು ವಿಶ್ವವನ್ನೇ ಗೆದ್ದು ಬೀಗಿದ್ದಾನೆ. ಛಲದಂಕಮಲ್ಲನಿಗೆ 2018ರಲ್ಲಿ ಕನಸೊಂದು ಕಮರಿಸುವ ಆಘಾತವೊಂದು ನಡೆದಿತ್ತು. ಯಾವ ಕೈಯಲ್ಲಿ ಜಾವೆಲಿನ್ ಎಸೆಯುತ್ತಿದ್ದನೋ, ಅದೇ ಕೈನ ಮೊಣಕೈನಲ್ಲಿ ನೋವು ಕಾಣಿಸಿಕೊಂಡಿತ್ತು. ಆದರೆ ಇದನ್ನು ಲೆಕ್ಕಿಸದೆ ನೀರಜ್ ಚೋಪ್ರಾ ಪ್ರಾಕ್ಟೀಸ್ ಮಾಡುತ್ತಾರೆ. 2019ರ ಏಪ್ರಿಲ್ ಸಮಯದಲ್ಲಿ ಜಾವೆಲಿನ್ ಎಸೆಯೋದಿರಲಿ, ಅದನ್ನು ಎತ್ತಲು ಸಹ ಸಾಧ್ಯವಾಗದಷ್ಟು ವೀಪರೀತ ನೋವು ಕಾಣಿಸಿಕೊಂಡಿತ್ತು.
ಛಲದಂಕಮಲ್ಲ
ಇದರಿಂದ ಮೊಣಕೈ ಸರ್ಜರಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ವರ್ಷ ನಡೆದ ವಿಶ್ವ ಚಾಂಪಿಯನ್ ಆಗುವ ಕನಸು ಕಸದ ಬುಟ್ಟಿಗೆ ಸೇರಿತ್ತು. ಹಾಗಂತ ಸೋಲು ಒಪ್ಪಿರಲಿಲ್ಲ. ಹೇಳಿ ಕೇಳಿ ಭಾರತದ ಸೇನೆಯ ಯೋಧ. ವಿಶ್ವ ಚಾಂಪಿಯನ್ನಲ್ಲಿ ಆಡಲು ಸಾಧ್ಯವಾಗದಿದ್ದರೇ ಏನಂತೆ, ಒಲಿಂಪಿಕ್ಸ್ನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಕನಸಿನೊಂದಿಗೆ ಮತ್ತೆ ಪ್ರಾಕ್ಟೀಸ್ ಆರಂಭಿಸಿದ್ದ. ತಾನು ಗಾಯಾಳುವಾಗಿದ್ದಾಗ ಸೌತ್ ಆಫ್ರಿಕಾದ ವಿಮಾನ ಹತ್ತಿದ ಆತ, ಸಾಕಷ್ಟು ಕಠಿಣ ತರಬೇತಿ ಪಡದನು. ಅಂದಿನ ಎಸಿಎನ್ಡಬ್ಲ್ಯು ಲೀಗ್‌ನಲ್ಲಿ ಭಾಗವಹಿಸಿದ್ದರು. 87.86 ಮೀಟರ್ ದೂರ ಎಸೆಯುವ ಮೂಲಕ ಒಲಿಂಪಿಕ್ಸ್ಗೆ ಕ್ವಾಲಿಫೈ ಆದರು. ಟೂರ್ನಿಗೆ ಕೇವಲ 6 ತಿಂಗಳ ಬಾಕಿ ಇತ್ತು. ಆದರೆ ನೀರಜ್ ಎಡಗೈ ಇನ್ನೂ ಗುಣವಾಗಿರಲಿಲ್ಲ. ನೋವು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು. ಆ ಸಮಯದಲ್ಲಿ ಕೊರೊನಾ ರುದ್ರ ತಾಂಡವಾಡುತ್ತಿತ್ತು.
ಮೈಕೊಡವಿ ನಿಂತ ಶೂರ
ಪ್ರಾಕ್ಟೀಸ್ಗಾಗಿ ಟರ್ಕಿಗೆ ಹೋದರೆ, ಕೊರೊನಾ ಕಾರಣ ನೀಡಿ, ವಾಪಸ್ ಕಳುಹಿಸಿದ್ದರು. ಭಾರತಕ್ಕೆ ಬಂದ 14 ದಿನಗಳ ಕ್ವಾರಂಟೀನ್ ಮುಗಿಸಿ ಪಟಿಯಾಲದ ಕ್ರೀಡಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ಹೋದರೆ, ಲಾಕ್ಡೌನ್ ಕಾರಣದಿಂದ ಈಗ ಪ್ರಾಕ್ಟೀಸ್ ಮಾಡುವ ಹಾಗಿಲ್ಲ. ಪ್ರಾಕ್ಟೀಸ್ ಮುಂದೂಡಲಾಗಿದೆ ಎನ್ನುತ್ತಾರೆ. ಇದೆಲ್ಲವೂ ಮುಗಿದು ಪ್ರಾಕ್ಟೀಸ್ನಲ್ಲಿ ತೊಡಗಿದರೆ, ಅದೊಂದು ದಿನ ಕಾಲು ಜಾರಿ ಬಿದ್ದ ಚೋಪ್ರಾ, ಕಾಲಿನ ಪಾದವು ಸಂಪೂರ್ಣ ಗಾಯವಾಗಿತ್ತು. ಓಡೋದು ಇರಲಿ, ಹೆಜ್ಜೆಯೂರಿ ನಡೆಯುವುದೇ ಅಸಾಧ್ಯವಾಗಿತ್ತು. ಆಸ್ಪತ್ರೆ ಸೇರಿ ಬಿಡುತ್ತಾರೆ.
ಬದುಕೇ ಮುಗಿದೋಯ್ತು ಎನ್ನುವ ಸಂದರ್ಭದಲ್ಲಿ ಈ ಹುಡುಗ ಛಲ ಬಿಡಲಿಲ್ಲ. ನನಗೇನು ಆಗೇ ಇಲ್ಲ ಎನ್ನುವಂತೆ ಮೈಕೊಡವಿ ನಿಂತು, ಸದಾ ಅಗ್ನಿ ಪರೀಕ್ಷೆಗೆ ಇಡುತ್ತಿದ್ದ ದೇವರೇ ಸೋಲನ್ನೊಪ್ಪಿಕೊಂಡು ಶರಣಾಗುವಂತೆ ಮಾಡಿದ್ದ. ಈತನ ಸಾಧನೆಯ ಹಿಂದೆ ಕನ್ನಡಿಗನ ಶ್ರಮ ಕೂಡ ಇದೆ. ಕನ್ನಡಿಗ ಕಾಶೀನಾಥ್ ನಾಯಕ್ ಕೂಡ ಚೋಪ್ರಾಗೆ ತರಬೇತಿ ಕೊಟ್ಟಿದ್ದಾರೆ. ಇನ್ನೂ ನೀರಜ್ ಚೋಪ್ರಾ ಅವರ ಮುಡಿಗೆ ಅರ್ಜುನ ಪ್ರಶಸ್ತಿ ಕೂಡ ಒಲಿದಿದೆ. ಸ್ಫುರದ್ರೂಪಿಯಾಗಿದ್ದ ನೀರಜ್ಗೆ ಮಾಡೆಲಿಂಗ್ ಮಾಡಬೇಕೆಂಬ ಆಸೆಯೂ ಇತ್ತು. ಆದರೆ, ಯಾರೂ ಅವಕಾಶ ನೀಡಲಿಲ್ಲ. ಇದೀಗ ಆತನನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ.
14 ಚಿನ್ನ, ಹಲವು ರಾಷ್ಟ್ರೀಯ ಪ್ರಶಸ್ತಿಗಳು
ನೀರಜ್ ಭಾರತವನ್ನು ಪ್ರತಿನಿಧಿಸುವ ಜೂನಿಯರ್ ಮತ್ತು ಸೀನಿಯರ್ ಹಂತಗಳಲ್ಲಿ ಪ್ರಭಾವಶಾಲಿ 14 ಚಿನ್ನ ಸೇರಿದಂತೆ 21 ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. 2018ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅವರಿಗೆ ಪದ್ಮಶ್ರೀ ಮತ್ತು ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಲಾಯಿತು.
ದಕ್ಷಿಣ ಏಷ್ಯಾ ಕೂಡ, ಏಷ್ಯನ್ ಜೂನಿಯನ್ ಚಾಂಪಿಯನ್‌ಶಿಪ್, ವಿಶ್ವ ಅಂಡರ್ 20 ಚಾಂಪಿಯನ್‌ಶಿಪ್, ಏಷ್ಯನ್ ಗ್ರ್ಯಾಂಡ್ ಫ್ರಿಕ್ಸ್ ಸರಣಿ, ಏಷ್ಯನ್ ಚಾಂಪಿಯನ್‌ಶಿಪ್, ಆಫೆನ್‌ಬರ್ಗ್ ಸ್ಪೀರ್‌ವರ್ಫ್ ಸಭೆ, ಕಾಮನ್ವೆಲ್ತ್ ಗೇಮ್ಸ್, ಒಲಂಪಿಕ್.. ಹೀಗೆ ಎಲ್ಲದರಲ್ಲೂ ಪದಕ ಜಯಿಸಿದ್ದಾರೆ. ಸದ್ಯ ಮುಂದಿನ ವರ್ಷ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯಲಿದೆ. ನೀರಜ್ ಚೋಪ್ರಾ ಇಲ್ಲೂ ಕೂಡ ಚಿನ್ನ ಸಿಗುವಂತೆ ಮಾಡಲಿ. ಆ ಮೂಲಕ ಭಾರತದ ಕೀರ್ತಿಯನ್ನು ಮತ್ತಷ್ಟು ಉನ್ನತ್ತಕ್ಕೇರಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.
*****
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ವಿಭಾಗ