PKL Rules: ಪ್ರೊ ಕಬಡ್ಡಿ ಲೀಗ್ -11 ಆರಂಭಕ್ಕೂ ಮುನ್ನ ಆಟದ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ
Oct 09, 2024 03:37 PM IST
ಪ್ರೊ ಕಬಡ್ಡಿ ಲೀಗ್ -11 ಆರಂಭಕ್ಕೂ ಮುನ್ನ ಆಟದ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ
- PKL 11 Rules: ಜಗತ್ತಿನ ಎಲ್ಲಾ ಕ್ರೀಡೆಗಳಿಗೂ ಇರುವಂತೆಯೇ ಕಬಡ್ಡಿ ಆಟಕ್ಕೂ ಅದರದ್ದೇ ಆದ ನಿಯಮಗಳಿವೆ. ಕೋರ್ಟ್ ಅಳತೆ, ಫೌಲ್, ಆಟದ ಅವಧಿ ಎಷ್ಟು, ಬಾಲ್ಕ್ ಲೈನ್, ಬೋನಸ್ ಲೈನ್, ಸೂಪರ್ ಟ್ಯಾಕಲ್, ರಿವಿವ್ಯೂ ಸಿಸ್ಟಮ್ ಸೇರಿದಂತೆ ಪ್ರಮುಖ ನಿಯಮಗಳ ವಿವರ ಇಲ್ಲಿದೆ ನೋಡಿ.
Pro Kabaddi League 2024: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಸರಣಿಗಳ ನಡುವೆಯೇ ಕ್ರೀಡಾಭಿಮಾನಿಗಳು ಕಬಡ್ಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಭಾರತದಲ್ಲಿ ಐಪಿಎಲ್ ನಂತರ 2ನೇ ಯಶಸ್ವಿ ಲೀಗ್ ಎನಿಸಿಕೊಂಡಿರುವ ಪಿಕೆಎಲ್, ಮಿಲಿಯನ್ಗಟ್ಟಲೆ ವೀವ್ಸ್ ಪಡೆಯುತ್ತಿದೆ. ದಿನದಿಂದ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪಿಕೆಎಲ್, 11ನೇ ಆವೃತ್ತಿಯಲ್ಲೂ ಭರ್ಜರಿ ಯಶಸ್ಸು ಕಾಣುವ ಭರವಸೆಯಲ್ಲಿದೆ. 11ನೇ ಆವೃತ್ತಿಯು ಅಕ್ಟೋಬರ್ 18ರಿಂದ ಆರಂಭವಾಗಲಿದ್ದು, ಪ್ರೇಕ್ಷಕರಿಗೆ 3 ತಿಂಗಳ ಕಾಲ ಭರಪೂರ ಮನರಂಜನೆ ಒದಗಿಸಲಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ ಕಬಡ್ಡಿಯ ನಿಯಮಗಳು, ಕೋರ್ಟ್ ಅಳತೆ ಸೇರಿದಂತೆ ಇತರೆ ನಿಯಮಗಳ ವಿವರ ಇಲ್ಲಿದೆ.
ಕಬಡ್ಡಿ ಕೋರ್ಟ್ ಅಳತೆ ಎಷ್ಟಿರುತ್ತದೆ?
ಕಬಡ್ಡಿ ಅಂಕಣದ ಅಳತೆ ಎಷ್ಟಿರುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಮಹಿಳಾ ಕಬಡ್ಡಿ ಕೋರ್ಟ್ಗಿಂತ ಪುರುಷರ ಕಬಡ್ಡಿ ಅಂಗಳದ ಅಳತೆ ತುಸು ಹೆಚ್ಚಿರುತ್ತದೆ. ಕೋರ್ಟ್ 13 ಮೀಟರ್ ಉದ್ದ, 10 ಮೀಟರ್ ಅಗಲ ಇರುತ್ತದೆ. ಅಡಿ ಲೆಕ್ಕಾಚಾರದಲ್ಲಿ ಹೇಳುವುದಾದರೆ 33 ಅಡಿ ಅಗಲ, 43 ಅಡಿ ಉದ್ದ ಇರಲಿದೆ. ಆದರೆ, ಮಹಿಳಾ ಕಬಡ್ಡಿ ಕೋರ್ಟ್ 8X12 ಮೀಟರ್ ಇರುತ್ತದೆ. 2 ಕೋರ್ಟ್ಗಳನ್ನು ಸಮನಾಗಿ ವಿಭಜಿಸುವ ಗೆರೆಯನ್ನು ಮಿಡ್ ಲೈನ್ ಎನ್ನುತ್ತಾರೆ. ಒಂದು ಭಾಗದ ನಿರ್ದಿಷ್ಟ ಅಳತೆಯಲ್ಲಿ ಬಾಲ್ಕ್ ಲೈನ್, ಬೋನಸ್ ಲೈನ್ ಇರುತ್ತದೆ. ಮಿಡ್ ಲೈನ್ ಹಾಗೂ ಬಾಲ್ಕ್ ಲೈನ್ ನಡುವೆ 3.75 ಮೀಟರ್ ಅಂತರವಿರುತ್ತದೆ. ಹಾಗೆಯೇ ಕೊನೆಯ ಗೆರೆ ಹಾಗೂ ಬೋನಸ್ ಗೆರೆ ನಡುವೆ 1.75 ಮೀಟರ್ ದೂರ ಇರುತ್ತದೆ. ಇದೇ ಅಳತೆಯಲ್ಲೇ ಇನ್ನೊಂದು ಕೋರ್ಟ್ ಕೂಡ ಇರುತ್ತದೆ. ಉಭಯ ಕೋರ್ಟ್ಗಳ ಎರಡೂ ಬದಿಗಳಲ್ಲಿ 1 ಮೀಟರ್ ಅಗಲದ ಲಾಬಿ ಗೆರೆ ಇರುತ್ತದೆ. ಕಬಡ್ಡಿಯನ್ನು ಮಣ್ಣಿನ ನೆಲದಲ್ಲಿ, ಮರಳಿನ ನೆಲದಲ್ಲಿ ಅಥವಾ ಸಿಂಥೆಟಿಕ್ ಮ್ಯಾಟ್ಗಳಲ್ಲೂ ಆಡುತ್ತಾರೆ. ಪ್ರೊ ಕಬಡ್ಡಿ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯುತ್ತದೆ. ಇಲ್ಲಿ ಆಟಗಾರರು ಕೆಳಗೆ ಬಿದ್ದರೂ ಯಾವುದೇ ಗಾಯಗಳಾಗುವುದಿಲ್ಲ.
ಆಟಗಾರರ ಸಂಖ್ಯೆ
ತಂಡವೊಂದರಲ್ಲಿ ಆಡಲಿಳಿಯುವ ಆಟಗಾರರ ಸಂಖ್ಯೆ 7. ಆದರೆ ಮೂರರಿಂದ 5 ಬದಲಿ (Substitutions) ಆಟಗಾರರನ್ನು ಹೊಂದುವ ಅವಕಾಶ ಇದೆ. ಪ್ರಧಾನ ತಂಡದಲ್ಲಿರುವ ಆಟಗಾರರು ಗಾಯಗೊಂಡರೆ ಮೀಸಲು ಆಟಗಾರರಿಗೆ ಆಡಲು ಅವಕಾಶ ನೀಡಲಾಗುತ್ತೆ.
ಆಟದ ಅವಧಿ ಎಷ್ಟು?
ಕಬಡ್ಡಿ ಪಂದ್ಯದ ಅವಧಿ 40 ನಿಮಿಷ. ಪಂದ್ಯದ ಮೊದಲಾರ್ಧ 20ಕ್ಕೆ ಮುಕ್ತಾಯ. ಒಂದು ರೇಡ್ಗೆ 30 ಸೆಕೆಂಡ್ ಸಮಯ ಇರಲಿದೆ. ರೇಡಿಂಗ್ ಮಾಡುವವರು 30 ಸೆಕೆಂಡ್ಗಳಲ್ಲೂ ಕಬಡ್ಡಿ ಕಬಡ್ಡಿ ಎಂದು ಉಚ್ಚರಿಸುತ್ತಲೇ ಇರಬೇಕು. 30 ಸೆಕೆಂಡ್ ಒಳಗೆ ರೇಡರ್ ಕಬಡ್ಡಿ ಎಂದು ಹೇಳುವುದನ್ನು ನಿಲ್ಲಿಸಿದರೆ ಔಟೆಂದು ಅರ್ಥ.
ಬಾಲ್ಕ್ ಲೈನ್
ರೇಡ್ಗೆ ಹೋದ ಆಟಗಾರ ಮೊದಲು ಸಿಗುವ ಬಾಲ್ಕ್ ಲೈನ್ (Baulk Line) ದಾಟಿ ಮುಂದೆ ಹೋಗುವುದು ಕಡ್ಡಾಯ. ಆ ಗೆರೆ ದಾಟದೆ ವಾಪಸ್ ಬಂದರೆ ಔಟ್ ಎಂದರ್ಥ. ರೇಡ್ ಮಾಡುತ್ತಾ ಎದುರಾಳಿ ಆಟಗಾರನನ್ನು ಮುಟ್ಟಿದರೆ ರೇಡರ್ ಮತ್ತು ತಂಡಕ್ಕೆ ಅಂಕ ಸಿಗುತ್ತದೆ.
ಬೋನಸ್ ಲೈನ್
ರೇಡ್ಗೆ ಹೋದ ಆಟಗಾರ ಬಾಲ್ಕ್ ಲೈನ್ ಬಳಿಕ ಸಿಗುವ ಬೋನಸ್ ಲೈನ್ (Bonus Line) ಮುಟ್ಟಿದರೆ ಒಂದು ಬೋನಸ್ ಅಂಕ ಪಡೆಯುತ್ತಾರೆ. ಈ ಅಂಕ ಪಡೆಯಬೇಕೆಂದರೆ ಎದುರಾಳಿ ತಂಡದಲ್ಲಿ 6 ಅಥವಾ 7 ಡಿಫೆಂಡರ್ಸ್ ಇರಲೇಬೇಕು. ಅದು ಕೂಡ ಬೋನಸ್ ಲೈನ್ ಒಳಗೆ ರೈಡರ್ ಒಂದು ಕಾಲನ್ನಿಟ್ಟು ಮತ್ತೊಂದು ಕಾಲನ್ನ ಮೇಲೆತ್ತಿರಬೇಕು. ಆಗ ಮಾತ್ರ ಬೋನಸ್ ಅಂಕ ಸಿಗಲಿದೆ.
ಫೌಲ್
ಡಿಫೆಂಡರ್ಗಳು ರೇಡ್ಗೆ ಬಂದ ಆಟಗಾರನ ಬಟ್ಟೆ ಹಿಡಿದು ಎಳೆದರೆ, ಅದು ಫೌಲ್ ಆಗುತ್ತದೆ. ಅಮಾನುಷವಾಗಿ ವರ್ತಿಸಿದರೂ ಪೌಲ್ ಆಗುತ್ತದೆ. ಪೌಲ್ಗಳಲ್ಲಿ ಗ್ರೀನ್, ಯೆಲ್ಲೋ ಮತ್ತು ರೆಡ್ ಕಾರ್ಡ್ ಎಂಬ 3 ವಿಧಗಳಿವೆ. ಗ್ರೀನ್ ಕಾರ್ಡ್ ಎಂಬುದು ಮೊದಲಿಗೆ ಎಚ್ಚರಿಕೆ ನೀಡುವುದು ಎಂದರ್ಥ.
ಯೆಲ್ಲೋ ಕಾರ್ಡ್ ಎನ್ನುವುದು 2 ನಿಮಿಷಗಳ ಕಾಲ ಆಟದಿಂದ ನಿಷೇಧಕ್ಕೆ ಒಳಗಾಗುವುದು. ಇದರಿಂದ ಒಂದು ಟೆಕ್ನಿಕಲ್ ಅಂಕ ಎದುರಾಳಿ ತಂಡಕ್ಕೆ ಸಿಗಲಿದೆ. ಅಂಪೈರ್ ರೆಡ್ ಕಾರ್ಡ್ ಬಳಸಿದರೆ ಆ ಆಟಗಾರ ಇಡೀ ಪಂದ್ಯಕ್ಕೆ ನಿಷೇಧ. ಆ ಆಟಗಾರನಿಗೆ ಸಬ್ಸ್ಟಿಟ್ಯೂಟ್ ಇರುವುದಿಲ್ಲ. ಜತೆಗೆ ಎದುರಾಳಿ ತಂಡಕ್ಕೆ ಒಂದು ಟೆಕ್ನಿಕಲ್ ಅಂಕ ಕೂಡ ಸಿಗುತ್ತದೆ.
ಸ್ಕೋರಿಂಗ್ ವ್ಯವಸ್ಥೆ
ಯಾವುದೇ ತಂಡ ಗೆದ್ದರೆ ಅದಕ್ಕೆ 5 ಅಂಕ ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳು ತಲಾ 3 ಅಂಕ ಪಡೆಯುತ್ತವೆ. ಒಂದು ತಂಡವು ಏಳು ಅಂಕಗಳಿಗಿಂತ ಕಡಿಮೆ ಅಂತರದಿಂದ ಸೋತರೆ, ಅದು ಒಂದು ಅಂಕವನ್ನು ಪಡೆಯುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಅಂಕಗಳಲ್ಲಿ ಸೋತರೆ ಆ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ. ಅಂಕಗಳ ಸಂಖ್ಯೆಯನ್ನು ಆಧರಿಸಿ, ನಾಕೌಟ್ ಹಂತಗಳನ್ನು ನಿರ್ಧರಿಸಲಾಗುತ್ತದೆ.
ರಿವಿವ್ಯೂ ಸಿಸ್ಟಮ್: ಲೀಗ್ ಹಂತದಲ್ಲಿ ಪ್ರತಿ ತಂಡಕ್ಕೆ ಒಂದು ರಿವಿವ್ಯೂ ಇರಲಿವೆ. ಆದರೆ ನಾಕೌಟ್ಗಳಲ್ಲಿ ಪ್ರತಿ ತಂಡಕ್ಕೆ ಎರಡು ರಿವಿವ್ಯೂಗಳು ಇರಲಿವೆ. ಇದರಲ್ಲಿ ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ನಲ್ಲಿ ತಲಾ ಒಂದರಂತೆ ರಿವಿವ್ಯೂ ತೆಗೆದುಕೊಳ್ಳಬೇಕು.
ಸೂಪರ್ ಟ್ಯಾಕಲ್: ಹಾಲಿ ತಂಡವು ಅಂಕಣದಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ಆಟಗಾರರನ್ನು ಹೊಂದಿದ್ದರೆ, ಆ ಸಂದರ್ಭದಲ್ಲಿ ರೈಡರ್ನನ್ನು ಯಶಸ್ವಿ ಟ್ಯಾಕಲ್ ಮಾಡಿದರೆ ತಂಡವು ಎರಡು ಅಂಕಗಳನ್ನು ಗಳಿಸುತ್ತದೆ.
ಹೈ ಫೈವ್: ಡಿಫೆಂಡರ್ ಒಂದೇ ಆಟದಲ್ಲಿ 5 ಟ್ಯಾಕಲ್ ಪಾಯಿಂಟ್‌ಗಳನ್ನು (ಸೂಪರ್ ಟ್ಯಾಕಲ್ ಪಾಯಿಂಟ್‌ಗಳನ್ನು ಒಳಗೊಂಡಂತೆ) ಪಡೆದರೆ, ಅದನ್ನು ಹೈ ಫೈವ್ ಎನ್ನುತ್ತಾರೆ.
ಡಬಲ್: ಒಬ್ಬ ಆಟಗಾರ ಒಂದೇ ಆಟದಲ್ಲಿ ಸೂಪರ್ 10 ಮತ್ತು ಹೈ ಫೈವ್ ಎರಡನ್ನೂ ಪಡೆದರೆ, ಡಬಲ್ ಎನ್ನುತ್ತಾರೆ
ಸೂಪರ್ 10: ಒಬ್ಬ ರೈಡರ್ ಒಂದೇ ಆಟದಲ್ಲಿ ಹತ್ತು ರೇಡ್ ಪಾಯಿಂಟ್‌ಗಳನ್ನು (ಟಚ್ ಮತ್ತು ಬೋನಸ್ ಪಾಯಿಂಟ್‌ಗಳು) ಪಡೆದರೆ, ಅದನ್ನು ಸೂಪರ್ 10 ಎನ್ನುತ್ತಾರೆ.
ಸೂಪರ್ ರೈಡ್: ಒಬ್ಬ ರೈಡರ್ ತನ್ನ ತಂಡಕ್ಕೆ ಒಂದೇ ದಾಳಿಯಿಂದ ಮೂರು ಅಥವಾ ಹೆಚ್ಚಿನ ಅಂಕಗಳನ್ನು (ಟಚ್ ಅಥವಾ ಬೋನಸ್ ಅಥವಾ ತಾಂತ್ರಿಕ ಅಂಕಗಳಾಗಿರಬಹುದು) ಪಡೆದರೆ ಆ ದಾಳಿಯನ್ನು ಸೂಪರ್ ರೈಡ್ ಎಂದು ಕರೆಯಲಾಗುತ್ತದೆ.
ಡು ಆರ್ ಡೈ ರೈಡ್: ಒಂದು ತಂಡವು 2 ಬಾರಿ ಯಾರನ್ನೂ ಔಟ್ ಮಾಡದೆ ಖಾಲಿ ರೈಡ್ ನಡೆಸಿದ ನಂತರ 3ನೇ ರೈಡ್ ಡು ಆರ್ ಡೈ ಆಗಿರುತ್ತದೆ. ಆಗ ರೈಡರ್ ಅಂಕ ಗಳಿಸುವುದು ಕಡ್ಡಾಯ. ಒಂದು ಅಂಕ ಪಡೆಯದಿದ್ದರೆ ಆಗ ರೈಡರ್ ಔಟ್.