logo
ಕನ್ನಡ ಸುದ್ದಿ  /  ಕ್ರೀಡೆ  /  ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು ವಿಜಯಪುರ; ಜನವರಿ 9ರಿಂದ ರಾಷ್ಟ್ರೀಯ ಚಾಂಪಿಯನ್‌ಶಿಪ್‌

ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು ವಿಜಯಪುರ; ಜನವರಿ 9ರಿಂದ ರಾಷ್ಟ್ರೀಯ ಚಾಂಪಿಯನ್‌ಶಿಪ್‌

Jayaraj HT Kannada

Jan 07, 2024 08:42 PM IST

google News

ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು (File Photo)

    • ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿರಂತರವಾಗಿ ಎಂಟು ಚಿನ್ನದ ಪದಕ ಪಡೆದುಕೊಂಡಿರುವ ಬೆಂಗಳೂರಿನ ನವೀನ್ ಜಾನ್, ಏಷಿಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜು ಬಾಟಿ ಸೇರಿದಂತೆ ಅನೇಕ ಖ್ಯಾತನಾಮ ಸೈಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ.
ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು (File Photo)
ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು (File Photo) (AFP)

ವಿಜಯಪುರ: ಸೈಕ್ಲಿಂಗ್ ತವರಲ್ಲಿ ಸೈಕ್ಲಿಂಗ್ ಕಲರವಕ್ಕೆ ಕ್ಷಣಗಣನೆ ಎದುರಾಗಿದೆ. ಮಂಗಳವಾರದಿಂದ ನಾಲ್ಕು ದಿನಗಳ ಕಾಲ ವಿಜಯಪುರ ರಸ್ತೆಗಳಲ್ಲಿ ಸೈಕ್ಲಿಸ್ಟ್‌ಗಳ ಅಬ್ಬರ ಕಂಡು ಬರಲಿದೆ. ಹತ್ತಾರು ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ಗಳನ್ನು ಸೈಕ್ಲಿಂಗ್ ಲೋಕಕ್ಕೆ ನೀಡಿರುವ ವಿಜಯಪುರವು ಸೈಕ್ಲಿಸ್ಟ್‌ಗಳ ಕಾಶಿ ಎಂದೇ ಪ್ರಸಿದ್ಧಿ. ಸೈಕ್ಲಿಂಗ್ ಸ್ಪರ್ಧೆ ಆಯೋಜನೆಗೂ ಸಹ ಜಿಲ್ಲೆ ಹೆಸರುವಾಸಿ. ರಾಷ್ಟ್ರಮಟ್ಟದ ಹಲವಾರು ಸೈಕ್ಲಿಂಗ್ ಸ್ಪರ್ಧೆ ಯಶಸ್ವಿಯಾಗಿ ಸಂಘಟಿಸಿದ ಹಿರಿಮೆಯೂ ವಿಜಯಪುರಕ್ಕೆ ಇದೆ.

ಜನವರಿ 9ರಿಂದ ನಾಲ್ಕು ದಿನಗಳ ಕಾಲ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ವಿಜಯಪುರ ಆತಿಥ್ಯ ವಹಿಸಿಕೊಂಡಿದೆ. ಈ ಪಂದ್ಯಾವಳಿಯ ಆಯೋಜನೆಯ ಹೊಣೆ ಹೊತ್ತಿರುವ ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಪಂದ್ಯಾವಳಿಯ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದೆ.

ವಿವಿಧ ರಾಜ್ಯ ಹಾಗೂ ಸರ್ವಿಸಸ್‌ಗಳಿಂದ ಸೇರಿ ಒಟ್ಟು 33 ತಂಡಗಳಿಂದ 702 ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳು ಭಾಗವಹಿಸುವ ನಿರೀಕ್ಷೆ ಇದೆ. ನಾಲ್ಕು ದಿನ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಬಾಲಕರಿಗಾಗಿ ಐದು ವಯೋಮಾನ, ಬಾಲಕಿಯರಿಗಾಗಿ ನಾಲ್ಕು ವಯೋಮಾನ ಸೇರಿದಂತೆ ಒಟ್ಟು 25 ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ. ವೈಯಕ್ತಿಕ ಟೈಮ್ ಟ್ರೈಲ್, ಮಾಸ್ ಸ್ಪಾರ್ಟ್, ಟೀಮ್ ಟೈಮ್ ಟ್ರೈಲ್ ಮತ್ತು ಕ್ರೈಟೇರಿಯಂ ರೇಸ್ ಎಂಬ ವಿವಿಧ ವಿಭಾಗಗಳಲ್ಲಿ ರೋಚಕ ಸ್ಪರ್ಧೆಗಳು ನಡೆಯಲಿವೆ.

ಇದನ್ನೂ ಓದಿ | Karnataka Weather: ಕರ್ನಾಟಕದ ಬಹುತೇಕ ಕಡೆ ಹೆಚ್ಚಿದ ಚಳಿ; ಕರಾವಳಿ, ಬೆಂಗಳೂರು, ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯ ಮುನ್ಸೂಚನೆ

ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿರಂತರವಾಗಿ ಎಂಟು ಚಿನ್ನದ ಪದಕ ಪಡೆದುಕೊಂಡಿರುವ ಬೆಂಗಳೂರಿನ ನವೀನ್ ಜಾನ್, ಏಷಿಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜು ಬಾಟಿ ಸೇರಿದಂತೆ ಅನೇಕ ಖ್ಯಾತನಾಮ ಸೈಕ್ಲಿಸ್ಟ್‌ಗಳು ಭಾಗವಹಿಸಲಿರುವುದು ವಿಶೇಷ.

ವಿಜಯಪುರದಲ್ಲಿ ನಡೆಯುವ ಸೈಕ್ಲಿಂಗ್ ಸ್ಪರ್ಧೆ ಮಾರ್ಗಗಳನ್ನು ಸಂಘಟಕರು ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಇಂಡಿಯನ್ ರೈಲ್ವೇ ತಂಡ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ ರಾಜ್ಯದ ಸೈಕ್ಲಿಸ್ಟ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆಯಿಂದಲೇ ಆರಂಭ

ಜನವರಿ 9ರಿಂದ 12ರವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ನಗರದ ಹೊರವಲಯದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಘವೇಂದ್ರ ಪೆಟ್ರೋಲ್ ಪಂಪ್ ಹತ್ತಿರದಿಂದ ಸ್ಪರ್ಧೆಗಳು ಆರಂಭವಾಗಲಿವೆ.

ದೇಶದ ವಿವಿಧ ರಾಜ್ಯಗಳಿಂದ ಚಾಂಪಿಯನ್‌ಶಿಪ್‌ಗೆ ಬರುವ ಸೈಕ್ಲಿಸ್ಟ್‌ಗಳಿಗೆ ಸೋಲಾಪುರ ರಸ್ತೆಯ ಬೈಪಾಸ್ ಹತ್ತಿರುವಿರುವ ಖಾಸಗಿ ವಸತಿ ಗೃಹದಲ್ಲಿ , ಮಹಿಳಾ ಸೈಕ್ಲಿಸ್ಟ್‌ಗಳಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸೈಕ್ಲಿಂಗ್ ವಸತಿ ನಿಲಯದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ | Mangalore News: ಗೂಗಲ್ ದಾರಿ ನೋಡಿ ಬಂಟ್ವಾಳ ಬಳಿ ರೈಲ್ವೆ ಸೇತುವೆಯಡಿ ಸಿಲುಕಿದ ಘನ ಲಾರಿ: ಹೀಗಿತ್ತು ಪೇಚಾಟದ ಸನ್ನಿವೇಶ

ಚಾಂಪಿಯನ್ ಶಿಪ್‌ಗೆ ಆಗಮಿಸುವ ಸೈಕ್ಲಿಂಗ್ ತಂಡಗಳಿಗೆ ರೈಲು ನಿಲ್ದಾಣದಿಂದ ಆಗಮಿಸಲು ವಾಹನ ವ್ಯವಸ್ಥೆ ಮಾಡಲಾಗಿದೆ. ಅವರವರ ರಾಜ್ಯದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಮಾಹಿತಿ ನೀಡಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ