ಮೊದಲ ಎಲಿಮಿನೇಟರ್ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಪಾಟ್ನಾ; ಆಶು ಮಲ್ಲಿಕ್ ಹೋರಾಟದ ನಡುವೆಯೂ ಡುಮ್ಕಿ ಹೊಡೆದ ಡೆಲ್ಲಿ
Feb 26, 2024 10:55 PM IST
ಮೊದಲ ಎಲಿಮಿನೇಟರ್ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಪಾಟ್ನಾ
- PKL 10 Eliminator 1: ಪ್ರೊ ಕಬಡ್ಡಿ ಲೀಗ್ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಟ್ನಾ ಪೈರೇಟ್ಸ್ ಸಮಿಫೈನಲ್ ಪ್ರವೇಶಿಸಿದೆ.
ಪ್ರೊ ಕಬಡ್ಡಿ ಲೀಗ್ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಜಯಿಸಿದ ಪಾಟ್ನಾ ಪೈರೇಟ್ಸ್, ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಹೈದರಾಬಾದ್ನ ಗಚ್ಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಟ್ನಾ, 35-37 ಅಂಕಗಳ ಅಂತರದಿಂದ ಗೆದ್ದು ಸೆಮೀಸ್ಗೆ ಎಂಟ್ರಿಕೊಟ್ಟಿದೆ. ಸೆಮಿಫೈನಲ್ನಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಪಾಟ್ನಾ ಎದುರಿಸಲಿದೆ.
ಟಾಸ್ ಸೋತು ಮೊದಲು ರೈಡಿಂಗ್ ಮಾಡುವ ಅವಕಾಶ ಪಡೆದ ಪಾಟ್ನಾ, ಆರಂಭದಿಂದಲೇ ಮುನ್ನಡೆ ಪಡೆಯಿತು. ಎಲಿಮಿನೇಟರ್ 1ರ ಮೊದಲ ರೈಡ್‌ಗಿಳಿದ ಪಾಟ್ನಾದ ಸಚಿನ್ ಎರಡು ಅಂಕಗಳೊಂದಿಗೆ ಮರಳುತ್ತಾರೆ. ಆದರೆ ಡೆಲ್ಲಿ ಪರ ಮೊದಲ ರೈಡ್ಗೆ ಬಂದ ಆಶು ಅಂಕ ಪಡೆಯದೆ ಖಾಲಿ ನಡೆದರು. ತದನಂತರದ ರೈಡ್ನಲ್ಲಿ ಮಂಜೀತ್ ಇಬ್ಬರನ್ನು ಔಟ್ ಮಾಡಿ ತಂಡಕ್ಕೆ ಎರಡು ಅಂಕ ತಂದುಕೊಟ್ಟರು.
ಮೊದಲಾರ್ಧದಲ್ಲಿ ಡೆಲ್ಲಿ ಮುನ್ನಡೆ
ಆರಂಭದಲ್ಲಿ ಮುನ್ನಡೆ ಪಡೆದರೂ ಮೊದಲಾರ್ಧದ ಟೈಮ್ ಔಟ್ನಲ್ಲಿ ಪಾಟ್ನಾ ಹಿನ್ನಡೆ ಅನುಭವಿಸಿತು. ಆರಂಭದಿಂದ ಹಿನ್ನಡೆಯಲ್ಲಿದ್ದ ಡೆಲ್ಲಿ ಮುನ್ನಡೆ ಸಾಧಿಸಿತು. 20-19 (ಡೆಲ್ಲಿ-ಪಾಟ್ನಾ) ಅಂಕಗಳಿಂದ ಮೊದಲಾರ್ಧ ಮುಕ್ತಾಯಗೊಂಡಿತು. ಆಶು ಮಲ್ಲಿಕ ಹೋರಾಟ ನಡೆಸಿ ಡೆಲ್ಲಿಗೆ ಸೆಮಿಫೈನಲ್ ಆಸೆಯನ್ನು ಚಿಗುರಿಸಿದರು. ದುರಾದೃಷ್ಟ ಅಂದರೆ ಉಳಿದ ಆಟಗಾರರಿಗೆ ಸಾಥ್ ಸಿಗಲಿಲ್ಲ.
ಮೊದಲಾರ್ಧದ ಸಮಯದಲ್ಲಿ ಮುನ್ನಡೆ ಸಾಧಿಸಿ ಪಾಟ್ನಾ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದ ಡೆಲ್ಲಿ, ಎರಡನೇ ಅವಧಿಯಲ್ಲಿ ಕಳಪೆ ಪ್ರದರ್ಶನ ತೋರಿತು. ದ್ವಿತೀಯಾರ್ಧದಲ್ಲಿ ತಿರುಗೇಟು ಕೊಟ್ಟ ಪಾಟ್ನಾ ಆಟಗಾರರು, ಡೆಲ್ಲಿಯನ್ನು ಮಕಾಡೆ ಮಲಗಿಸಿದರು. ಸಚಿನ್ 9 ರೇಡಿಂಗ್ ಅಂಕ, ಮಂಜೀತ್, ಸುಧಾಕರ್ ಎಂ, ಸಂದೀಪ್ ಕುಮಾರ್ ತಲಾ 5 ರೇಡಿಂಗ್ (ಬೋಸನ್ ಸಹ ಇದೆ) ಅಂಕ ಪಡೆದರು ಸಾಥ್ ಕೊಟ್ಟರು.
ಆಶು ಮಲ್ಲಿಕ್ ಹೋರಾಟ ವ್ಯರ್ಥ
ಡೆಲ್ಲಿ ಆಶು ಮಲ್ಲಿಕ್ 17 ರೇಡಿಂಗ್, 2 ಬೋಸನ್ ಸೇರಿ 19 ಅಂಕ ಪಡೆದು ಎದುರಾಳಿಗೆ ನಡುಕ ಹುಟ್ಟಿಸಿದರು. ಆದರೆ ಉಳಿದ ಆಟಗಾರರಿಂದ ತಕ್ಕ ಹೋರಾಟ ಬರಲಿಲ್ಲ. ಇದರ ನಡುವೆಯೂ ಡೆಲ್ಲಿ ಕೊನೆಯವರೆಗೂ ಹೋರಾಟ ನಡೆಸಿತು. ಒಂದು ಹಂತದಲ್ಲಿ 33-33 ಅಂಕಗಳಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಇದಾದ ಮರು ರೇಡಿಂಗ್ನಲ್ಲೇ ಸಚಿನ್ 2 ಅಂಕ ಸಂಪಾದಿಸಿದರು.
ರೋಚಕ ಘಟ್ಟದಲ್ಲಿ ಆಶು ಒಂದು ಪಡೆದರು. ತದನಂತರ ಪಾಟ್ನಾ ಪರ ಸಂದೀಪ್ ಒಂದು ಅಂಕ ಪಡೆದರೆ, ಆಶು 2 ಅಂಕ ಸಂಪಾದಿಸಿದರು. ಇದರೊಂದಿಗೆ ತಂಡದ ಸ್ಕೋರ್ 35-36 ಆಗಿತ್ತು. ಆದರೆ ಪಂದ್ಯದ ರೇಡಿಂಗ್ನಲ್ಲಿ ಸಂದೀಪ್ ಒಬ್ಬರನ್ನು ಔಟ್ ಮಾಡಿದ ಬೆನ್ನಲ್ಲೇ 35-37 ಅಂಕಗಳ ರೋಚಕ ಗೆಲುವಿನೊಂದಿಗೆ ಪಾಟ್ನಾವನ್ನು ಸೆಮಿಫೈನಲ್ಗೆ ಕೊಂಡೊಯ್ದರು.
ಪಾಟ್ನಾ-ಪುಣೇರಿ ಮೊದಲ ಸೆಮಿಫೈನಲ್
ಮೊದಲ ಎಲಿಮಿನೇಟರ್ನಲ್ಲಿ ಜಯಿಸಿದ ಪಾಟ್ನಾ ತಂಡವು, ತನ್ನ ಮೊದಲ ಸೆಮಿಫೈನಲ್ನಲ್ಲಿ ಟೂರ್ನಿಯ ಅಗ್ರಸ್ಥಾನಿ ಪುಣೇರಿ ಪಲ್ಟನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರವರಿ 28ರಂದು ನಡೆಯಲಿದೆ. ಪುಣೇರಿ ಪಲ್ಟನ್ಸ್ ಲೀಗ್ ಹಂತದ ಅಂಕಪಟ್ಟಿಯಲ್ಲಿ ಹೆಚ್ಚು ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಸೆಮಿಫೈನಲ್ಗೆ ನೇರ ಅರ್ಹತೆ ಪಡೆದುಕೊಂಡಿತ್ತು.