Shreyas Iyer: ಐಪಿಎಲ್‌ನಿಂದ ಅಯ್ಯರ್ ಹೊರಕ್ಕೆ; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಅಲಭ್ಯ
Apr 04, 2023 10:26 PM IST
ಶ್ರೇಯಸ್ ಅಯ್ಯರ್
- ವರದಿಗಳ ಪ್ರಕಾರ, ಅಯ್ಯರ್ ತಮ್ಮ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂದಿನ ಮೂರು ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳಿಂದ ಹೊರಗುಳಿಯಲಿದ್ದಾರೆ.
ಕೋಲ್ಕತ್ತಾ ನೈಟ್ಸ್ ರೈಡರ್ಸ್ (KKR) ಮತ್ತು ಭಾರತ ಕ್ರಿಕೆಟ್ ತಂಡಕ್ಕೆ ಬಲು ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಐಪಿಎಲ್ 2023ರ ಸಂಪೂರ್ಣ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಅಲ್ಲದೆ ಮುಂದಿನ ಜೂನ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ನಿಂದಲೂ ಹೊರಗುಳಿದಿದ್ದಾರೆ.
ವರದಿಗಳ ಪ್ರಕಾರ, ಅಯ್ಯರ್ ತಮ್ಮ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂದಿನ ಮೂರು ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳಿಂದ ಹೊರಗುಳಿಯಲಿದ್ದಾರೆ.
ಅಯ್ಯರ್ ಅವರು ಕೆಲವು ಸಮಯದಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದಕ್ಕೂ ಮುನ್ನ, ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಕೂಡಾ ಕಳೆದುಕೊಂಡಿದ್ದರು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ, ಆಸೀಸ್ ವಿರುದ್ಧ ತವರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದರು.
ESPNCricinfo ವರದಿಯ ಪ್ರಕಾರ, ಅಯ್ಯರ್ ಅವರು ಹಲವು ದಿನಗಳಿಂದ ತಮ್ಮ ಬೆನ್ನಿನ ಕೆಳಭಾಗದಲ್ಲಿ ಊತವನ್ನು ಅನುಭವಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಶಸ್ತ್ರಚಿಕಿತ್ಸೆಯ ಬಗ್ಗೆ ನಿರ್ಧರಿಸಲು ಅಯ್ಯರ್ ಕಾದು ನೋಡುವ ಪ್ರಯತ್ನ ಮಾಡಿದರು. ಅಲ್ಲದೆ ನೋವನ್ನು ಔಷಧಿಗಳ ಮೂಲಕ ಗುಣಪಡಿಸಲು ಸಾಧ್ಯವೇ ಎಂದು ಕಾಯುತ್ತಿದ್ದರು. ಹೀಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ತರಬೇತಿ ಪಡೆಯುತ್ತಿದ್ದರು.
ಐಪಿಎಲ್‌ನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದ ಅಯ್ಯರ್, ದುಬಾರಿ ಲೀಗ್‌ನಲ್ಲಿ ಆಡುವ ಅವಕಾಶವನ್ನೂ ಕಳೆದುಕೊಂಡರು. ಐಪಿಎಲ್‌ನ ದ್ವಿತೀಯಾರ್ಧದ ವೇಳೆಗೆ ಶ್ರೇಯಸ್ ತಂಡಕ್ಕೆ ಪುನರಾಗಮನ ಮಾಡುತ್ತಾರೆ ಎಂದು ಕೆಕೆಆರ್ ಕಾಯುತ್ತಿತ್ತು. ಆದರೆ, ಭಾರತದ ಬ್ಯಾಟರ್‌ಗೆ ಎನ್‌ಸಿಎಯಲ್ಲಿ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸದ್ಯ ಅವರು ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ಹಾರುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯ ಅವಧಿ ಸೇರಿದಂತೆ ಮುಂದಿನ ಮೂರು ತಿಂಗಳಿಗಿಂತ ಹೆಚ್ಚು ಕಾಲ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವರದಿ ಹೇಳಿದೆ.
ಈ ನಡುವೆ, ಅಯ್ಯರ್ ಬದಲಿಗೆ ನಿತೀಶ್ ರಾಣಾ ಅವರನ್ನು ಕೆಕೆಆರ್ ತಂಡವು ನಾಯಕನಾಗಿ ಘೋಷಿಸಿದೆ. ಈಗಾಗಲೇ ಮೊದಲ ಪಂದ್ಯವನ್ನು ಸೋತಿರುವ ಕೋಲ್ಕತ್ತಾ, ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ತಮ್ಮ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುರುವಾರ ಎದುರಿಸಲಿದೆ.