logo
ಕನ್ನಡ ಸುದ್ದಿ  /  ಕ್ರೀಡೆ  /  Pkl 10: ಬೆಂಗಳೂರು ಬುಲ್ಸ್‌ಗೆ ಆರನೇ ಸೋಲುಣಿಸಿದ ಯುಪಿ; ಹರಿಯಾಣ ವಿರುದ್ಧ ಪಟ್ನಾಗೆ ಭರ್ಜರಿ ಜಯ

PKL 10: ಬೆಂಗಳೂರು ಬುಲ್ಸ್‌ಗೆ ಆರನೇ ಸೋಲುಣಿಸಿದ ಯುಪಿ; ಹರಿಯಾಣ ವಿರುದ್ಧ ಪಟ್ನಾಗೆ ಭರ್ಜರಿ ಜಯ

Jayaraj HT Kannada

Dec 29, 2023 11:26 PM IST

google News

ಬೆಂಗಳೂರು ಬುಲ್ಸ್‌ ಡಿಫೆನ್ಸ್

    • PKL 10: ಪಿಕೆಎಲ್‌ ಸೀಸನ್‌ 10ರಲ್ಲಿ ಬೆಂಗಳೂರು ಬುಲ್ಸ್‌ ತಂಡವು ಆರನೇ ಸೋಲು ಕಂಡಿದೆ. ಯುಪಿ ಯೋಧಾಸ್‌ ವಿರುದ್ಧ ಕೇವಲ ಒಂದು ಅಂಕಗಳಿಂದ ಗೆಲುವಿನ ಗೆರೆ ದಾಟುವಲ್ಲಿ ತಂಡ ವಿಫಲವಾಯ್ತು. 
ಬೆಂಗಳೂರು ಬುಲ್ಸ್‌ ಡಿಫೆನ್ಸ್
ಬೆಂಗಳೂರು ಬುಲ್ಸ್‌ ಡಿಫೆನ್ಸ್

ಪ್ರೊ ಕಬಡ್ಡಿ ಲೀಗ್‌ (Pro Kabaddi League) ಸೀಸನ್ 10ರ ಪಂದ್ಯಗಳು ನೋಯ್ಡಾದಲ್ಲಿ ಆರಂಭಗೊಂಡಿದ್ದು, ನಗರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ 46-33 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಸುಲಭ ಜಯ ಸಾಧಿಸಿದೆ. ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ (Bengaluru Bulls) ತಂಡವು ಕೇವಲ ಒಂದು ಅಂಕ ಅಂತರದಿಂದ ಯುಪಿ ಯೋಧಾಸ್‌ ವಿರುದ್ಧ ಸೋಲನುಭವಿಸಿದೆ.

ರೋಚಕವಾಗಿ ನಡೆದ ಮೊದಲ ಪಂದ್ಯದಲ್ಲಿ ಪಟ್ನಾ ಪರ ರೈಡಿಂಗ್‌ನಲ್ಲಿ ಮಿಂಚಿದ ಮಂಜೀತ್ 13 ಅಂಕಗಳೊಂದಿಗೆ ಸೂಪರ್‌ 10 ಪೂರ್ಣಗೊಳಿಸಿದರು. ಟ್ಯಾಕಲ್‌ನಲ್ಲಿ ಮಿಂಚಿ ಐದು ಅಂಕ ಗಳಿಸಿದ ಕ್ರಿಶನ್ ಧುಲ್ ಪೈರೇಟ್ಸ್ ಪರ ಉತ್ತಮ ಡಿಫೆಂಡಿಂಗ್ ಮಾಡಿದರು.

ಮೊದಲಾರ್ಧ ಮುಕ್ತಾಯದ ವೇಳೆಗೆ ಪೈರೇಟ್ಸ್ 18-15 ಅಂತರದಿಂದ ಮುಂದಿತ್ತು. ಆ ಬಳಿಕ 10 ನಿಮಿಷಗಳಲ್ಲಿ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿ ಎರಡನೇ ಬಾರಿ ಎದುರಾಳಿಯನ್ನು ಆಲ್ ಔಟ್ ಮಾಡಿತು. 16-ಪಾಯಿಂಟ್‌ಗಳ ಬೃಹತ್ ಮುನ್ನಡೆಯೊಂದಿಗೆ ಕೊನೆಗೆ 13 ಅಂಕಗಳ ಅಂತರದಿಂದ ಗೆದ್ದು ಬೀಗಿತು.

ಇದನ್ನೂ ಓದಿ | ತಲೈವಾಸ್‌ಗೆ ಆರನೇ ಸೋಲುಣಿಸಿದ ಗುಜರಾತ್; ಡೆಲ್ಲಿ-ಜೈಪುರ ಪಂದ್ಯ ಡ್ರಾದಲ್ಲಿ ಅಂತ್ಯ; ನವೀನ್‌ಗೆ ಗಂಭೀರ ಗಾಯ

ಬೆಂಗಳೂರಿಗೆ ಮತ್ತೆ ರೋಚಕ ಸೋಲು

ಈ ಬಾರಿ ಹೆಚ್ಚಿನ ಪಂದ್ಯಗಳಲ್ಲಿ ಗೂಳಿಗಳು ಕಡಿಮೆ ಅಂಕಗಳ ಅಂತರದಿಂದ ಸೋತಿದ್ದಾರೆ. ನೋಯ್ಡಾದಲ್ಲೂ ತಂಡದ ಗೆಲುವಿಗೆ ಯುಪಿ ಯೋಧಾಸ್‌ ಅವಕಾಶ ನೀಡಲಿಲ್ಲ. ತವರಿನ ಅಭಿಮಾನಿಗಳ ಬಲದೊಂದಿಗೆ ರೋಚಕ ಪ್ರದರ್ಶನ ನೀಡಿದ ಯುಪಿ ಯೋಧಾಸ್‌, 34-33 ಅಂಕಗಳ ಅಂತರದಿಂದ ಅತಿ ರೋಚಕ ಜಯ ತನ್ನದಾಗಿಸಿಕೊಂಡಿತು.

ಎಂದಿನಂತೆ ಪಂದ್ಯದಲ್ಲಿ ಪರ್ದೀಪ್‌ ನರ್ವಾಲ್‌ ಅಬ್ಬರವಿತ್ತು. 10 ರೈಡ್‌ ಪಾಯಿಂಟ್‌ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು. ಉತ್ತಮ ಸಾಥ್‌ ಕೊಟ್ಟ ಸುರೇಂದರ್‌ ಗಿಲ್‌ ಕೂಡಾ 7 ಅಂಕ ಕಲೆ ಹಾಕಿದರು. ಬುಲ್ಸ್‌ ಪರ ಭರತ್‌ ಮತ್ತು ಸುಶಿಲ್‌ ತಲಾ 8 ರೈಡ್‌ ಪಾಯಿಂಟ್‌ ಸಂಗ್ರಹಿಸಿದರು. ರೈಡಿಂಗ್‌ನಲ್ಲಿ ಬೆಂಗಳೂರು ಹೆಚ್ಚು ಅಂಕ ಕಲೆಹಾಕಿತಾದರೂ, ಎರಡು ಬಾರಿ ಆಲೌಟ್‌ ಆಗಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.

ದಿನದಾಟದ ಬಳಿಕ ಬುಲ್ಸ್‌ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದರೆ, ಯುಪಿ ಯೋಧಾಸ್‌ 8ನೇ ಸ್ಥಾನ ಪಡೆದಿದೆ. ಅತ್ತ ಹರಿಯಾಣ ಮತ್ತು ಪಟ್ನಾ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿವೆ.

ವಿಡಿಯೋ ನೋಡಿ | ಕಾಟೇರ ಸಂಭ್ರಮ; ಬಿರಿಯಾನಿ ತಿಂದು ಕುಣಿದು ಕುಪ್ಪಳಿಸಿದ ಡಿ ಬಾಸ್ ಫ್ಯಾನ್ಸ್

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ