logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್; ಈ ಅಂಕಿ-ಅಂಶಗಳೇ ಹೇಳುತ್ತೆ ಇದು ಸಾಧ್ಯವೆಂದು

ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್; ಈ ಅಂಕಿ-ಅಂಶಗಳೇ ಹೇಳುತ್ತೆ ಇದು ಸಾಧ್ಯವೆಂದು

Jayaraj HT Kannada

Oct 06, 2024 03:31 PM IST

google News

PKL 2024: ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್

    • Pardeep Narwal: ಪರ್ದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲೇ ಅತಿ ಹೆಚ್ಚು ರೈಡ್‌ ಪಾಯಿಂಟ್‌ ಗಳಿಸಿರುವ ದಾಖಲೆ ಹೊಂದಿರುವ ಆಟಗಾರ. ಪಿಕೆಎಲ್ 10ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಪರ ಆಡಿದ್ದ ಪರ್ದೀಪ್, ಈ ಬಾರಿ ಬೆಂಗಳೂರು ಬುಲ್ಸ್‌ ಪರ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.
PKL 2024: ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್
PKL 2024: ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್

ಪ್ರೊ ಕಬಡ್ಡಿ ಲೀಗ್ ಇದುವರೆಗೂ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. ಈ ಬಾರಿ ಪಿಕೆಎಲ್‌ನ 11ನೇ ಆವೃತ್ತಿ ನಡೆಯುತ್ತಿದೆ. ಕಳೆದ ಒಂದು ದಶಕದಲ್ಲಿ ನಡೆದ ಲೀಗ್‌ ಇತಿಹಾಸದಲ್ಲಿ, ಪರ್ದೀಪ್ ನರ್ವಾಲ್ ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ರೈಡರ್ ಆಗಿದ್ದಾರೆ. ಅವರು ಈ ಬಾರಿ ಬೆಂಗಳೂರು ಬುಲ್ಸ್‌ ಪರ ತೊಡೆ ತಟ್ಟಿ ನಿಲ್ಲಲು ಸಜ್ಜಾಗಿದ್ದಾರೆ. ಪಿಕೆಎಲ್‌ನ 2ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಮೂಲಕ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದ ಪರ್ದೀಪ್ ನರ್ವಾಲ್, ಆ ಬಳಿಕ ಬೇರೆ ತಂಡಗಳಲ್ಲಿ ಆಡಿದ್ದರು. ಈಗ ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ ಮತ್ತೊಮ್ಮೆ ಅವರು ಗೂಳಿಗಳ ಬಳಗ ಸೇರಿಕೊಂಡಿದ್ದಾರೆ. ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಪರ್ದೀಪ್‌, ಈ ಬಾರಿ ಮತ್ತೆ ಹೊಸತನದೊಂದಿಗೆ ಅಬ್ಬರಿಸಲು ಸಜ್ಜಾಗಿದ್ದಾರೆ.

ಪರ್ದೀಪ್ ತಮ್ಮ 9 ವರ್ಷಗಳ ಸುದೀರ್ಘ ಲೀಗ್ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಲೀಗ್‌ ಇತಿಹಾಸದಲ್ಲೇ ಅತಿ ಹೆಚ್ಚು ರೈಡ್‌ ಪಾಯಿಂಟ್‌ ಗಳಿಸಿರುವ ದಾಖಲೆಯೂ ಒಂದು. ಕೊನೆಯ ಬಾರಿಗೆ ನಡೆದ ಪಿಕೆಎಲ್ 10ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಪರ ಆಡಿದ್ದ ಪರ್ದೀಪ್, ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಈ ಬಾರಿ ಹೊಸ ತಂಡಕ್ಕೆ ಬಂದಿರುವ ಅವರು, ಮತ್ತೆ ಹಳೆಯ ಖದರ್‌ ತೋರುವ ನಿರೀಕ್ಷೆ ಮೂಡಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್ 11ರಲ್ಲಿ ಪರ್ದೀಪ್ ನರ್ವಾಲ್ ಮತ್ತೊಮ್ಮೆ ಲೀಗ್‌ನ ಅತ್ಯುತ್ತಮ ರೈಡರ್ ಆಗಬಹುದು. ಇದಕ್ಕೆ ಈ ಅಂಶಗಳೇ ಕಾರಣ.

ಪಿಕೆಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ರೇಡ್ ಪಾಯಿಂಟ್‌

ಪರ್ದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಯಶಸ್ವಿ ರೈಡರ್. ಈವರೆಗೆ ಅವರು 1690 ರೇಡ್ ಅಂಕಗಳನ್ನು ಗಳಿಸಿದ್ದಾರೆ. ಆ ಮೂಲಕ ಲೀಗ್ ಇತಿಹಾಸದಲ್ಲಿ 1500 ರೇಡ್ ಪಾಯಿಂಟ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪರ್ದೀಪ್ ಒಟ್ಟು 4 ಆವೃತ್ತಿಗಳಲ್ಲಿ 200ಕ್ಕೂ ಹೆಚ್ಚು ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಈ ಅಂಕಿ-ಅಂಶಗಳನ್ನು ನೋಡುವುದಾದರೆ, ಪರ್ದೀಪ್ 11ನೇ ಆವೃತ್ತಿಯಲ್ಲೂ ಅಬ್ಬರಿಸುವುದರಲ್ಲಿ ಅನುಮಾನವಿಲ್ಲ.

ಎರಡು ಋತುವಿನ ಅತ್ಯುತ್ತಮ ರೈಡರ್

ಪರ್ದೀಪ್ ನರ್ವಾಲ್ ತಮ್ಮ ಪ್ರೊ ಕಬಡ್ಡಿ ಲೀಗ್ ವೃತ್ತಿಜೀವನದಲ್ಲಿ ಈವರೆಗೆ ಒಟ್ಟು ಎರಡು ಬಾರಿ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಎರಡೂ ಬಾರಿ ಅವರು ಪಾಟ್ನಾ ಪೈರೇಟ್ಸ್ ತಂಡದಲ್ಲಿದ್ದರು. ಪಿಕೆಎಲ್‌ ಸೀಸನ್ 3ರಲ್ಲಿ ಒಟ್ಟು 16 ಪಂದ್ಯಗಳಲ್ಲಿ ಆಡಿದ್ದ ಪರ್ದೀಪ್, 116 ಅಂಕಗಳನ್ನು ಗಳಿಸಿದ್ದರು. ಆ ಬಳಿಕ ಸೀಸನ್ 5ರಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದ ಅವರು ಬರೋಬ್ಬರಿ 369 ರೇಡ್‌ ಪಾಯಿಂಟ್‌ ಗಳಿಸುವ ಮೂಲಕ ಕಬಡ್ಡಿ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದರು. ಇದೀಗ ಪರ್ದೀಪ್ ಪಿಕೆಎಲ್ 11ರಲ್ಲಿ ಮತ್ತೊಮ್ಮೆ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.

ನಾಯಕನಾಗಿ ಹಲವು ಅವಕಾಶ

ಪರ್ದೀಪ್ ನರ್ವಾಲ್ ಅವರು ಪಿಕೆಎಲ್ 11ರಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಪಿಕೆಎಲ್‌ 5ರಲ್ಲಿ ಪಾಟ್ನಾ ಪೈರೇಟ್ಸ್ ತಂಡದ ನಾಯಕನಾಗಿ ಅವರು 369 ರೇಡ್ ಪಾಯಿಂಟ್ ಗಳಿಸಿದ್ದರು.‌ ಈ ಬಾರಿ ಮತ್ತೊಮ್ಮೆ ಅವರಿಗೆ ನಾಯಕನ ಪಟ್ಟ ಸಿಕ್ಕಿದೆ. ನಾಯಕನಾಗಿ ಹಲವು ನಿರ್ಧಾರಗಳು ಪರ್ದೀಪ ಕೈಯಲ್ಲಿರಲಿದೆ. ಹೀಗಾಗಿ ಈ ಬಾರಿಯೂ ಅಬ್ಬರಿಸಿ ಮತ್ತೊಮ್ಮೆ ಯಶಸ್ವಿ ರೈಡರ್‌ ಆಗುವ ಅವಕಾಶಗಳಿವೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ