90 ಮೀಟರ್ ದೂರಕ್ಕೆ ಭರ್ಜಿ ಎಸೆಯುವುದಕ್ಕಿಂತ ಪದಕ ಗೆಲ್ಲುವುದೇ ಮುಖ್ಯ; ನೀರಜ್ ಚೋಪ್ರಾ
Aug 28, 2023 09:35 AM IST
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ 88.17 ಮೀಟರ್ ಭರ್ಜಿ ಎಸೆದು ಮೊದಲ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀರ್ 87.82 ಮೀಟರ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.67 ಮೀಟರ್ ಎಸೆದು ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ.
ಬುಡಾಪೆಸ್ಟ್ (ಹಂಗೇರಿ): ಬುಡಾಪೆಸ್ಟ್‌ನಲ್ಲಿ ಆಗಸ್ಟ್ 27 (ಭಾನುವಾರ) ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ (Neeraj Chopra) 88.17 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಆ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಇತಿಹಾಸ ನಿರ್ಮಿಸಿದ್ದಾರೆ.
ಭಾರತ ಚಿನ್ನದ ಪದಕ ಕಾಯುವಕೆ ಕೊನೆಗೊಳಿಸಿದ ಚೋಪ್ರಾ
ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಜಾವೆಲಿನ್ ಆಟಗಾರ ಚೋಪ್ರಾ ಚಿನ್ನದ ಡಬಲ್ ಸಾಧನೆ ಮಾಡಿದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪ್ರಾರಂಭವಾಗಿ 40 ವರ್ಷಗಳು ಕಳೆದಿವೆ. ಟೂರ್ನಿ ಆರಂಭವಾದ 20 ವರ್ಷಗಳ ಬಳಿಕ ಲಾಂಗ್ ಜಂಪ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.
ಹರಿಯಾಣದ ಪಾಣಿಪತ್‌ನ ಖಂಡ್ರಾ ಗ್ರಾಮದ 25 ವರ್ಷದ ನೀರಜ್ ಚೋಪ್ರಾ ಬುಡಾಪೆಸ್ಟ್‌ನ ನೆಮ್ಜೆಟಿ ಅಟ್ಲೆಟಿಕೈ ಕೊಜ್‌ಪಾಂಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. 2021ರ ಒಲಿಂಪಿಕ್ ಚಾಂಪಿಯನ್ ಆಗುವ ಆಗುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದರು. ಆ ಮೂಲಕ ಈ ವಿಭಾಗದಲ್ಲಿ ಭಾರತ ಚಿನ್ನದ ಪದಕ ಕಾಯುವಕೆಯನ್ನು ಕೊನೆಗೊಳಿಸಿದ್ದರು.
ಗುರಿಯಿಟ್ಟ ಎರಡನೇ ಎಸೆತದಲ್ಲೇ ಸಕ್ಸಸ್
ಹಂಗೇರಿ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತನ್ನ ಮೊದಲ ಎಸೆತವನ್ನು ಫೌಲ್ ಮಾಡಿದರು. ಆದರೆ ಚಿನ್ನಕ್ಕೆ ಗುರಿಯಿಟ್ಟ ಎರಡನೇ ಎಸೆತದಲ್ಲಿ ಯಶಸ್ಸು ಕಂಡಿದ್ದಾರೆ. ಭರ್ಜಿ ತನ್ನ ನೆಲಕ್ಕೆ ತಾಗುವ ಮುನ್ನವೇ ಜೋಪ್ರಾ ಸಂಭ್ರಮಿಸಿದ್ದರು. ಎರಡನೇ ಪ್ರಯತ್ನದಲ್ಲಿ ಬರೋಬ್ಬರಿ 88.17 ಮೀಟರ್ ಎಸೆದರು. ಈ ಅಂತರವನ್ನು ಇತರೆ ಜಾವೆಲಿನ್ ಆಟಗಾರರು ಮೀರಿಸುವ ಸಾಧ್ಯತೆ ಇಲ್ಲ ಎಂಬುದು ಆಗಾಲೇ ಸ್ಪಷ್ಟವಾಗಿತ್ತು.
ನೀರಜ್ 90 ಮೀಟರ್‌ಗೆ ಎಸೆಯಬೇಕೆಂಬ ಗುರಿಗೆ ಕೇವಲ 1.83 ಮೀಟರ್ ದೂರ ಹಿಂದಕ್ಕೆ ಭರ್ಜಿ ನಿಂತಿತು. ಆದರೆ ಫೈನಲ್‌ನಲ್ಲಿ ಇವರ ಗುರಿಯನ್ನು ಯಾರೂ ಮೀರಿಸಲಿಲ್ಲ. ಪಂದ್ಯದ ಬಳಿಕ ಮಾತನಾಡಿದ ಅವರು, ಒಂದು ದಿನ 90 ಮೀಟರ್ ಎಸೆತ ಖಂಡಿತವಾಗಿ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
90 ಮೀಟರ್‌ಗಿಂತ ಪದಕ ಗೆಲ್ಲುವುದು ಮುಖ್ಯ
ಈ ಸಾಧನೆಯನ್ನು ನಾನು ಸಮಯ ಮತ್ತು ಹಣೆಬರಹಕ್ಕೆ ಬಿಟ್ಟಿದ್ದೇನೆ. 2018 ರಿಂದ 88 ಪ್ಲಸ್ ಮೀಟರ್ ಎಸೆಯುತ್ತಿದ್ದೇನೆ. 90 ಮೀಟರ್ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿತ್ತು. ಆದರೆ ಈಗ ಆ ಗುರಿಯನ್ನು ಗೆಲ್ಲುತ್ತೇನೆ ಎಂದು ವಿಶ್ವಾಸವಿದೆ. 90 ಮೀಟರ್‌ಗಿಂತ ಪದಕ ಗೆಲ್ಲುವುದು ಮುಖ್ಯ ಎಂದು ನೀರಜ್ ಚೋಪ್ರಾ ತಿಳಿಸಿದ್ದಾರೆ.
ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ವಿಭಾಗದ ಫೈನಲ್‌ನಲ್ಲಿ ನೀರಜ್ ಚೋಪ್ರಾ ಮೊದಲ ಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್‌ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಸ್ವೀಕರಿಸಿದರು. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.67 ಮೀಟರ್ ದೂರಕ್ಕೆ ಭರ್ಜಿ ಎಸೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚಿನ ಪದಕ ಪಡೆದರು.
ನೀರಜ್ ಪ್ರತಿ ಬಾರಿಯೂ ತನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡು ಸಾಗುತ್ತಿದ್ದು, ಸ್ಥಿರ ಆಟದ ಮೂಲಕ ಗಮನ ಸೆೆಳೆಯುತ್ತಿದ್ದಾರೆ.